ಬೆಳಗಾವಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಲಿಂಗಾಯತರೆಂದು ಪಕ್ಷಗಳಿಂದ ಟಿಕೆಟ್ ಪಡೆದ ವ್ಯಕ್ತಿಗಳು ಇಂದು ಶರಣರ ವಚನಗಳು ಹಾಗೂ ಬಸವತತ್ವದ ಅರಿವು ಪಡೆದುಕೊಳ್ಳದೇ ಧರ್ಮದ್ರೋಹದ ಕೆಲಸ ಮಾಡುತ್ತಿದ್ದಾರೆ.
ನಮ್ಮ ಲಿಂಗಾಯತ ರಾಜಕಾರಣಿಗಳಿಗಿರುವ ಧರ್ಮಾಭಿಮಾನ ಶೂನ್ಯತೆ ಬೇರೆ ಯಾವ ಧರ್ಮ, ಜಾತಿ ರಾಜಕಾರಣಿಗಳಲ್ಲಿಯೂ ಇಲ್ಲ. ಈ ಹಂತದಲ್ಲಿ ರಾಜಕಾರಣಿಗಳಿಗೆ ಅರಿವು ಮೂಡಿಸಲು ಬಸವ ಸಂಘಟನೆಗಳು ರಾಜಕೀಯ ಪ್ರಭಾವ, ಪ್ರಜ್ಞೆ ಬೆಳೆಸಿಕೊಂಡು ಲಿಂಗಾಯತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವ ಮನೋಭಾವನೆಯನ್ನು ಈಗಿನ ರಾಜಕಾರಣಿಗಳಲ್ಲಿ ತುಂಬಬೇಕಾಗಿದೆ.
ಮೊದಲು ಲಿಂಗಾಯತರಲ್ಲಿ ತಮ್ಮ ಧರ್ಮದ ಅರಿವು ಮೂಡಿಸಬೇಕು.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಬಹಳಷ್ಟು ಲಿಂಗಾಯತರಿಗೆ ವೈದಿಕ ಧರ್ಮಕ್ಕೂ ಅವೈದಿಕ ಲಿಂಗಾಯತ ಧರ್ಮಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲ. ಅದಕ್ಕೆ ಅವರು ವೈದಿಕರ ಆಚರಣೆಗಳನ್ನೇ ನಮ್ಮ ಆಚರಣೆ ಎಂದು ತಿಳಿದಿದ್ದಾರೆ. ಅವರಿಗೆ ಧರ್ಮದ ಅರಿವು ಮೂಡಿಸಬೇಕು. ಹಾಗೇ ರಾಜಕೀಯ ಪ್ರಜ್ಞೆ ಮೂಡಿಸುವ ತರಬೇತಿಯ ಅಗತ್ಯವು ಇದೆ.
3) ಬಸವಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಬಸವ ಶಕ್ತಿ ಸಮಾವೇಶದಲ್ಲಿ ಆಗಮಿಸುವ ಸದಸ್ಯರಿಗೆ ಇಷ್ಟಲಿಂಗ ಪೂಜೆ, ನಿಜಾಚರಣೆಗಳ ಮಹತ್ವದ ಬಗ್ಗೆ ತಿಳಿಸಬೇಕು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ದೊರೆತರೆ ಲಿಂಗಾಯತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿ, ರಾಜಕಾರಣದಿಂದ ಒಡೆದು ಹೋದ ಒಳಪಂಗಡಗಳೂ ಮತ್ತೆ ಒಂದುಗೂಡಿ ಬಸವತತ್ವ ರಾಷ್ಟೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ ಎಂಬ ಸತ್ಯವನ್ನು ತಿಳಿಸುವದು.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತೀರಿ?
ಹಲವಾರು ಜನ ಭಾಗವಹಿಸುತ್ತಾರೆ.
5) ಸಮಾವೇಶ ಸಂಘಟಿಸಲು, ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ನೆರವಾಗಲು, ಸಂಘಟಿಸಲು ಆಸಕ್ತಿಯಿದೆ.
