ಎಲ್ಲರನ್ನು ಅಪ್ಪಿಕೊಳ್ಳುವುದೇ ಬಸವ ಧರ್ಮ: ಹಂದಿಗುಂದದ ಶಿವಾನಂದ ಸ್ವಾಮೀಜಿ
ಯಾದಗಿರಿ
ಎಲ್ಲರನ್ನು ಅಪ್ಪಿಕೊಳ್ಳುವ ಧರ್ಮವೇ ಬಸವ ಧರ್ಮ. ಅದುವೆ ಬಸವ ಸಂಸ್ಕೃತಿ ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ನುಡಿದರು.
ನಗರದ ಶುಭಂ ಕಲ್ಯಾಣ ಮಂಟಪದಲ್ಲಿ ಸಂಜೆ ಸಹಮತ ವೇದಿಕೆ ಮತ್ತು ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ ಗುರುವಾರ ಜರುಗಿದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ’ ವಿಷಯ ಕುರಿತು ಮಾತನಾಡಿದ ಅವರು, ಸ್ವಾಮಿಗಳಾದವರು ಚರಜಂಗಮರಾಗಿ ಮನೆ ಮನೆಗೆ ಹೋಗಬೇಕು. ಲಾಂಛನಕ್ಕೆ ತಕ್ಕಂತೆ ನಡೆದುಕೊಳ್ಳದವರನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.
ಭಕ್ತರ ಹೆಗಲ ಮೇಲೆ ಕುಳಿತು ಸವಾರಿ ಮಾಡುವುದಕ್ಕಿಂತ ಭಕ್ತರ ಜೊತೆಯಾಗಿ ಎಲ್ಲರನ್ನು ಪ್ರಗತಿಯೆಡೆಗೆ ಕರೆದುಕೊಂಡು ಹೋಗುವವನೇ ನಿಜವಾದ ಜಂಗಮ. ವೇಷ ತೊಟ್ಟು ಮೋಸ ಮಾಡುವವರನ್ನು ಶರಣತತ್ವ ಒಪ್ಪುವುದಿಲ್ಲ ಎಂದು ಹೇಳಿದರು.
‘ಮಾತೆಂಬುದು ಜೋತಿರ್ಲಿಂಗ’ ವಿಷಯ ಕುರಿತು ಮಾತನಾಡಿದ ಶರಣ ಚಿಂತಕ ಸಿದ್ದು ಯಾಪಲಪರ್ವಿ, ಬಸವಾದಿ ಶರಣರು ನಡೆ, ನುಡಿ ಕಲಿಸಿದರು. ವಚನ ಧರ್ಮಕ್ಕೆ ಸಂವಿಧಾನದ ಶಿಸ್ತು ಇದೆ. ನಾವಾಡುವ ಮಾತುಗಳು ಮನಸಾಕ್ಷಿಯಾಗಿರಬೇಕು. ಸಮಾಜ ಒಪ್ಪುವಂತಿರಬೇಕು. ನಮ್ಮ ಮಾತುಗಳು ಇನ್ನೊಬ್ಬರ ಬದುಕಿಗೆ ಬೆಳಕಾಗಿರಬೇಕು ಎಂದು ಶರಣರು ತಿಳಿಸಿದ್ದಾರೆ. ಮಾತೆಂಬುದು ಜ್ಯೋತಿರ್ಲಿಂಗ, ಶರಣರು ನುಡಿದು ಸೂತಕಿಗಳಲ್ಲ ಎಂದು ಅಲ್ಲಮರು ಹೇಳಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿ, ಮಹಿಳೆಯರಿಗೆ ಮೊಟ್ಟ ಮೊದಲು ಸಮಾನತೆ ತಂದು ಕೊಟ್ಟ ಬಸವಣ್ಣನವರು ಅನುಭವ ಮಂಟಪ ನಿರ್ಮಿಸುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆ ಕಲ್ಪಿಸಿದರು ಎಂದರು.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಆದರೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸುತ್ತಿಲ್ಲ. ಸಮಾಜದಲ್ಲಿ ಸಹಬಾಳ್ವೆ, ಸಹಮತ ಉಂಟು ಮಾಡುವ ಇಂತಹ ಕಾರ್ಯಗಳು ಮೇಲಿಂದ ಮೇಲೆ ಆಗಬೇಕಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು.

ನೇತೃತ್ವ ವಹಿಸಿದ್ದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವರಿಗೆ ಸವಾಲು ಹಾಕಿದ ಬಸವಣ್ಣನವರು ಎನ್ನನ್ನದ್ದಿ ನೀ ಹೋಗು ಎಂದಿದ್ದರಿಂದ ಇಂದಿಗೂ ಶರಣರು ಸ್ಮರಣೀಯರಾಗಿ ಉಳಿದಿದ್ದಾರೆ. ಶರಣರ ವಚನಗಳು ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.
ಹುಲಸೂರು ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಮನಗೂಳಿಯ ವಿರತೀಶಾನಂದ ಸ್ವಾಮೀಜಿ, ಚಿಗರಳ್ಳಿಯ ಸಿದ್ಧ ಕಬೀರ ಸ್ವಾಮೀಜಿ, ಶಹಾಪುರ ಫಕಿರೇಶ್ವರ ಮಠದ ಗುರುಪಾದಸ್ವಾಮೀಜಿ, ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ, ಸುರಪುರದ ಕಡ್ಲೆಪ್ಪಮಠದ ಶ್ರೀಗಳು ಡಾ. ಹುಲಿಕಲ್ ನಟರಾಜ್, ಸುಗೂರೇಶ ವಾರದ, ಖಂಡಪ್ಪ ದಾಸನ್, ಮಲ್ಲಿಕಾರ್ಜುನ ಸತ್ಯಂಪೇಟೆ, ಬಸವರಾಜ ಅರುಣಿ,ಮಲ್ಲಣ್ಣ ಸಾಹು ಮುಡಬೂಳ, ಸಹಮತ ವೇದಿಕೆ ಹಾಗೂ ಅಭಿಯಾನ ಸಮಿತಿ ಪದಾಧಿಕಾರಿಗಳು ವೇದಿಕೆಯಲ್ಲಿ ಇದ್ದರು.

ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಡಾ. ಭೀಮಣ್ಣ ಮೇಟಿ ಸ್ವಾಗತಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುಂಡಣ್ಣ ಕಲಬುರ್ಗಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆಯಲ್ಲಿ 75 ವರ್ಷ ಪೂರೈಸಿದ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರ ಹುಟ್ಟುಹಬ್ಬದ ಅಂಗವಾಗಿ ಅವರನ್ನು ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.