ಬಸವ ಶಕ್ತಿ ಸಮಾವೇಶ: ರಾಜಕೀಯ ಪ್ರಭಾವವಿದ್ದರೆ ತತ್ವ ರಕ್ಷಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಬಸವ ಗಣಾಚಾರಿ ನಿಜಗುಣ ಮೂರ್ತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಉತ್ತರ: ಖಂಡಿತವಾಗಿಯೂ ಬೆಳಸಿಕೊಳ್ಳಬೇಕು, ಆದರೆ ರಾಜಕೀಯ ಅಧಿಕಾರಕ್ಕೆ ಅಲ್ಲ, ತತ್ವ ರಕ್ಷಣೆಗೆ.

ಬಸವತತ್ವವು ಕೇವಲ ಭಕ್ತಿಯ ವಿಷಯವಲ್ಲ; ಅದು ಸಾಮಾಜಿಕ ನ್ಯಾಯ, ಧಾರ್ಮಿಕ ಸ್ವಾತಂತ್ರ್ಯ, ಮಾನವ ಸಮಾನತೆ ಮತ್ತು ರಾಜ್ಯದ ಧರ್ಮನಿರಪೇಕ್ಷತೆಯ ಘೋಷಣೆಯಾಗಿದೆ. ಇಂತಹ ತತ್ವವನ್ನು ರಕ್ಷಿಸಲು ರಾಜಕೀಯ ಪ್ರಭಾವ ಅಗತ್ಯ.

ಇಂದಿನ ಭಾರತದಲ್ಲಿ ರಾಜಕೀಯವೇ ನೀತಿ, ಧರ್ಮ, ಶಿಕ್ಷಣ ಮತ್ತು ಸಂಸ್ಕೃತಿಯ ದಿಕ್ಕು ನಿರ್ಧರಿಸುತ್ತದೆ. ರಾಜಕೀಯ ಪ್ರಭಾವವಿಲ್ಲದ ಧರ್ಮ, ಕೊನೆಗೆ ಶೋಷಣೆಗೆ ಒಳಗಾಗುತ್ತದೆ.

ಇಂದು ಲಿಂಗಾಯತ ಧರ್ಮವನ್ನು ಹಿಂದೂತ್ವದಲ್ಲಿ ಒಂದಾಗಿಸಿಬಿಡಲು, ಮತ ಬ್ಯಾಂಕ್ ಆಗಿ ಬಳಸಿಕೊಳ್ಳಲು ಬಸವಣ್ಣನನ್ನು ಕೇವಲ “ಸಂಸ್ಕಾರಕ”ನ್ನನಾಗಿ ಕುಗ್ಗಿಸಲು ಹುನ್ನಾರಗಳು ನಡೆಯುತ್ತಿವೆ. ಈ ಎಲ್ಲ ಯತ್ನಗಳ ಹಿಂದೆ ರಾಜಕೀಯ ಕುತಂತ್ರವಿದೆ.

ಅದಕ್ಕೆ ಉತ್ತರವಾಗಿ ಬಸವ ಸಂಘಟನೆಗಳು ತತ್ವಾಧಾರಿತ ರಾಜಕೀಯ ಪ್ರಭಾವ ಕಟ್ಟಿಕೊಳ್ಳಲೇಬೇಕು. ಇದು ಅಧಿಕಾರಕ್ಕಾಗಿ ಅಲ್ಲ, ಅಸ್ತಿತ್ವಕ್ಕಾಗಿ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಉತ್ತರ: ತರಬೇತಿ ಇಲ್ಲದೆ ಹೋರಾಟ ಮಾಡಿದರೆ ಅದು ಗದ್ದಲವಾಗುತ್ತದೆ; ತರಬೇತಿಯೊಂದಿಗೆ ಹೋರಾಟ ಮಾಡಿದರೆ ಅದು ಚಳವಳಿಯಾಗುತ್ತದೆ.

ತತ್ವದ ಸ್ಪಷ್ಟತೆ ಕಡಿಮೆಯಿರುವುದು ಇಂದು ನಮ್ಮ ದೊಡ್ಡ ದೌರ್ಬಲ್ಯವೇನೆಂದರೆ. ನಮ್ಮಲ್ಲಿ ಆಕ್ರೋಶ ಇದೆ, ಆದರೆ ಕಾನೂನು ಜ್ಞಾನ ಇಲ್ಲ. ಬಸವ ವಚನಗಳಿವೆ, ಆದರೆ ಸಂವಿಧಾನಿಕ ವಾದ ಇಲ್ಲ.

ಆದ್ದರಿಂದ ಕೆಳಗಿನ ತರಬೇತಿಗಳು ಅತ್ಯಾವಶ್ಯಕ:

ಬಸವತತ್ವ – ಶರಣ ಸಾಹಿತ್ಯದ ಆಳವಾದ ಅಧ್ಯಯನ ಕುರಿತು ಯುವ ಜನತೆಯನ್ನೆ ಮುಖ್ಯ ಗುರಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಬೇಕಾಗಿದೆ.

ಧರ್ಮ ಮಾನ್ಯತೆ – ಸಂವಿಧಾನಿಕ ಮತ್ತು ಕಾನೂನು ಚೌಕಟ್ಟು, ಮಾಧ್ಯಮ ಎದುರಿಸುವ ಕೌಶಲ್ಯ, ರಾಜಕೀಯ ಪಕ್ಷಗಳ ತಂತ್ರಗಳ ವಿಶ್ಲೇಷಣೆ, ಯುವಕರಿಗೆ ನಾಯಕತ್ವ ಮತ್ತು ಸಂಘಟನೆ ತರಬೇತಿ ಇತ್ಯಾದಿಗಳ ಅಗತ್ಯ ಇದೆ.

ತರಬೇತಿ ಇಲ್ಲದೆ ಹೋರಾಟ ಮಾಡಿದರೆ ನಮ್ಮ ಮಾತನ್ನು ಇತರರು ತಮಗೆ ಇಷ್ಟವಾದ ರೀತಿಯಲ್ಲಿ ವ್ಯಾಖ್ಯಾನಿಸಲು ತೊಡಗುತ್ತಾರೆ.
ತರಬೇತಿಯೊಂದಿಗೆ ಹೋರಾಟ ಮಾಡಿದರೆ, ನಾವು ರಾಷ್ಟ್ರದ ಚರ್ಚೆಯ ದಿಕ್ಕನ್ನೇ ಬದಲಿಸಬಹುದಾಗಿದೆ.

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ?

ಉತ್ತರ: ಬಸವ ಶಕ್ತಿ ಸಮಾವೇಶವು ಬಸವ ಸಂಘಟನೆಗಳ ವೇದಿಕೆಯಾಗಬೇಕು. ಅದು ಬಸವತತ್ವದ ಘೋಷಣಾ ಪತ್ರವಾಗಬೇಕು.
ಸಮಾವೇಶದ ಮೂಲ ಉದ್ದೇಶ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮ ಮಾನ್ಯತೆಯ ಗುರಿಯಾಗಿರಬೇಕು.

ಬಸವಣ್ಣನ ತತ್ವದ ಘೋಷಣೆ ರಾಜಕೀಯ ದುರುಪಯೋಗಕ್ಕೆ ಎಡೆಯಾಗದಂತೆ ಸ್ಪಷ್ಟ ಎಚ್ಚರಿಕೆ ವಹಿಸಬೇಕು.

ಬಸವ ಶಕ್ತಿಯ ರೂಪುರೇಷೆ:

  • ಘೋಷಣಾಪತ್ರ (Basava Declaration)
    ಲಿಂಗಾಯತ ಧರ್ಮ = ಸ್ವತಂತ್ರ ಧರ್ಮ, ಇಷ್ಟಲಿಂಗ = ಕೇಂದ್ರ ಆತ್ಮತತ್ವ, ವೇದ–ಆಗಮಾಧಾರಿತ ವ್ಯವಸ್ಥೆಗೆ ಸ್ಪಷ್ಟ ನಿರಾಕರಣೆ.
  • ವಿಷಯಾಧಾರಿತ ತರಬೇತಿ ;
    ಬಸವತತ್ವ ಮತ್ತು ಸಂವಿಧಾನ, ಲಿಂಗಾಯತ ಧರ್ಮ – ಇತಿಹಾಸ ಮತ್ತು ಕಾನೂನು, ಹಿಂದೂತ್ವ ರಾಜಕೀಯ ಮತ್ತು ಅದರ ಬಸವತತ್ವದ ವಿರೋಧ ಇತ್ಯಾದಿ.
  • ಯುವ ಬಸವ ಶಕ್ತಿ ವೇದಿಕೆ:
    18–35 ವರ್ಷದ ಯುವಕರಿಗೆ ನಾಯಕತ್ವ ಅವಕಾಶ, ಪ್ರಶ್ನೆ–ಉತ್ತರ ಮುಕ್ತ ಚರ್ಚೆ, ಸಾಮಾಜಿಕ ಮಾಧ್ಯಮ ಮತ್ತು ಭವಿಷ್ಯದ ಚಳವಳಿ ಯೋಜನೆ.
  • ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ

ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡಿದರೆ, ಬಸವಾಭಿಮಾನಿಗಳ ತೀರ್ಪು ಚುನಾವಣೆಯಲ್ಲಿ ಸ್ಪಷ್ಟವಾಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ:
“ಬಸವತತ್ವವು ಭಿಕ್ಷೆ ಬೇಡುವ ಧರ್ಮವಲ್ಲ. ಅದು ನ್ಯಾಯ ಕೇಳುವ ತತ್ವ. ಅದನ್ನು ಉಳಿಸಲು ಬಸವ ಶಕ್ತಿ ಯುವ ಶಕ್ತಿಯನ್ನು ಒಗ್ಗೂಡಿಸಬೇಕು. ಅಂದರೆ ಕೇವಲ ಭಾವನೆಯಲ್ಲಿ ಅಲ್ಲ, ಬುದ್ಧಿಯಲ್ಲಿ,
ಆಕ್ರೋಶದಲ್ಲಿ ಅಲ್ಲ, ಸಂಘಟನೆಯಲ್ಲಿ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತೀರಾ?

ನಾನು ಜಾಗತಿಕ ಲಿಂಗಾಯತ ಮಹಾಸಭಾದ ಪ್ರೇರಕ ಸದಸ್ಯನಾಗಿರುವೆ. ಬಸವ ಶಕ್ತಿ ತರಬೇತಿ ಸಲುವಾಗಿ ನಾನು ಮತ್ತು ನನ್ನ ಆತ್ಮೀಯ ಬಳಗ ಸೇರಿ 5 ಅಥವಾ 6 ಮಂದಿ.

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ಹೌದು. ನನ್ನ ಕೈಲಾದ ಮಟ್ಟಿಗೆ. ಸಕ್ರಿಯವಾಗಿ ಬಸವ ಶಕ್ತಿ ಸಂಘಟನೆಯಲ್ಲಿ ದುಡಿಯ ಬಯಸುವೆ ನಿಮ್ಮೆಲ್ಲರ ಮಾರ್ಗದರ್ಶನಾನುಸಾರ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *