ದಾವಣಗೆರೆ:
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಜಿಲ್ಲಾ ಘಟಕ ಹಾಗೂ ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಇವರುಗಳ ಸಹಯೋಗದಲ್ಲಿ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಮಾಗನೂರು ಬಸಪ್ಪ ಮತ್ತು ಸರ್ವ ಮಂಗಳಮ್ಮ ಸ್ಮಾರಕ ದತ್ತಿವತಿಯಿಂದ ಎಂ.ಬಿ.ಎ ಸಭಾಂಗಣ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
ಕುಲಪತಿಗಳಾದ ಪ್ರೊ. ಬಿ.ಡಿ ಕುಂಬಾರವರು ಮತ್ತು ಗಣ್ಯರು ದೀಪ ಬೆಳಗಿಸಿ, ಬಸವೇಶ್ವರರ ಮತ್ತು ಮಾಗನೂರು ಬಸಪ್ಪ, ಸರ್ವ ಮಂಗಳಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.

ದತ್ತಿ ಉಪನ್ಯಾಸದ ಅನುಭಾವ ಒಂದರ ಸಂಪನ್ಮೂಲ ವ್ಯಕ್ತಿಗಳಾಗಿ “ಶಿಕ್ಷಣ ಮತ್ತು ಆತ್ಮವಿಶ್ವಾಸ” ವಿಷಯದ ಕುರಿತು ಮಾತನಾಡಿದ ಡಾ. ಎಚ್.ಎಸ್ ಮಂಜುನಾಥ ಕುರ್ಕಿಯವರು, ಬಂದೋದಗುವ ಆಪತ್ತುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಆತ್ಮವಿಶ್ವಾಸ ಎಂದಿಗೂ ಕಳೆದುಕೊಳ್ಳಬಾರದು.
ಶಿಕ್ಷಣ ಎಂದರೆ ಜೀವನ ಪ್ರಜ್ಞೆಯನ್ನು ಅರಳಿಸುವಂತದ್ದು ನಾವು ನೈತಿಕತೆ ಕಳೆದುಕೊಂಡರೆ ನಮ್ಮಲ್ಲಿ ಏನಿದೆ ಕಳೆದುಕೊಳ್ಳಲು ಎನ್ನುವಂತಹ ಪ್ರಶ್ನೆ ಮಾಡಿಕೊಳ್ಳಬೇಕು, ಭ್ರಮಾ ಲೋಕದ ಜಗತ್ತಿನಲ್ಲಿ ಕೃತಕ ವಸ್ತುಗಳನ್ನ ಅವಲಂಬನೆ ಹೆಚ್ಚಾಗಿದ್ದು ಅನುಭವ ಮತ್ತು ಅನುಭವ ಶಿಕ್ಷಣ ಮರೆಯಾಗುತ್ತಿದೆ. ಆತ್ಮವಿಶ್ವಾಸ ಬಹು ಮುಖ್ಯವಾದದ್ದು ಒಟ್ಟು ಧೈರ್ಯಗಳ ಮೊತ್ತವೇ ಆತ್ಮವಿಶ್ವಾಸ.

ಅನೇಕ ತೊಡಕುಗಳನ್ನು ಅನುಭವಿಸಿದ್ದ ಅಬ್ರಾಹಂ ಲಿಂಕನ್, ರೋಸ್ ವೆಲ್ಟ್, ನೆಪೋಲಿಯನ್, ಬಿ. ಆರ್. ಅಂಬೇಡ್ಕರ್, ಸರ್ ಎಂ.ವಿ, ಮಲಾಲ, ಅರುಣಿಮಾ ಸಿನ್ಹಾ ಮುಂತಾದವರು ನಮ್ಮ ಬದುಕಿಗೆ ಆದರ್ಶರಾಗಿದ್ದಾರೆ. ಇಂಥವರನ್ನ ಆದರ್ಶವಾಗಿಟ್ಟುಕೊಂಡು ಕಳೆದು ಹೋದ ದಿನಗಳ ಬಗ್ಗೆ ಚಿಂತನೆ ಮಾಡಬೇಡಿ ಆತ್ಮವಿಶ್ವಾಸದಿಂದ ಮುಂದುವರೆಯಿರಿ ಎಂದು ಮಾತನಾಡಿದರು.
ಎರಡನೆಯ ಅನುಭಾವ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಭೀಮಾಶಂಕರ ಜೋಷಿ, ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ವಿಶ್ವವಿದ್ಯಾನಿಲಯ, ಇವರು “ವಚನ ಸಾಹಿತ್ಯದಲ್ಲಿ ಸಾಮರಸ್ಯ” ವಿಷಯದ ಕುರಿತು ವಚನ ಸಾಹಿತ್ಯದ ಮೂಲ ಅಂಶವೇ ಮೌಲ್ಯಗಳಿಂದ ಕೂಡಿದ್ದು, ಸಮ ಸಮಾನತೆಯ ಅಂಶಗಳಿಂದ ಕೂಡಿದ್ದು ಲಿಂಗ ತಾರತಮ್ಯ ಇದರ ವಿರುದ್ಧ ಧ್ವನಿ ಎತ್ತಿ ತಮ್ಮ ವಚನಗಳಲ್ಲಿ ಹೇಳಿದಂತೆ ಬದುಕಿದಂತಹ ವಚನಕಾರರೇ ನಮಗೆ ಆದರ್ಶ.
ಮೌಲ್ಯಗಳನ್ನು ಮಾತನಾಡುವುದು ಬೇರೆ ಬದುಕುವುದು ಬೇರೆ ಹಾಗೆ ಸರಳವಾಗಿ ಬದುಕಿದಂತಹ ಸಂಗಮೇಶ ಗೌಡ್ರು ನಮಗೆ ಆದರ್ಶ ಎಂದು ಹೇಳಿದರು. ವಿಶ್ವ ಸಾಹಿತ್ಯಕ್ಕೆ ಕನ್ನಡದ ದೊಡ್ಡ ಕೊಡುಗೆ ಎಂದರೆ ವಚನ ಸಾಹಿತ್ಯ. ಜನಸಾಮಾನ್ಯರ ಗುಡಿಸಲಿಗೆ ಬಂದ ಸಾಹಿತ್ಯವಾಗಿದೆ.

ಕಾವ್ಯ ಎಂದರೆ ಪಂಡಿತರಿಗಷ್ಟೇ ಸೀಮಿತವಾಗಿದ್ದಂತ ಒಂದು ಕಾಲದಲ್ಲಿ ಜನರ ಭಾಷೆಯಾದ ಅಚ್ಚಗನ್ನಡದ ದೇಶಿ ಛಂದಸ್ಸಿನಿಂದ ರಚಿಸಿ ಜನಸಾಮಾನ್ಯರಿಗೆ ತಲುಪಿದ ವಚನಕಾರರು ಇಂದಿಗೂ ನಮಗೆ ಪ್ರಸ್ತುತ ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರೊ. ಬಿ.ಡಿ. ಕುಂಬಾರ ಮಾನ್ಯಕುಲಪತಿಗಳು ದಾವಣಗೆರೆ ವಿಶ್ವವಿದ್ಯಾನಿಲಯ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಆಯೋಜಕರಿಗೆ ಅಭಿನಂದನೆ ತಿಳಿಸಿದರು.
ರಾಣೆಬೆನ್ನೂರಿನ ಬಸಪ್ಪನವರು ಬಡತನದಿಂದ ಬೆಳೆದು ಬಂದು ದಾವಣಗೆರೆಯಲ್ಲಿ ಅದ್ಭುತ ಸಾಮ್ರಾಜ್ಯವನ್ನು ಕಟ್ಟಿದವರು. ವ್ಯಾಪಾರ ಮತ್ತು ಶಿಕ್ಷಣ ಎರಡರಲ್ಲಿಯೂ ಸೇವೆಯನ್ನು ಮಾಡಿರುವ ಶರಣ ಮಾಗನೂರು ಬಸಪ್ಪನವರು ಸಮಾಜಕ್ಕೆ ಆದರ್ಶವಾಗಿ ಬಾಳಿದ್ದಾರೆ. ಅವರ ಆತ್ಮ ಚರಿತ್ರೆಯನ್ನು ವಿದ್ಯಾರ್ಥಿಗಳು ಓದಬೇಕು ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಕನ್ನಡ ಅಧ್ಯಯನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಬಸವರಾಜ, ಕವಿತಾ, ಪುನೀತ್ ಕುಮಾರ್ ಇವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಜಯರಾಮಯ್ಯ ವಿ. ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಟಿ. ಪ್ರಕಾಶ ಪ್ರಾರ್ಥನೆ ಮಾಡಿದರು. ಭರಮಪ್ಪ ಮೈಸೂರು ಕಾರ್ಯಕ್ರಮ ನಿರೂಪಣೆ ಮಾಡಿದರು.
ದತ್ತಿ ದಾಸೋಹಿಗಳಾದ ಶರಣ ಎಂ.ಬಿ. ಸಂಗಮೇಶ್ವರ ಗೌಡ್ರು , ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿ.ಎಂ. ಕುಮಾರಪ್ಪ ಹಾಗೂ ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಮತ್ತು ಕನ್ನಡ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಮಲ್ಲಿಕಾರ್ಜುನ್ ಕೆ, ಡಾ. ಶಾಂತರಾಜು ಎಚ್.ವಿ, ಡಾ. ಮಹಾಂತೇಶ ಪಾಟೀಲ. ಕನ್ನಡ ಅಧ್ಯಯನ ವಿಭಾಗದ ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
