ಬೆಂಗಳೂರು
ಈ ವರ್ಷ ಮೂರು ಸಾವಿರ ಕೆಂದ್ರಗಳಲ್ಲಿ ಬಸವ ಪಂಚಮಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕ, ವಕೀಲ ಅನಂತ ನಾಯ್ಕ್ ಎಸ್. ರವಿವಾರ ಹೇಳಿದರು.
ವೇದಿಕೆ ಸಂಸ್ಥಾಪಕರಾದ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ನಾಡಿನ ಪ್ರಗತಿಪರ ಸ್ವಾಮೀಜಿಗಳು, ಚಿಂತಕರು ಬಸವ ಪಂಚಮಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ರವಿವಾರ ಶಿವಾನಂದ ವೃತ್ತದ ಸಮೀಪದಲ್ಲಿನ ವಲ್ಲಭ ನಿಕೇತನ ವಿಶ್ವನೀಡಂ ಅನಾಥಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, “ಕ್ರಾಂತಿಜ್ಯೋತಿ ಬಸವಣ್ಣನವರು ಲಿಂಗೈಕ್ಯರಾದ ದಿನವೇ ಹುತ್ತಕ್ಕೆ ಹಾಲು ಸುರಿಯುವುದರ ಹಿಂದೆ ಮನುವಾದಿಗಳ ಕುತಂತ್ರ ಅಡಗಿದೆ” ಎಂದು ದೂರಿದರು.
ಪಂಚಮಿ ಹಬ್ಬದ ಸಂಭ್ರಮಾಚರಣೆ ಎಲ್ಲ ಕಡೆ ನಡೆಯಲಿದೆ. ಜಾಗೃತಿ, ಉಪನ್ಯಾಸ, ಸಿಹಿ, ಹಾಲು, ಹಣ್ಣು ವಿತರಣೆ, ವಚನ ಗಾಯನ, ವೈಜ್ಞಾನಿಕ ಮನೋಭಾವ ಬಲಪಡಿಸುವ ಉದ್ದೇಶ ಇದಾಗಿದೆ ಎಂದು ಅನಂತ ನಾಯ್ಕ್ ತಿಳಿಸಿದರು.
ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಹುತ್ತಕ್ಕೆ ಹಾಲೆರೆಯುವ ಬದಲು ಬಡ, ಅನಾಥ ಮಕ್ಕಳಿಗೆ ಅದೇ ಹಾಲನ್ನು ಕೊಡಿ’ ಎಂದು ನಗರದ ವಿವಿಧ ಸಂಸ್ಥೆಗಳಲ್ಲಿ ‘ಬಸವ ಪಂಚಮಿ’ ಕಾರ್ಯಕ್ರಮ ನಡೆಸಲಾಗುತ್ತಿದೆ.
ನಾಗರ ಹಾವಿನ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡಲಾಗುತ್ತಿದೆ. ಪೌಷ್ಟಿಕ ಆಹಾರವನ್ನು ಮೌಢ್ಯದ ಹೆಸರಲ್ಲಿ ಚೆಲ್ಲುತ್ತಿರುವ ದೇಶ ನಮ್ಮದೆನ್ನುವುದು ಅವಮಾನದ ಸಂಗತಿ. ಹಾವು ಹಾಲು ಕುಡಿಯುವುದಿಲ್ಲ ಎಂಬ ಸತ್ಯ ಗೊತ್ತಾಗಬೇಕಿದೆ.
ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಮಕ್ಕಳು ಅಪೌಷ್ಟಿಕತೆಯಿಂದ, ಲಕ್ಷಾಂತರ ವೃದ್ಧರು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ” ಎಂದು ಅವರು ತಿಳಿಸಿದರು.
ಹಸಿದವರಿಗೆ ಮೊದಲು ಊಟ ಕೊಡಬೇಕು, ಆಮೇಲೆ ಧರ್ಮ ಹೇಳಬೇಕು. ನಾವು ಮನುಷ್ಯರಾಗಿ ಕಾಗೆ ಕೋಳಿಗಳಿಗಿಂತ ಕನಿಷ್ಠರಾಗುವುದು ಬೇಡ. ತಿನ್ನುವ ಅನ್ನ ಬೀಸಾಡಬಾರದು, ಅನ್ನ ಆಹಾರ ನಮ್ಮ ಹಕ್ಕು. ಬಸವಾದಿ ಶರಣರು ಹೇಳಿದಂತೆ ನಾವೆಲ್ಲ ಮನುಷ್ಯತ್ವ ರೂಢಿಸಿಕೊಳ್ಳಬೇಕೆಂದು ಪ್ರಗತಿಪರ ಚಿಂತಕ ಹೆಚ್. ಸಿ. ಉಮೇಶ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ಆಕಾಶ, ಅಯ್ಯಪ್ಪ ನಾಯಕ, ಮರಳುಸಿದ್ಧಪ್ಪ, ದಿಲೀಪ ರಾಥೋಡ ಮತ್ತಿತರರು ಉಪಸ್ಥಿತರಿದ್ದರು.