ಅಭಿಯಾನ ರಾಜ್ಯದ ಎಲ್ಲಾ ಬಸವ ಸಂಘಟನೆಗಳ ಜಂಟಿ ಕಾರ್ಯಕ್ರಮವಾಗಲಿದೆ.
ಧಾರವಾಡ
ಸೆಪ್ಟೆಂಬರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ ನಡೆಸಲು ಬಸವ ಸಂಘಟನೆಗಳ ಜಂಟಿ ಸಮಿತಿ ನಿರ್ಧರಿಸಿದೆ.
ಬುಧವಾರ ಸಂಜೆ ನಗರದಲ್ಲಿ ನಡೆದ ಸಭೆಯಲ್ಲಿ ಅಭಿಯಾನದ ರೂಪುರೇಷೆಯನ್ನು ಸದಸ್ಯರು ಚರ್ಚಿಸಿದರು. ಜಂಟಿ ಸಮಿತಿಯ ಸದಸ್ಯರೊಂದಿಗೆ ಮಾತನಾಡಿದಾಗ ಬಸವ ಮೀಡಿಯಾಗೆ ತಿಳಿದು ಬಂದಿರುವ ಮುಖ್ಯಾಂಶಗಳು:
- ಅಭಿಯಾನ ಸೆಪ್ಟೆಂಬರ್ 1 ರಿಂದ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಶುರುವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
- ತಿಂಗಳ ಪೂರ್ತಿ ಒಂದೊಂದು ದಿನ ಒಂದೊಂದು ಜಿಲ್ಲೆಗಳಲ್ಲಿ ಅಭಿಯಾನ ನಡೆಸುವ ಆಲೋಚನೆಯಿದೆ. ಅಭಿಯಾನ ಅಕ್ಟೋಬರ್ ನಾಲ್ಕು ಅಥವಾ ಐದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ.
- ಅಭಿಯಾನ ರಾಜ್ಯದ ಎಲ್ಲಾ ಬಸವ ಸಂಘಟನೆಗಳ ಜಂಟಿ ಕಾರ್ಯಕ್ರಮವಾಗಲಿದೆ. ಎಲ್ಲಾ ಬಸವತತ್ವ ಪರಿಪಾಲಕರು, ಸರ್ವ ಸಮಾಜದವರು, ಬಸವತತ್ವ ಒಪ್ಪುವವರು, ಎಲ್ಲಾ ಬಸವಪರ ಸಂಘಟನೆಯವರನ್ನು ಅಭಿಯಾನ ಒಳಗೊಳ್ಳಲಿದೆ.
- ಎಲ್ಲರೂ ಪಾಲ್ಗೊಳ್ಳುವಂತೆ ಮಾಡಲು ವೇದಿಕೆ, ಬ್ಯಾನರ್ಗಳಲ್ಲಿ ಯಾವ ಸಂಘಟನೆಯ ಹೆಸರೂ ಇರುವುದಿಲ್ಲ.
- ಆದರೆ ಅಭಿಯಾನದ ಜವಾಬ್ದಾರಿ ಲಿಂಗಾಯತ ಮಠಾಧೀಶರ ಒಕ್ಕೊಟ ತೆಗೆದುಕೊಳ್ಳಲಿದೆ. “ಅಭಿಯಾನದಲ್ಲಿ ಎಲ್ಲರೂ ಸಮಾನವಾಗಿ ಪಾಲ್ಗೊಂಡರೂ ಯಾವುದಾದರು ಒಂದು ಸಂಘಟನೆ ಅದರ ಸೂತ್ರ ಹಿಡಿಯಬೇಕಾಗುತ್ತದೆ. ಆ ಪಾತ್ರವನ್ನು ಒಕ್ಕೊಟ ನಿರ್ವಹಿಸಲಿದೆ,” ಎಂದು ಒಬ್ಬ ಸದಸ್ಯರು ಹೇಳಿದರು.
- ಅಭಿಯಾನದಲ್ಲಿ ಬಸವ ರಥ ಯಾತ್ರೆ, ಮೆರವಣಿಗೆ, ಬಹಿರಂಗ ಸಭೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಉಪನ್ಯಾಸ, ನಾಟಕ, ಗಾಯನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
- ಸಾಣೇಹಳ್ಳಿ ಶ್ರೀಗಳು ಕೆಲವು ವರ್ಷಗಳ ಹಿಂದೆ ನಡೆಸಿದ್ದ ‘ಮತ್ತೆ ಕಲ್ಯಾಣ’ದ ವಿಸ್ತೃತ ಮಾದರಿಯಲ್ಲಿ ಅಭಿಯಾನ ನಡೆಯಲಿದೆ. “ಸಾಣೇಹಳ್ಳಿ ಶ್ರೀಗಳಿಗೆ ಅನುಭವವಿದೆ. ಅವರ ಮಾರ್ಗದರ್ಶನದಲ್ಲಿಯೇ ‘ಬಸವ ಸಂಸ್ಕೃತಿ ಅಭಿಯಾನ’ ನಡೆಯಲಿದೆ,” ಎಂದು ಒಬ್ಬರು ಹಿರಿಯರು ಹೇಳಿದರು.
- ಅಭಿಯಾನದ ಸಮಯದಲ್ಲಿ ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು 40-50 ಒಳ್ಳೆ ಉಪನ್ಯಾಸಕರ ಪಟ್ಟಿ ತಯಾರು ಮಾಡಲಾಗುವುದು. ಜೊತೆಗೆ ಸಮಾಜ ಗಮನವಿಟ್ಟು ಚರ್ಚಿಸಬೇಕಾದ 30 ವಿಷಯಗಳನ್ನು ಆಯ್ಕೆ ಮಾಡಲಾಗುವುದು.
- ಅಭಿಯಾನದ ಅಂಗವಾಗಿ ಸಂಘ ಪರಿವಾರದ ನೆಚ್ಚಿನ ‘ವಚನ ದರ್ಶನ’ ಪುಸ್ತಕಕ್ಕೆ ಉತ್ತರವಾಗಿ ಬಂದಿರುವ ‘ವಚನ ದರ್ಶನ ಸತ್ಯ ಮಿಥ್ಯ’ ಪುಸ್ತಕವನ್ನು ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗುವುದು.
- ಕನ್ನೇರಿ ಶ್ರೀಗಳ ‘ಬಸವ ತಾಲಿಬಾನ್’ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಎಲ್ಲರೂ ಸಾಣೇಹಳ್ಳಿ ಶ್ರೀಗಳ ಹೇಳಿಕೆಯನ್ನು ಅನುಮೋದಿಸಿದರೂ, ಒಂದು ಪ್ರತ್ಯೇಕ ಹೇಳಿಕೆ ಬರುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ಆನ್ಲೈನ್ ಮೀಟಿಂಗ್ ಅಥವಾ ನೇರವಾದ ಸಭೆಗಳನ್ನು ಕರೆದು ಅಭಿಯಾನದ ವಿವರಗಳನ್ನು ನಿರ್ಧರಿಸಲಿದ್ದಾರೆ.
ಸಭೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಪೂಜ್ಯ ಗಂಗಾ ಮಾತಾಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಹಂದಿಗುಂದ, ನಾಗನೂರ ಶ್ರೀ, ಅಥಣಿ ಶ್ರೀ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿ, ಜಿ.ಬಿ. ಪಾಟೀಲ, ಬಸವರಾಜ ಧನ್ನೂರ, ಮಹಾದೇವಪ್ಪ, ಎಂ.ವಿ. ಗೊಂಗಡಶೆಟ್ಟಿ ಉಪಸ್ಥಿತರಿದ್ದರು.
“ಸಭೆಯಲ್ಲಿ 100% ಹಾಜರಾತಿ ಇತ್ತು. ಕರೆದ ಪ್ರತಿಯೊಬ್ಬರೂ ಬಂದಿದ್ದರು,” ಎಂದು ಇನ್ನೊಬ್ಬ ಹಿರಿಯರು ಹೇಳಿದರು.
ಲಿಂಗಾಯತ ಸಮಾಜ ಎನ್ನದೆ,
ಲಿಂಗಾಯತ ಧರ್ಮ ಅನ್ನುವ ಪದ ಬಳಸಬೇಕು.
ಸಮಾಜ ಅಂದರೆ ಒಂದು ಧರ್ಮದ ಭಾಗ ಅನಿಸುತ್ತದೆ.
ಆದರೆ ವೈಧಿಕ ಧರ್ಮದವರಿಂದ ಲಿಂಗಾಯತ ಧರ್ಮದ ಮೇಲೆ ವೈಚಾರಿಕ ದಾಳಿ ನಡೆಯುತ್ತಿದೆ.