ಬಸವ ಕೇಂದ್ರದಲ್ಲಿ ಶರಣೆ ನೀಲಾಂಬಿಕೆಯವರ ಜಯಂತಿ ಆಚರಣೆ

ರಾಯಚೂರು

ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆಯವರ ಜೀವನದಲ್ಲಿ ಪ್ರೇಮವು ವಾತ್ಸಲ್ಯವಾಗಿ ಪರಿವರ್ತನೆಗೊಂಡು, ಸತಿ ಮೋಹವು ನಿರ್ಮೋಹವಾಗಿ, ಕಾಮವು ನಿಷ್ಕಾಮವಾಗುವ ಹಂತಕ್ಕೆ ತಲುಪಿದ್ದನ್ನು ನಾವು ಕಾಣುತ್ತೇವೆ ಎಂದು ಶರಣೆ ಮುಕ್ತಾ ನರಕಲದಿನ್ನಿ ಹೇಳಿದರು.

ಬಸವ ಕೇಂದ್ರದಲ್ಲಿ ಸೋಮವಾರ ನಡೆದ ಶರಣೆ ನೀಲಾಂಬಿಕೆಯವರ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಸತಿ-ಪತಿಗಳಿಬ್ಬರು ಪರಸ್ಪರರಿಗೆ ಶಿಶುಗಳಾದೆವು ಎಂದು ನೀಲಾಂಬಿಕೆಯವರು ಹೇಳುವಲ್ಲಿ ಈ ಭಾವ ಅಡಕವಾಗಿದೆ ಎಂದು ಹೇಳಿದರು.

ಶರಣ ಬೆಟ್ಟಪ್ಪ ಕಸ್ತೂರಿ ಮಾತನಾಡಿ, ಕಲ್ಯಾಣದಲ್ಲಿ ಬಸವಣ್ಣನವರು ಮಹಾಮನೆ ಕಟ್ಟಿ ‘ಅನುಭವ ಮಂಟಪ’ ಸ್ಥಾಪಿಸಿದಾಗ, ವಿದೇಶ, ದೇಶದ ಬೇರೆಲ್ಲ ಸ್ಥಳಗಳಿಂದ ಹಿರಿಯರು-ಕಿರಿಯರು, ಸ್ತ್ರೀ-ಪುರುಷರು, ವಿಪ್ರ-ಅಂತ್ಯಜರೆಂಬ ಭೇದಭಾವವಿಲ್ಲದೆ ಸಾವಿರಾರು ಶರಣರು ಕಲ್ಯಾಣಕ್ಕೆ ಆಗಮಿಸಿದರು. ಅಕ್ಕನಾಗಮ್ಮ ಮಹಾಮನೆಯ ಮಹಾತಾಯಿಯಾಗಿ, ಗಂಗಾಂಬಿಕೆ ಕ್ರಿಯಾಮೂರ್ತಿಯಾಗಿ, ನೀಲಾಂಬಿಕೆ ಜ್ಞಾನಮೂರ್ತಿಯಾಗಿ, ಚನ್ನಬಸವಣ್ಣನು ತತ್ವ ಮೂರ್ತಿಯಾಗಿ ಹಗಲಿರುಳು ಎಲ್ಲರ ಸೇವೆಗೈದರೆಂದರು.

ಶರಣ ಮಹಾದೇವಪ್ಪ ಏಗನೂರ ಮಾತನಾಡಿ, ಬಸವಣ್ಣನವರ ಅಪ್ಪಣೆ ಮೇರೆಗೆ ನೀಲಾಂಬಿಕೆಯವರನ್ನು ಕೂಡಲಸಂಗಮಕ್ಕೆ ಕರೆದುಕೊಂಡು ಬರುವಾಗ ಹೊಳೆ ತುಂಬಿ ಹರಿಯುತ್ತಿದ್ದುದರಿಂದ, ನದಿಯ ದಡದಲ್ಲಿ ಉಳಿದುಕೊಳ್ಳುತ್ತಾರೆ. ನೀಲಾಂಬಿಕೆಯವರು ಲಿಂಗ ಪೂಜೆಯಲ್ಲಿ ಮಗ್ನರಾದಾಗ ಬಸವಣ್ಣನವರು ಮಹಾಲಿಂಗದೊಳಗೆ ಲೀನರಾದುದನ್ನು ಅರಿತರು. ಅವರ ಹೃದಯದ ಭಾವನೆಗಳು ವಚನ ವಾಣಿಯಾಗಿ ಹೊರಹೊಮ್ಮಿ ಬಸವಸ್ಮರಣೆ ಗೈಯುತ್ತಾ ಬಸವ ಮಹಾಬಯಲಿನಲ್ಲಿ ಬಯಲಾದರು. ಹಡಪದ ಅಪ್ಪಣ್ಣನವರು ಸಹ ಬಯಲಿನಲ್ಲಿ ಬಯಲಾದರು. ಇವರೀರ್ವರು ಬಯಲಾದ ಸ್ಥಳವೇ ‘ತಂಗಡಗಿ’ ವೆಂದಾಯಿತೆಂದರು.

ಶರಣ ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಸುಮಂಗಲ ಹಿರೇಮಠ, ಸರೋಜಮ್ಮ ಮಾಲಿಪಾಟೀಲ, ಡಾ. ಪ್ರಿಯಾಂಕಾ ಗದ್ವಾಲ, ಜಯಶ್ರೀ ಮಹಾಜನಶೆಟ್ಟಿ, ನೀಲಕಂಠರಾವ, ಸಿ. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ವಚನ ಪ್ರಾರ್ಥನೆ ಶರಣೆ ಪಾರ್ವತಿ ಪಾಟೀಲ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು. ಅಮರಗುಂಡಪ್ಪ ಹೂಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಎಸ್. ಶಂಕರಗೌಡ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *