ಬಹುತೇಕ ಜಿಲ್ಲೆಗಳಲ್ಲಿ ಬಸವ ಸಂಘಟನೆಗಳ ಆಕ್ರೋಶ; ವೀರಶೈವ ಮಹಾಸಭೆ ಘಟಕಗಳಲ್ಲೂ ಅಸಮಾಧಾನ
ಗದಗ
ಮುಂದಿನ ವಾರದ ಬಸವ ಜಯಂತಿಯ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಧ್ಯಕ್ಷ ಶಂಕರ ಬಿದರಿ ಅವರು ಕಳಿಸಿರುವ ಸುತ್ತೋಲೆ ದೊಡ್ಡ ವಿವಾದ ಹುಟ್ಟು ಹಾಕಿದೆ.
ಲಿಂಗಾಯತ ಧರ್ಮದ 770 ಅಮರಗಣಂಗಳನ್ನು 771ಕ್ಕೆ ಏರಿಸುವ ಅವರ ಆದೇಶಕ್ಕೆ ವ್ಯಾಪಕ ಟೀಕೆ ಬಂದಿದೆ. ಜೊತೆಗೆ ಬಸವ ಜಯಂತಿ ಆಚರಣೆಯಲ್ಲಿ ರೇಣುಕಾಚಾರ್ಯರ ಭಾವಚಿತ್ರವನ್ನೂ ಹಾಕಬೇಕೆಂದು ಅವರು ಆದೇಶ ನೀಡಿದ್ದಾರೆ.
ಈ ಆದೇಶಕ್ಕೆ ಪ್ರತಿಕ್ರಿಯೆ ಹೇಗಿದೆ, ಈ ವರ್ಷದ ಬಸವ ಜಯಂತಿಯ ಮೇಲೆ ಅದರ ಪರಿಣಾಮವೇನು? ಎಲ್ಲರೂ ಕೇಳುತ್ತಿರುವ ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನವಾಗಿ ನಾವು ಬೇರೆ ಬೇರೆ ಜಿಲ್ಲೆಗಳಲ್ಲಿರುವ ವೀರಶೈವ ಮಹಾಸಭಾವೂ ಸೇರಿದಂತೆ ಹಲವಾರು ಲಿಂಗಾಯತ ಸಂಘಟನೆಗಳೊಂದಿಗೆ ಮಾತನಾಡಿದೆವು.
ಒಟ್ಟಾರೆ ಹೇಳಬೇಕೆಂದರೆ ಬಹುತೇಕ ಜಿಲ್ಲೆಗಳಲ್ಲಿ ಬಿದರಿಯವರ ಆದೇಶದ ಬಗ್ಗೆ ಅಸಮಾಧಾನ, ಪ್ರತಿರೋಧವಿದೆ. ಅನೇಕ ಕಡೆ ವೀರಶೈವ ಮಹಾಸಭಾದ ಸಂಘಟನೆಯವರೂ ಇದನ್ನು ಟೀಕಿಸಿದ್ದಾರೆ. ಇತರ ಬಸವ ಸಂಘಟನೆಗಳಿಂದ ಇದಕ್ಕೆ ಸಾರ್ವತ್ರಿಕವಾಗಿ ವಿರೋಧವಿದೆ, ಆಕ್ರೋಶವಿದೆ. ಒಂದು ಜಿಲ್ಲೆಯಲ್ಲಿ ಬಿದರಿಗೆ ಬೆಂಬಲವಿದೆ, ಇನ್ನೊಂದರಲ್ಲಿ ಮಹಾಸಭಾದ ಸದಸ್ಯರಲ್ಲಿಯೇ ವಿಭಜನೆಯಾಗಿದೆ.
ಇದು ಸದ್ಯಕ್ಕೆ ನಮಗೆ ಕಂಡುಬಂದಿರುವ ದೃಶ್ಯ. ಬರುವ ದಿನಗಳಲ್ಲಿ ಚಿತ್ರಣ ಬದಲಾಗುವ ಸಾಧ್ಯತೆಯೂ ಇದೆ.
ಬೆಳಗಾವಿ
ಲಿಂಗಾಯತ, ವೀರಶೈವ, ಬಸವಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮೇ 4ರಂದು ಬಸವಣ್ಣನವರ ಜಯಂತಿಯ ಬೃಹತ್ ಮೆರವಣಿಗೆ, ಬಹಿರಂಗ ಸಮಾವೇಶ ನಡೆಯುತ್ತದೆ. ರೇಣುಕ ಭಾವಚಿತ್ರ ಜೋಡಿಸುವ ಸಾಧ್ಯತೆ ಕಾಣಿಸುತ್ತಿಲ್ಲ.
ಬಸವ ಜಯಂತಿ ಮೆರವಣಿಗೆಯಲ್ಲಿ ರೇಣುಕರ ಭಾವಚಿತ್ರ ಯಾರಾದರೂ ತಂದದ್ದೇ ಆದರೆ ಅವರ ಮೇಲೆ ಮೊಕದ್ದಮೆ ಹೂಡಲಾಗುವುದು ಎಂದು ಲಿಂಗಾಯತ ಸಂಘಟನೆಯ ಪ್ರಮುಖರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಏಪ್ರಿಲ್ 30ರಂದು ವೀರಶೈವ ಮಹಾಸಭಾ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಎರಡೂ ಭಾವಚಿತ್ರ ಇಡುತ್ತೇವೆ ಎಂದು ಒಬ್ಬರು ಹೇಳಿದರು.
ಏಪ್ರಿಲ್ 30ರಂದು ಸರ್ಕಾರದ ವತಿಯಿಂದ ಬಸವ ಜಯಂತಿ ನಡೆಯುತ್ತೆ. ಆದರೆ ಅದು ವೇದಿಕೆಗೆ ಸೀಮಿತ. ಅಲ್ಲಿಯೂ ರೇಣುಕರ ಭಾವಚಿತ್ರ ಕಾಣಿಸುವ ಸಾಧ್ಯತೆ ಕಡಿಮೆಯಿದೆ.
ಬೀದರ
ಇಲ್ಲಿ ಬಿದರಿ ಸುತ್ತೋಲೆಗೆ ಸಂಪೂರ್ಣ ವಿರೋಧ ಬಂದಿದೆ. ಸುತ್ತೋಲೆ ದಡ್ಡತನದ ನಿರ್ಧಾರ ಎಂಬ ಮಾತೂ ಬರುತ್ತಿದೆ. ಇಲ್ಲಿ ರೇಣುಕಾಚಾರ್ಯರ ಜಯಂತಿಯ ಪ್ರಶ್ನೆಯೇ ಇಲ್ಲ ಎಂದು ಬಸವತತ್ವ ಅನುಯಾಯಿಗಳು ಹೇಳಿದರು.
ಲಿಂಗಾಯತ, ಬಸವಪರ, ವೀರಶೈವ ಸಂಘಟನೆಗಳನ್ನು ಒಳಗೊಂಡ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ರಚನೆಗೊಂಡಿದೆ. ಆ ಸಮಿತಿಯ ನೇತೃತ್ವದಲ್ಲಿ ಬಸವೇಶ್ವರರ ಜಯಂತಿಯನ್ನು ಮೂರು ದಿನ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಗುತ್ತಿದೆ.
ಏಪ್ರಿಲ್ 28-ಅನುಭಾವ, ಸಾಮೂಹಿಕ ವಚನ ಪಾರಾಯಣ, 29-ವಚನ ಸಂಗೀತೋತ್ಸವ, 30 ಸಂಜೆ-ಬಸವೇಶ್ವರರ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಮಧ್ಯರಾತ್ರಿ ಯವರೆಗೆ ನಡೆಯುವದು.
ಕಲಬುರಗಿ
ಎಲ್ಲರನ್ನು ಒಳಗೊಂಡ ಜಿಲ್ಲಾ ಮಟ್ಟದ ಬಸವ ಜಯಂತೋತ್ಸವ ಸಮಿತಿ ರಚನೆಯಾಗಿದೆ. ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ, ಕಲಬುರ್ಗಿ ನಗರಗಳ ವಾರ್ಡಗಳಲ್ಲಿ ವ್ಯಾಪಕವಾಗಿ ಸಿದ್ಧತಾ ಸಭೆಗಳು ಜರುಗಿವೆ.
ಕಲಬುರ್ಗಿ ನಗರದಲ್ಲಿ ಏಪ್ರಿಲ್ 28ರಂದು ಕಾರ್ ರ್ಯಾಲಿ, 29ರಂದು ಬೈಕ್ ರ್ಯಾಲಿ ಮತ್ತು ಬಹಿರಂಗ ಸಭೆ, 30ರಂದು ಬೃಹತ್ ಮೆರವಣಿಗೆ ಜರುಗಲಿದೆ. ಪಕ್ಷಾತೀತವಾಗಿ ಇಲ್ಲಿ ಎಲ್ಲರ ಸಹಕಾರವಿದೆ. ಸಮಿತಿ ಅಧ್ಯಕ್ಷರು ಬಸವ ಜಯಂತಿಯನ್ನು ಯಾವುದೇ ಅಪಸ್ವರ ಇಲ್ಲದಂತೆ ಮಾಡೋಣ ಎಂದಿರುವರು.
ಇಲ್ಲಿ ಲಿಂಗಾಯತ ಗಣಾಚಾರ ಪಡೆ ಕಾವಲಿರತ್ತೆ ಎಂದು ಲಿಂಗಾಯತ ಮಹಾಸಭಾ ಕಾರ್ಯಕರ್ತರೊಬ್ಬರು ಎಚ್ಚರಿಸಿದರು.
ಕೊಪ್ಪಳ
ಲಿಂಗಾಯತ, ವೀರಶೈವ, ಬಸವಪರ ಸಂಘಟನೆಗಳು ಒಡಗೂಡಿ ಬಸವ ಜಯಂತಿ ಆಚರಣೆಯನ್ನು ಅದ್ಧೂರಿಯಾಗಿ ಮಾಡುತ್ತೇವೆ ಎಂದು ಜಿಲ್ಲೆಯ ವೀರಶೈವ ಮಹಾಸಭಾದ ಪದಾಧಿಕಾರಿಯೊಬ್ಬರ ಅಭಿಪ್ರಾಯ. ಎಲ್ಲ ಸಂಘಟನೆಗಳು ಸೇರಿಸಿ ಸಭೆಗಳಾಗಿವೆ. ಆಗಲೇ ರೇಣುಕರ ಜಯಂತಿ ಮಾಡಿಯಾಗಿದೆ ಎಂದು ಸಹ ಅವರು ಹೇಳಿದ್ದಾರೆ.
ಬಸವ ಜಯಂತಿ ಅಂಗವಾಗಿ ಕೊಪ್ಪಳ, ಕುಷ್ಟಗಿಯಲ್ಲಿ ಶರಣರ ಪ್ರವಚನ ಕಾರ್ಯಕ್ರಮ ಸಹ ಆರಂಭಗೊಂಡಿದೆ.
ಧಾರವಾಡ, ಗದಗ
ತೋಂಟದಾರ್ಯ ಮಠ ಮತ್ತು ಲಿಂಗಾಯತ, ಬಸವಪರ ಸಂಘಟನೆಗಳು ಒಟ್ಟಾಗಿ ಬಸವ ಜಯಂತಿಯ ಮೆರವಣಿಗೆ ನಡೆಸುತ್ತವೆ.
ಬಿದರಿ ಸುತ್ತೋಲೆ ಈ ಜಿಲ್ಲೆಯಲ್ಲಿ ಚರ್ಚೆಯ ವಿಷಯವೇ ಅಲ್ಲ. ಬಸವ ಜಯಂತಿ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ನಡೆಯುತ್ತೆ ಎಂದು ಹೇಳುತ್ತಾರೆ ಬಸವಪರ ಸಂಘಟನೆಯ ಪ್ರಮುಖರು.
ಆದರೆ ಗದಗಿನಲ್ಲಿ ಸಿಕ್ಕ ಒಬ್ಬರು ವೀರಶೈವ ಮಹಾಸಭಾ ರಾಜ್ಯ ಪದಾಧಿಕಾರಿ ಬಿದರಿ ಆದೇಶ ಪಾಲಿಸುತ್ತೇವೆ ಎಂದು ಹೇಳಿದರೆ. ಆದರೆ ಎಲ್ಲಿ, ಹೇಗೆ ಎಂದು ಬಿಡಿಸಿ ಹೇಳಲಿಲ್ಲ.
ವಿಜಯಪುರ
ಬಸವ ಜಯಂತಿ ಆಚರಣೆ ಪ್ರತಿವರ್ಷದಂತೆ ಈ ವರ್ಷವೂ ನಡೆಯುತ್ತೆ ಎನ್ನುತ್ತಾರೆ ವೀರಶೈವ ಮಹಾಸಭಾದ ಜಿಲ್ಲಾ ಪ್ರಮುಖ ಪದಾಧಿಕಾರಿ. ಬಿದರಿ ಆದೇಶದ ಬಗ್ಗೆ ನಮಗೆ ತೀವ್ರ ಅಸಮಾಧಾನವಿದೆ ಎಂದು ಸಹ ಅವರು ಹೇಳಿದರು.
ಬಳ್ಳಾರಿ, ವಿಜಯನಗರ
ಯಾವುದೇ ತೊಂದರೆಯಿಲ್ಲದೇ ಬಸವ ಜಯಂತಿ ನಡೆಯುತ್ತೆ. ಈಗಾಗಲೇ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳಾಗಿವೆ. ಎಲ್ಲೂ ರೇಣುಕರ ಪ್ರಸ್ತಾಪ ಬಂದಿಲ್ಲ.
ಚಿಕ್ಕಮಗಳೂರು, ಶಿವಮೊಗ್ಗ
ವೀರಶೈವ ಮಹಾಸಭಾದ ಆದೇಶ ಇಲ್ಲಿ ಪಾಲನೆ ಆಗುವ ಸಾಧ್ಯತೆ ಕಡಿಮೆ. ಎರಡು ಜಿಲ್ಲೆಗಳಲ್ಲಿ ಪ್ರಮುಖ ಸ್ವಾಮೀಜಿಯೊಬ್ಬರ ಜೊತೆ ಸಂಘಟನೆಗಳ ಸಭೆಗಳು ಜರಗಿವೆ. ಸ್ವಾಮೀಜಿ ಬಸವಣ್ಣನವರ ಭಾವಚಿತ್ರ ಮಾತ್ರ ಬಳಸಲು ಹೇಳಿದ್ದಾರೆ. ಅದರಂತೆ ಜಯಂತಿ ನಡೆಯುತ್ತೆ ಎನ್ನುತ್ತಾರೆ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಮುಖರು.
ಮೈಸೂರು, ಮಂಡ್ಯ, ಬೆಂಗಳೂರು
ಇಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಕೇಳಿಸುತ್ತಿವೆ.
ಮೈಸೂರಲ್ಲಿ ಹಲವು ಸಂಘಟನೆಗಳು ಸೇರಿದಂತೆ ಒಕ್ಕೂಟ ಆಗಿದೆ. ಒಕ್ಕೂಟದ ಅಧ್ಯಕ್ಷರು ಜಯಂತಿಯಲ್ಲಿ ಬಸವ ಭಾವಚಿತ್ರ ಮಾತ್ರ ಇರುವುದು ಎಂದು ಹೇಳಿದ್ದಾರಂತೆ.
ಆದರೆ ವೀರಶೈವ ಮಹಾಸಭಾದ ಪದಾಧಿಕಾರಿಯೊಬ್ಬರು ರೇಣುಕರ ಭಾವಚಿತ್ರದೊಂದಿಗೆ ಜಯಂತಿ ಮಾಡುತ್ತೇವೆ ಎಂದು ಪ್ರಸ್ತಾವಿಸಿದಾಗ, ಮಹಾಸಭಾದೊಳಗಿನ ಇನ್ನೊಂದು ಗುಂಪಿನವರು ಅದು ಬೇಡ, ಬಸವಣ್ಣನವರು ಮಾತ್ರ ಇರಲಿ ಎಂದು ವಿರೋಧಿಸಿದ್ದಾರೆ ಎಂದು ಕೇಳಿ ಬಂದಿದೆ.
ಬಹಳ ವರ್ಷದಿಂದ ಈ ಜಿಲ್ಲೆಗಳಲ್ಲಿ ಬಸವ ಜಯಂತಿ ಆಚರಣೆ ಬಸವಣ್ಣನವರ ಮೂರ್ತಿ, ಭಾವಚಿತ್ರದೊಂದಿಗೆ ನಡೆದುಕೊಂಡು ಬಂದಿದೆ. ಅದರಂತೆ ಈ ವರ್ಷವೂ ಇಲ್ಲಿ ಜಯಂತಿ ನಡೆಯುತ್ತೆ ಎಂದು ಬಸವನಿಷ್ಠ ಸ್ವಾಮೀಜಿಯೊಬ್ಬರು ಹೇಳಿದರು.
ಇನ್ನೊಬ್ಬರು ಶ್ರೀಗಳು ಆಚರಣೆಯ ಸ್ವರೂಪ ಸುತ್ತೂರು ಶ್ರೀಗಳ ನಿಲುವಿನ ಮೇಲೆ ನಿರ್ಧಾರವಾಗುತ್ತದೆ. ಸುತ್ತೂರು ಶ್ರೀಗಳ ಬೆಂಬಲವಿದ್ದರೆ ರೇಣುಕಾ ಭಾವಚಿತ್ರ ಸೇರಿಸುವ ತರುವ ಪ್ರಯತ್ನವಾಗುತ್ತದೆ. ಅವರು ಬೇಡವೆಂದರೆ ಸಾಧ್ಯವೇ ಇಲ್ಲ ಎಂದು ಹೇಳಿದರು.
ಚಿತ್ರದುರ್ಗ
ಬಿದರಿ ಆದೇಶದ ಪರ ವಿರೋಧ ಚರ್ಚೆ ಏನೂ ನಡೆದಿಲ್ಲ ಇಲ್ಲಿ. ಇಲ್ಲಿ ವೀರಶೈವ ಸಂಘಟನೆಯೊಂದು ಬಲಿಷ್ಠವಾಗಿದೆ ಆದರೆ ಯಾವದೇ ಬಹಿರಂಗ ಹೇಳಿಕೆ ಬಂದಿಲ್ಲ.
ಮುರುಘಾಮಠದಲ್ಲಿ ಲಿಂಗಾಯತ, ವೀರಶೈವ, ಬಸವಪರ ಸಂಘಟನೆಗಳು ಒಳಗೊಂಡ ಪೂರ್ವಬಾವಿ ಸಭೆ ಆಗಿದೆ. ಬಸವ ಜಯಂತಿಯನ್ನು ವೈವಿಧ್ಯಮಯ, ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ 3 ದಿನ ಮಾಡುವದೆಂದು ತೀರ್ಮಾನವಾಗಿದೆ. 30ರಂದು ಬಸವ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯುವದೆಂದು ಬಸವನಿಷ್ಠರೊಬ್ಬರು ಹೇಳಿದರು.
ರೇಣುಕಾ ಭಾವಚಿತ್ರ ಸೇರಿಸಿದರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ವಿಷಯ ಆಂತರಿಕವಾಗಿ ಚರ್ಚೆಯಾಗಬೇಕು ಎಂದು ಹೇಳಿದರು.
ತುಮಕೂರು
ಮಹಾಸಭಾದ ಆದೇಶದಂತೆ ಬಸವಣ್ಣನವರ ಭಾವಚಿತ್ರದೊಂದಿಗೆ ರೇಣುಕಾಚಾರ್ಯ, ಇತರೆ ಶರಣರ ಭಾವಚಿತ್ರ ಸೇರಿಸಿ ಬಸವ ಜಯಂತಿ ಮಾಡುತ್ತೇವೆ.
ಬಸವಣ್ಣ ಎಲ್ಲರನ್ನು ಇವ ನಮ್ಮವ ಎಂದಿರುವರು. ಹಾಗಾಗಿ ರೇಣುಕಾಚಾರ್ಯ ಕೂಡ ನಮ್ಮವರೇ ಎಂದು ವೀರಶೈವ ಮಹಾಸಭಾದ ರಾಜ್ಯ ಘಟಕದ ಪ್ರಮುಖ ಪದಾಧಿಕಾರಿಯೊಬ್ಬರು ಹೇಳಿದರು. ಇಲ್ಲಿ ಸಿದ್ದಗಂಗಾ ಶ್ರೀಗಳ ಮಾತು ಮುಖ್ಯವಾಗುತ್ತದೆ ಎಂದು basavaಬಸವ ಸಂಘಟನೆಯವರೊಬ್ಬರು ಹೇಳಿದರು.
ಬಿದರಿ ಸುತ್ತೋಲೆಯ ಬಗ್ಗೆ ನಿಮ್ಮ ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಕ್ರಿಯೆ ಹೇಗಿದೆ? ದಯವಿಟ್ಟು ಕೆಳಗೆ ಕಮೆಂಟಿನಲ್ಲಿ ಹಂಚಿಕೊಳ್ಳಿ.
ಬಸವಣ್ಣನವರ ಭಾವಚಿತ್ರವಿರುವ ವೇದಿಕೆ ಏರದಿದ್ದ ಪಂಚಾಚಾರ್ಯರು ಅವರ ಧರ್ಮಸಂಸ್ತಾಪಕರ ಭಾವಚಿತ್ರ ಸ್ಥಳ ಹುಡುಕಾಡಿ, ಬೇಡಿ ಕಾಡುತ್ತಿದ್ದು ತುಟುಕ್ ಪಿಟಕ್ ಅನ್ನದೆ ಮೌನವಾಗಿರುವುದು ಕಂಡರೆ ಅವರ ಸ್ಥಿಥಿಗತಿ ಏನು ಅಂತ ಊಹಿಸುವುದು?
ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತ ಧರ್ಮ ಪ್ರಚಾರ ಕಾರ್ಯ ಇದೀಗ ವಿಶ್ವದಾದ್ಯಂತ ನಡೆಯುವುದರಿಂದ ಈಗ
ಇವರಿಗೆ ಜ್ಞಾನೋದಯ ಆಗಿದೆ.
ಈ ಹಿಂದೆ ಬಸವನ ಬಾಗೇವಾಡಿ ಊರ ಒಳಗೆ
ಜಗದ್ಗುರುಗಳ
ಪಲ್ಲಕ್ಕಿ ಅಗಸಿಬಾಗಿಲ ಒಳಗಡೆ ಹೋಗುವ ಮುಂಚೆ ವಿಶ್ವಗುರು
ಬಸವಣ್ಣ ನವರ ಪೋಟೊ ತೆಗೆಯಬೇಕು ಅ0ದವದು ಇವತ್ತಿನ ದಿನ ಅವರ ಜೊತೆಗೆ ರೇಣುಕಾಚಾರ್ಯರ ಫೋಟೊ ಇಡುವುದರಿಂದ ಅವರ ಗೌರವ ಕಡಿಮೆಯಾಗುವದಿಲ್ಲ ವಿಚಾರ ಮಾಡಿ ಜಗದ್ಗುರುಗಳೇ.
ನಮ್ಮ ಜಿಲ್ಲೆಯಲ್ಲಿ ಬಸವ ಸಂಘಟನೆ ಇದೆ. ಯಾರೂ ರೇಣುಕಾಚಾರ್ಯ ಎನ್ನುವವರು ಇಲ್ಲ. ಅದು ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವವರಿಲ್ಲ
ಶಂಕರ ಬಿದರಿಯವರು ಇಂಥ ಸುತ್ತೋಲೆಯೆನ್ನು ಹೊರಡಿಸಬಾರದಿತ್ತು. ಅವರು ಅತ್ಯಂತ ವಿಚಾರವಾದಿಗಳು . ಬಹುಶ ಅವರು ಅಧ್ಯಕ್ಷರಾದ ಪರಿಣಾಮದಿಂದ ಉಳಿದ ವೀರಶವರ ಮಾತಿಗೆ ಕಟ್ಟು ಬಿದ್ದಿರಬೇಕು. ಅವ್ರ ಮನಸ್ಸು ಯಾವಾಗಲೂ ಬಸವಣ್ಣನವರ ಲಿಂಗಾಯತರ ಪರವಾಗಿದೆ ಎಂದು ನಾನು ಅವರನ್ನು ಬಹಳ ಹತ್ತಿರದವನಾಗಿ ನೋಡಿರಿವುದರಿಂದ ಹೀಗೆ ಹೇಳುತ್ತಿರುವೆ. ಅವರು ಬದಲಾಗುತ್ತಾರೆ ಎಂಬ ನಂಬಿಕೆ ನನಗಿದೆ. ಬಸವ ಜಯಂತಿಯ ಸಮಯ ಕೇವಲ ಬಸವಣ್ಣ ಭಾವಚಿತ್ರ ಇದ್ದರೆ ಸಾಕು .