ಬಸವ ಅನುಯಾಯಿಗಳ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆ: ಡಾ.ರಾಜಶೇಖರ ನಾರನಾಳ

ಬಸವ ಮೀಡಿಯಾ
ಬಸವ ಮೀಡಿಯಾ

ಗಂಗಾವತಿ

ಬಸವಣ್ಣನವರ ಅನುಯಾಯಿಗಳು ನಾವೀಗ ತುಂಬಾ ಸಂದಿಗ್ಧ ಕಾಲಘಟ್ಟದಲ್ಲಿದ್ದೇವೆ. ಯಾವುದೇ ಸಾಂಸ್ಕೃತಿಕ ದಬ್ಬಾಳಿಕೆ ಆದ್ರೆ ಅದು ಮೊದಲು ಬಸವಣ್ಣ ಮತ್ತು ಅವರ ಅನುಯಾಯಿಗಳ ಮೇಲೆ ಆಗುವಂತಿದೆ. ಹಾಗಾಗಿ ನಾವೆಲ್ಲರೂ ಒಂದಾಗುವ ಅನಿವಾರ್ಯತೆಯಿದೆ ಎಂದು ಶರಣ ಚಿಂತಕ ಡಾ.ರಾಜಶೇಖರ ನಾರನಾಳ ಅಭಿಪ್ರಾಯಪಟ್ಟರು.

ಬುಧವಾರ ರಾಷ್ಟ್ರೀಯ ಬಸವ ದಳದ ಗುರು ಬಸವ ಮಂಟಪದಲ್ಲಿ, ಮಹಾಶಿವರಾತ್ರಿ ಅಂಗವಾಗಿ, ಗುರು ಬಸವ ಪೂಜೆ, ಇಷ್ಟಲಿಂಗ ಪೂಜೆ, ವಚನ ಪ್ರಾರ್ಥನೆ ಹಾಗೂ ಅನುಭಾವ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ಬಸವತತ್ವಕ್ಕೆ ಚ್ಯುತಿ ಬಂದಾಗ ಮೊದಲು ಧ್ವನಿ ಎತ್ತುವ ಸಂಘಟನೆ ಯಾವುದಾದರೂ ಇದ್ರೆ, ಅದು ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಮಾತಾಜಿಯವರು ಕಟ್ಟಿದ ರಾಷ್ಟ್ರೀಯ ಬಸವದಳ. ಅದರ ಬಗ್ಗೆ ಏನೆ ಭಿನ್ನಾಭಿಪ್ರಾಯಗಳು ಇದ್ದರೂ, ಬಸವಣ್ಣನವರ ಹೆಸರಿಗೆ ಚ್ಯುತಿ ಬಂದರೆ ಎದೆಕೊಟ್ಟು ನಿಲ್ಲುವಂತ ಬದ್ದತೆ ಸಂಘಟನೆ ಅಂದರೆ ಅದು ರಾಷ್ಟ್ರೀಯ ಬಸವದಳ. ನಾ ಕಂಡಂತೆ ಇಲ್ಲಿಯವರೆಗೂ ಅಂತಹ ಒಂದು ಬದ್ಧತೆಯ ಸಂಘಟನೆ ಕಟ್ಟಲು ಯಾರಿಗೂ ಆಗಿಲ್ಲ. ಇಂದು ನೂರಾರು ಬಸವ ಸಂಘಟನೆಗಳು ಇರಬಹುದು, ಆದರೆ ರಾಷ್ಟ್ರೀಯ ಬಸವದಳದಂತ ಬದ್ಧತೆಯ ಸಂಘಟನೆ ಇಂದಿಗೂ ಇಲ್ಲ ಎನ್ನುವ ಸತ್ಯವನ್ನು ನಾವು ಒಪ್ಪಲೇ ಬೇಕು ಎಂದರು.

ಎಲ್ಲಾ ಬಸವಪರ ಸಂಘಟನೆಗಳು ತಮ್ಮೆಲ್ಲಾ ಒಣ ಪ್ರತಿಷ್ಠೆ ಮತ್ತು ಸ್ವಾರ್ಥವನ್ನು ಬದಿಗಿಟ್ಟು ಒಂದಾಗುವ ಜರೂರತ್ತು ಇದೆ, ಇಲ್ಲದಿದ್ದರೆ ಮುಂದೊಂದು ದಿನ ಬಸವಣ್ಣನ ಆ ಪರ್ಯಾಯ ಸಂಸ್ಕ್ರತಿಯೂ, ಸನಾತನದ ದೊಡ್ಡ ಕೊಚ್ಚೆಯ ಸುಳಿಯಲ್ಲಿ ಕೊಚ್ಚಿ ಹೋಗುವ ಸಂದರ್ಭವಿದೆ, ಇಂದು ಮತ್ತೆ ಎಲ್ಲಾ ಬಸವಪರ ಸಂಘಟನೆಗಳು ಸಾಂಸ್ಕೃತಿಕ ದಬ್ಬಾಳಿಕೆಯನ್ನು ಎದುರಿಸಬೇಕಾಗಿದೆ. ಶರಣರು ಹೇಳಿದಂತೆ ನಿತ್ಯ ಶಿವರಾತ್ರಿ, ಅಂದ್ರೆ ನಾವು ನಿತ್ಯವೂ ಜಾಗ್ರತವಾಗಿ ಬದುಕಬೇಕಾಗಿದೆ ಎಂದು ಡಾ. ನಾರನಾಳ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿಲೀಪ್ ಕುಮಾರ್ ವಂದಾಲ ವಹಿಸಿ ಮಾತನಾಡಿದರು. ಧ್ವಜಾರೋಹಣವನ್ನು ವಿಜಯಲಕ್ಷ್ಮಿ ಹೊಮ್ಮಿನಾಳ ನೆರವೇರಿಸಿದರು. ಮತ್ತೊಬ್ಬ ಅತಿಥಿ ಶರಣಪ್ಪ ಕುಂಬಾರ ಸಹ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಬಸಲಿಂಗಪ್ಪ ಅಂಗಡಿ, ಭೀಮಣ್ಣ ಬುದ್ಧಿನಿ ಅವರನ್ನು ಮತ್ತು ಕಲ್ಯಾಣ ವಾರ್ಷಿಕೋತ್ಸವದ ನಿಮಿತ್ತ ದಂಪತಿ ಸಂಗಮೇಶ ವಂದಾಲ ಹಾಗೂ ಮಂಗಳ ವಂದಾಲ ಅವರನ್ನು ಗುರು ಬಸವಣ್ಣನವರ ಶ್ರೀರಕ್ಷೆ ಇರಲಿ ಎಂದು ಹಾರೈಸಿ, ಗೌರವಿಸಲಾಯಿತು.

ವಿಶೇಷವಾಗಿ ಇಷ್ಟಲಿಂಗ ಪೂಜೆಯನ್ನು ಬಸವಜ್ಯೋತಿ ಬಿ. ಲಿಂಗಾಯತ, ವಚನ ಗಾಯನವನ್ನು ವಿಜಯಲಕ್ಷ್ಮೀ ನಾರನಾಳ, ಚನ್ನಬಸಮ್ಮ ಕಂಪ್ಲಿ, ರೇಣುಕಾ ಗೌಡ್ರು ಮಾಡಿದರು. ನಿರೂಪಣೆ ವಿನಯಕುಮಾರ ಅಂಗಡಿ, ಸ್ವಾಗತ ಕವಿತಾ ರಗಡಪ್ಪ, ಶರಣು ಸಮರ್ಪಣೆ ನಾಗರಾಜ ಶ್ಯಾವಿ ಮಾಡಿದರು.

ರಾಷ್ಟ್ರೀಯ ಬಸವ ದಳದ ಸದಸ್ಯರು, ಬಸವ ಭಕ್ತರು, ಬಸವಪರ ಸಂಘಟನೆಗಳ ಮುಖಂಡರು ಭಾಗಿಗಳಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Share This Article
Leave a comment

Leave a Reply

Your email address will not be published. Required fields are marked *