ತುಮಕೂರು
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ತುಮಕೂರು ಜಾಗತಿಕ ಲಿಂಗಾಯತ ಮಹಾಸಭಾದ ಸಚ್ಚಿದಾನಂದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1 ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲವಾಗುತ್ತದೆಯೇ?
ರಾಜಕೀಯ ಎಂದರೆ ಅಧಿಕಾರ ಸ್ಥಾನ ಪಡೆಯಲು ನಾವು ಮಾಡುವ ಕಾರ್ಯ, ಕ್ರಿಯೆ, ಚಟುವಟಿಕೆಗಳು. ಈ ಅಧಿಕಾರ ಸ್ಥಾನದಿಂದ ಜನರ ಜೀವನದ ಎಲ್ಲ ರಂಗಗಳಲ್ಲಿ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವಿರುತ್ತದೆ.
ಜನರಲ್ಲಿ ರಾಜಕೀಯ ಎಂದರೆ ಕೆಟ್ಟದು, ಕೊಳಕು ಎಂಬ ಮಾನಸಿಕ ಸ್ಥಿತಿ ಇದೆ, ರಾಜಕೀಯ ಎನ್ನುವುದು ಒಂದು ಪದ. ಪದ ಕೆಟ್ಟದು, ಒಳ್ಳೆಯದು ಆಗಲ್ಲ.
ರಾಜಕೀಯ ಮಾಡುವುದು ತಪ್ಪಲ್ಲ, ಯಾವ ಉದ್ದೇಶಕ್ಕಾಗಿ ಎನ್ನುವುದರ ಮೇಲೆ ರಾಜಕೀಯ ಪದದ ಆರ್ಥ ನಿರ್ಧಾರವಾಗಿದೆ.
ಉದಾಹರಣೆ : ಲಿಂಗಾಯತ ಧರ್ಮ ಮಾನ್ಯತೆಗಾಗಿ ರಾಜಕೀಯ ಮಾಡಿದರೆ ತಪ್ಪಲ್ಲ, ಏಕೆಂದರೆ ಸತ್ಯಕ್ಕಾಗಿ ಹೋರಾಟ, ಸಮಾಜದ ಒಳಿತಿಗಾಗಿ ಮತ್ತು ವ್ಯಕ್ತಿಯ ಅಸ್ಮಿತೆ ಗುರುತಿಗಾಗಿ ಹೋರಾಟ.
ರಾಜಕೀಯ ಪ್ರಜ್ಞೆ ಎಂದರೆ ರಾಜಕೀಯ ತಿಳುವಳಿಕೆ. ಸಾಮಾನ್ಯವಾಗಿ ಜನ ಮತ ಹಾಕುವಾಗ ಅಭ್ಯರ್ಥಿಯ ನಾಯಕನ ಜಾತಿ ಧರ್ಮ ನೋಡಿ ಮತ ಹಾಕುತ್ತಾರೆ.
ತಮ್ಮ ಕ್ಷೇತ್ರದಲ್ಲಿ ತಮ್ಮ ಜಾತಿ, ಧರ್ಮದವನು ಸ್ಪರ್ದಿಸಿದರೆ ಅಥವಾ ತಮ್ಮ ಜಾತಿ, ಧರ್ಮದ ನಾಯಕ ಯಾವ ಪಕ್ಷದಲ್ಲಿರುತ್ತಾನೋ ಅಂತಹ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೆ. ನಾವು ಎಡವಿರೋದು ಇಲ್ಲಿ.
ಈಗ ಪ್ರಶ್ನೆಗೆ ಬರೋಣ, ಬಸವ ಸಂಘಟನೆಗಳು ಖಂಡಿತವಾಗಿಯೂ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳ ಬೇಕು.
ಬಸವ ಸಂಘಟನೆಗಳು ಎಂತಹ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದರೆ, ವ್ಯಕ್ತಿನಿಷ್ಠೆ ಇಂದ ತತ್ತ್ವನಿಷ್ಠೆ ಪ್ರಜ್ಞೆಗೆ ಬದಲಾಗಬೇಕು.
ಬಸವ ಸಂಘಟನೆ ಸಮಾಜದ ಮುಖಂಡರು ಬೇಡಿಕೆಪತ್ರ ಹಿಡಿದುಕೊಂಡು ರಾಜಕೀಯ ನಾಯಕರ ಹತ್ತಿರ ಹೋಗಬಾರದು.
ರಾಜಕೀಯ ನಾಯಕರು ಬಸವ, ಲಿಂಗಾಯತ ಸಂಘಟನೆಗಳ ಬಾಗಿಲಿಗೆ ಬರಬೇಕು. ಆ ರೀತಿ ತಿಳುವಳಿಕೆಯನ್ನು ನಮ್ಮ ಯುವಕ ಯುವತಿಯರಲ್ಲಿ ಬೆಳೆಸಬೇಕು.
ರಾಜಕೀಯ ನಾಯಕರು ಬಸವ ಸಂಘಟನೆಗಳ ಬಾಗಿಲ ಬಳಿ ಬಂದು ಕದತಟ್ಟಿ “ನಿಮ್ಮ ಸಂಘಟನೆ ಬೇಡಿಕೆಗಳೇನು ನಮ್ಮ ಪಕ್ಷದಲ್ಲಿ ಚರ್ಚಿಸಿ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುತೇವೆ,” ಎನ್ನಬೇಕು.
ಲಿಂಗಾಯತ ರಾಜಕೀಯ ನಾಯಕರಿಗೆ ಅವರ ಇತಿಮಿತಿ ಏನು ಎಂದು ತೋರಿಸಬೇಕು. ಲಿಂಗಾಯತ ಸಮಾಜದಲ್ಲಿ ರಾಜಕೀಯ ನಾಯಕ ಒಬ್ಬ ಸಾಮಾನ್ಯ ಸಮಾಜ ಬಂಧು. ಲಿಂಗಾಯತ ಸಮಾಜದಿಂದ ನೀನು ನಾಯಕ. ನಿನ್ನಿಂದ ಲಿಂಗಾಯತ ಸಮಾಜವಲ್ಲ, ನಿನ್ನಂತಹ ನೂರು ನಾಯಕರನ್ನು ಅಧಿಕಾರದಿಂದ ಇಳಿಸಲು ಅಥವಾ ಏರಿಸಲು ಬಸವ ಸಂಘಟನೆಗಳು ಸಮರ್ಥವಾಗಿವೆ ಎಂಬ ಸಂದೇಶ ತಲುಪಿಸಬೇಕು.
ಹೀಗೆ ಒಂದು ಮತಕ್ಷೇತ್ರದಲ್ಲಿ ಮಾಡಿ ತೋರಿಸಿದರೆ, ಮಿಕ್ಕ ಕ್ಷೇತ್ರದ ಅಭ್ಯರ್ಥಿಗಳು, ಪಕ್ಷಗಳು ಬುದ್ದಿ ಕಲಿಯುತ್ತಾರೆ. ಬಸವ ಸಂಘಟನೆಗಳು ಕೈಬಿಟ್ಟರೆ ನಾನು ನನ್ನ ಸ್ಥಾನ ಕಳಿದುಕೊಳ್ಳುತೇನೆ ಎಂದು ಗೊತ್ತಾಗುತ್ತದೆ.
ಲಿಂಗಾಯತ ಪ್ರಾಬಲ್ಯವಿರುವ ಮತ ಕ್ಷೇತ್ರಗಳಲ್ಲಿನ ರಾಜಕಾರಣಿಗಳಿಗೆ ನಾನು ಲಿಂಗಾಯತ, ಬಸವಪರ ಸಂಘಟನೆಗಳ ಮತ ಋಣದಲ್ಲಿದ್ದೇವೆ ಎಂಬ ಅರಿವು ಬರುವಂತೆ ಮಾಡಬೇಕು.
ಇಂತಹ ಪ್ರಜ್ಞೆ ಬೆಳೆಸಿಕೊಂಡರೆ ರಾಜಕೀಯ ನಾಯಕರು ಬಸವ ಸಂಘಟನೆಗಳ ಬಾಗಿಲಿಗೆ ಬರುತ್ತಾರೆ. ಆಗ ಲಿಂಗಾಯತ ಧರ್ಮ ಮಾನ್ಯತೆ ಬೇಡಿಕೆಯನ್ನು ಅವರ ಮುಂದೆ ಇಡಬೇಕು.
ಬಸವ ಸಂಘಟನೆಗಳು ಗಟ್ಟಿ ಧ್ವನಿಯಲ್ಲಿ “ನಾವು ಲಿಂಗಾಯತ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಮಾತ್ರ ಯಾವುದೇ ಅಭ್ಯರ್ಥಿಗೆ ಮತ ಹಾಕುವುದಿಲ್ಲ,” ಎಂದು ಹೇಳಬೇಕು.
ಬಸವ ಸಮಾಜದ ಬೇಕು-ಬೇಡಿಕೆಗಳಿಗೆ ಯಾರು ಸ್ಪಂದಿಸುತ್ತಾರೋ ಅಂತಹ ಅಭ್ಯರ್ಥಿ ಯಾವ ಜಾತಿ ಧರ್ಮದವರಾಗಿದ್ದರೂ ಸರಿ ಆವರಿಗೆ ಬಸವ ಸಂಘಟನೆಗಳ ಮತಗಳು ಹೋಗೋತ್ತವೆಂದರೆ ಲಿಂಗಾಯತ ಧರ್ಮ ಮಾನ್ಯತೆಗೆ ಬಲ ಸಿಗುತ್ತದೆ.
ಬಸವ ಸಂಘಟನೆಗಳು ಏರು ಧ್ವನಿಯಲ್ಲಿ ಹೇಳಬೇಕು: “ನಮ್ಮ ಮತ ಕ್ಷೇತ್ರದ ಪ್ರತಿನಿಧಿ ಲಿಂಗಾಯತನೇ ಆಗಬೇಕೆಂದಿಲ್ಲ. ಲಿಂಗಾಯತ ಹೋರಾಟವನ್ನು ಪಕ್ಷದ ಸರಕಾರದ ವೇದಿಕೆಗಳಲ್ಲಿ ಪ್ರಸ್ತಾಪಿಸಿ ಅದರ ಪರವಾಗಿ ಸಮರ್ಥಿಸುವ ಯಾವ ಜಾತಿ, ಧರ್ಮದವನಾದರೂ ಅಂತಹವರಿಗೆ ನಾವು ಮತ ಹಾಕುತ್ತೇವೆ ಎಂದು ಹೇಳಬೇಕು”.
ಆಗ ಲಿಂಗಾಯತ ಮಾನ್ಯತೆ ಸುಲಭವಾಗುತ್ತದೆ.
ಬಸವ ಸಂಘಟನೆಗಳು ಬಸವಾದಿ ಶರಣರ ರೀತಿಯಲ್ಲಿ ನೇರವಾಗಿ ಮಾತನಾಡಬೇಕು. “ನಮ್ಮ ಬೇಡಿಕೆಗಳಿಗೆ ನೀವು ಒಪ್ಪಿ ಕಾರ್ಯರೂಪಕ್ಕೆ ತರದಿದ್ದಲ್ಲಿ ಬಸವ ಸಂಘಟನೆಗಳ, ಜನರ ಒಂದು ಮತ ಕೂಡ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹಾಕುವುದಿಲ್ಲ ಮತ್ತು ಇತರ ಜನರನ್ನು ನಿಮಗೆ ಮತ ಹಾಕದಂತೆ ಮನವೊಲಿಸಿ, ನಿಮ್ಮನು, ನಿಮ್ಮ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ,” ಎಂದು ಎಚ್ಚರಿಸಬೇಕು.
2) ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ, ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುತ್ತಿದೆ. ಇದೇ ರೀತಿ ಬಸವ ಸಂಘಟನೆಗಳಿಗೂ ತರಬೇತಿ ನೀಡಬೇಕೆ?
ತರಬೇತಿ ಅವಶ್ಯವಾಗಿ ಕೊಡಬೇಕು, ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ ಯುವತಿಯರಿಗೆ ಬಸವಶಕ್ತಿ ಶಿಬಿರದ ದ್ಯೇಯೋದ್ಧೇಶಗಳು, ಯಾವ ರೀತಿಯ ಕಾರ್ಯ, ಚಟುವಟಿಕೆಗಳನ್ನು ಹಾಕಿಕೊಳ್ಳುತೇವೆ ಮತ್ತು ಇದರಿಂದ ವ್ಯಕ್ತಿಗತವಾಗಿ ಹಾಗು ಲಿಂಗಾಯತ ಸಮಾಜಕ್ಕೆ, ಇತರೆ ಜನರಿಗೆ ಯಾವ ಯಾವ ರಂಗಗಳಲ್ಲಿ ಪ್ರಯೋಜನ, ಅನುಕೂಲ ಎಂಬುದನ್ನು ಮನದಟ್ಟು ಮಾಡಬೇಕು.
ಬಸವಶಕ್ತಿ ಶಿಬಿರದಲ್ಲಿ, ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿಗತವಾಗಿ ಹೇಗೆ ತಾನು ನಾಯಕತ್ತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಮತ್ತು ರಾಜಕೀಯ ನಾಯಕನಾಗಿ ಬೆಳೆಯುವ ಅವಕಾಶಗಳನ್ನೂ ತೋರಿಸಿ, ತಿಳಿಹೇಳಬೇಕು .
- * ಬಸವ ಶಕ್ತಿ ಶಿಬಿರದ ಕಾರ್ಯಕ್ರಮಗಳು ಸಂವಾದಾತ್ಮಕವಾಗಿರಬೇಕು (Interactive).
- * ಯಾರ ಜೊತೆ, ಯಾವ ರೀತಿ, ಯಾವ ವಿಷಯ, ಹೇಗೆ ಮಾತನಾಡಬೇಕು ಎಂಬ ತರಬೇತಿ.
- * ಕುಟುಂಬ ಸಮಾರಂಭ (ಗುರುಪ್ರವೇಶ ,ಲಿಂಗಧಾರಣೆ, ವಿವಾಹ) ಗಳಲ್ಲಿ ಹೇಗೆ, ಯಾವ ವಿಷಯ ಪ್ರಸ್ತಾಪಿಸಿ ಜನರನ್ನು ನಮ್ಮ ದ್ಯೇಯೋದ್ದೇಶಗಳಿಗೆ ಹೇಗೆ ಸೆಳೆಯಬೇಕು ಎಂಬ ತಂತ್ರ, ಕೌಶಲ್ಯಗಳ ತರಬೇತಿ ನೀಡಬೇಕು.
- * ಸಮಾಜದ (ಬ್ಯಾಂಕ್, ಹಾಸ್ಟೆಲ್, ಧಾರ್ಮಿಕ ) ಸಮಾರಂಭಗಳಲ್ಲಿ ಹೇಗೆ, ಯಾವ ವಿಷಯ ಪ್ರಸ್ತಾಪಿಸಿ ಜನರ ಭಾವನೆ, ಅಭಿಪ್ರಾಯ, ನಿಲುವು ನಮ್ಮ ಪರ ಬಸವಪರವಾಗಿ ಬರುವಂತೆ ಮಾಡುವ ಕಲೆ ಹೇಳಿಕೊಡಬೇಕು.
- * ಬಸವಶಕ್ತಿ ಶಿಬಿರ ಪ್ರಾಯೋಗಿಕ ತರಬೇತಿ ನೀಡಬೇಕು, ಚುನಾವಣಾ ಅಂಕಿ ಅಂಶ ಗಳನ್ನೂ ಹೇಗೆ ವಿಶ್ಲೇಷಿಸಬೇಕು ಮತ್ತು ಅದನ್ನ ಜನರಿಗೆ ಮನಮುಟ್ಟುವಂತೆ ಯಾವ ರೀತಿ ಪ್ರಸ್ತುತಪಡಿಸಬೇಕು ಎಂದು ತರೆಬೇತಿ ಕೊಡಬೇಕು.
- * ಶಿಬಿರಾರ್ಥಿಗಳು ಯಾವುದೇ ವಿಷಯ ಮಾತನಾಡಿದರು, ಅಂಕಿ ಅಂಶಗಳ ಸಾಕ್ಷಿ, ದಾಖಲೆ ಸಮೇತ ಕೋಟ್, ರೆಫರೆನ್ಸ್ ಉಲ್ಲೇಖ ಕೊಟ್ಟು ತೋರಿಸಿ ಮಾತನಾಡುವ ಮಟ್ಟದಲ್ಲಿ ತಯಾರು ಮಾಡಬೇಕು, ಇದಕ್ಕೆ ಬೇಕಾಗುವ ದತ್ತಾಂಶವನ್ನು ಶಿಬಿರದ ಆಯೋಜಕರು ಒದಗಿಸಬೇಕು.
- * ಸಾಮಾಜಿಕ ಜಾಲತಾಣಗಳಲ್ಲಿ ಯಾವುದನ್ನು ಮಾಡಬೇಕು, ಯಾವುದು ಬೇಡ ಎಂದು ತರಬೇತಿ ಕೊಡಬೇಕು, ತಂಡವಾಗಿ ಕೆಲಸ ಕಾರ್ಯ ಮಾಡುವುದನ್ನು ಕಲಿಸಬೇಕು.
3) ಈ ನಿಟ್ಟಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?
ಬಸವಶಕ್ತಿ ಶಿಬಿರ ಗ್ರಾಮ ಮಟ್ಟದಲ್ಲಿ ಕೂಡ ಆಯೋಜಿಸಬೇಕು. ಇದರಿಂದ ಆಗುವ ಪರಿಣಾಮ ಉಪಯೋಗ ಹಲವು, ಯುವಕ ಯುವತಿಯರಲ್ಲಿ
- * ವಿಶ್ವಾಸ, ಧೈರ್ಯ ಸ್ವಾಭಿಮಾನ ಹೆಚ್ಚಾಗುತ್ತದೆ.
- * ಬಸವಪರ, ಲಿಂಗಾಯತ ಯುವ ಜನರಲ್ಲಿ ಆನಾಥ ಪ್ರಜ್ಞೆ ಹೋಗಿ, ನಾವು ನಮ್ಮದವು ನನ್ನ ಸಮಾಜ ಎಂಬ ಭಾವದಿಂದ ಸ್ಫೂರ್ತಿ ಬೆಳೆದು ರಾಷ್ಟ್ರಾಭಿಮಾನ ಬೆಳೆಯುತ್ತದೆ.
- * ಪ್ರಶ್ನೆ ಮಾಡುವ ಮನಸ್ಥಿತಿ ಮೈಗೂಡುತ್ತದೆ.
- * ಮೌಢ್ಯ ನಿವಾರಣೆಯಾಗುತ್ತದೆ, ದೇವರು ದೆವ್ವದ ಭಯ ಹೋಗಿ, ಮಾನವ ಪ್ರೀತಿ ಅಂಕುರಿಸುತ್ತದೆ.
- * ವೈದಿಕ ಸನಾತನ ದಾಳಿಯನ್ನು ಗುರುತಿಸುವ ಹಾಗು ತಡೆಯುವ ಚತುರತೆ ಬರುತ್ತದೆ.
- * ನಾಯಕತ್ವ ಗುಣ ಬೆಳೆಯುತ್ತವೆ, ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುವ ಮನೋಭಾವ ಬೆಳೆಯುತ್ತದೆ.
- * ನಾನೆ, ನನ್ನ ಧರ್ಮ ಶ್ರೇಷ್ಠ ಎಂಬ ಮನೋವ್ಯಾಧಿಯಿಂದ ಹೊರಬರಲು ಸಾಧ್ಯವಾಗುತ್ತದೆ.
4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ? ಹೇಗೆ ಕೈ ಜೋಡಿಸುತ್ತೀರಿ ಎಂದು ತಿಳಿಸುತ್ತೀರಾ?
ನಾನು ಜಾಗತಿಕ ಲಿಂಗಾಯತ ಮಹಾಸಭಾ ತುಮಕೂರು ಘಟಕದ ಸಾಮಾನ್ಯ ಸದಸ್ಯ. ಖಂಡಿತವಾಗಿಯೂ, ಬಸವಶಕ್ತಿ ಶಿಬಿರ ಆಯೋಜಿಸಲು ನಾನು ಹಾಗು ನಮ್ಮ ಜಾಗತಿಕ ಲಿಂಗಾಯತ ಮಹಾಸಭಾ ತುಮಕೂರು ಘಟಕದ ಪದಾಧಿಕಾರಿಗಳ ಜೊತೆ ಸಹಕರಿಸುತ್ತೇನೆ.
ಶರಣರು ಹೇಳಿದಂತೆ,
ಬಸವ ಎಂಬ ಮೂರಕ್ಷರ ಹೃದಯದಲ್ಲಿ ನೆಲೆಗೊಂಡಡೆ
ಅಸಾಧ್ಯ ಸಾಧ್ಯವಾಯಿತಯ್ಯ,
ಅಭೇದ್ಯ ಭೇದ್ಯವಾಯಿತಯ್ಯ ಎಂಬಂತೆ ಎಲ್ಲ ರೀತಿಯಿಂದಲೂ ಸಹಕರಿಸುತ್ತೇವೆ.
