ಬೀದರ
ಹನ್ನೆರಡನೆಯ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಭೌತಿಕ ಅನುಭವ ಮಂಟಪ ಇತ್ತು ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನುಡಿದರು.
ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ‘ವಚನ ಮಂಟಪ’ ಮಾಸಿಕ ಚಿಂತನ-ಮಂಥನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ‘ವಚನಗಳಲ್ಲಿ ಅನುಭವ ಮಂಟಪದ ಐತಿಹಾಸಿಕತೆ’ ಕುರಿತು ಅವರು ಮಾತನಾಡಿದರು.
ಭೌತಿಕ ಅನುಭವ ಮಂಟಪವೇ ಇರಲಿಲ್ಲ. ವಚನಗಳಲ್ಲಿ ಎಲ್ಲೂ ಅನುಭವ ಮಂಟಪದ ಪ್ರಸ್ತಾಪವಿಲ್ಲ ಎಂದು ಚಿಂತಕಿ ವೀಣಾ ಬನ್ನಂಜೆ ಇತ್ತೀಚಿಗೆ ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.

ಬಸವಾದಿ ಶರಣರ ಬಹಳಷ್ಟು ವಚನಗಳಲ್ಲಿ ಅನುಭವ ಮಂಟಪದ ಪ್ರಸ್ತಾಪ ಇದೆ. ಜನಪದ ಸಾಹಿತ್ಯದಲ್ಲೂ ಈ ಕುರಿತ ಉಲ್ಲೇಖ ಇದೆ. ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ಅವರ ವಚನದಲ್ಲಿ ಈ ಕುರಿತು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅನುಭವ ಮಂಟಪ ಭೌತಿಕವಾಗಿ ಅಸ್ತಿತ್ವದಲ್ಲಿ ಇತ್ತು ಎನ್ನುವುದನ್ನು ನಿರೂಪಿಸಲು ನೀಲಾಂಬಿಕೆ ಅವರ ಒಂದೇ ಒಂದು ವಚನ ಸಾಕು ಎಂದು ಹೇಳಿದರು.
ವಚನ ಪಠಣ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಪ್ರತಿಯೊಬ್ಬರೂ ವಚನಗಳ ಚಿಂತನ-ಮಂಥನದ ವಚನ ಮಂಟಪ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಹೆಚ್ಚು ಹೆಚ್ಚು ವಿಸ್ತಾರಗೊಳ್ಳಲಿ. ಬಸವಾದಿ ಶರಣರ ತತ್ವ ಪಸರಿಸುವ ಆಶಯ ಈಡೇರಲಿ ಎಂದು ಶುಭ ಹಾರೈಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಶರಣರು ವಚನಗಳ ಮೂಲಕ ಬದುಕಿನ ಸೂತ್ರ ನೀಡಿದ್ದಾರೆ. ಅವುಗಳನ್ನು ಪಾಲಿಸಿದ್ದಲ್ಲಿ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಮಹಾಸಭಾ ಶರಣರ ವಚನಗಳ ಮೇಲೆ ಬೆಳಕು ಚೆಲ್ಲುವ ಮಾಸಿಕ ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ ಎಂದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಇಂದು ಕಾರ್ಯಕ್ರಮಗಳ ಸಂಘಟನೆ ಸುಲಭವಲ್ಲ. ಬಸವ ತತ್ವದ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. ಒಳ್ಳೆಯ ಚಿಂತನೆಗಳನ್ನು ಬಿತ್ತುವ ಕಾರ್ಯಕ್ರಮಗಳಿಂದ ಮಾತ್ರ ಸುಂದರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನಗಳ ಚಿಂತನೆಯ ಕಾರ್ಯಕ್ರಮಕ್ಕೆ ವಚನ ಮಂಟಪ ಎಂದು ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಇದು, ಐತಿಹಾಸಿಕ ಶೀರ್ಷಿಕೆ. ಜನಪದರು ವಚನ ಮಂಟಪ ಪದವನ್ನು ಬಳಸಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಮಹಾಸಭಾ ಜಿಲ್ಲೆಯಲ್ಲಿ ಬಸವ ತತ್ವ ಪ್ರಸಾರದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ನಾಲ್ಕು ವರ್ಷಗಳಲ್ಲಿ 3 ಸಾವಿರ ಸದಸ್ಯತ್ವ ಮಾಡಿಸಿದ ಹಾಗೂ ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ ಯಶಸ್ವಿಯಾಗಿ ಸಂಘಟಿಸಿದ ಶ್ರೇಯ ಮಹಾಸಭಾದ ಬೀದರ ಜಿಲ್ಲಾ ಘಟಕಕ್ಕೆ ಇದೆ ಎಂದು ತಿಳಿಸಿದರು.

ಈಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶರಣರ ವಚನ ಸಾಹಿತ್ಯದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿವೆ. ಹೀಗಾಗಿ ಜನರಲ್ಲಿ ವಚನ ಪ್ರಜ್ಞೆ ಮೂಡಿಸಲು ಹಾಗೂ ವಚನಗಳ ಕುರಿತು ಚಿಂತನೆಗೆ ಹಚ್ಚಲು ವಚನ ಮಂಟಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧನ್ನೂರ ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ ಮಾತನಾಡಿದರು.

ಗಾಂಧಿಗಂಜ್‍ನ ಹಿರಿಯ ವ್ಯಾಪಾರಿಗಳಾದ ಅಣ್ಣಾರಾವ ಮೊಗಶೆಟ್ಟಿ, ನಾಗಶೆಟ್ಟೆಪ್ಪ ದಾಡಗಿ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಬಾಬುರಾವ ದಾನಿ, ಪಂಚಾಕ್ಷರಿ ಪುಣ್ಯಶೆಟ್ಟಿ, ಕುಶಾಲರಾವ ಪಾಟೀಲ ಖಾಜಾಪುರ, ಭಗವಂತ ಔದತ್ತಪುರ, ಬಂಡೆಪ್ಪ, ಕಂಟೆಪ್ಪ ಗಂದಿಗುಡೆ, ಉಮೇಶ ಗಾಯಗೊಂಡ, ಗೋವಿಂದರಾವ ಬಿರಾದಾರ, ಸೋಮನಾಥ ಗಂಗಶೆಟ್ಟಿ, ಚಂದ್ರಪ್ಪ ಹಳ್ಳಿ, ಶರಣಪ್ಪ ಲಾಡಗೇರಿ, ವೀರಭದ್ರಯ್ಯ ಬುಯ್ಯಾ, ಮಲ್ಲಿಕಾರ್ಜುನ ಪಂಚಾಕ್ಷರಿ, ಯೋಗೇಂದ್ರ ಯದಲಾಪುರೆ, ಅಣ್ಣೆಪ್ಪ ಹುಡಗೆ, ಡಾ. ಸುಲೋಚನಾ ಪಾಟೀಲ, ಡಾ. ದೇವಕಿ ನಾಗೂರೆ, ನಿರ್ಮಲಾ ಮಸೂದಿ, ರೂಪಾ ಪಾಟೀಲ, ಸ್ಫೂರ್ತಿ ಧನ್ನೂರ, ಸಂತೋಷಿ ಗಂದಗೆ, ವಿಜಯಲಕ್ಷ್ಮಿ ಪಾಟೀಲ ಮತ್ತಿತರರು ಇದ್ದರು.
ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ ನಿರೂಪಿಸಿದರು. ಅಧ್ಯಕ್ಷೆ ಉಷಾ ಮಿರ್ಚೆ ವಂದಿಸಿದರು. ಜಗನ್ನಾಥ ನಾನಕೇರಿ ಹಾಗೂ ಸಿದ್ದುಸಾಯಿ ನಾನಕೇರಿ ವಚನ ಗಾಯನ ನಡೆಸಿಕೊಟ್ಟರು. ಬಿ.ಕೆ.ಡಿ. ಫೌಂಡೇಷನ್ ಕಾರ್ಯದರ್ಶಿ ಸುವರ್ಣಾ ಬಿ. ಧನ್ನೂರ ಭಕ್ತಿ ದಾಸೋಹಗೈದರು.