ನಿಜಾಚರಣೆ: ವಚನ ಮೆರವಣಿಗೆಯೊಂದಿಗೆ ‘ಬಸವ ಬಂಗಾರ’ದ ಸಡಗರದ ಗುರುಪ್ರವೇಶ

ಬೆಳಗಾವಿ:

ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಸುರೇಶ ಬ. ಇಟಗಿ ಮತ್ತು ಶಶಿಕಲಾ ಎಸ್. ಇಟಗಿ ಶರಣ ದಂಪತಿಗಳು  ಹಿರೇಬಾಗೇವಾಡಿಯ ಬಸವನಗರದಲ್ಲಿ ನೂತನವಾಗಿ ನಿರ್ಮಿಸಿದ ‘ಬಸವ-ಬಂಗಾರ’ಮನೆಯ ಗುರುಪ್ರವೇಶ ಸಮಾರಂಭ ಬಸವತತ್ವದಂತೆ ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ನಡೆಯಿತು.

ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಬಸವಣ್ಣನವರ ಕಂಚಿನ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ, ವೃತ್ತದಿಂದ ನೂತನ ಮನೆಯವರೆಗೆ ವಚನೋತ್ಸವ, ಧರ್ಮಜಾಗೃತಿ ನಡಿಗೆ ನಡೆಯಿತು. ನಡಿಗೆಯಲ್ಲಿ ನೂರಾರು ಶರಣ, ಶರಣೆಯರು ವಚನ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಸಾಗಿದರು. ದಾರಿಯುದ್ದಕ್ಕೂ ಬಸವ ಜಯಘೋಷ ಹಾಕುತ್ತಾ, ವಚನ ಪಠಣ ಮಾಡುತ್ತ ನಡೆದು ಬಂದು, ನೂತನ ಮನೆಯಲ್ಲಿ ಷಟಸ್ಥಲ ಧ್ವಜಾರೋಹಣ ನಡೆಸಲಾಯಿತು.

ನಂತರ ನೂತನ ಮನೆಯ ಗುರುಪ್ರವೇಶ ಮಾಡಿ, ಪರುಷಕಟ್ಟೆಯ ಮೇಲೆ ಬಸವೇಶ್ವರರ ಮೂರ್ತಿಯನ್ನು ಪೂಜ್ಯರು ಪ್ರತಿಷ್ಠಾಪಿಸಿದರು.

ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಗಳು ಸಾನಿಧ್ಯ ವಹಿಸಿ ಅನುಭಾವದ  ನುಡಿಗಳನ್ನಾಡುತ್ತ, ಲಿಂಗಾಯತ ಧರ್ಮಿಯರು ತಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಶಿವಯೋಗ ನೆರವೇರಿಸುವುದು ಅತ್ಯಂತ ಸೂಕ್ತ. ಮಾನಸಿಕ ಒತ್ತಡಕ್ಕೆ ಒಳಗಾಗದಿರಲು ಇಷ್ಟಲಿಂಗ ಪೂಜೆಯು ದಿವ್ಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿ, ಎಲ್ಲರೂ ಲಿಂಗಧಾರಣೆ ಮಾಡಿಕೊಂಡು ಶಿವಯೋಗ ಸಾಧನೆ ಮಾಡಬೇಕೆಂದರು.

ಕಾರಂಜಿಮಠದ ಪೂಜ್ಯ ಗುರುಸಿದ್ದ ಸ್ವಾಮಿಗಳು, ಬಡೇಕೊಳ್ಳಮಠದ ಸದ್ಗುರು ನಾಗೇಂದ್ರ ಸ್ವಾಮಿಗಳು, ಅರಳಿಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಸ್ವಾಮಿಗಳು, ಪೂಜ್ಯ ಉಳವಪ್ಪ ಅಜ್ಜನವರು, ಸೈಯ್ಯದ ಅಲ್ಲಾವುದ್ದೀನಷಾ ಖಾದ್ರಿ ದರ್ಗಾ ಅಜ್ಜನವರು ಸಮ್ಮುಖ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಾಗತಿಕ ಲಿಂಗಾಯತ ಮಹಾಸಭೆ, ಸಂಚಾರಿ ಗುರುಬಸವ ಬಳಗ, ಗುರುಬಸವ ಬಳಗದ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ಪೂಜ್ಯರಿಗೆ ಹಾಗೂ ಗುರು ಹಿರಿಯರಿಗೆ ಇಟಗಿ ಕುಟುಂಬದವರಿಂದ ಗೌರವ ಸಮರ್ಪಣೆ ನೆರವೇರಿತು. ಮಹಾಂತೇಶ ತೋರಣಗಟ್ಟಿ ಇವರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ, ಮಂಜುನಾಥ ಮಡಿವಾಳ ಇವರಿಂದ ಅನುಭಾವ, ಬಸವಕಲಾ ಲೋಕ ನೇಗಿನಾಳ ಇವರಿಂದ ಸಂಗೀತ ಸೇವೆ ನಡೆದು, ಮಹಾಪ್ರಸಾದದೊಂದಿಗೆ ಅತ್ಯಂತ ಅರ್ಥಪೂರ್ಣ ಮತ್ತು ಯಶಸ್ವಿ ಕಾರ್ಯಕ್ರಮ ಜರುಗಿತು.

ಸಮಾರಂಭದಲ್ಲಿ ಇಟಗಿ ಕುಟುಂಬದವರು, ಬಂಧುಗಳು, ಹಿತೈಷಿಗಳು ಹಾಗೂ ಗ್ರಾಮದ ಗುರು ಹಿರಿಯರು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಈ ಕಾರ್ಯಕ್ರಮದಲ್ಲಿ ಭಾಗಿಯಗಿದ್ದು ನನ್ನ ಬಸವ ಭಾಗ್ಯ​. ಬಹಳ ಅಪ್ಪಟ ಬಸವ ಭಕ್ತಿಯಿಂದ ನಿಜಾಚರಣೆಯಂತೆ – ಗುರು ಪ್ರವೇಶ ಕಾರ್ಯಕ್ರಮ​, ಸಹಜ ಶಿವಯೋಗ ನಡೆಸಿಕೊಟ್ಟರು. ಇಟಗಿ ದಂಪತಿಗಳಿಗೆ, ಶ್ರೀ ಮಹಂತೇಶ ತೋರಣಗಟ್ಟಿ ಹಾಗೂ ತಂಡದವರಿಗೆ ಬಸವಾದಿ-ಶರಣರ ದಯೆ ಸದಾ ಇರಲಿ .

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.