ಇಂದು ಬಸವ ಮೀಡಿಯಾಕ್ಕೆ ಒಂದು ವರ್ಷದ ಸಂಭ್ರಮ
ಬೆಂಗಳೂರು
ಬಹಳ ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಧರ್ಮ ಚಳುವಳಿ ಇತ್ತೀಚಿನ ದಿನಗಳಲ್ಲಿ ಹೊಸ ಹುರುಪು, ತೀವ್ರತೆ ಪಡೆಯುತ್ತಿದೆ. ದಿನೇ ದಿನೇ ನಮ್ಮ ಸಮಾಜದಲ್ಲಿ ಬಸವಣ್ಣನವರ ಪ್ರಭಾವ ಹೆಚ್ಚುತ್ತಿದೆ, ಬಸವಾದಿ ಶರಣರ ಧಾರ್ಮಿಕ, ಸಾಮಾಜಿಕ ಚಿಂತನೆಯ ಬಗ್ಗೆ ಜಾಗೃತಿ ಮೂಡುತ್ತಿದೆ.
ಇದರಿಂದ ಆತಂಕಕ್ಕೊಳಗಾಗಿರುವ ಒಳಗಿನ ಹಾಗೂ ಹೊರಗಿನ ಬಸವತತ್ವದ ವಿರೋಧಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇವರು ವಚನಗಳನ್ನು ತಿರುಚುತ್ತ, ಬಸವಣ್ಣನವರನ್ನು ವಿರೂಪಗೊಳಿಸುತ್ತ, ಪ್ರಗತಿಪರರನ್ನು ಟಾರ್ಗೆಟ್ ಮಾಡುತ್ತಾ, ಇಲ್ಲಸಲ್ಲದ ಕಥೆಗಳನ್ನು ಹೇಳಿಕೊಂಡು ಲಿಂಗಾಯತರನ್ನು ದಾರಿ ತಪ್ಪಿಸಲು ಶ್ರಮಿಸುತ್ತಿದ್ದಾರೆ.
ಬಸವತತ್ವದ ಮೇಲೆ ನಡೆಯುತ್ತಿರುವ ಈ ಸಾಂಸ್ಕೃತಿಕ ದಾಳಿಗೆ ವಿರುದ್ಧವಾಗಿ ಶರಣ ಸಮಾಜದಿಂದ ತೀಕ್ಷ್ಣ ಹಾಗೂ ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಬರುತ್ತಿರುವುದನ್ನೂ ನಾವು ನೋಡಬಹುದು. ಸಮಾಜ ಸಂಘಟಿತವಾಗುತ್ತಿದೆ, ಬಸವಪರ ಸಂಘಟನೆಗಳ ಸದಸ್ಯತ್ವ, ಚಟುವಟಿಕೆಗಳು ಬೆಳೆಯುತ್ತಿವೆ, ಜನರಲ್ಲಿ ಬಸವಪ್ರಜ್ಞೆ ರಭಸದಿಂದ ಹರಡುತ್ತಿದೆ.
ಇಂತಹ ಸಂಘರ್ಷದ ಸಮಯದಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ನಿಖರವಾಗಿ, ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ಮಾಧ್ಯಮಗಳ ಅಗತ್ಯ ಬಹಳವಿದೆ.
ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬಹಳ ದೊಡ್ಡ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಬಸವ ಮೀಡಿಯಾ ಒಂದು ವರ್ಷ ಪೂರೈಸುತ್ತಿರುವುದು ಹರ್ಷದ ಸಂಗತಿ. ಈ ಅಲ್ಪಾವಧಿಯಲ್ಲೇ ಶರಣ ಸಮಾಜಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸಮಗ್ರವಾಗಿ ವರದಿ ಮಾಡುವ, ಬಸವಪರ ಸಂಘಟನೆಗಳ ಒಡನಾಡಿಯಾಗಿ, ಸಾಮಾನ್ಯ ಕಾರ್ಯಕರ್ತರ ಧ್ವನಿಯಾಗಿ ಬಸವ ಮೀಡಿಯಾ ಬೆಳೆದಿದೆ.
ಕಳೆದ ಒಂದು ವರ್ಷದಲ್ಲಿ ಹಲವಾರು ಪ್ರಚಲಿತ ವಿಷಯಗಳ ಮೇಲೆ ಬಸವ ಮೀಡಿಯಾದಲ್ಲಿ ಬಂದಿರುವ ವರದಿಗಳು ಈಗ ಪುಸ್ತಕ ರೂಪದಲ್ಲಿ ನಿಮ್ಮ ಕೈಯಲ್ಲಿದೆ. ಇದು ನಮ್ಮ ಸಮಾಜದ ಮುಂದಿರುವ ಸವಾಲುಗಳು ಮತ್ತು ಸಾಧ್ಯತೆಗಳನ್ನು ಗ್ರಹಿಸಲು ನೆರವಾಗುವ ಮಹತ್ವದ ದಾಖಲೆ.
ಈ ಸಂದರ್ಭದಲ್ಲಿ ಶರಣ ಸಮಾಜಕ್ಕೆ ಅತ್ಯಗತ್ಯವಾದ ಒಂದು ವೇದಿಕೆಯನ್ನು ಕಲ್ಪಿಸಲು ಹಗಲಿರುಳು ಶ್ರಮಿಸಿರುವ ಬಸವ ಮೀಡಿಯಾದ ಸಂಪಾದಕೀಯ ತಂಡಕ್ಕೆ, ಟ್ರಸ್ಟಿಗಳಿಗೆ, ಸಲಹಾ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸುತೇನೆ.
ಇವರೆಲ್ಲರ ಜತೆ ನನಗೆ ಬಹಳ ವರ್ಷಗಳ ಒಡನಾಟವಿದೆ. ಇವರ ಪ್ರಾಮಾಣಿಕತೆ, ಬಸವ ಬದ್ಧತೆ ಹಾಗೂ ಕಾರ್ಯವೈಖರಿಯನ್ನು ಹತ್ತಿರದಿಂದಲೇ ನೋಡಿದ್ದೇನೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಇವರೆಲ್ಲ ಒಮ್ಮತದಿಂದ ಯಾವುದೇ ಖಾಸಗಿ ಮಾಲೀಕತ್ವಕ್ಕೆ ಅವಕಾಶ ನೀಡದೆ ಬಸವ ಮೀಡಿಯಾವನ್ನು ಶರಣ ಸಮಾಜದ ಸಾಮೂಹಿಕ ಒಡೆತನಕ್ಕೆ ಒಪ್ಪಿಸಿದ್ದಾರೆ. ಸಮಾಜದ ಪ್ರತಿನಿಧಿಗಳಾಗಿ ಆರು ವರ್ಷ ಅವಧಿಗೆ ನೇಮಕವಾಗುವ ಟ್ರಸ್ಟಿನ ಸದಸ್ಯರು ಬಸವ ಮೀಡಿಯಾವನ್ನು ನಡೆಸುತ್ತಾರೆ. ಇವರು ಲೆಕ್ಕಪತ್ರವನ್ನು ಪಾರದರ್ಶಕವಾಗಿಡಲು, ಬರುವ ದಾಸೋಹ ಮತ್ತು ಖರ್ಚುವೆಚ್ಚವನ್ನು ಕಾಲಕಾಲಕ್ಕೆ ಸಾರ್ವಜನಿಕವಾಗಿ ಮಂಡಿಸಲು ಬದ್ಧರಾಗಿದ್ದಾರೆ.
ಬಸವ ಮೀಡಿಯಾ ಕೇವಲ ಒಂದು ವೆಬ್ಸೈಟ್ ಆಗಿ ಉಳಿಯಬಾರದು. ಬಸವ ತತ್ವವನ್ನು ಜನರಿಗೆ ಮುಟ್ಟಿಸಲು ಎಲ್ಲಾ ರೀತಿಯ ಮಾಧ್ಯಮ ಪ್ರಕಾರಗಳನ್ನು ಹಾಗೂ ತಂತ್ರಜ್ಞಾನ ಬಳಸಿಕೊಂಡು ಬೆಳೆಯಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರ ಸಹಕಾರ, ಬೆಂಬಲ ಅವಶ್ಯವಿದೆ.
ಶರಣ ಸಮಾಜದ ಸಾಮೂಹಿಕ ಆಸ್ತಿಯಾದ ಬಸವ ಮೀಡಿಯಾವನ್ನು ಬೆಳೆಸಲು ಎಲ್ಲರೂ ತನು-ಮನ-ಧನಗಳಿಂದ ಕೈ ಜೋಡಿಸಬೇಕೆಂದು ನಾನು ಆಶಿಸುತ್ತೇನೆ.
ಎಸ್.ಎಂ. ಜಾಮದಾರ್
ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ,
ಜಾಗತಿಕ ಲಿಂಗಾಯತ ಮಹಾಸಭಾ
(ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕಕ್ಕೆ ಬರೆದಿರುವ ಮುನ್ನುಡಿ)
ಮಾನ್ಯ ಶರಣರಾದ ಶ್ರೀ ಶಿವಾನಂದ ಜಾಮದಾರರಿಗೆ ಶರಣುಗಳು, ಎಂ ಎಂ ಕಲಬುರಗಿಯವರ ಹತ್ತೇಯಾಗಿ ಐವತ್ತು ವರ್ಷಗಲಾಗುತ್ತಾ ಬಂದಿದೆ. ಈ ಹತ್ತೇಗಾರರದ ಆರೋಪಿಗಳು ಹಿಂದೂಹುಲಿಗಳೆಂದು ಸನ್ಮಾನಿಸುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಈ ಸಂಘಟನೆ ಯಾವುದು, ಅವರಿಗೆ ಗುರ್ತಿಸಿ ಎಚ್ಚರಿಕೆ ನೀಡಬೇಕು. ಕಾನೂನು ಕ್ರಮಕ್ಕಾಗಿ ತಾವುಗಳು ಮುಂದಾಗಬೇಕು. ಅವರಿಗೆ ಬುದ್ದಿಕಲಿಸಬೇಕು. ಆ ನೀಚರಿಗೆ ಸಂಘಟನೆಯ ಮೂಲಕ ಪಾಠಕಲಿಸಿರಿ. ವಂದನೆಗಳು
ಈ ಮೇಲಿನ ಕಮೆಂಟ್ನಲ್ಲಿ ಹತ್ತು ಎಂದು ಬೀಳುವ ಬದಲು ಐವತ್ತು ಎಂದು ತಪ್ಪಾಗಿದೆ. ಕ್ಷಮಿಸಿ.