ಬಸವಕಲ್ಯಾಣ:
ಬಸವಣ್ಣನವರ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿದವರು ಕೆಳವರ್ಗದ ಶರಣರು ಮಾತ್ರ, ಅದರಂತೆ ಬಸವಣ್ಣನವರ ಸದಾಶಯ ಎತ್ತಿಕೊಂಡಿದ್ದವರು ಕೆಳವರ್ಗದ ಶರಣರೇ ಎಂದು ಮುಂಡರಗಿ-ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಬಸವಧರ್ಮ ಪೀಠದ ಮಹಾಮನೆಯ ಭವ್ಯ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ, ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ‘ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿಯಾತ್ರೆ’ ಸಮಾರೋಪ ಸಮಾರಂಭ, ಶರಣ ಸಂಸತ್ತು ಅಧಿವೇಶನ, ಶರಣ ವಂದನೆ, ಶರಣಾರತಿ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಮಾತನಾಡಿದರು.

ಅಂದಿನ ದಲಿತ ವರ್ಗದ ಜನರೇ ಇಂದಿನ ಲಿಂಗಾಯತರು ಎನ್ನುವುದು ಯಾರು ಮರೆಯುವಂತಿಲ್ಲ. ಮನುಷ್ಯತ್ವದ ಬಗೆ ಶರಣರು ಮಾತನಾಡಿದರು. ಅದರಂತೆ ಬದುಕಿದವರು ಎಲ್ಲಾ ಬಸವಾದಿ ಶರಣರು. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ಬಸವಾದಿ ಶರಣರ ಸದಾಶಯವಾಗಿತ್ತು. ಅಂತೆಯೇ ಸಮಾಜ ಪ್ರಜ್ಞೆಯನ್ನು ಬಿತ್ತಿ, ಸರ್ವರಲ್ಲಿಯೂ ಮಾನವೀಯತೆಯ ಸಂದೇಶ ಜಾಗೃತಿ ಮೂಡಿಸುವ ಮಹೋನ್ನತ ಪ್ರಯತ್ನ ಮಾಡಿದರು.
ಯಾವುದೇ ಕಾಯಕವಾಗಲಿ ಅದು ಸ್ವಾಭಿಮಾನದ ಸಂಕೇತವಾಗಿದೆ. ಮನುಷ್ಯತ್ವಕ್ಕೆ ಗೌರವ ನೀಡಿದ ಧರ್ಮ ಯಾವುದಾದರೂ ಇದ್ದರೆ ಅದು ಲಿಂಗಾಯತ ಧರ್ಮವಾಗಿದೆ.
ಇದೊಂದು ಅರ್ಥಪೂರ್ಣವಾದ ಹಾಗೂ ಜವಾಬ್ದಾರಿಯುತವಾದ ವೇದಿಕೆಯಾಗಿದೆ. ಧಾರ್ಮಿಕ ಹಕ್ಕುಗಳಿಂದ ಮಾನವನ ಸಮಾನತೆಯ ಹಕ್ಕುಗಳ ರಕ್ಷಣೆಯ ವೇದಿಕೆ ಇದಾಗಿದೆ.

ಶರಣು ಶರಣಾರ್ಥಿ ಎಂದು ಹೇಳಿದರೆ ಶರಣು ಶರಣಾರ್ಥಿ – ಶರಣು ಶರಣಾರ್ಥಿ ಎಂದು ಹೇಳುವ ಸಂಸ್ಕೃತಿ ನಮ್ಮದಾಗಬೇಕು. ಅಹಂಕಾರ ತ್ಯಜಿಸಿ, ಸೌಜನ್ಯದ ನಡೆ ನಮ್ಮದಾಗಬೇಕು. ಮನುಷ್ಯರಿಂದ ಮನುಷ್ಯರಿಗೆ ನಿಜವಾಗಿಯೂ ಗೌರವ ನೀಡುವುದೇ ಶರಣು ಶರಣಾರ್ಥಿ ಪದದ ಅರ್ಥವಾಗಿದೆ.
ಸಾಮಾನ್ಯರ ಬದುಕಿಗೆ ಸೌಹಾರ್ದತೆಯ ಸಮಾಜ ನಿರ್ಮಿಸಿದವರು. ಭಕ್ತಿಕಾಂಡದ ಮೇರು ವ್ಯಕ್ತಿತ್ವ ಬಸವಣ್ಣನವರದು.
ಅದರಂತೆ ಬಸವಾದಿ ಶರಣರ ಚಿಂತನೆಗಳು ಸದಾಕಾಲ ಈ ಸಮಾಜದಲ್ಲಿ ಬಿತ್ತುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಎಂದು ಆಶೀರ್ವಚನ ನೀಡಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮಿಜಿ ಮಾತನಾಡಿ, ಬಸವಕುಮಾರ ಪಾಟೀಲ ಅವರ ನೇತೃತ್ವದಲ್ಲಿ ಬಿಜನಳ್ಳಿ ಗ್ರಾಮದಿಂದ ಬಸವಕಲ್ಯಾಣದವರೆಗೆ ಐತಿಹಾಸಿಕವಾಗಿ ಸಾಗಿದ ಕಲ್ಯಾಣ ನಡಿಗೆ ಪಾದಯಾತ್ರೆ ಹಮ್ಮಿಕೊಂಡು ಅದನ್ನು ಯಶಸ್ವಿಗೊಳಿಸಿದ್ದಾರೆ. 770 ಅಮರಗಣಂಗಳ ಶರಣರ ಪವಿತ್ರ ಭೂಮಿ ಬಸವಕಲ್ಯಾಣವಾಗಿದೆ.
ಬಸವಣ್ಣನವರ ವಚನ ಸಾಹಿತ್ಯದ ಆಧಾರಸ್ತಂಭ ಭಕ್ತಿಮಾರ್ಗವಾಗಿದೆ. ತನ್ನನ್ನು ತಾನಾರೆಂದು ತಿಳಿದರೆ ತಾನೇ ದೇವಾ ನೋಡಾ ಎನ್ನುವಂತೆ ಬಸವಾದಿ ಶರಣರ ಜೀವನ ಸಾಗಿದೆ. ಭಕ್ತಿಪ್ರಧಾನ ಧರ್ಮ ಲಿಂಗಾಯತ ಧರ್ಮವಾಗಿದೆ. ಲಿಂಗಾಯತ ಧರ್ಮ ವೈಚಾರಿಕ ಮತ್ತು ವೈಜ್ಞಾನಿಕತೆಯ ಅಡಿಯಲ್ಲಿ ಸ್ಥಾಪನೆ ಆದ ವಿಶಿಷ್ಟ ರೀತಿಯ ಧರ್ಮವಾಗಿದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಹುಲಸೂರ ಬಸವೇಶ್ವರ ಸಂಸ್ಥಾನಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಕುಮಾರ ಪಾಟೀಲ ಅವರು ಮಾಡುವ ಕಾರ್ಯಕ್ರಮಗಳು ಬಹಳಷ್ಟು ಅಚ್ಚುಕಟ್ಟಾಗಿರುತ್ತವೆ.

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಬಸವಕುಮಾರ ಪಾಟೀಲರು ಹೋರಾಟ ಮುಂದುವರೆಸಲೆಂದು ಶುಭ ಹಾರೈಸಿದರು.
ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಬಸವಣ್ಣನವರಿಗೆ ಬಸವಣ್ಣನವರೆ ಸರಿಸಮಾನರು ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಬಸವಣ್ಣನವರ ಬಗ್ಗೆ ಯಾರೇ ಆಗಲಿ ಹಗರುವಾಗಿ ಮಾತನಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ಖಂಡಿತವಾಗಿಯೂ ನೀಡುತ್ತೇವೆ.
ಬಸವಾದಿ ಶರಣರ ಬಗೆ ಮಾತನಾಡುವ ಸಂಪೂರ್ಣವಾಗಿ ತಿಳಿದು ಮಾತನಾಡುವುದು ಸೂಕ್ತವಾಗಿದೆ.
ಭಕ್ತಪಥದ ದಾರಿಯಲ್ಲಿ ಸಾಗಿದ ಬಸವಣ್ಣನವರು, ಪ್ರೀತಿಯ ಅಂತಃಕರಣದ ಭಕ್ತಿಯನ್ನು ಹಚ್ಚಿ, ಇಡೀ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸಿದರು. ವೇದ ಆಗಮ ಪುರಾಣ ಬದಿಗೊತ್ತಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಬಸವಣ್ಣನವರು ಮಾಡಿದರು ಎಂದರು.

ಮಾಹಾಂತೇಶ ಕುಂಬಾರ ಹೂವಿನಹಳ್ಳಿ ಇಷ್ಟಲಿಂಗ ಭಕ್ತಿಯ ಕುರಿತು ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಅವರು, ಕಲ್ಯಾಣ ನಡಿಗೆ ಹಾಗೂ ಹರಳಯ್ಯ ಜ್ಯೋತಿಯಾತ್ರೆ ಕುರಿತು ಮಾತನಾಡಿ, ಬಿಜನಳ್ಳಿ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಇದಕ್ಕೆ ಅನುದಾನ ಒದಗಿಸುವ ಮುಖಾಂತರ ಅಭಿವೃದ್ಧಿ ಮಾಡಬೇಕು.
ತ್ರಿಪುರಾಂತ ಕೆರೆಯ ಮಧ್ಯೆ ವಚನ ಮಂಟಪ ಆಗಬೇಕಾಗಿದೆ. ಬಸವಕಲ್ಯಾಣ ಕ್ಷೇತ್ರವು ಸಂಪೂರ್ಣವಾಗಿ ಅಭಿವೃದ್ಧಿ ಆಗಬೇಕು. ಜೊತೆಗೆ ಬಸವಕಲ್ಯಾಣ ಜಿಲ್ಲಾ ಕೇಂದ್ರವಾಗಿ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶ ಎಸ್.ಎಸ್. ನಾಗರಾಣೆ ವಹಿಸಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರು ಸುಮಂಗಲಾ ಸೇವಾಶ್ರಮದ ಸುಶೀಲಮ್ಮ ಅವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವಧರ್ಮ ಪೀಠದ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಪೂಜ್ಯ ಶಿವಾನಂದ ಸ್ವಾಮೀಜಿ, ಧುಮ್ಮನಸೂರಿನ ಪೂಜ್ಯ ಶಂಕರಲಿಂಗ ಸ್ವಾಮಿಜಿ, ಪೂಜ್ಯ ಲಾವಣ್ಯ ಮಾತಾಜಿ, ಬಸವದೇವರು, ಸತ್ಯಕ್ಕ ಮಾತಾಜಿ, ಪಂಡಿತ ಬಾಳೊರೆ, ಸಾಹಿತಿ ಸಂಗಮೇಶ ಎನ್. ಜವಾದಿ, ಜಗನ್ನಾಥ ಪತಂಗೆ, ಓಂಪ್ರಕಾಶ ರೊಟ್ಟೆ, ಸಿದ್ಧಯ್ಯ ಕವಡಿಮಠ, ಸುರೇಶ ಪಾಟೀಲ, ರಮೇಶ ಚಿಲ್ಲರಗಿ, ರಾಜಕುಮಾರ ಧುಮ್ಮನಸೂರ, ಹಾವಯ್ಯಾ ಸ್ವಾಮಿ, ಉಮಾದೇವಿ ಚಿಲ್ಲರಗಿ, ಶೈಲಜಾ ಧುಮ್ಮನಸೂರ, ಅಂಬಿಕಾ ರಾಮಶೆಟ್ಟಿ, ಹೇಮಲತಾ ಪಾಟೀಲ , ವೈಜಿನಾಥ ಸಜ್ಜನಶೆಟ್ಟಿ, ಅಲ್ಲಮಪ್ರಭು ನಾವದಗೇರಿ, ರಾಜಶೇಖರ ದೇವಣಿ, ರವೀಂದ್ರ ಕೋಳಕೂರ, ಚಂದ್ರಮೌಳಿ, ಗುರುನಾಥ ಗುಡ್ಡೆ ಸೇರಿದಂತೆ ಸಾವಿರಾರು ಬಸವ ಭಕ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಆಕರ್ಷಕ ವಚನನೃತ್ಯ ಕಾರ್ಯಕ್ರಮಗಳು ನಡೆದವು.

🙏🙏
ಶ್ರೀ ನಿಜಗುಣಾನಂದ ಶರಣರ ನುಡಿ ಸತ್ಯಶುದ್ಧ ನುಡಿಯಾಗಿದೆ.
ಬಸವ ಧರ್ಮಿಯರು/ ಲಿಂಗಾಯತರು ಅಂದು ಹಾಗು ಇಗಲು ಶೋಷಣೆಗೆ (ಶೈಕ್ಷಣಿಕ ಹಾಗು ರಾಜಕೀಯ) ಒಳಗಾಗುತ್ತಿರುವವರು
ವಚನ ಸಾಹಿತ್ಯ ಅರಿಯದೆ ಆಚರಿಸದೆ ಬೊಗಳುವವರೇ ಜಾಸ್ತಿ
ಸತ್ಯಶುದ್ಧ ಕಾಯಕ ಮಾಡುತ್ತ ದಾಸೋಹ ಭಾವ ಹೊಂದಿರುವ ಸರಳ ಸಜ್ಜನರೆಲ್ಲಾ ಬಸವ ಧರ್ಮಿಯರು
🙏🙏
🙏🙏 ಬಸವಣ್ಣನೆಂಬ ಪ್ರಖರ ಬೆಳಕನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲು ಅಸಂಭವ 🙏🙏