ಬಸವ ಭಕ್ತರ ಮನವಿಗೆ ಪೂಜ್ಯರ ಒಕ್ಕೂಟದಿಂದ ಉತ್ತಮ ಸ್ಪಂದನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಮೀಡಿಯಾ ಬಸವತತ್ವದ ಪ್ರಸಾರಕ್ಕಾಗಿ ಬಂದಿರುವ ಸದುದ್ದೇಶದ ಮಾಧ್ಯಮ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲ ಅದರ ಬೆಂಬಲಕ್ಕೆ ನಿಲ್ಲಬೇಕು, ಎಂದು ಎಸ್. ಎಂ. ಜಾಮದಾರ ಹೇಳಿದರು

ಧಾರವಾಡ

ಲಿಂಗಾಯತ ಸಮಾಜದ ಮುಂದಿರುವ ಆತಂಕಗಳನ್ನು ಎದುರಿಸಿ ನಿವಾರಿಸಲು ನಾಡಿನ ಬಸವ ಭಕ್ತರಿಂದ ಬಂದ ಮನವಿಗೆ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಉತ್ತಮ ಸ್ಪಂದನೆ ಬಂದಿದೆ.

ಧಾರವಾಡದಲ್ಲಿ ಜನವರಿ 17ರಂದು ನಡೆದ ಸಭೆಯಲ್ಲಿ ಮಾತನಾಡಿದ ಪ್ರಮುಖರು ಬಸವ ಭಕ್ತರ ಮನವಿಯನ್ನು ಚರ್ಚಿಸಿದರೆಂದು ಹಲವಾರು ಒಕ್ಕೂಟದ ಸದಸ್ಯರು ತಿಳಿಸಿದರು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ ಭಕ್ತರ ಸಲಹೆಗಳಿರುವ ಮನವಿ ಪತ್ರ ಎಲ್ಲಾ ಸ್ವಾಮೀಜಿಗಳಿಗೂ ತಲುಪಿದೆ. ಎಲ್ಲರೂ ಅದನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿಗೆ ತರಲು ಪ್ರಯತ್ನ ನಡೆಸುವುದಾಗಿ ಹೇಳಿದರು.

ಧಾರವಾಡದಲ್ಲಿ ಮಠಾಧೀಶರು ಸಭೆ ಮಾಡುವ ವಿಷಯ ಬಸವ ಮೀಡಿಯಾದವರಿಗೆ ಗೊತ್ತಾದ ಮೇಲೆ, ಅವರು ಜನಸಾಮಾನ್ಯರಿಗೆ ವಿಷಯವನ್ನು ಮುಟ್ಟಿಸಿದರು, ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಮಠಾಧೀಶರು ಏನೇನು ತೀರ್ಮಾನಗಳನ್ನು ಮಾಡಬೇಕೆಂದು ನಾಡಿನ ಚಿಂತಕರು, ಕಾರ್ಯಕರ್ತರಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿ ಪ್ರಕಟಿಸಿದರು. ಗೂಗಲ್ ಮೀಟ್ ಸಹ ಮಾಡಿದರು. ಅವೆಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮನವಿ ರೂಪದಲ್ಲಿ ನಮಗೆಲ್ಲ ತಲುಪಿಸಿದ್ದಾರೆ. ಈ ಸಭೆ ಪ್ರಚಾರವಾಗಿ 60-70 ಜನ ಸ್ವಾಮಿಗಳು ಸಭೆಯಲ್ಲಿ ಪಾಲ್ಗೊಂಡರು, ಎಂದು ಹೇಳಿದರು.

ಬಸವ ಮೀಡಿಯಾ ಬೆಂಬಲಿಸಲು ಕರೆ

ಸಭೆಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಎಸ್. ಎಂ. ಜಾಮದಾರ ಅವರು ಬಸವ ಮೀಡಿಯಾ ಬಸವತತ್ವದ ಪ್ರಸಾರಕ್ಕಾಗಿ ಬಂದಿರುವ ಸದುದ್ದೇಶದ ಮಾಧ್ಯಮ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲ ಅದರ ಬೆಂಬಲಕ್ಕೆ ನಿಲ್ಲಬೇಕು.

ಬಸವ ಮೀಡಿಯಾಗೆ ಕಾರ್ಯಕರ್ತರ ಅವಶ್ಯಕತೆ ಇದೆ. ನಮ್ಮದೇ ಮೀಡಿಯಾ ಆಗಿರೋದ್ರಿಂದ ಅದಕ್ಕಾಗಿ ಸ್ವಯಂ ಕಾರ್ಯಕರ್ತರಾಗಿ ದುಡಿಯಬೇಕು, ಎಂದು ಹೇಳಿದರು.

ಹಂದಿಗುಂದ ಶ್ರೀಗಳು ಮಾತನಾಡುತ್ತ ಬಸವ ಮೀಡಿಯಾ ಬಸವತತ್ವಕ್ಕಾಗಿ ದುಡಿಯುತ್ತಾ ಒಳ್ಳೆಯ ಕೆಲಸ ಮಾಡುತ್ತಿದೆ. ನಾವು ಅದರೊಂದಿಗಿರುತ್ತೇವೆ ಎಂದು ಹೇಳಿದರು.

ಹಿನ್ನೆಲೆ

ಶರಣ ಸಮಾಜದ ಮುಂದಿರುವ ಸವಾಲುಗಳನ್ನು, ಆತಂಕಗಳನ್ನು ಚರ್ಚಿಸಲು ಲಿಂಗಾಯತ ಮಠಾಧೀಶರ ಒಕ್ಕೂಟದ ಸದಸ್ಯರು ಜನವರಿ 17ರಂದು ಧಾರವಾಡದಲ್ಲಿ ಸಭೆ ಸೇರುತ್ತಿದ್ದಾರೆ ಎಂದು ಬಸವ ಮೀಡಿಯಾ ಜನವರಿ 3ರಂದು ವರದಿ ಮಾಡಿತು.

ವರದಿಗೆ ಬಸವ ಭಕ್ತರಿಂದ, ಬಸವ ಸಂಘಟನೆಗಳಿಂದ ಅಭೂತಪೂರ್ವ ಮತ್ತು ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿತು. ಸಮಾಜದ ಸಮಸ್ಯೆಗಳನ್ನು ಗುರುತಿಸಲು ಮಠಾಧೀಶರಿಗೆ ನೆರವು ನೀಡಬೇಕೆಂದು ಮೀಡಿಯಾ (ಪತ್ರಿಕೆ) ಕೋರಿಕೊಂಡಿತು.

ಇದಕ್ಕೆ ಸ್ಪಂದಿಸಿ ಸುಮಾರು 185 ಪ್ರತಿಕ್ರಿಯೆಗಳು ಇಮೇಲ್, SMS, ವಾಟ್ಸ್ ಆಪ್, ಫೋನ್ ಕರೆ ಮೂಲಕ ಬಂದವು. ಇದರಲ್ಲಿ ಕೆಲವು ಒಂದೆರಡು ವಾಕ್ಯಗಳಷ್ಟಿನ ಅಭಿಪ್ರಾಯಗಳಾದರೆ, 20 ಲೇಖನ ಪ್ರಮಾಣದ ಪ್ರತಿಕ್ರಿಯೆಗಳೂ ಬಂದವು.

ಬಸವ ಮೀಡಿಯಾ ಮತ್ತು ಲಿಂಗಾಯತ ಅಧ್ಯಯನ ಸಂಸ್ಥೆ ಬೆಂಗಳೂರು, ಜನವರಿ 12 ನಡೆಸಿದ ಗೂಗಲ್ ಮೀಟ್ ಚರ್ಚೆಯಲ್ಲಿ 76 ಜನ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ವಿಷಯದಲ್ಲಿ ಪ್ರತಿಕ್ರಿಯೆಗಳು ಬೀದರಿನಿಂದ ಚಾಮರಾಜನಗರದವರೆಗೆ ಬಹಳಷ್ಟು ಜಿಲ್ಲೆಗಳಿಂದ ಬಂದವು. ಅಭಿಪ್ರಾಯಗಳನ್ನು ನೀಡಿದವರಲ್ಲಿ ಸಾಮಾನ್ಯ ಬಸವ ಕಾರ್ಯಕರ್ತರು, ಚಿಂತಕರು, ಸಂಘಟನೆಗಳ ಮುಖಂಡರು, ಅನುಭಾವಿಗಳು, ಧರ್ಮ ಪ್ರಚಾರಕರು, ಸಮಾಜ ಸೇವಕರು, ನಿವೃತ ಸರಕಾರಿ ನೌಕರರು, ವಿದ್ಯಾರ್ಥಿಗಳಿದ್ದರು.

ಈ ಎಲ್ಲಾ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಂದು ಮನವಿ ಪತ್ರದ ಮೂಲಕ ಸಭೆಯಲ್ಲಿ ಭಾಗವಹಿಸುತ್ತಿರುವ ಮಠಾಧೀಶರಿಗೆ ತಲುಪಿಸಲಾಯಿತು.

ಹುಬ್ಬಳ್ಳಿಯಲ್ಲಿ ನೀಲಾಂಬಿಕೆ ಬಳಗ, ಗಂಗಾಂಬಿಕೆ ಬಳಗ ಮತ್ತು ಬಸವ ಬಳಗದ 20 ಸದಸ್ಯರು ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಪತ್ರ ನೀಡಿದರು.

Share This Article
2 Comments
  • ಉತ್ತಮ ನಡೆ. ನಿರೀಕ್ಷೆಗಳು ತುಂಬಾ ಇವೆ. ಕ್ರಮೇಣ ಅನುಷ್ಠಾನ, ಸಮಾಜ ಪರಿವರ್ತನೆ ಮತ್ತು ಬೇರೆ ಧಾರ್ಮಿಕ ವ್ಯವಸ್ಥೆಗಳಿಂದ ಬರುವ ಆತಂಕಗಳ ನಿವಾರಣೆ, ಲಿಂಗಾಯತ ಧರ್ಮ ಪ್ರಗತಿಗೆ ಈ ಸಭೆ ಬುನಾದಿಯಾಗಲಿ. ಶರಣು ಶರಣಾರ್ಥಿಗಳು

  • ಒಳ್ಳೆಯ ಬೆಳವಣಿಗೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಮನ್ನಣೆ. ಇದು ಬಸವ ಮೀಡಿಯಾದ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಮಾಡಿದೆ.

Leave a Reply

Your email address will not be published. Required fields are marked *