ಹುಬ್ಬಳ್ಳಿ
ನಾವು ಎಲ್ಲರನ್ನೂ ಪ್ರೀತಿಸಬೇಕು. ಮುಸ್ಲಿಮರು, ಕ್ರೈಸ್ತರು, ಸಿಖ್ಖರು ಯಾರೇ ಇರಬಹುದು, ಎಲ್ಲರನ್ನೂ ಪ್ರೀತಿಸಬೇಕು. ಅಂದಾಗ ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಅವರನ್ನು ದ್ವೇಷಿಸುತ್ತ ಅವರ ಮೇಲೆ ಯುದ್ಧ ಮಾಡುವದು ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಬಸವಣ್ಣನವರ ತತ್ವವನ್ನು ಜಗತ್ತಿನ ಎಲ್ಲರೂ ಅಳವಡಿಸಿಕೊಂಡರೆ ಎಲ್ಲೆಡೆ ಶಾಂತಿ ತಾನೆ ಹರಡುತ್ತದೆ, ನೆಲೆಸುತ್ತದೆ ಎಂದು ಬಸವತತ್ವ ಚಿಂತಕ ಶಂಕರ ದೇವನೂರ ಹೇಳಿದರು.
ನಗರದ ಶ್ರೀ ಗುರುಬಸವ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಜಯಂತಿ ಉತ್ಸವದ ಮೊದಲನೆಯ ದಿನದ ಕಾರ್ಯಕ್ರಮದಲ್ಲಿ ಬಸವ ತತ್ವಗಳ ಅರಿವು ಮತ್ತು ಅನುಷ್ಠಾನ ವಿಷಯದ ಮೇಲೆ ಅವರು ಅನುಭಾವ ನುಡಿಗಳನ್ನು ಆಡಿದರು.
ಸಾನಿಧ್ಯ ವಹಿಸಿದ್ದ ಶಿವಮೊಗ್ಗ ಬೆಕ್ಕಿನ ಕಲ್ಮಠದ ಪೂಜ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಅನುಭವ ಮಂಟಪ ಇರಲಿಲ್ಲ ಎಂದು ಹೇಳುವವರ ಕುರಿತು ಮಾತನಾಡುತ್ತಾ, ಉದ್ಯೋಗ ಇಲ್ಲದ ಇಬ್ಬರ ನಡುವೆ ನಡೆಯುವ ಸಂವಾದ ಇದ್ದಂತೆ ಅದು ಎಂದು ಒಂದು ಕಥೆ ಹೇಳಿದರು.

ಒಬ್ಬ ತನ್ನ ಮನೆಯ ಪಾಯಾ ತೆಗೆಯುವಾಗ ಒಂದು ತಂತಿ ಸಿಕ್ಕದ್ದನ್ನು ನೋಡಿ ಆ ಸಮಯದಲ್ಲೆ ಟೆಲಿಗ್ರಾಮ್ ವ್ಯವಸ್ಥೆ ಇತ್ತು ಅಂತಾನೆ. ಇನ್ನೊಬ್ಬ ನಮ್ಮ ಮನೆ ಪಾಯಾ ತೆಗೆಯುವಾಗ ಅಲ್ಲಿ ಏನೂ ಇರಲಿಲ್ಲ, ಆವಾಗ ವಾಯರಲೆಸ್ ಫೋನ್ ಇದ್ದವು ಅಂತಾನೆ. ಹೀಗೆ ಇಂದಿನ ಸಂಶೋಧನೆಗಳು ನಡೆದಿವೆ ಎಂದು ಬನ್ನಂಜೆ ಅವರ ಹೆಸರು ಹೇಳದೇ ಮಾತನಾಡಿದರು.
ಕರ್ನಾಟಕ ಸರಕಾರ ನೀಡುವ ಈ ವರ್ಷದ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತರಾದ ಶರಣ ಎಸ್. ಆರ್. ಗುಂಜಾಳ ಅವರಿಗೆ ಇದೇ ಸಂದರ್ಭದಲ್ಲಿ ಗೌರವ ಸನ್ಮಾನ ಮಾಡಲಾಯಿತು.
ವಚನ ಪ್ರಾರ್ಥನೆಯನ್ನು ಕುಮಾರಿ ವಿಭಾ ಅರಟಾಳ, ಸ್ವಾಗತವನ್ನು ಶಶಿಧರ್ ನಾರಾ,
ಸುಲೋಚನಾತಾಯಿ ಭೂಸನೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಂಚನ್ ಚಪ್ಪಳಗಾವಿ ವಚನ ನೃತ್ಯ ಮಾಡಿದರು. ಮುಖ್ಯ ಅತಿಥಿಗಳಾಗಿ ನಿರ್ಮಲಾ ಅಂಗಡಿ ಆಗಮಿಸಿದ್ದರು. ಗೌರವ ಉಪಸ್ಥಿತಿಯನ್ನು ಸುಧೀರ್ ಸಾದರಹಳ್ಳಿ, ಮಹಾಂತೇಶ ಅಣ್ಣಿಗೇರಿ, ಗಿರಿಜಮ್ಮ ಬ್ಯಾಳಿ, ಪಾರ್ವತೆವ್ವ ಮೆಣಸಿನಕಾಯಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಚಂದ್ರಶೇಖರ ಕರವೀರಶೆಟ್ಟರ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆಯನ್ನು ಶಾರದಾ ಪಾಟೀಲ ನೆರವೇರಿಸಿದರು. ವಚನ ಮಂಗಲದ ನಂತರ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.