ಸುವರ್ಣ ಮಂದಿರ ಮಾದರಿಯಲ್ಲಿ ಪರುಷ ಕಟ್ಟೆ ಅಭಿವೃದ್ಧಿಗೆ ಸರಕಾರಕ್ಕೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಹನ್ನೆರಡನೆಯ ಶತಮಾನದ ಬಸವಕಲ್ಯಾಣದ  ಪರುಷಕಟ್ಟೆಯು ಗುರು ಬಸವಣ್ಣನವರ ಪಾದ ಪರುಷದಿಂದ ಪಾವನಗೊಂಡ ಸ್ಥಳವಾಗಿದೆ. ಇದು ಬಸವ ಧರ್ಮಿಯರ ಭಕ್ತಿಯ ಸ್ಥಳವೂ ಆಗಿದೆ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಹೇಳಿದರು.

ನಗರದ ಪರುಷಕಟ್ಟೆಯಲ್ಲಿ ಪ್ರತಿ ತಿಂಗಳು ಒಂದರಂದು ನಡೆಯುವ ಸುಪ್ರಭಾತ ಸಮಯದಲ್ಲಿ ಶರಣೆ ದಾನಮ್ಮದೇವಿ ಬಳಗ ಮತ್ತು ಬಸವಪರ ಸಂಘಟನೆಯಿಂದ ಹಮ್ಮಿಕೊಳ್ಳುವ ಸಿದ್ಧರಾಮೇಶ್ವರ ಸ್ತೋತ್ರ ತ್ರಿವಿಧಿ ಪಠಣ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಪರುಷಕಟ್ಟೆಯು ಐತಿಹಾಸಿಕ ಕ್ಷೇತ್ರವಾಗಿದ್ದು ಇಲ್ಲಿಯೇ ಕುಳಿತು ಬಸವಣ್ಣನವರು ಜನಗಳ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ಭಕ್ತಿಯಿಂದ ಬೇಡಿದವರಿಗೆ ಬೇಡಿದ್ದನ್ನು ನೀಡಿದ ಈ ಸ್ಥಳ ಇಂದಿಗೂ ಆ ಶಕ್ತಿಯನ್ನು ಹೊಂದಿದೆ. ಇಂತಹ ಪವಿತ್ರ ಸ್ಥಳದಲ್ಲಿ ಕುಳಿತು ಬಸವಣ್ಣನವರ ದಿವ್ಯಶಕ್ತಿಯ ಕುರಿತಾಗಿ ಸಿದ್ಧರಾಮೇಶ್ವರರು ರಚಿಸಿದ 125 ಸ್ತೋತ್ರ ತ್ರಿವಿಧಿಯನ್ನು ಪಠಣ ಮಾಡಿದರೆ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ ಎಂದರು.

ಇದೇ ಉದ್ದೇಶದಿಂದ ಪ್ರತಿ ತಿಂಗಳು ಆಯೋಜಿಸಲಾಗಿದೆ ಎಂದರಲ್ಲದೆ, ಅಮೃತಸರದ ಸಿಖ್ ಧರ್ಮಿಯರ ಸುವರ್ಣ ಮಂದಿರ ಮಾದರಿಯಲ್ಲಿ ಪರುಷ ಕಟ್ಟೆ ಜೀರ್ಣೋದ್ಧಾರವಾಗಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸ್ವಾಮೀಜಿ ನುಡಿದರು.

ಕಾರ್ಯಕ್ರಮದಲ್ಲಿ ಶರಣೆ ದಾನಮ್ಮದೇವಿ ಬಳಗದ ಅಧ್ಯಕ್ಷರಾದ ಸುಮಿತ್ರಾ ದಾವಣಗಾವೆಯವರು ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಗುರು ಬಸವಣ್ಣನವರು ಯಾವುದೇ ಜಾತಿ ಮತ ಪಂಥ ಪಂಗಡ ಬೇಧವಿಲ್ಲದೆ ಸರ್ವರನ್ನು ಆಕರ್ಷಿಸಿ ತಮ್ಮ ಪರುಷವಾಣಿಯಿಂದ ಅವರನ್ನು ಉದ್ಧರಿಸುತ್ತಿದ್ದರು. ಇಂತಹ ಐತಿಹಾಸಿಕ ಇತಿಹಾಸವುಳ್ಳ ಈ ಸ್ಥಳ ಇನ್ನೂ ಅಭಿವೃದ್ಧಿಯಾಗದಿರುವುದು ಖೇದನೀಯ ಸಂಗತಿ. ಇನ್ನು ಮುಂದಾದರೂ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಜೊತೆ ನಾವೆಲ್ಲರೂ ಕೈ ಜೋಡಿಸಿ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಶರಣರಾದ ಜಯಪ್ರಕಾಶ ಸದಾನಂದೆ, ಸುಲೋಚನಾ ಮಾಮನೆ, ಸಂಗಮೇಶ ತೊಗರಖೇಡೆ, ಶ್ರೀದೇವಿ ಉಜಳಂಬೆ, ನೀಲಕಂಠ ಸ್ವಾಮಿ, ಸುಲೋಚನಾ ಗುದಗೆ, ಗಿರಿಜಾ ಹಂಗರಗಿ, ದತ್ತಾತ್ರೆ ಮೂಲಗೆ, ಸೋನಾಲಿ ಶಿವರಾಜ ನೀಲಕಂಠೆ, ಪುಷ್ಪಾ ಮಾಮನೆ, ಕರುಣಾ, ರಾಣಿ ವಡ್ಡೆ, ರೇಖಾ ಪಾಟೀಲ, ಸುಜಾತಾ ತೊಗರಖೇಡೆ, ಮಮತಾ, ರೇಖಾ ಹೂಗಾರ, ಗೌರಿ ಕಾಶಿನಾಥ, ಮಹಾಂತಮ್ಮ, ಅಕ್ಕನ ಬಳಗ, ಬಸವ ತತ್ವ ಪ್ರಚಾರ ಕೇಂದ್ರ, ಇನ್ನಿತರ ಬಸವಪರ ಸಂಘನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *