ಬೆಂಗಳೂರು
ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾವನ್ನು ಮುನ್ನಡೆಸಲು ಎಲ್ಲರೂ ಕೈಜೋಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ಕರೆ ಕೊಟ್ಟರು.
ಇಲ್ಲಿನ ಬಸವನಗುಡಿ ಸಭಾಂಗಣದಲ್ಲಿ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕಳೆದ ಒಂದು ವರ್ಷದಲ್ಲಿ ಬಸವ ಮೀಡಿಯಾ ಪ್ರಭಾವಶಾಲಿ ಮಾಧ್ಯಮವಾಗಿ ಬೆಳೆದಿದೆ. ಬಸವ ಮೀಡಿಯಾದ ಬರವಣಿಗೆಯಲ್ಲಿ ಶಕ್ತಿಯಿದೆ, ಯುಕ್ತಿಯಿದೆ, ಸಮತೋಲನ ಇದೆ. ವಸ್ತುನಿಷ್ಠವಾಗಿ, ಯಾರಿಗೂ ನೋವಾಗದಂತೆ ಆದರೆ ಎಲ್ಲರಿಗೂ ಸತ್ಯ ತಿಳಿಯುವಂತೆ ಬಸವ ಮೀಡಿಯಾ ಕೆಲಸ ಮಾಡುತ್ತಿದೆ,” ಎಂದು ಜಾಮದಾರ್ ಹೇಳಿದರು.

“ತಂತ್ರಜ್ಞಾನ ಬಳಸಿಕೊಂಡು ಬಸವ ಮೀಡಿಯಾ ಎಲ್ಲಾ ರೀತಿಗಳಲ್ಲಿ ಬೆಳೆಯಬೇಕಾದರೆ 6-8 ಕೋಟಿಯ ಹಣ ಸಂಗ್ರಹಣೆಯಾಗಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು,” ಹೇಳಿದರು.
ಲಿಂಗಾಯತ ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನವನ್ನು ಯಶಸ್ವಿಗೊಳಿಸಲು, ಬಸವ ತತ್ವವನ್ನು ಹಳ್ಳಿ, ಹಳ್ಳಿಗೆ ಮುಟ್ಟಿಸಲು ಎಲ್ಲರೂ ಶ್ರಮಿಸಬೇಕೆಂದು ಜಾಮದಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಎಂ ಬಿ ಪಾಟೀಲ್ ಪುಸ್ತಕ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ.ಆರ್. ಚಂದ್ರಶೇಖರ್, ಸಂಪಾದಕ ಎಂ.ಎ. ಅರುಣ್ ಮಾತನಾಡಿದರು. ಉಮೇಶ್ ಎಚ್.ಸಿ. ಅವರಿಂದ ಪ್ರಾರ್ಥನೆ, ಶ್ರೀಶೈಲ ಮಸೂತೆ ಅವರಿಂದ ಸ್ವಾಗತ, ಡಿ.ಪಿ. ನಿವೇದಿತಾ ಅವರಿಂದ ನಿರೂಪಣೆ ನಡೆಯಿತು.
ಅಶೋಕ ಬರಗುಂಡಿ, ಜೆ.ಎಸ್. ಪಾಟೀಲ, ಕೆ. ರವೀಂದ್ರನಾಥ, ಬಸವರಾಜ ಹಂಡಿ, ಪಿ. ರುದ್ರಪ್ಪ, ರಾಜಶೇಖರ ನಾರನಾಳ, ಮುಕ್ತಾ ಕಾಗಲಿ, ಸೋಮಶೇಖರಪ್ಪ, ಶಾಂತಕುಮಾರ ಹರ್ಲಾಪುರ, ಕೃಪಾಶಂಕರ, ರವೀಂದ್ರ ಹೊನವಾಡ, ಪ್ರೊ. ವೀರಭದ್ರಯ್ಯ, ಬಸವಪ್ರಕಾಶ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.