ಬಸವಕಲ್ಯಾಣ
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಬಸವಕಲ್ಯಾಣದಲ್ಲಿ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ, ಶರಣು ಸಲಗರ ಶಾಸಕರ ನೇತೃತ್ವದಲ್ಲಿ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ.
ಈ ಬೆಳವಣಿಗೆಗೆ ರಾಷ್ಟ್ರೀಯ ಬಸವದಳದ ಸಿದ್ಧವೀರ ಸಂಗಮದ, ಬೀದರ, ಪ್ರತಿಕ್ರಿಯೆ ನೀಡಿದ್ದಾರೆ.
1) ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಬಸವಕಲ್ಯಾಣದಲ್ಲಿ ಈ ಮುಂಚೆ ನಡೆದಿದಿಯೇ?
ಈ ಹಿಂದೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ.
2) ಈ ವರ್ಷದ ದಸರಾ ದರ್ಬಾರಿಗೆ ಸಿದ್ಧತೆ ಹೇಗೆ ನಡೆದಿದೆ?
ಕೆಲವು ತಿಂಗಳುಗಳ ಹಿಂದೆ ಇದರ ಪೂರ್ವಭಾವಿ ಸಭೆ ನಡೆಸಲಾಗಿತ್ತು. ನಂತರ ಯಾವುದೇ ಚಟುವಟಿಕೆಗಳು ಕಂಡಿದ್ದಿಲ್ಲ. ಈಗ ತಯಾರಿ ಶುರುವಾಗಿದೆ.
3) ದರ್ಬಾರಿಗೆ ಸ್ಥಳೀಯ ಪ್ರತಿಕ್ರಿಯೆ ಹೇಗಿದೆ?
ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಬಸವಭಕ್ತರು, ಬಸವಾನುಯಾಯಿಗಳನ್ನು ಹೊಂದಿರುವ ಜಿಲ್ಲೆ ಬೀದರ ಜಿಲ್ಲೆ. ಈ ಜಿಲ್ಲೆಯಲ್ಲಿ ಜನರಿಗೆ ಬಸವತತ್ವದ ಬಗ್ಗೆ ಹೆಚ್ಚಿನ ಅರಿವು ಇದೆ. ಅದಕ್ಕಾಗಿ ಪಂಚಪೀಠದವರ ದಸರಾ ದರ್ಬಾರ್ ಬಗ್ಗೆ ಇಲ್ಲಿನ ಜನರು ಅಷ್ಟು ಆಸಕ್ತಿ ತೋರಿಸುವುದಿಲ್ಲ.
4) ಬಸವಕಲ್ಯಾಣದಲ್ಲಿ ದಸರಾ ದರ್ಬಾರನ್ನು ನಡೆಸುವ ಉದ್ಧೇಶವೇನು?
ಬಸವಕಲ್ಯಾಣ ಲಿಂಗಾಯತ ಧರ್ಮದ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ. ಸರಕಾರದ ವತಿಯಿಂದ ಅನುಭವ ಮಂಟಪ ಕೂಡ ಸಿದ್ಧವಾಗುತಿದೆ. ಪಂಚಪೀಠದವರು ಗುರು ಬಸವಣ್ಣನವರ ಜೊತೆ ತಮ್ಮನ್ನು ಗುರುತಿಸಿಕೊಂಡು ಜನರನ್ನು ದಾರಿ ತಪ್ಪಿಸುವ ಉದ್ಧೇಶದಿಂದ ಬಸವಕಲ್ಯಾಣದಲ್ಲಿ ಕಾರ್ಯಕ್ರಮ ಮಾಡುತ್ತಿರಬಹುದು.
ಆದರೆ ಅವರ ಉದ್ಧೇಶ ಈಡೇರುವುದಿಲ್ಲ, ಏಕೆಂದರೆ ಬಸವಪ್ರಜ್ಞೆ ಜನರ ಬುದ್ಧಿ ಹಾಗೂ ಹೃದಯದಲ್ಲಿ ಈಗಾಗಲೇ ಹರಡಿಕೊಂಡಿದೆ.
5) ಬಸವಕಲ್ಯಾಣದಲ್ಲಿ ಪಂಚಪೀಠಗಳ ಪ್ರಭಾವ ಹೇಗಿದೆ?
ಬಸವಕಲ್ಯಾಣದಲ್ಲಿ ಅಥವಾ ಬೀದರ ಜಿಲ್ಲೆಯಲ್ಲಿ ಪಂಚಪೀಠದವರ ಪ್ರಭಾವ ಇಲ್ಲ. ಹೀಗಾಗಿ ಇವರು ಮಾಡುವ ಕಾರ್ಯಕ್ರಮ ಯಶಸ್ವಿ ಆಗುವುದಿಲ್ಲ.
ಕೆಲವು ಸಂಸ್ಥೆ ಅಥವಾ ಸಂಘಟನೆ ಅಥವಾ ಮಠಗಳ ಮುಖ್ಯಸ್ಥರು ಪಂಚಪೀಠದವರ ಈ ಕಾರ್ಯಕ್ರಮಕ್ಕೆ ಬೆಂಬಲ ಕೊಡಬಹುದು. ಆದರೆ ಸಾಮಾನ್ಯ ಜನರ ಜನರ ಮೇಲೆ ಪಂಚಪೀಠಗಳ ಪ್ರಭಾವ ಅಷ್ಟಾಗಿ ಇಲ್ಲ.
6) ಇತ್ತೀಚೆಗೆ ಪಂಚಪೀಠದ ಶ್ರೀಗಳು ಬಸವಣ್ಣ, ಪಂಚಾಚಾರ್ಯರು ಶತ್ರುಗಳಲ್ಲ ಎಂದು ಹೇಳುತ್ತಿದ್ದಾರೆ….
ಇಷ್ಟು ವರ್ಷಗಳ ಕಾಲ ಗುರು ಬಸವಣ್ಣನವರನ್ನು ದೂರ ಇಟ್ಟಿದ್ದ ಪಂಚಪೀಠದವರಿಗೆ ಇವಾಗ ಒಮ್ಮೆಲೆ ಗುರು ಬಸವಣ್ಣನವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿರುವುದನ್ನು ನೋಡಿದರೆ, ಇವರ ಅಸ್ತಿತ್ವಕ್ಕೆ ಅಪಾಯ ಬಂದಿದೆ ಎಂದು ತೋರುತ್ತದೆ.
ಕೇವಲ ಕಾಲ್ಪನಿಕ ರೇಣುಕಾಚಾರ್ಯರನ್ನು ಹಿಡಿದುಕೊಂಡು, ವೀರಶೈವ ಹಣೆಪಟ್ಟಿ ಹಾಕಿಕೊಂಡು ಹೋದರೆ ನಮಗೆ ಭವಿಷ್ಯವಿಲ್ಲ ಎಂಬ ಭಯ ಅವರಲ್ಲಿ ಉಂಟಾಗಿದೆ. ಆದ್ದರಿಂದ ಗುರು ಬಸವಣ್ಣನವರನ್ನು ಹಾಗೂ ಲಿಂಗಾಯತ ಪದವನ್ನು ತಮ್ಮೊಂದಿಗೆ ಸೇರಿಸಿಕೊಂಡು ಕಲಬೆರಕೆ ಮಾಡಿ ಜನರನ್ನು ದಾರಿ ತಪ್ಪಿಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಲಾಗುತ್ತಿದೆ.
ಶರಣರ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಇತಿಹಾಸ ತಿರುಚಿ ತಮ್ಮ ಸುಳ್ಳುಗಳನ್ನು ಸತ್ಯ ಮಾಡುವ ದುರುದ್ದೇಶದ ಪ್ರಯತ್ನ. ಇದಕ್ಕೆ ಸರಕಾರ ಅನುಮತಿ ಹಾಗು ಅವಕಾಶ ನೀಡಬಾರದು. ಲಿಂಗಾಯತ ಪದ ಲಿಂಗಾಯತರ ಅಸ್ಮಿತೆ ಅದನ್ನು ಇತರರು ಯಾವುದೇರೀತಿ ಬಳಸುವ ಹಾಗಿಲ್ಲ. ಈಗ ಲಿಂಗಾಯತರು ಎಚ್ಚೆತ್ತಿದ್ದಾರೆ . ಭವಿಷ್ಯದಲ್ಲಿ ಇಂತಹ ಧರ್ಮವಿರೋದಿ ನಡೆಗಳನ್ನು ಸಹಿಸುವುದಿಲ್ಲ.. ಅ.ಭಾ. ವೀರಶೈವ ಮಹಾಸಭೆ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.