ಬಸವ ಕೇಂದ್ರದಿಂದ ಶಾಮನೂರು ಅವರಿಗೆ ಶ್ರದ್ಧಾಂಜಲಿ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕ್ರಪ್ಪನವರ ಶ್ರದ್ಧಾಂಜಲಿ ಸಭೆ ನಡೆಯಿತು.

ಮೊದಲಿಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಿಸಿ, ನಿಮಿಷ ಮೌನಾಚರಿಸುವ ಮೂಲಕ ಮೃತರಿಗೆ ಗೌರವ ಸಲ್ಲಿಸಲಾಯಿತು.

ಲಿಂಗಸೂಗೂರು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿಯವರು ಶ್ಯಾಮನೂರು ಕುರಿತು ಮಾತನಾಡುತ್ತ, ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಗೌರವ ತಂದುಕೊಟ್ಟವರು ಶಾಮನೂರು ಎಂದರು.

ದಾವಣಗೆರೆಯ ಮಹಾಸಭೆಯ ಸಮಾವೇಶದಲ್ಲಿ ವೀರಶೈವ ಲಿಂಗಾಯತರು ಹಿಂದುಗಳಲ್ಲ ಎಂಬ ಗಟ್ಟಿ ನಿರ್ಣಯವನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆಗೆ ಶ್ರಮಿಸಿದರು. ಎಂದೂ ತಮ್ಮ ಧರ್ಮದ ಸ್ವಾಭಿಮಾನ ಬಿಟ್ಟುಕೊಡದ ಗಟ್ಟಿಕುಳವಾಗಿದ್ದರು ಎಂದು ತಿಳಿಸಿದರು.

ರಾಜಕೀಯದಲ್ಲಿ ಮುಂದೆ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಎಂಪಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸಿದರು. ದಾವಣಗೆರೆಯ ಶಿಕ್ಷಣದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಬಸವ ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪಟದ ಜೊತೆಗೆ ರೇಣುಕಾಚಾರ್ಯರ ಪಟ ಹಾಕಬೇಕೆಂದು ಸುತ್ತೋಲೆ ಹೊರಡಿಸಿದ್ದರು.

ಶಾಮನೂರು ಅವರು  ಹಾಗೇ ಮಾಡುವುದು ಸರಿಯಲ್ಲ. ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಬೇರೆ ಬೇರೆ ಆಚರಣೆಗಳು ಎಂದು ಗಟ್ಟಿದನಿಯಲ್ಲಿ ಹೇಳಿದಾಗ ಸುತ್ತೋಲೆ ಹಿಂಪಡೆಯಲಾಯಿತು ಎಂಬುದನ್ನು ಸ್ಮರಿಸಿದರು.

ಬಸವ ಕೇಂದ್ರದ ಕಾರ್ಯದರ್ಶಿ ಚೆನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ತಾಲ್ಲೂಕು ಅಧ್ಯಕ್ಷ ಜೆ. ಬಸವರಾಜ, ಚನ್ನಬಸವ ಇಂಜನಿಯರ್, ಅಮರೇಶ ನಿಲೋಗಲ್ಲ, ನಾಗೇಶಪ್ಪ ನಿವೃತ್ತ ಎಎಸ್ಐ, ನಿರ್ಮಲಾ ನಾಡಗೌಡರು, ಪಾರ್ವತಿ ಪಾಟೀಲ, ಶಾರದ, ಮಲ್ಲಿಕಾರ್ಜುನ ಗುಡಿಮನಿ, ಯಂಕಣ್ಣ ಆಶಾಪುರ ಮತ್ತು ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *