ಮಾನವೀಯ ಮೌಲ್ಯವುಳ್ಳ ಭಾರತದ ಸಂವಿಧಾನ ಕೆಲವು ಪಟ್ಟಭದ್ರರಿಗೆ ಮಾರಕವಾಗಿ ಪರಿಣಮಿಸಿದೆ
ದಾವಣಗೆರೆ
ಹಿಂದುತ್ವ ಗುಂಪುಗಳು ರಚಿಸುತ್ತಿರುವ ಮನುವಾದಿ ಸಂವಿಧಾನವನ್ನು ವಿರೋಧಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ರುದ್ರೇಗೌಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಮಹಂತೇಶ ಅಂಗಡಿ ಸೇರಿದಂತೆ ದಲಿತ, ಬಸವಪರ, ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರತಿಭಟನಾ ಸಭೆಯಯಲ್ಲಿ ಮಾತನಾಡಿದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹೆಮ್ಮನಬೇತೂರು ವಿಶ್ವೇಶ್ವರಯ್ಯ ಬಿ. ಎಂ. ಅವರು ಮಾನವೀಯ ಮೌಲ್ಯವುಳ್ಳ ಭಾರತದ ಸಂವಿಧಾನ ಕೆಲವು ಪಟ್ಟಭದ್ರರರಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.

ದೀನ ದಲಿತರ ಶೋಷಿತರ ದುಃಖಿತರ ಸುಖವೇ ನಮ್ಮ ಸುಖ ಅವರ ದುಃಖವೇ ನಮ್ಮ ದುಃಖ ಎಂದು ಸಾರಿದ ಬಸವಣ್ಣನವರ ಸಂದೇಶಕ್ಕೆ ಪೂರಕವಾದ ಸಂವಿಧಾನವನ್ನು ಬಾಬಾಸಾಹೇಬ ಅಂಬೇಡ್ಕರ್ ಕೊಟ್ಟಿದ್ದಾರೆ.
ಸಹಜವಾಗಿಯೇ ಪಟ್ಟಭದ್ರರು ಈ ಸಂವಿಧಾನ ನಾಶ ಮಾಡುವ ಸಲುವಾಗಿ ಹವಣಿಸುತಿದ್ದು, ಈ ಬಾರಿಯ ಕುಂಭಮೇಳವನ್ನು ಅದಕ್ಕಾಗಿ ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಸುಟ್ಟು ಹಾಕಿದ ಮನುಸ್ಮೃತಿ ಮತ್ತೆ ಜಾರಿಗೆ ಬಂದರೆ ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಲಿದೆ. ಅದಕ್ಕಾಗಿ ಮನುಸ್ಮೃತಿ ಸಂವಿಧಾನವನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಸಭೆಯ ನಂತರ ಜಿಲಾಧಿಕಾರಿಗಳ ಕಛೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಟಿ .ಎಂ. ಶಿವಮೂರ್ತಯ್ಯ ನಿರೂಪಣೆ ಮಾಡಿದರು.
