ಬಸವ ಮಂಟಪದಲ್ಲಿ ಚನ್ನಹುಣ್ಣಿಮೆ, ಬೆಳದಿಂಗಳ ಪ್ರಸಾದ
ಬೀದರ:
ಅವಿರಳ ಜ್ಞಾನಿ ಚನ್ನಬಸವಣ್ಣನವರ ಲಿಂಗೈಕ್ಯ ಸಂಸ್ಮರಣೆ ದಿನ “ಸಮಾಜ ಸಂಘಟನೆಯ ದಿನ”ವಾಗಿ ಆಚರಿಸುವಂತಾಗಬೇಕೆಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ನುಡಿದರು.
ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ನಗರದ ಬಸವ ಮಂಟಪದಲ್ಲಿ ಜರುಗಿದ ಚನ್ನಹುಣ್ಣಿಮೆ, ಬೆಳದಿಂಗಳ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇವಲ 24ನೇ ವಯಸ್ಸಿನಲ್ಲಿ ಚನ್ನಬಸವೇಶ್ವರರು ಷಟಸ್ಥಲ ಚಕ್ರವರ್ತಿ ಎನಿಸಿಕೊಂಡು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ತೊಡಗಿ, ಲಿಂಗಾಯತ ಧರ್ಮ ಸಂರಕ್ಷಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಚನಗಳ ಅಧ್ಯಯನ ಮಾಡಬೇಕೆಂದು ಸ್ವಾಮಿ ಸಲಹೆ ನೀಡಿದರು.
ಸಮ್ಮುಖ ವಹಿಸಿದ್ದ ಬಸವಮಂಟಪದ ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ, ವಚನ ಸಾಹಿತ್ಯ ಮರಣ ಸಾಹಿತ್ಯವಲ್ಲ. ಅದು ಜೀವನ ಸಾಹಿತ್ಯ. ಅದು ಹಿಂದು, ಇಂದು, ಮುಂದು ಎಂದೆಂದಿಗೂ ಜೀವಪರ, ಜನಪರ ಭಾವಪರ ಸಾಹಿತ್ಯವಾಗಿದೆ. ವಚನ ಎಂದರೆ ಮಂತ್ರ. ಅವುಗಳಿಗೆ ಗೌರವ ಕೊಡಬೇಕು. ಮಕ್ಕಳಿಗೂ ಅಧ್ಯಯನ ಮಾಡಿಸಬೇಕು ಎಂದರು.

ಸಾನಿಧ್ಯ ವಹಿಸಿದ್ದ ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡುತ್ತ, ಬಾಗಲಕೋಟೆ ಜಿಲ್ಲೆಯ ಧರ್ಮಕ್ಷೇತ್ರ ಕೂಡಲ ಸಂಗಮದಲ್ಲಿ ಎರಡು ಎಕರೆ ಜಮೀನು ಖರೀದಿಸಲಾಗಿದೆ. ಪೀಠಸ್ಥಾಪನೆ ಮಾಡಲಾಗುತ್ತಿದೆ.
770 ಅಮರ ಗಣಂಗಳ ಸಂಕೇತವಾಗಿ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ತನ್ಮೂಲಕ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಯಾರೊಬ್ಬ ಮಠಾಧೀಶರು ಬಾಯಿ ಬಿಡುತ್ತಿಲ್ಲ. ಸಿದ್ಧರಾಮಯ್ಯನವರು ಇರೋವರೆಗೆ ಮಾತ್ರ ಕೇಂದ್ರಕ್ಕೆ ಮರು ಶಿಫಾರಸ್ಸು ಮಾಡಲು ಸಾಧ್ಯ. ಅವರು ಅಧಿಕಾರದಿಂದ ಕೆಳಗಿಳಿದರೆ ಅದು ಗಗನ ಕುಸುಮವಾಗಲಿದೆ. ಆದ್ದರಿಂದ ಕೂಡಲ ಸಂಗಮದ ಲಿಂಗಾಯತ ಧರ್ಮಪೀಠ ಸ್ಥಾಪನೆಗೆ ತಲಾ ರೂ. 11 ಸಾವಿರ ನೀಡಿ 770 ಅಮರ ಗಣಂಗಳ ಸಂಕೇತದ ಸದಸ್ಯತ್ವ ಪಡೆದುಕೊಳ್ಳಲು ಸೂಚಿಸಿದರು.

ವೇದಿಕೆ ಮೇಲೆ ಕಕಮಠಾಣಾ ಕಾಲೇಜನ ವಿದ್ಯಾಸ್ವಾಮಿ, ಯುವಸಾಹಿತಿ ನಾಗೇಶ ಸ್ವಾಮಿ, ಶಿವಕುಮಾರ ಜಾಬಾ, ನಾಗನಾಥ ಚಿಟಮೆ ಉಪಸ್ಥಿತರಿದ್ದು ಮಾತನಾಡಿದರು.
ಮಲ್ಲಿಕಾರ್ಜುನ ಜೈಲರ್ ಗುರುಬಸವ ಪೂಜೆ ನೆರವೇರಿಸಿದರು. ಶಿವಶರಣಪ್ಪ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸಿದ್ದರು. ನೇತೃತ್ವ ಶಿವರಾಜ ಪಾಟೀಲ ಅತಿವಾಳ ವಹಿಸಿದ್ದರು. ಉದ್ಯಮಿ ನಾಗಶೆಟ್ಟಿ ದಾಡಗಿ ಧ್ವಜಾರೋಹಣ ನೆರವೇರಿಸಿದರು. ಕಲ್ಯಾಣರಾವ ಬಂಬುಳಗಿ ತಂಡದಿಂದ ವಚನ ಗಾಯನ, ಬಸವ ಮಂಟಪದ ಮಕ್ಕಳಿಂದ ವಚನನೃತ್ಯ ಸಭೀಕರ ಗಮನ ಸೆಳೆಯಿತು. ಬಸವರಾಜ ಸಂಗಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿಕಾಂತ ಬಿರಾದಾರ ಸ್ವಾಗತಿಸಿದರು. ಶಿವಕುಮಾರ ಪಾರಾ ನಿರೂಪಿಸಿದರೆ ಶ್ರೀನಾಥ ಕೋರೆ ವಂದಿಸಿದರು.

ಇದೇ ವೇಳೆ ಪ್ರಮುಖರಾದ ಹಾವಶೆಟ್ಟಿ ಪಾಟೀಲ, ಧನರಾಜ ನಿಟ್ಟೂರೆ, ಕಾಶಿನಾಥ ಪಾಟೀಲ, ಶಿವರಾಜ ಶೆಟಕಾರ ಸುಂದಾಳ, ಕಲ್ಲಪ್ಪ ದೇಶಮುಖ, ಬಸವರಾಜ ಪಾಟೀಲ ಲಿಂಗದಳ್ಳಿ, ಗಣಪತಿ ದೇಶಮುಖ, ಡಾ. ಧನರಾಜ ರಾಗಾ, ನಿರ್ಮಲಾ ನಿಲಂಗೆ, ವಿದ್ಯಾ ಧಾರವಾಡ, ಚನ್ನಬಸಯ್ಯ ಸ್ವಾಮಿ ಉದಗೀರ, ಗಣಪತಿ ಬಿರಾದಾರ, ಸತೀಶ ಪಾಟೀಲ, ನಾಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಿರಾದಾರ ಸಂಗಮ ಸೇರಿದಂತೆ ಹಲವರಿದ್ದರು.
