ಬಸವ ಭಾಷೆ: ‘ನಿಚ್ಚ ನಿಚ್ಚ ಶಿವರಾತ್ರಿ ಮಾಡುವ ಭಾಷೆ’

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆಪ್ರವಚನದ ಮುಖ್ಯಾಂಶಗಳು)

ದಿನಾಂಕ : 07.04.2026

ಪ್ರವಚನಕಾರರು
ಶ್ರೀ ಪ್ರಭುದೇವ ಮಹಾಸ್ವಾಮಿಗಳು,
ಲಿಂಗಾಯತ ಮಹಾಮಠ,
ಬಸವಗಿರಿ, ಬೀದರ

ಸಂಘಟಕರು
ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸಮಿತಿ, ಕೊಪ್ಪಳ

ಕೊಪ್ಪಳ

ನಿಚ್ಚ ಎಂದರೆ ನಿತ್ಯ ಪ್ರತಿದಿನ, ಬಿಡದೇ ಪ್ರತಿನಿತ್ಯ ಅನುಸರಿಸುವುದು, ಸತ್ಯವಾದುದನ್ನೇ ಮಾಡುವುದು. ಶಿವರಾತ್ರಿಯಲ್ಲಿ ಎರಡು ವಿರುದ್ಧ ಅರ್ಥ ನೀಡುವ ಶಬ್ದಗಳಿವೆ. ಅಮಂಗಲ, ದುಃಖ ಅಶುಭ, ಅಜ್ಞಾನಗಳನ್ನು ಪ್ರತಿನಿಧಿಸುವ ಪದವೇ ‘ರಾತ್ರಿ’. ಸತ್ಯ, ಬೆಳಕು, ಮಂಗಲ, ಕಲ್ಯಾಣ, ಶುಭ, ಸುಜ್ಞಾನಗಳನ್ನು ಸಂಕೇತಿಸುವ ಪದವೇ ‘ಶಿವ’.

ಶರಣ ನಿದ್ರೆಗೈದಡೆ ಜಪ ಕಾಣಿರೊ ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಎಂದರೆ ಅಜ್ಞಾನದ ಕತ್ತಲೆಯನ್ನು ಕಳೆದುಕೊಂಡು ಅರಿವಿನ ಬೆಳಗಿನಲ್ಲಿರುವುದೇ ‘ಶಿವರಾತ್ರಿ’ಯಾಗಿದೆ. ಅಜ್ಞಾನ ಮತ್ತು ತಪ್ಪು ತಿಳುವಳಿಕೆಗಳೇ ದುಃಖಕ್ಕೆ ಮೂಲ. ವಸ್ತು-ವ್ಯಕ್ತಿ-ಪ್ರಪಂಚಗಳ ನಿಜ ಸ್ವಭಾವದ ಬಗೆಗಿನ ಅಜ್ಞಾನವೇ ಮಾನವ ಕುಲಕೋಟಿಯ ದುಃಖಗಳಿಗೆ ಕಾರಣವಾಗಿದೆ. ಕರ್ತಾರನ ಕಾರ್ಯಾಗಾರವಾದ ಈ ಲೋಕದಲ್ಲಿ ಬಾಳಬೇಕಾದ ಮಾನವ, ಲೋಕದ ಸ್ವಭಾವ ಅರಿತು ಬಾಳಿದರೆ ತಾಪತ್ರಯವಿರದು.

ಅಜ್ಞಾನ ಕೂಪದಿಂದ ಮೈಕೊಡವಿ ಏಳುವುದು. ದುಃಖದಿಂದ ಮುಕ್ತನಾಗುವುದು. ಆಸೆಯೇ ದುಃಖಕ್ಕೆ ಕಾರಣವೆಂದು ಬುದ್ಧರು ನುಡಿದರೆ, ಅಜ್ಞಾನವೇ ಆಸೆಗೆ ಕಾರಣವೆಂದು ಬಸವಣ್ಣನವರು ದುಃಖದ ಮೂಲವನ್ನೇ ತೋರಿದ್ದಾರೆ. ಅಜ್ಞಾನದಿಂದ, ದುಃಖದಿಂದ, ಆಶೆಯಿಂದ ಮುಕ್ತನಾಗಬೇಕಾದರೆ ಸತ್ಯವನ್ನು ಅರಿಯಬೇಕು. ಜೀವನದ ನಿಜನೆಲೆಯ ಅನುಭವ ಪಡೆಯಬೇಕು.

ಬದುಕಿನಲ್ಲಿ ನೂರೆಂಟು ಚಿಂತೆಗಳು, ಮನಸ್ಸಿನಲ್ಲಿ ನೂರೆಂಟು ಆಶೆಗಳು, ಭಾವದಲ್ಲಿ ನೂರೆಂಟು ಭ್ರಮೆಗಳು, ಬುದ್ಧಿಯಲ್ಲಿ ಶುದ್ಧವಿಲ್ಲ, ನುಡಿಯಂತೆ ನಡೆಯಿಲ್ಲ, ನಡೆದಂತೆ ನುಡಿಯದಿರುವ ಬದುಕು ವ್ಯರ್ಥವಾಗಿರುತ್ತದೆ. ಮನುಷ್ಯನ ಮರೆವಿನಿಂದ ಇವೆಲ್ಲಾ ಉಂಟಾಗುತ್ತವೆ.

ಮನಸ್ಸಿನ, ಬುದ್ಧಿಯ ಮೈಲಿಗೆಯ ಕಳೆಯಲು ‘ಕೂಡಲ ಸಂಗನ ಶರಣರ ಅನುಭಾವವ ಮಾಡುವುದು’. ‘ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪನಂತೆ’. ಮನುಷ್ಯನು ಮರೆವಿನಿಂದ ಹೊರಬರಲು ‘ಅರಿವೇ ತಾನಾಗಿ ತೊಳಗಿ ಪರಮಸುಖದೊಳಗೆ ಪರವಶನಾಗು’. ನಡೆ-ನುಡಿ ಸರಿಯಾಗಿರಲು ‘ಕೂಡಲಸಂಗಮದೇವರ ಅರಿವರೆ ಶರಣರ ಸಂಗವೇ ಮೊದಲು’. ಎಂಬ ಸರಳ ಸೂತ್ರಗಳನ್ನು ಬಸವಾದಿ ಶರಣರು ಕೊಟ್ಟಿದ್ದಾರೆ.

ಅನುಭಾವಿಗಳ ಸಂಗದಿಂದ ತನು, ಮನ, ಭಾವಗಳೆಲ್ಲವೂ ಶುದ್ಧವಾಗುವವು. ಅಷ್ಟೇ ಅಲ್ಲ ಅನುಭಾವಿಗಳು ಒರೆದು ಕೊರೆದು ನೋಡಿ. ತಿದ್ದಿ ತೀಡಿ ನಮ್ಮನ್ನು ಪರಮ ಸುಖದತ್ತ ಕರೆದೊಯ್ಯುವರು. ಮೃಡಶರಣರ ನುಡಿಗಳೇ ಸನ್ಮಾರ್ಗಗಳು. ಬಸವಾದಿ ಶರಣರ ಪಥಗಳೇ ಪರಮಸತ್ಯದ ದರುಶನ. ಭವಬಂಧನ ಬಿಡಿಸುವ ವಿಧಾನ. ಇದುವೇ ನಿಜದ ಅನುಭಾವ. ಸಾರ್ಥಕದ ಬದುಕಿಗೆ ಬೇಕು ನಿಚ್ಚ ನಿಚ್ಚ ಶಿವರಾತ್ರಿ, ಶರಣರ ಅನುಭಾವಗಳೇ ನುಡಿದೀಪಗಳಾಗಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *