ಎಂ. ಬಿ. ಪಾಟೀಲರಿಂದ ಬಸವ ಮೀಡಿಯಾ ಪುಸ್ತಕ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವ ಸಂಜೆ’ಯಲ್ಲಿ ಪುಸ್ತಕ ಬಿಡುಗಡೆ, ಕಲಬುರ್ಗಿ ಉಪನ್ಯಾಸ, ಬಸವ ತತ್ವ ಚರ್ಚಾ ಗೋಷ್ಠಿ

ಬೆಂಗಳೂರು

ಆಗಸ್ಟ್ 17ರಂದು ನಗರದಲ್ಲಿ ನಡೆಯಲಿರುವ ‘ಬಸವ ಸಂಜೆ’ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲರು ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಇಲ್ಲಿಯವರೆಗೆ ಪ್ರಕಟವಾಗಿರುವ ಜನಪ್ರಿಯ ಲೇಖನಗಳನ್ನು ಬಸವ ಮೀಡಿಯಾ ಈಗ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಶರಣ ಸಾಹಿತಿ ಗೊ. ರು. ಚನ್ನಬಸಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ. ಆರ್. ಚಂದ್ರಶೇಖರ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಸಂಪಾದಕ ಎಂ ಎ ಅರುಣ್ ಬಸವ ಮೀಡಿಯಾ ಸಂಸ್ಥೆಯ ಪರಿಚಯ ಮಾಡಿಕೊಡಲಿದ್ದಾರೆ.

“ಒಂದೇ ವರ್ಷದಲ್ಲಿ ಲೇಖನಗಳ ಸಂಗ್ರಹವನ್ನು ಹೊರತರುವಷ್ಟು ಬಸವ ಮೀಡಿಯಾ ಬೆಳೆದಿರುವುದು ನಾಡಿನ ಬಸವಾಭಿಮಾನಿಗಳಿಗೆ ಸಂತಸ ತರುವ ಬೆಳವಣಿಗೆ,” ಎಂದು ಜಾಮದಾರ್ ಹೇಳಿದರು.

‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕದಲ್ಲಿ ಕಳೆದ ಒಂದು ವರ್ಷದಲ್ಲಿ ಲಿಂಗಾಯತ ಸಮಾಜದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು ವಿವರವಾಗಿ ದಾಖಲಾಗಿವೆ. 388 ಪುಟಗಳ ಪುಸ್ತಕದಲ್ಲಿ 38 ಲೇಖಕರ ನೂರಕ್ಕೂ ಹೆಚ್ಚು ಬರಹಗಳಿವೆ. ಜಾಮದಾರ್ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

“ಪತ್ರಿಕೆಗಳಲ್ಲಿ ಬರುವುದನ್ನು ಓದಿ ಮರೆತುಬಿಡುತ್ತೇವೆ. ಪುಸ್ತಕದಲ್ಲಿ ದಾಖಲಾದರೆ ಶಾಶ್ವತವಾಗಿ ಉಳಿಯುತ್ತದೆ. ಲೇಖನಗಳನ್ನು ಬಿಡಿ ಬಿಡಿಯಾಗಿ ನೋಡುವುದಕ್ಕಿಂತಲೂ ಒಟ್ಟಾಗಿ ನೋಡಿದರೆ ಈ ಎಲ್ಲಾ ಬೆಳವಣಿಗೆಗಳ ಮಹತ್ವ ಅರ್ಥವಾಗುವುದು. ಇದು ಲಿಂಗಾಯತ ಸಮಾಜದಲ್ಲಿ ಜಾಗ್ರತಿ ಮೂಡಿಸುವಂತಹ ಪುಸ್ತಕ,” ಎಂದು ಚಂದ್ರಶೇಖರ ಹೇಳಿದರು

ಪುಸ್ತಕ ಬಿಡುಗಡೆಯ ಜೊತೆಗೆ ಎರಡು ವಿಶೇಷ ಕಾರ್ಯಕ್ರಮಗಳು ‘ಬಸವ ಸಂಜೆ’ಯಲ್ಲಿ ನಡೆಯುತ್ತಿವೆ.

ಹಿರಿಯ ಚಿಂತಕ ಅಶೋಕ ಬರಗುಂಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಪ್ರೊಫೆಸ್ಸರ್ ಎಂ. ಎಂ. ಕಲಬುರ್ಗಿಯವರ ಮೇಲೆ ವಿಶೇಷ ಉಪನ್ಯಾಸ ಮೀಡಲಿದ್ದಾರೆ.

“10 ವರ್ಷಗಳ ಹಿಂದೆ ಹಂತಕರ ಗುಂಡಿಗೆ ಕಲಬುರ್ಗಿ ಬಲಿಯಾದರು. ಅವರ ಸ್ಮರಣೆಯಲ್ಲಿ ವರ್ಷಪೂರ್ತಿ ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಉಪನ್ಯಾಸ ಈ ಸರಣಿಯ ಮೊದಲನೇ ಕಾರ್ಯಕ್ರಮ,” ಎಂದು ಚಂದ್ರಶೇಖರ ಹೇಳಿದರು.

‘ಬಸವ ಸಂಜೆ’ ಕೊನೆಯ ಭಾಗದಲ್ಲಿ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯುವ ಚರ್ಚಾ ಗೋಷ್ಠಿಯಲ್ಲಿ ಶರಣ ತತ್ವ ಚಿಂತಕರಾದ ಡಾ. ಜೆ. ಎಸ್. ಪಾಟೀಲ, ರುದ್ರಪ್ಪ ಪಿ, ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಲಿದ್ದಾರೆ.

ಬಸವ ಮೀಡಿಯಾ ಟ್ರಸ್ಟಿನ ಸದಸ್ಯ ಎಚ್. ಎಂ. ಸೋಮಶೇಖರಪ್ಪ ನಿರ್ವಹಿಸುವ ಕಾರ್ಯಕ್ರಮ ಟ್ರಸ್ಟಿನ ಮತ್ತೊಬ್ಬ ಸದಸ್ಯ ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪ್ರಾರ್ಥನೆಯನ್ನು ಶರಣತತ್ವ ಚಿಂತಕ ಎಚ್. ಸಿ. ಉಮೇಶ, ಸ್ವಾಗತವನ್ನು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತೆ, ನಿರೂಪಣೆಯನ್ನು ಬಸವ ಮೀಡಿಯಾ ಪತ್ರಕರ್ತೆ ಡಿ.ಪಿ. ನಿವೇದಿತಾ,
ಶರಣು ಸಮರ್ಪಣೆಯನ್ನು ಬಸವ ಮೀಡಿಯಾ ಸಹಸಂಪಾದಕ ರವೀಂದ್ರ ಹೊನವಾಡ ನಡೆಸಿಕೊಡಲಿದ್ದಾರೆ.

“‘ಬಸವ ಸಂಜೆ’ಯನ್ನು ಬಸವ ಕಾರ್ಯಕರ್ತರ, ಚಿಂತಕರ, ಮುಖಂಡರ ಸಮ್ಮಿಲನವಾಗಿ ರೂಪಿಸಿದ್ದೇವೆ. ಎಲ್ಲರೂ ಕೂಡಿ ನಮ್ಮ ಮುಂದಿರುವ ಸವಾಲು, ಅವಕಾಶಗಳನ್ನು ಗ್ರಹಿಸುವ, ಮುಂದಿನ ಹೆಜ್ಜೆಗಳನ್ನು ರೂಪಿಸುವ ಪ್ರಯತ್ನವಿದು. ಅವಕಾಶ ಸಿಕ್ಕರೆ ಬೇರೆ ಕಡೆಯೂ ‘ಬಸವ ಸಂಜೆ’ಯನ್ನು ಆಯೋಜಿಸುತ್ತೇವೆ,” ಎಂದು ಸೋಮಶೇಖರಪ್ಪ ಹೇಳಿದರು.

ಕಾರ್ಯಕ್ರಮ ನಡೆಯುವ ಸ್ಥಳ – ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಿ ಪಿ ವಾಡಿಯಾ ರಸ್ತೆ, ಬಸವನ ಗುಡಿ, ಬೆಂಗಳೂರು. ಸಮಯ ಸಂಜೆ 4ರಿಂದ 8.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *