ಬಸವ ಶಕ್ತಿ ಶಿಬಿರಗಳ ನೇತೃತ್ವ ತೆಗೆದುಕೊಳ್ಳಲು ಸಿದ್ದರಿದ್ದೇವೆ: ಈರಣ್ಣ ದೇಯಣ್ಣವರ

ಬೆಳಗಾವಿ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಸಂವಾದದಲ್ಲಿ ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯಣ್ಣವರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲಗೊಳ್ಳುತ್ತದೆಯೇ?

ರಾಜಕೀಯ ಪ್ರಜ್ಞೆ ಬೇಕಾಗುತ್ತದೆ. ರಾಜಕೀಯ ಪ್ರಜ್ಞೆಯಿಲ್ಲದೆ, ರಾಜಕೀಯ ಬೆಂಬಲವಿಲ್ಲದೆ ಯಾವುದೇ ಧರ್ಮ ಬೆಳೆಯಲು ಸಾಧ್ಯವಿಲ್ಲ.

ಆದರೆ ಧರ್ಮದೊಳಗೆ ರಾಜಕೀಯ ಪ್ರವೇಶ ಆಗಬಾರದು. ಲಿಂಗಾಯತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದರಿಂದ ಎರಡು ಮಾತಿಲ್ಲದೇ ಲಿಂಗಾಯತ ಧರ್ಮ ಹೋರಾಟ ಬಲಗೊಳ್ಳುತ್ತದೆ. ಧರ್ಮದ ಹೋರಾಟದಲ್ಲಿ ಭಾಗವಹಿಸುವ ರಾಜಕಾರಣಿಗಳು ತಮ್ಮ ರಾಜಕೀಯವನ್ನು ಹೋರಾಟದಲ್ಲಿ ತರಬಾರದು. ಅವರ ಪಕ್ಷದ ವಿಷಯ ಅವರಿಗೆ ವೈಯಕ್ತಿಕವಾದದ್ದು. ಧರ್ಮದ ವಿಷಯ ಬಂದಾಗ ಅವರು ಧರ್ಮಕ್ಕೆ ನಿಯತ್ತಾಗಿ ಇರಬೇಕು. ಇಲ್ಲಿ ಪಕ್ಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ತಮ್ಮ ಸ್ವಾರ್ಥಕ್ಕೆ ಧರ್ಮ, ಸಮಾಜವನ್ನು ದಾರಿತಪ್ಪಿಸುವ ಕೆಲಸ ಅವರು ಮಾಡಲೇಬಾರದು.

2) ಎದ್ದೇಳು ಕರ್ನಾಟಕ ದಲಿತ, ಅಲ್ಪ ಸಂಖ್ಯಾತ, ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ, ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುತ್ತಿದೆ. ಇದೇ ರೀತಿ ಬಸವ ಸಂಘಟನೆಗಳಿಗೂ ತರಬೇತಿ ನೀಡಬೇಕೆ?

ಬಸವ ಸಂಘಟನೆಗಳಿಗೆ ರಾಜಕೀಯ ತರಬೇತಿ ನೀಡಿದರೆ ತಪ್ಪಲ್ಲ. ಆದರೆ ಧರ್ಮ ಬೇರೆ ರಾಜಕೀಯ ಬೇರೆ ಎಂಬ ಪ್ರಜ್ಞೆ ಇರಬೇಕು. ರಾಜಕೀಯದಿಂದಲೇ ಧರ್ಮ ನಡೆಯುವಂತಾಗಬಾರದು. ಬಸವ ಸಂಘಟನೆಗಳಲ್ಲಿ ಇರುವವರು ಬಸವತತ್ವ ಅರಿತಿರಬೇಕು. ಬಸವಣ್ಣನವರನ್ನು ಒಪ್ಪಿಕೊಳ್ಳುವವರು ಆಗಿರಬೇಕು.

ತರಬೇತಿಯ ಆಯೋಜನೆ ಮಾಡಬೇಕು. ಏಕೆಂದರೆ ಇದರಲ್ಲಿ ಎಲ್ಲರೂ ಕೂಡುವುದಿದೆಯಲ್ಲ ಅದು ಬಹಳ ಮುಖ್ಯ. ಕೂಡಿದಾಗ ಹೊಸ ಹೊಸ ಆಲೋಚನೆ, ಚರ್ಚೆ, ಚಿಂತನೆ ಬರಲು ಸಾಧ್ಯವಾಗುತ್ತದೆ. ಕೂಡುವುದು ಸಮಾಜದ ಬೆಳವಣಿಗೆಗೆ ಪೂರಕವಾದದ್ದು. ಸಂಘಟನೆ ಮಾಡುವವರಿಗೆ ಪ್ರತಿಫಲ ಸಿಗದಿದ್ದರೂ ಸಮಾಜಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದು ನನ್ನ ಅನಿಸಿಕೆ.

3) ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?

ಇದೆಲ್ಲಾ ಆದರೆ ಒಳ್ಳೆಯದೇ, ಕೆಟ್ಟದಂತೂ ಅಲ್ಲ. ಚಿಂತನ ಮಂಥನ ನಡೆದು ಸರಿಯಾದ ತೀರ್ಮಾನ ಆಗಿ ಆ ದಾರಿಯಲ್ಲಿ ಸಾಗಬೇಕು.

4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ? ಹೇಗೆ ಕೈ ಜೋಡಿಸುತ್ತೀರಿ ಎಂದು ತಿಳಿಸುತ್ತೀರಾ?

ನಮ್ಮ ಜಿಲ್ಲೆಯಲ್ಲಿ ಸಂಘಟಿಸುತ್ತೇವೆ. ನಮಗೆ ಆಸಕ್ತಿ ಇದೆ. ರಾಜಕೀಯೇತರವಾಗಿ ಮಾಡಲು ತಯಾರಿದ್ದೇವೆ. ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟಂತೆ ಏನೇ ಕಾರ್ಯಕ್ರಮಗಳನ್ನು ಸಂಘಟಿಸಲು, ಸಹಕರಿಸಲು ನಾವು ಸಿದ್ಧರಿದ್ದೇವೆ. ನೇತೃತ್ವವನ್ನು ತೆಗೆದುಕೊಳ್ಳಲು ಸಹ ತಯಾರಿದ್ದೇವೆ. ಒಟ್ಟಾರೆ ಲಿಂಗಾಯತ ಧರ್ಮದ ತತ್ವಾಚರಣೆ ಬೆಳೆಯಬೇಕು ಎಂಬುದು ನಮ್ಮ ಆಶಯವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *