ಬಸವಕಲ್ಯಾಣ
ಸತತ ಪ್ರಯತ್ನ ಸಕಲ್ಪ ಸಿದ್ಧಿಯಿಂದ ಅಸಾಧ್ಯವಾದುದ್ದನ್ನು ಸಾಧಿಸಬಹುದಾಗಿದೆ ಇದಕ್ಕೆ ಅಕ್ಕಮಹಾದೇವಿಯವರ ವಚನಗಳೇ ಪ್ರೇರಣೆ ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಅವರು ಅಕ್ಕಮಹಾದೇವಿ ಅನುಭಾವ ಪೀಠದಿಂದ ಅಕ್ಕಮಹಾದೇವಿ ಗವಿಯಲ್ಲಿ ಶುಕ್ರವಾರ ನಡೆದ ಅಕ್ಕನ ಮೂರ್ತಿ ಸ್ಥಾಪನೆ ಅನುಭಾವ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ೧೨ನೇ ಶತಮಾನದಲ್ಲಿ ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಬರುವ ಎಲ್ಲಾ ಶರಣರು ಪಾದಸ್ಪರ್ಶ ಮಾಡಿದ ಪುಣ್ಯಸ್ಥಳ ಇದಾಗಿದೆ. ಶರಣ ಚಳುವಳಿಯ ಪ್ರಮುಖರಾಗಿ ಸ್ವಾಭಿಮಾನದ ಪ್ರತೀಕವಾಗಿ ಸ್ರೀವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ ಅಕ್ಕಮಹಾದೇವಿ. ಅಕ್ಕಮಹಾದೇವಿ ಗವಿಯಲ್ಲಿ ಅಕ್ಕನ ಮೂರ್ತಿ ಸ್ಥಾಪನೆ ಇದೊಂದು ಐತಿಹಾಸಿಕ ಸಮಾರಂಭವಾಗಿದೆ. ಇಲ್ಲಿಗೆ ಬರುವವರಿಗೆಲ್ಲ ಅಕ್ಕನ ವಚನಗಳು ಜೀವನಕ್ಕೆ ಪ್ರೇರಣೆ ನೀಡಲಿ ಎಂದರು.

ನೇತೃತ್ವ ವಹಿಸಿದ ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ನೆಮ್ಮದಿಯಿಂದ ಬದುಕಲು ಎಲ್ಲರೂ ಅಕ್ಕನ ವಚನಗಳನ್ನು ಅಧ್ಯಯನ ಮಾಡಿ ಅವುಗಳ ಆಶಯದಂತೆ ಬದುಕಬೇಕು. ಅಕ್ಕನ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬೇಕು ಎಂದರು.
ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಕಮಹಾದೇವಿ ಶರಣರಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಚಿಕ್ಕವಯಸ್ಸಿನಲ್ಲಿ ಎಲ್ಲವನ್ನು ತ್ಯಜಿಸಿ ಅವರು ಎದುರಿಸಿದ ಕಷ್ಟ-ಪರೀಕ್ಷೆಗಳು ಅಪಾರ. ಸಾಕ್ಷಾತ್ ಶಿವನನ್ನು ಪತಿ ಎಂದು ಸ್ವೀಕರಿಸಿ ಕೇಶಾಂಬರಿಯಾಗಿ ಹೊರಟಿದ್ದ ಅಕ್ಕ ಎಲ್ಲರಿಗೂ ಮಾದರಿ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವಪಟ್ಟದ್ದೇವರು ಆಶಿರ್ವಚನ ನೀಡಿ, ಅಕ್ಕಮಹಾದೇವಿಯವರ ವಚನಗಳು ಸ್ತ್ರೀ ಕುಲಕ್ಕೆ ದಾರಿದೀಪವಾಗಿವೆ. ಅವರ ವಚನಗಳು ಅನುಭವಕ್ಕೆ ಅನುಭವ, ಪರಿಣಾಮಕ್ಕೆ ಪರಿಣಾಮ, ಅನುಭಾವದ ಮೇರುಗಿರಿ ತಲಪುತ್ತವೆ. ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂಬ ವಚನದ ಸಾಲು ಸುಖಿ ಜೀವನದ ಪಾಠ ತಿಳಿಸಿಕೊಡುತ್ತದೆ ಎಂದು ಹೇಳಿದರು.

ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮಿಗಳು ಮಾತನಾಡಿ, ಎಲ್ಲರ ಕಷ್ಟಗಳು ಅಕ್ಕನ ಭಾವದರ್ಶನದಿಂದ ದೂರವಾಗುತ್ತವೆ ಎಂದರು. ಮನಗುಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು, ಶ್ರೀ ಜಗದ್ಗುರು ಶೂನ್ಯ ಸಂಪದನಾ ಹುಣಸೆಕೊಳ್ಳ ಮಠ ಯಮಕನಮರಡಿಯ ಪೂಜ್ಯ ಸಿದ್ಧಬಸವ ದೇವರು, ಬೇಲೂರು ಬಾದಾಮಿಯ ಮಹಾಂತ ಬಸವಲಿಂಗ ಸ್ವಾಮಿಗಳು, ಪೂಜ್ಯ ಪ್ರಭುಶ್ರೀ ತಾಯಿ, ಗಾಯತ್ರಿತಾಯಿ ಮಾತನಾಡಿದರು.
ವೇದಿಕೆಯಲ್ಲಿ ಪೂಜ್ಯ ಶಿವಾನಂದ ದೇವರು, ಸತ್ಯದೇವಿತಾಯಿ, ಮಾತೆ ಚಂದ್ರಕಲಾತಾಯಿ, ಮಾತೆ ಸುಗುಣತಾಯಿ, ಇಂದುಮತಿತಾಯಿ, ಕಲ್ಯಾಣಮ್ಮ, ಡಾ. ಮಂಜುನಾಥ ಇತರರಿದ್ದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ಧ್ವಜಾರೋಹಣಗೈದರೆ, ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಗುರುಪೂಜೆ ನೇರವೇರಿಸಿದರು. ರಂಜನಾ ಭೂಶೆಟ್ಟಿ ಮತ್ತು ರಾಮಚಂದ್ರ ಕಲ್ಲಹಿಪ್ಪರ್ಗಾ ವಚನ ಸಂಗೀತ ನಡೆಸಿಕೊಟ್ಟರು. ರೇಖಾ ಗುದಗೆ ನಿರೂಪಿಸಿದರು.
ಮೆರವಣಿಗೆ:
ಇದಕ್ಕೂ ಮೊದಲು ಬಸವ ಮಹಾದ್ವಾರದಲ್ಲಿ ಪೂಜ್ಯರ ಸಾನಿಧ್ಯದಲ್ಲಿ ಅಕ್ಕಮಹಾದೇವಿಯವರ ಮೂರ್ತಿಗೆ ಭವ್ಯ ಸ್ವಾಗತ ಮಾಡಿಕೊಂಡು, ಹೂವಿನ ಅಲಂಕೃತ ರಥದಲ್ಲಿ ಅಕ್ಕಮಹಾದೇವಿಯವರ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಮಾಡಿ ನಂತರ ಮೆರವಣಿಗೆಗೆ ಹುಲಸೂರಿನ ಪೂಜ್ಯ ಶಿವಾನಂದ ಮಹಾದ್ವಾಮಿಗಳು ಚಾಲನೆ ನೀಡಿದರು.

ಮೆರವಣಿಗೆಯುದ್ದಕ್ಕೂ ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಶರಣ-ಶರಣೆಯರು ಅಕ್ಕಮಹಾದೇವಿ ಹಾಗೂ ಇತರ ಶರಣರ ವೇಷಧಾರಿ ಮಕ್ಕಳು ಗಮನ ಸೆಳೆದರು.
ಮಹಿಳೆಯರು ಮಕ್ಕಳು, ಗಣ್ಯರು ವಚನಗಳ ಹಾಡಿಗೆ ಹೆಜ್ಜೆ ಹಾಕಿದರು, ಭಜನಾ ಹಾಗೂ ಇತರ ಕಲಾ ತಂಡಗಳು ಭಾಗವಹಿಸಿದ್ದವು. ಶ್ರೀ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಗಾಂಧಿವೃತ್ತ, ಬಸವೇಶ್ವರ ವೃತ್ತ, ಹರಳಯ್ಯ ವೃತ್ತ, ಮಡಿವಾಳ ವೃತ್ತದ ಮೂಲಕ ಅಕ್ಕಮಹಾದೇವಿ ಗವಿಗೆ ತಲುಪಿತು, ಅಲ್ಲಿ ಮೂರ್ತಿ ಸ್ಥಾಪನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಉರಿಲಿಂಗ ಪೆದ್ದಿಮಠದ ಪೂಜ್ಯ ಪಂಚಾಕ್ಷರಿ ಸ್ವಾಮಿ, ಶಿವಾನಂದ ದೇವರು, ತಿಪ್ಪೆರುದ್ರ ಸ್ವಾಮಿ, ಅಲ್ಲಮಪ್ರಭು ಸ್ವಾಮಿ, ಸತ್ಯಕ್ಕತಾಯಿ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ನಿರ್ದೇಶಕರಾದ ಜಗನ್ನಾಥ ಖೂಬಾ, ರೇವಣಪ್ಪಾ ರಾಯವಾಡೆ, ವಿಜಯಲಕ್ಷ್ಮಿ ಗಡ್ಡೆ, ಮುಖಂಡರಾದ ಬಸವರಾಜ ಬಾಲಿಕಿಲೆ, ಶಂಕರ ಕರಣೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ ಲಕ್ಷ್ಮೀಕಾಂತ ಜ್ಯಾಂತೆ ಸೇರಿದಂತೆ ನೂರಾರು ಶರಣ ಬಂಧುಗಳು ಭಾಗವಹಿಸಿದ್ದರು.