ಸರ್ವ ಧರ್ಮ ಚರ್ಚಾಗೋಷ್ಠಿ, ಸಾಂಸ್ಕೃತಿಕ ನಾಯಕ ಕಿರು ಹೊತ್ತಿಗೆ, ಶರಣರ, ಬುದ್ಧ, ಅಂಬೇಡ್ಕರ್ ಬಗ್ಗೆ ಪ್ರದರ್ಶನ, ಸಾಣೇಹಳ್ಳಿ ತಂಡದ ‘ಕಲ್ಯಾಣ ಕ್ರಾಂತಿ’ ನಾಟಕ
ಬಾಗಲಕೋಟೆ
ಬಸವ ಜಯಂತಿಯಂದು 12ನೇ ಶತಮಾನದ ಅನುಭವ ಮಂಟಪವನ್ನು ಕೂಡಲಸಂಗಮದಲ್ಲಿ ಮರುಸೃಷ್ಟಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ರವಿವಾರ ಹೇಳಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರ ಸಭೆ ನಡೆಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಸವ ತತ್ವವನ್ನು ಎಲ್ಲೆಡೆ ಸಾರಲು ‘ಅನುಭವ ಮಂಟಪ ಬಸವಾದಿ ಶರಣರ ವೈಭವ’ ಎಂಬ ಎರಡು ದಿನಗಳ ಕಾರ್ಯಕ್ರಮ ಏ.29 ಮತ್ತು 30ರಂದು ಸಾಂಸ್ಕೃತಿಕ ನಾಯಕ ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ನಡೆಯಲಿದೆ ಎಂದು ಹೇಳಿದರು.
ಬಸವಣ್ಣ ಅವರು 12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದರು. ಬಸವಣ್ಣ ಅವರ ಜೀವನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸರ್ವ ಜನಾಂಗದ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಎರಡು ದಿನದ ಕಾರ್ಯಕ್ರಮಕ್ಕೆ ಸಮಾಜದ ಪ್ರಜ್ಞಾವಂತರು, ಸಾಹಿತಿ, ಸರ್ವ ಧರ್ಮದ ಸಾಧು- ಸಂತರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದ ಮೂಲಕ ಎಲ್ಲ ಧರ್ಮಗಳ ಸಾರವನ್ನು ಜನರಿಗೆ ತಿಳಿಸುವಂತಹ ವಿಚಾರ ಮತ್ತು ಚರ್ಚಾಗೋಷ್ಠಿಗಳು ನಡೆಯಲಿವೆ. ಬಸವಾದಿ ಶರಣದ ತತ್ವಗಳನ್ನು ಜನರಿಗೆ ತಿಳಿಸುವ ವಿಧಾನದ ಬಗ್ಗೆಯೂ ಚರ್ಚಿಸಲಾಗುತ್ತದೆ.
ನಾವು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಏಕೆ ಘೋಷಣೆ ಮಾಡಿದೆವು ಎಂಬುದರ ಬಗ್ಗೆ ಕಿರು ಹೊತ್ತಿಗೆಯನ್ನು ಹೊರ ತರಲಾಗುವುದು. ಜತೆಗೆ, ಬಸವಣ್ಣ ಅವರೊಂದಿಗಿದ್ದ 100ಕ್ಕೂ ಹೆಚ್ಚಿನ ಶರಣರ ವಚನಗಳು, ಜೀವನಗಳ ಕುರಿತು ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ, ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಅಲ್ಲದೆ, ಸಾಣೆಹಳ್ಳಿ ಮಠದ ಕಲಾ ತಂಡದಿಂದ ‘ಕಲ್ಯಾಣ ಕ್ರಾಂತಿ’ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಜತೆಗೆ ಬಸವ ತತ್ವ, ವಚನಗಳು ಹಾಗೂ 12 ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅವರು ತಂದ ಸುಧಾರಣೆಗಳ ಕುರಿತು ಜನರಿಗೆ ತಿಳಿಸುವುದು ಹಾಗೂ ಧರ್ಮಗಳ ನಡುವಿನ ಭೇದವನ್ನು ತೊಡೆದು ಹಾಕುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದರು.
ಬಸವಾದಿ ಶರಣರ ಜತೆಗೆ ಸಮಾಜದಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಎಂದು ಸಾರಿದ ಬುದ್ಧ ಮತ್ತು ಧರ್ಮ-ಜಾತಿಗಳ ವಿರುದ್ಧವಾಗಿ ಹೋರಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ, ಸಿದ್ಧಾಂತಗಳನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.
ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಧರ್ಮ ಸಂಸತ್ತು ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್, ಸಚಿವ ಆರ್.ಬಿ. ತಿಮ್ಮಾಪುರ ಸಾಹಿತಿ ಡಾ. ರಂಜಾನ್ ದರ್ಗಾ, ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಜ್ಞಾನಪ್ರಕಾಶ್ ಸ್ವಾಮೀಜಿ, ಡಾ. ಮೀನಾಕ್ಷಿ ಬಾಳಿ, ವೀರಣ್ಣ ರಾಜೂರ, ಡಾ. ಪ್ರಶಾಂತ್ ಮಾರ್ತಾ, ಜಿಲ್ಲಾಧಿಕಾರಿ ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಜತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು.
ಸರ್ವ ಶರಣರ ಸಂಸತ್ತು( ಎಲ್ಲಾ ಜಾತಿಯವರು ಶರಣರಾಗಿ ಅನುಭವ ಮಂಟಪದಲ್ಲಿ) ಕಲಾಪಗಳಲ್ಲಿ ಭಾಗವಹಿಸುತ್ತಿದ್ದರು. ಸರ್ವ ಶರಣರ ಸಂಸತ್ತು ಸೂಕ್ತ ಹೆಸರು. ಎಲ್ಲ ಜಾತಿ ಜನಾಂಗದವರಿಗೂ ಸಮಾನ ವ್ಯವಸ್ಥೆ,ಅವಕಾಶ ಲಬಿಸಬೇಕು. ಮೇಲಾಗಿ ವಚನಸಾಹಿತ್ಯದಲ್ಲಿರದ ಉತ್ತಮ ವಿಚಾರಗಳಿದ್ದರೆ ಅದನ್ನು ಆದ್ತತೆಮೇಲೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಬಸವಾದಿ ಪ್ರಮಥರ ಬಗ್ಗೆ ಇಂದು ನಮ್ಮ ಘನ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ತುಂಬಾ ಅಮೂಲ್ಯವಾಗಿವೆ ಈ ಮೂಲಕ ಧನ್ಯವಾದಗಳು ಹೇಳುತ್ತೇನೆ .ಹಾಗೂ ನನ್ನದೊಂದು ಅನಿಸಿಕೆ ಇದೆ ದಿನಾಂಕ 2ನೇ ತಾರೀಕು ಮೇ ತಿಂಗಳು ಮೇಲೆ ಯೋಜಿಸಿದ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಉಳಿದೆಲ್ಲ ಭಾಗಗಳಿಂದಲೂಜನರು ಒಂದು ಸೇರಲು ಅನುಕೂಲವಾಗುತ್ತದೆ ಅವರವರ ಸ್ಥಳದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಮಾಡುವುದು ಅತಿ ಅವಶ್ಯಕವಾಗಿರುವುದರಿಂದ 30 ಏಪ್ರಿಲ್ 2025ಕ್ಕೆ ಕೂಡಲಸಂಗಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದರೆ ಬರಲು ಅನಾನುಕೂಲವಾಗುವುದು ಪ್ರತಿಯೊಬ್ಬ ಬಸವ ಅಭಿಮಾನಿಗಳು ಸರ್ಕಾರ ಯೋಜಿಸಿದ ಕಾರ್ಯಕ್ರಮಕ್ಕೆ ಬರಬೇಕೆಂದರೆ ಈ ಕಾರ್ಯಕ್ರಮವನ್ನು ಮೇ ಎರಡನೆಯ ತಾರೀಖಿನ ನಂತರ ಇಟ್ಟುಕೊಳ್ಳುವುದು ಸೂಕ್ತ ಎಂದು ನನಗೆ ಅನ್ನಿಸುತ್ತಿದೆ
ಶರಣು ಶರಣಾರ್ಥಿ🙏🙏🙏
ಬಸವ ಧರ್ಮ ಅಂದರೆ ಸಕಲ ಜೀವಿಗಳ ಲೇಸನ್ನು ಬಯಸುವ ಧರ್ಮ.
ಸರ್ವ ಧರ್ಮಗಳ ಸುವಿಚಾರಗಳು ಅಷ್ಟೇ ಅಲ್ಲದೆ ದಯೆ, ಸರ್ವ ಸಮಾನತೆ, ಸತ್ಯ ಶುದ್ಧ ಕಾಯಕ, ದಾಸೋಹ ಮತ್ತು ಪರಸ್ಪರ ಅನುಭವ ಮತ್ತು ಅನುಭಾವ ವಿಚಾರಗಳ ವಿನಿಮಯ ಮಾಡಿಕೊಂಡು ವಿಶೇಷವಾದ ವಚನ ಸಾಹಿತ್ಯ ಸೃಷ್ಟಿಮಾಡಿಸಿದ ಬಸವಣ್ಣ ಶರಣರ ಹಾಗೂ ಸಮಕಾಲೀನ ಶರಣರ ಗೋಷ್ಠಿಗಳಿಗೆ ಪ್ರಾಧಾನ್ಯತೆ ಇರಬೇಕು ಅಂದು.
ಸರ್ವಧರ್ಮ ಸಂಸತ್ತು ಏಕೆ ಬೇಕು?
ವಿವಿಧ ಧರ್ಮೀಯರು ತಮ್ಮ ತಮ್ಮ ಧರ್ಮದ ಹಾಡುಗಳನ್ನೇ ಇಲ್ಲಿ ಹಾಡಿ ರಾಡಿ ಎಬ್ಬಿಸುವವರೇ ಹೆಚ್ಚು.
ಬಸವ ಜಯಂತಿಯನ್ನು ಅರ್ಥವತ್ತಾಗಿ ಜನಮನದಲ್ಲಿ ಪರಿಣಾಮಕಾರಿಯಾಗಿ ಮೂಡಬೇಕಾಗಿದೆ. ಮನವೀಯತೆಗೆ ಮಿಡಿದ ಇತಿಹಾಸದ ಮೊದಲ ಮಹಾನುಭಾವ ಗೌತಮಬುದ್ದನಿಂದ ಬಸವಣ್ಣ ಬಿ ಆರ್ ಅಂಬೇಡಕರರವರೆಗೂ ತಿಳುವಳಿಕೆ ನಮ್ಮ ಜನರಲ್ಲಿ ಮೂಡಬೇಕಾಗಿದೆ.