ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸಲು ತರಬೇತಿ ಶಿಬಿರ

ಬೆಂಗಳೂರು

ಲಿಂಗಾಯತ ಸಮಾಜದ ಮುಂದೆ ಒಂದು ವಿಚಿತ್ರ ಸಮಸ್ಯೆಯಿದೆ: ಲಿಂಗಾಯತ ಮತಗಳು ಎಲ್ಲರಿಗೂ ಬೇಕು ಆದರೆ ಲಿಂಗಾಯತರು ಯಾರಿಗೂ ಬೇಡ.

ಚುನಾವಣೆ ಬಂದಾಗ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಪಡೆಯಲು ರಾಜಕಾರಣಿಗಳಲ್ಲಿ ದೊಡ್ಡ ಜಟಾಪಟಿ, ನಂತರ ಸಚಿವರಾಗಲು ಹಪಾಹಪಿ. ಆದರೆ ಲಿಂಗಾಯತ ಸಮಾಜ, ಧರ್ಮದ ಪರವಾಗಿ ಎದ್ದು ನಿಲ್ಲಲು ಕೆಲವರನ್ನು ಬಿಟ್ಟರೆ ಯಾರೂ ಮುಂದೆ ಬರುವುದಿಲ್ಲ.

ಲಿಂಗಾಯತ ಧರ್ಮದ ಮೇಲೆ ವ್ಯವಸ್ಥಿತ ದಾಳಿ ನಡೆದಾಗಲೂ, ಲಿಂಗಾಯತ ಮಠಾಧೀಶರನ್ನು ಅಶ್ಲೀಲವಾಗಿ ನಿಂದಿಸಿದಾಗಲೂ, ಬಸವ ಭಕ್ತರನ್ನು ತಾಲಿಬಾನಿ ಎಂದು ಜರಿದಾಗಲೂ ಯಾವ ಪುಡಾರಿಯೂ ಬಾಯಿ ತೆಗೆಯುವುದಿಲ್ಲ.

ಲಿಂಗಾಯತರ ಮೇಲೆ ವ್ಯವಸ್ಥಿತ ದಾಳಿ ನಡೆದಾಗ ಯಾವ
ಪುಡಾರಿಯೂ ಬಾಯಿ ತೆಗೆಯುವುದಿಲ್ಲ.

ಬದಲಾಗಿ ನಮ್ಮನ್ನು ತುಳಿಯಲು ಬರುವವರ ಜೊತೆ ನಿರಾಯಾಸವಾಗಿ, ಯಾವುದೇ ಅಳುಕಿಲ್ಲದೆ ಕೈ ಜೋಡಿಸುತ್ತಾರೆ.

  • – ಲಿಂಗಾಯತರ ವಿರುದ್ಧ ಹೋರಾಡಲು ಕ್ಷತ್ರಿಯರು ಬೇಕೆಂದು ಸೂಲಿಬೆಲೆ ಕರೆ ಕೊಟ್ಟಾಗ ಚಪ್ಪಾಳೆ ತಟ್ಟಿದವರು ಬೆಲ್ಲದರಂತವರು.
  • – ಲಿಂಗಾಯತ ಸಮಾಜದ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿ ಸ್ವಾಮಿಗೆ ಬೆನ್ನೆಲುಬಾಗಿ ನಿಂತಿರುವವರು ಜೊಲ್ಲೆ ದಂಪತಿಗಳಂತವರು.
  • – ಅನೇಕ ಲಿಂಗಾಯತ ಮಠಾಧಿಪತಿಗಳ ಬಗ್ಗೆ ಏಕ ವಚನದಲ್ಲಿಯೇ ಮಾತನಾಡುವ ಫ್ಯಾಷನ್ ಮಾಡಿಕೊಂಡಿರುವುದು ಯತ್ನಾಳಂತವರು.

ಬಸನಗೌಡ ಯತ್ನಾಳ, ಸಿ.ಸಿ. ಪಾಟೀಲ, ಎಸ್. ವಿ. ಸಂಕನೂರ, ಸಿದ್ದು ಸವದಿ, ಎಂ.ಆರ್. ಪಾಟೀಲ, ಶಶಿಕಲಾ ಜೊಲ್ಲೆ, ಎ.ಎಸ್. ಪಾಟೀಲ ನಡಹಳ್ಳಿ, ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ – ಇವು ಸಂಘ ಪರಿವಾರದ ಸೂಚನೆಯಂತೆ ಲಿಂಗಾಯತರ ಮೇಲೆ ಬಹಿರಂಗವಾಗಿ ತಿರುಗಿ ಬಿದ್ದಿರುವ ಸಮಾಜದ ಕೆಲವು ಕಣ್ಮಣಿಗಳು.

ಇನ್ನು ವಿಜಯೇಂದ್ರ, ಶೆಟ್ಟರ್, ಬೊಮ್ಮಾಯಿಯಂತಹವರು ಸ್ವಲ್ಪ ಸೂಕ್ಷ್ಮವಾಗಿ ವರ್ತಿಸುವಂತೆ ಕಾಣಿಸುತ್ತದೆ. ಆದರೆ ಇವರಲ್ಲಿ ಬದ್ಧತೆಯಿರುವುದು ಲಿಂಗಾಯತ ಮತ ಬೇಟೆಗೆ ಮಾತ್ರ. ಅವರಿಗೆ ಬೇಕಾದಾಗ ನಮ್ಮ ವಿರೋಧಿಗಳ ಜೊತೆ ಸಲೀಸಾಗಿ ಕೈ ಜೋಡಿಸುತ್ತಾರೆ.

ಈ ಪಟ್ಟಿಯಲ್ಲಿ ಬಿಜೆಪಿಯವರೇ ಕಂಡರೂ, ಕಾಂಗ್ರೆಸ್ಸಿನವರಲ್ಲೂ ಸಮಸ್ಯೆಯಿದೆ. ಕನ್ನೇರಿ ಸ್ವಾಮಿ ಬೆಂಬಲಿಸುತ್ತಿರುವ ದೊಡ್ಡ ಹೆಸರು ಸಚಿವ ಶಿವಾನಂದ ಪಾಟೀಲ್. ಬಬಲೇಶ್ವರ ಸಮಾವೇಶಕ್ಕೆ ತನು-ಮನ-ಧನ ಎರೆದಿದ್ದು ಅವರ ತಮ್ಮ ವಿಜು ಪಾಟೀಲ್.

ಈ ಪಟ್ಟಿಯಲ್ಲಿ ಬಿಜೆಪಿಯವರೇ ಕಂಡರೂ,
ಕಾಂಗ್ರೆಸ್ಸಿನವರಲ್ಲೂ ಸಮಸ್ಯೆಯಿದೆ.

ಈ ಸಮಸ್ಯೆಯ ಬಗ್ಗೆ ಒಂದು ತಿಂಗಳಿಂದ ಬಸವ ಮೀಡಿಯಾ ತಂಡ ಸುಮಾರು 50 ಬಸವ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ಜೊತೆ ಮಾತನಾಡಿದೆ. ಅವರ ಒಟ್ಟು ಅಭಿಪ್ರಾಯ ಇಲ್ಲಿದೆ:

1) ಈ ರಾಜಕಾರಣಿಗಳಿಗೆ ಪ್ರಶ್ನೆ ಮಾಡುವವರಿಲ್ಲ

ಒಂದು ತಮಾಷೆ ಗಮನಿಸಬೇಕು. ಆರೆಸ್ಸೆಸ್ ಕಡೆ ಯಾರಾದರೂ ಬೆಟ್ಟು ತೋರಿಸಿದರೆ ರಾಜಕಾರಣಿಗಳಿಂದ ಏನು ವಿರೋಧ, ಏನು ಪ್ರಲಾಪ ಹೊಮ್ಮುತ್ತದೆ. ಸದನದಲ್ಲಿ ಲಿಂಗಾಯತ ಶಾಸಕರೇ ನಿಂತು ಗಂಟಲು ಹರಿಯುವಂತೆ ಕೂಗಾಡುತ್ತಾರೆ.

ಆದರೆ ಲಿಂಗಾಯತರ ಮೇಲೆ ಯಾರು ಏನೇ ರಾಡಿ ಎರಚಿದರೂ ಇದೇ ಜನ ತೆಪ್ಪಗೆ ಸುಮ್ಮನಿರುತ್ತಾರೆ.

ಇದಕ್ಕೆ ಕಾರಣವಿದೆ. ರಾಜಕಾರಣಿಗಳ ಮೇಲೆ ಆರೆಸ್ಸೆಸ್ ಕಡೆಯಿಂದ ನಿರಂತರ ಒತ್ತಡವಿರುತ್ತದೆ. ಅವರನ್ನು ಎದುರು ಹಾಕಿಕೊಂಡರೆ ಇವರಿಗೆ ಟಿಕೆಟ್ ಸಿಗುವುದಿಲ್ಲ. ಆದರೆ ಲಿಂಗಾಯತ ಸಮಾಜದಿಂದ ಇವರ ಮೇಲೆ ಯಾವುದೇ ಒತ್ತಡ, ಬೆದರಿಕೆಯಿಲ್ಲ.

ಲಿಂಗಾಯತ ಸಮಾಜದಿಂದ ರಾಜಕಾರಣಿಗಳ ಮೇಲೆ
ಯಾವುದೇ ಒತ್ತಡ, ಬೆದರಿಕೆಯಿಲ್ಲ.

ಲಿಂಗಾಯತರು ಇವರಿಗೆಲ್ಲಾ ಜಾತಿ ಸೆಳೆತದಿಂದ ಮುಗ್ದವಾಗಿ ಮತ ಹಾಕುತ್ತಾರೆ. ಧರ್ಮ, ತತ್ವ ಸಿದ್ದಾಂತದ ಬಗ್ಗೆ, ಸಮುದಾಯದ ಹಿತಾಸಕ್ತಿಯ ಕುರಿತು ಯಾವುದೇ ಬೇಡಿಕೆ ಅಥವಾ ಒತ್ತಡ ಹಾಕುವುದಿಲ್ಲ. ಅದಕ್ಕೆ ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಲಿ ಕೊಡಲು ಯಾವುದೇ ಭೀತಿಯಿಲ್ಲದೆ ಈ ಪುಡಾರಿಗಳು ಮುಂದಾಗುತ್ತಾರೆ.

2) ಬಸವ ಸಂಘಟನೆಗಳಿಂದ ಮೂಗುದಾರ

ಲಿಂಗಾಯತ ಸಮಾಜದ ವೈಶಿಷ್ಟ್ಯವೆಂದರೆ ನಾಡಿನುದ್ದಕೂ ಹರಡಿಕೊಂಡಿರುವ ನೂರಾರು ಬಸವ ಸಂಘಟನೆಗಳು. ಬಸವ ತತ್ವಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಇವರ ಸಂಘಟನಾ ಸಾಮರ್ಥ್ಯ ರಾಜ್ಯವೇ ನಿಂತು ನೋಡುವಂತೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪ್ರಕಟವಾಗಿದೆ.

ರಾಜಕೀಯ ಪಕ್ಷಗಳು ದುಡ್ಡು ಸುರಿದರೂ ತಮ್ಮ ಕಾರ್ಯಕ್ರಮಕ್ಕೆ ಜನ ಸೇರಿಸಲು ಒದ್ದಾಡುತ್ತಾರೆ. ಕಳೆದ ಚುನಾವಣೆ ಸಮಯದಲ್ಲಿ ಖುದ್ದು ಮೋದಿಯೇ ಬಂದರೂ ಅನೇಕ ಕಡೆ ಜನ ಸೇರಲಿಲ್ಲ. ಆದರೆ ಬಸವ ಸಂಘಟನೆಗಳು ಅಭಿಯಾನಕ್ಕೆ ಜಿಲ್ಲೆ ಜಿಲ್ಲೆಗಳಲ್ಲಿ ಒಂದು ಪೈಸೆ ಕೊಡದೆ ಸಾವಿರಾರು ಜನ ಸೇರಿಸಿದ್ದು ಐತಿಹಾಸಿಕ ಸಾಧನೆ. ನಮ್ಮ ನಾಡಿನಲ್ಲಿ ಪ್ರವಾಹದಂತೆ ಹರಿಯುತ್ತಿರುವ ಬಸವಣ್ಣನವರ ಪ್ರಭಾವವನ್ನೂ ಇದು ಸ್ಪಷ್ಟವಾಗಿ ತೋರಿಸುತ್ತದೆ.

ಇದು ರಾಜಕಾರಣಿಗಳ ಕಣ್ಣೂ ಕುಕ್ಕಿದೆ.

ಲಿಂಗಾಯತ ಸಮಾಜದ ಪರವಾಗಿ ಬಸವ ದ್ರೋಹಿ ರಾಜಕಾರಣಿಗಳಿಗೆ ಮೂಗುದಾರ ಹಾಕುವ ಕೆಲಸ ಮಾಡಲು ಬಸವ ಸಂಘಟನೆಗಳಿಂದ ಮಾತ್ರ ಸಾಧ್ಯ. ಸಮಾಜದ ಪರವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಜಕಾರಣಿಗಳಿಗೆ ಸ್ಪಷ್ಟ ಬೇಡಿಕೆ ಹಾಗೂ ಒತ್ತಡ ತರುವ ನಿರಂತರ ಕೆಲಸವಾದರೆ ಮಾತ್ರ ಅವರು ದಾರಿಗೆ ಬರುತ್ತಾರೆ.

ರಾಜ್ಯದಲ್ಲಿ ಬಸವ ತತ್ವ ಬಿತ್ತಲು ಇಲ್ಲಿಯವರೆಗೆ ನಡೆದಿರುವ ಅತಿ ಮಹತ್ವದ ಚಳುವಳಿ ಬಸವ ಸಂಸ್ಕೃತಿ ಅಭಿಯಾನ. ಅದರಿಂದ ಹುಟ್ಟಿರುವ ಕಂಪನದಿಂದ ನಮ್ಮ ಸೈದ್ಧಾಂತಿಕ ವಿರೋಧಿಗಳು ಇನ್ನೂ ನಡುಗುತ್ತಿರುವುದು ಕಾಣಿಸುತ್ತದೆ.

ಬಸವ ಸಂಘಟನೆಗಳ ಸಂಘಟನಾ ಸಾಮರ್ಥ್ಯ
ಅಭಿಯಾನದಲ್ಲಿ ಪ್ರಕಟವಾಗಿದೆ.

ಅಭಿಯಾನದಲ್ಲಿ ನಾವು ಕಂಡುಕೊಂಡ ಸಂಘಟನಾ ಸಾಮರ್ಥ್ಯ ಈಗ ನಮ್ಮ ರಾಜಕೀಯ ವಿರೋಧಿಗಳ ಮೇಲೂ ಪ್ರಯೋಗಿಸಬೇಕು. ಆಗ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣ ನಿಲ್ಲುತ್ತದೆ ಮತ್ತು ಲಿಂಗಾಯತ ಹೋರಾಟಕ್ಕೆ ಹೊಸ ಶಕ್ತಿ ಬರುತ್ತದೆ.

3) ರಾಜಕೀಯ ಪ್ರಭಾವ ಬೆಳೆಸಿಕೊಳ್ಳೋಣ

ರಾಜಕಾರಣಿಗಳ ಮೇಲೆ ಒತ್ತಡ ತರಬೇಕಾದರೆ ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಎರಡೂ ಬೆಳೆಯಬೇಕು.

ಇಂದು ಬಸವ ಸಂಘಟನೆಗಳು ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಬೆಳೆದಿವೆ. ಧರ್ಮ ಪ್ರಚಾರದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ಜನರ ಜೊತೆ ಬೆರೆತುಕೊಂಡು ದುಡಿಯುತ್ತಿವೆ. ಈಗಿರುವ ಸಾಮಾಜಿಕ ಪ್ರಭಾವವನ್ನು ರಾಜಕೀಯವಾಗಿ ಬೆಳೆಸಿಕೊಳ್ಳುವ, ಬಳಸಿಕೊಳ್ಳುವ ಪ್ರಯತ್ನ ಶುರುವಾಗಬೇಕು.

ಕೆಲವರಲ್ಲಿ ಆಧ್ಯಾತ್ಮ ಒಳ್ಳೆಯದು, ರಾಜಕೀಯ ಕೆಟ್ಟದು ಎನ್ನುವ ಅಭಿಪ್ರಾಯವಿದೆ. ನಾವು ಮಾತನಾಡಿದ ಒಬ್ಬರು ವಚನಮೂರ್ತಿಗಳು ಬಸವ ಸಂಘಟನೆಗಳನ್ನು ರಾಜಕೀಯಕ್ಕೆ ಎಳೆದು ಹಾಳು ಮಾಡಬ್ಯಾಡ್ರಿ ಎಂದು ಎಚ್ಚರಿಸಿದರು.

ಆದರೆ ದಕ್ಷಿಣ ಕರ್ನಾಟಕದ ಒಬ್ಬರು ಮಠಾಧಿಪತಿಗಳು ಲಿಂಗಾಯತ ಧರ್ಮ ಹೋರಾಟ ಸಬಲವಾಗಬೇಕಾದರೆ ರಾಜಕೀಯವಾಗಿ ಪ್ರಭಾವ ಬೀರುವುದು ಅನಿವಾರ್ಯ. ಬಸವಾದಿ ಶರಣರ ಕ್ರಾಂತಿಗೆ ರಾಜಕೀಯ ಆಯಾಮವೂ ಇತ್ತು. ಬ್ರಿಟಿಷರನ್ನು ಓಡಿಸಿ, ಸ್ವಾತಂತ್ರ್ಯ ಗಳಿಸಿದ್ದು ರಾಜಕೀಯದ ಮೂಲಕವೇ, ಎಂದರು.

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಯಬೇಕು

4) ರಾಜಕೀಯಕ್ಕೆ, ಚುನಾವಣೆಗೆ ತರಬೇತಿ

ರಾಜಕೀಯವಾಗಿ ಸಕ್ರಿಯವಾಗಲು ಹಾಗೂ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಸವ ಸಂಘಟನೆಗಳಿಗೆ ತರಬೇತಿಯ ಅಗತ್ಯವಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿ ಕೇಳಿ ಬಂತು.

ನಿರ್ದಿಷ್ಟ ಉದ್ದೇಶಕ್ಕೆ ಜನರನ್ನು ಸಂಘಟಿಸುವುದು ರಾಜಕೀಯದ ಸರಳ ಅರ್ಥ.

ಇದನ್ನು ಸಾಧಿಸಲು ಲಿಂಗಾಯತ ಧರ್ಮ, ಸಮಾಜಕ್ಕೆ ಅಗತ್ಯವಾದ ಬೇಡಿಕೆಗಳನ್ನು ರೂಪಿಸಬೇಕು, ಅವುಗಳ ಬಗ್ಗೆ ಜನರಲ್ಲಿ, ರಾಜಕಾರಣಿಗಳಲ್ಲಿ, ಮಾಧ್ಯಮಗಳಲ್ಲಿ ಅರಿವು ಮೂಡಿಸಬೇಕು.

ವಿವಿಧ ರೀತಿಗಳಲ್ಲಿ ಪ್ರಚಾರ ಮಾಡುವುದು, ಮಾಧ್ಯಮಗಳ ಜೊತೆ ಕೆಲಸ ಮಾಡುವುದು, ರಾಜಕಾರಣಿಗಳನ್ನು ಒಪ್ಪಿಸುವುದು, ಒಪ್ಪದಿದ್ದರೆ ವಿವಿಧ ರೀತಿಗಳಲ್ಲಿ ಸತ್ಯಾಗ್ರಹ ಮಾಡುವುದು, ಸಕಾರಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವುದು – ಇವೆಲ್ಲಾ ರಾಜಕೀಯ ಚಟುವಟಿಕೆಗಳೇ.

ಚುನಾವಣೆ ಸಮಯದಲ್ಲಿ ಬೂತ್ ಮಟ್ಟದ ಮಾಹಿತಿ ವಿಶ್ಲೇಷಿಸುವುದು, ಲಿಂಗಾಯತ ಮತದಾರರಲ್ಲಿ ಜಾಗೃತಿ ಮೂಡಿಸುವುದು, ಮತಗಳನ್ನು ಕ್ರೋಡೀಕರಿಸುವುದು, ಅಭ್ಯರ್ಥಿಗಳ ಮೇಲೆ ಒತ್ತಡ ಹಾಕುವುದು, ಸಮಾನ ಮನಸ್ಕರ ಜೊತೆ ಕೈ ಜೋಡಿಸುವುದು – ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ.

ಈ ಕೆಲಸಗಳು ಅಷ್ಟು ಕಷ್ಟವಲ್ಲ. ಕೇವಲ ಎರಡು ಕೋಟಿಯಲ್ಲಿ ರಾಜ್ಯ ಮಟ್ಟದ ಅಭಿಯಾನ ಮಾಡಿದವರಿಗೆ ಇದು ಸುಲಭ ಸಾಧ್ಯ. ಸ್ವಲ್ಪ ಶ್ರಮ ಪಟ್ಟರೂ ಬಹಳ ಪ್ರತಿಫಲ ಬರುವ ಎಲ್ಲಾ ಸಾಧ್ಯತೆಗಳಿವೆ.

ಈ ವಿಶ್ವಾಸಕ್ಕೆ ಕಾರಣವಿದೆ.

ಇಂದು ರಾಜಕೀಯದಲ್ಲಿ ಪೈಪೋಟಿ ಹೆಚ್ಚಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಅಂತರ ಬಹಳ ಕಡೆ ಕಡಿಮೆಯಾಗಿದೆ. ಬಸವ ಸಂಘಟನೆಗಳು ಕೇವಲ 500 ಮತಗಳನ್ನು ತಿರುಗಿಸುವ ಎಚ್ಚರಿಕೆ ನೀಡಿದರೂ ಯಾವ ಪುಡಾರಿಯೂ ಲಿಂಗಾಯತ ಧರ್ಮಕ್ಕೆ ದ್ರೋಹ ಬಗೆಯುವ ಸಾಹಸ ಮಾಡುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಸಾವಿರಾರು ಮತಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬಸವ ಸಂಘಟನೆಗಳಿಗಿವೆ.

ಕೆಲವು ಲಿಂಗಾಯತ ವಿರೋಧಿ ರಾಜಕಾರಣಿಗಳ ಗೆಲುವಿನ ಅಂತರ ನೀವೇ ನೋಡಿ.

ಹೆಸರುಕ್ಷೇತ್ರಮತಗಳ ಅಂತರಫಲಿತಾಂಶ
ಸಿ.ಸಿ. ಪಾಟೀಲನರಗುಂದ1791ಗೆಲುವು
ಶಶಿಕಲಾ ಜೊಲ್ಲೆನಿಪ್ಪಾಣಿ7292ಗೆಲುವು
ಯತ್ನಾಳ್ಬಿಜಾಪುರ8233ಗೆಲುವು
ಸಿದ್ದು ಸವದಿತೇರದಾಳ10745ಗೆಲುವು
ಎಸ್.ಕೆ. ಬೆಳ್ಳುಬ್ಬಿಬಸವನ ಬಾಗೇವಾಡಿ24863ಸೋಲು
ಎ.ಎಸ್. ಪಾಟೀಲಮುದ್ದೇಬಿಹಾಳ7,637ಸೋಲು
ವಿಜಯೇಂದ್ರಶಿಕಾರಿಪುರ11,000ಗೆಲುವು
ಅಪ್ಪಾಸಾಹೇಬ ಪಟ್ಟಣಶೆಟ್ಟಿಬಿಜಾಪುರಟಿಕೆಟ್ ಸಿಕ್ಕಿಲ್ಲ

ಇಷ್ಟು ಅಸ್ಥಿರವಾಗಿರುವ ರಾಜಕಾರಣಿಗಳಿಗೆ ಬಸವ ಸಂಘಟನೆಗಳು ಗಂಭೀರವಾಗಿ ಎಚ್ಚರಿಕೆ ನೀಡಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ, ನೀವೇ ಊಹಿಸಿಕೊಳ್ಳಿ. ಇಷ್ಟು ದಿನ ಇವರಿಗೆ ಅಂಕುಶ ಹಾಕದಿದ್ದು ಸಮಸ್ಯೆಯ ಮೂಲ. ಆ ಕೆಲಸ ಈಗ ಶುರುವಾಗಬೇಕು.

ಕೇವಲ 500 ಮತಗಳನ್ನು ತಿರುಗಿಸಿದರೂ ಲಿಂಗಾಯತ
ವಿರೋಧಿಗಳು ದಾರಿಗೆ ಬರುತ್ತಾರೆ

5) ನಮ್ಮದು ಪಕ್ಷಾತೀತ ರಾಜಕೀಯ

ಬಸವ ಸಂಘಟನೆಗಳು ಯಾವ ಪಕ್ಷ ಬೆಂಬಲಿಸುತ್ತವೆ ಅನ್ನುವುದು ಮುಖ್ಯವಲ್ಲ. ಬಸವ ಭಕ್ತರು ಎಲ್ಲಾ ಪಕ್ಷದಲ್ಲಿದ್ದಾರೆ. ಒಂದೇ ಘಟಕದ ಸದಸ್ಯರು ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದರೂ ಸಮಸ್ಯೆಯಿಲ್ಲ.

ಆದರೆ ಪ್ರತಿಯೊಬ್ಬರೂ ಒಮ್ಮತದಿಂದ ಲಿಂಗಾಯತ ಸಮಾಜ, ಧರ್ಮಕ್ಕೆ ಪೂರಕವಾದ ಬೇಡಿಕೆಗಳನ್ನು ರೂಪಿಸಿ ಅವುಗಳ ಬಗ್ಗೆ ಪ್ರತಿಯೊಬ್ಬ ಅಭ್ಯರ್ಥಿಯಲ್ಲಿಯೂ ಜಾಗೃತಿ ಮೂಡಿಸಬೇಕು. ಲಿಂಗಾಯತ ವಿರೋಧಿ ನಿಲುವು ತೆಗೆದುಕೊಳ್ಳುವ ರಾಜಕಾರಣಿಗಳ ಮೇಲೆ ಪಕ್ಷಾತೀತವಾಗಿ ಒತ್ತಡ ತರಬೇಕು.

ನಿಮಗೆ ಯಾವ ಪಕ್ಷದ ಬಗ್ಗೆ ಒಲವಿದೆ ಎನ್ನುವುದು ಮುಖ್ಯವಲ್ಲ. ನಿಮ್ಮ ಅಭ್ಯರ್ಥಿಗಳು ಹೇಗೆ ನಿಮ್ಮ ಮಾತು ಕೇಳುವಂತೆ ಮಾಡುತ್ತೀರಿ ಎನ್ನುವುದು ಮುಖ್ಯ.

6) ಬಸವ ಶಕ್ತಿ ಸಮಾವೇಶ

ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಸಾಮರ್ಥ್ಯ ಮೂಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ‘ಬಸವ ಶಕ್ತಿ’ ಸಮಾವೇಶ ಆಯೋಜಿಸಲು ಸಲಹೆ ಬಂದಿದೆ.

ಈ ಸಮಾವೇಶದ ಮುಖ್ಯ ಉದ್ದೇಶ ಬಸವ ಸಂಘಟನೆಗಳಿಗೆ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿತ ಚಟುವಟಿಕೆಗಳಿಗೆ ಬೇಕಾದ ತರಬೇತಿ ನೀಡುವುದು. ಜೊತೆಗೆ ಈ ಕಾರ್ಯಕ್ರಮದಲ್ಲಿ ಬಸವ ಸಂಘಟನೆಗಳು ತಮ್ಮ ಅನುಭವ ಮತ್ತು ಆಲೋಚನೆಗಳನ್ನೂ ಹಂಚಿಕೊಳ್ಳಬಹುದು.

ಇದು ಎರಡು ದಿನದ ಕಾರ್ಯಕ್ರಮವಾದರೆ ಮೊದಲ ದಿನ ಬಸವ ಸಂಘಟನೆಗಳ ಅನುಭವ ಹಂಚಿಕೆ, ಎರಡನೆಯ ದಿನ ರಾಜಕೀಯ ತರಬೇತಿ ಶಿಬಿರ ನಡೆಸಬಹುದು.

ಬಸವ ಸಂಘಟನೆಗಳು ಚುನಾವಣೆ ಮೇಲೆ ಪ್ರಭಾವ ಬೀರಬೇಕು

ಬಸವ ಶಕ್ತಿ ಸಮಾವೇಶ ಸಧ್ಯಕ್ಕೆ ಆಲೋಚನಾ ಹಂತದಲ್ಲಿದೆ. ಇಷ್ಟು ದಿನ ವೈಯಕ್ತಿಕವಾಗಿ ಅನೇಕ ಬಸವ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದೇವೆ. ಅವರ ಪ್ರೋತ್ಸಾಹ, ಬೆಂಬಲದಿಂದ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕವಾಗಿ ಚರ್ಚೆ ಶುರುಮಾಡಿದ್ದೇವೆ. ಎಲ್ಲರ ಅಭಿಪ್ರಾಯದಂತೆ ಮುನ್ನಡೆಯುತ್ತೇವೆ.

ನಮ್ಮ ಓದುಗರಲ್ಲಿ ಮನವಿ – ದಯವಿಟ್ಟು ಈ ಐದು ಪ್ರಶ್ನೆಗಳಿಗೆ ಉತ್ತರಿಸಿ, ಇಲ್ಲೇ ಕಾಮೆಂಟಿನಲ್ಲಿ ಹಾಕಿ ಅಥವಾ ನಮಗೆ ವೈಯಕ್ತಿಕವಾಗಿ ಕಳಿಸಿ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ಈ ಪ್ರಯತ್ನ ಮುಂದುವರೆಸುವ ಹಾಗಿದ್ದರೆ ಬಸವ ಶಕ್ತಿ ಸಮಾವೇಶವನ್ನು ಬೇಗನೆ ಆಯೋಜಿಸಬೇಕು. ಮುಂದಿನ ಚುನಾವಣೆಗೆ ಎರಡೂವರೆ ವರ್ಷವಿದೆ. ಅಲ್ಲಿಯವರೆಗೆ ನಾವು ಸಿದ್ಧವಾದರೆ ಲಿಂಗಾಯತ ಸಮಾಜ, ಧರ್ಮದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಬಸವ ಶಕ್ತಿ ಸಮಾವೇಶ ನಡೆಸಬೇಕಾದರೆ ಮೊದಲು ಸಂಘಟಕರ ತಂಡ ರಚನೆಯಾಗಬೇಕು. ಆಸಕ್ತರು ದಯವಿಟ್ಟು ಮುಂದೆ ಬಂದು ಕೈ ಜೋಡಿಸಲು ವಿನಂತಿಸಿಕೊಳ್ಳುತ್ತಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
12 Comments
  • ಲಿಂಗಾಯತ ಧರ್ಮವನ್ನು ತುಳಿಯುವ, ವಿರೋಧಿಸುವ RSS, ತನ್ನ ಕೆಲಸವನ್ನು ಅಪರೋಕ್ಷವಾಗಿ, ಪಡೆದೆ ಹಿಂದೆ ನಿಂತು ಮಾಡಿಸುತ್ತವೆ.
    ಲಿಂಗಾಯತ ಧರ್ಮ ದ್ರೋಹಿಗಳು ಆ ಕೆಲಸ ಮಾಡುತ್ತಿದ್ದಾರೆ.
    ಈಗ ಪಂಚಪೀಠಾಧೀಶ್ವಾರರು ಲಿಂಗಾಯತ ಧರ್ಮ ಬೆಳವಣಿಗೆಗೆ ಯಾವುದೇ ಕಾರ್ಯ ಮಾಡದೆ ಹೋದರು, ಪುರ ಪ್ರವೇಶ, ಕೊಡಗಳ ಮೇಳ (ಕುಂಭ ಹೊರುವುದು) ಮಾಡಿ, ಲಿಂಗಾಯತರ ಕೋಟ್ಯಾನುಕೋಟಿ ಹಣವನ್ನು ದಾನ ಧರ್ಮಗಳ ಮೂಲಕ ಪಡೆಯುತ್ತಿದ್ದಾರೆ.
    ಹಳ್ಳಿಗಳ ಜನರನ್ನು ಬಹಳ ಬೇಗ ಸೆಳೆಯುತ್ತಾರೆ. ಪ್ರಾಯೋಜಕರು ಮತ್ತು ತಾವು ಹಂಚಿಕೊಳ್ಳುತ್ತಾರೆ.

  • ಎಲ್ಲರಿಗೂ ಶರಣು ಶರಣಾರ್ಥಿಗಳು.
    1. ಬಸವ ಸಂಘಟನೆಗಳು ಅಭ್ಯರ್ಥಿ ಲಿಂಗಾಯತ ಅಂದ ಮಾತ್ರಕ್ಕೆ ಬೆಂಬಲಿಸಬಾರದು. ಆತ ಲಿಂಗಾಯತ ಸಮಾಜದ ಕಾರ್ಯದಲ್ಲಿ ಹೇಗೆ ತೊಡಗಿಸಿಕೊಂಡಿದ್ದಾನೆ ಮತ್ತು ಕೊಡುಗೆ ಏನು ನೋಡಬೇಕು.
    2.ದೊಡ್ಡ ಮಟ್ಟದ ತರಬೇತಿ ಅವಶ್ಯಕತೆ ಇಲ್ಲ, ಆದರೆ ಎಲ್ಲರೂ ಕೂಡಿ ಕೆಲಸ ಮಾಡುವಂತೆ ಪ್ರೇರೇಪಿಸುವುದು ಅವಶ್ಯ.
    3. ಒಂದೇ ಕಡೆ ಮಾಡುವ ಬದಲು 4-5 ಕಡೆ ಆಯೋಜನೆ ಮಾಡಿದರೆ ಒಳ್ಳೆಯದು.
    4.ಈಗಲೇ ಹೇಳುವುದು ಕಷ್ಟಸಾಧ್ಯ.
    5. ನಮ್ಮದು ವಸತಿ ಶಾಲೆ ಇರುವುದರಿಂದ ಸ್ಥಳಾವಕಾಶ ಒದಗಿಸಬಹುದು.

  • ನಾನು ವೈಯಕ್ತಿಕವಾಗಿ ಮೇಲಿನ ಎಲ್ಲಾ ಚಿಂತನೆಗಳನ್ನು ಒಪ್ಪುತ್ತೇನೆ ಬೆಂಬಲಿಸುತ್ತೇನೆ

  • ೧. ಹೌದು. ಎಲ್ಲ ಬಸವ ಪರ ಸಂಘಟನೆಗಳು ರಾಜಕೀಯ ಪ್ರಭಾವ ಬಳಸಿಕೊಂಡು, ಬಸವ ನಿಷ್ಠರಿಗೆ ಮತ್ತು ಬಸವ ತತ್ವ ನಿಷ್ಠರಿಗೆ ರಾಜಕೀಯ ಅಧಿಕಾರ ಸಿಗುವಂತೆ ಮಾಡಬೇಕು. ಇದರಿಂದ ‘ಲಿಂಗಾಯತ ಧರ್ಮ’ ಕ್ಕೆ ಮಾನ್ಯತೆ ಪಡೆಯುವ ದಾರಿ ಸುಗಮಗೊಳಿಸಿಕೊಳ್ಳಲು ಒಂದು ದೊಡ್ಡ ಅಸ್ತ್ರವಾಗುತ್ತದೆ.

    ೨. ಹೌದು. ದ್ವಂದ್ವ ನಿಲುವಿನ ಲಿಂಗಾಯತ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಸಂಘಟಕರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ.

    ೩. ‘ಬಸವ ಸಂಸ್ಕೃತಿ ಅಭಿಯಾನ’ ದಂತೆ ‘ಬಸವಶಕ್ತಿ ಸಮಾವೇಶ’ ವೂ ಜರುಗಿದರೆ ಬಹಳ ಒಳ್ಳೆಯದು.

    ೪. ನಮ್ಮ ತಾಲೂಕಿನ ವತಿಯಿಂದ ಸುಮಾರು 50 ಜನ ತರಬೇತಿ ಪಡೆಯಲು ಸಿದ್ದರಾಗಿದ್ದೇವೆ.

    ೫. ಹೌದು ಆಸಕ್ತಿ ಇದೆ. ಈ ‘ಬಸವ ಶಕ್ತಿ ಸಮಾವೇಶ’ ಕ್ಕಾಗಿ ರೂ. 50,000/- ಸಂಗ್ರಹಿಸುವ ಶಕ್ತಿಯೂ ಇದೆ.

  • ಮೊದಲಿಗೆ ಲಿಂಗಾಯತ ಧರ್ಮ ಮಾನ್ಯತೆಗೆ ವಿರುದ್ಧ ನಿಲುವು ಹೊಂದಿರುವ ಲಿಂಗಾಯತ ರಾಜಕಾರಣಿ ಯಾವುದೇ ಪಕ್ಷಕ್ಕೆ ಸೇರಿದವನಾಗಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಆತನಿಗೆ ತಕ್ಕ ಶಾಸ್ತಿ ಮಾಡಲು ಬಸವಾಭಿಮಾನಿಗಳೆಲ್ಲರೂ ಈಗಿನಿಂದಲೇ ಮನೋ ವೇದಿಕೆ ಸಿದ್ಧಪಡಿಸಿಕೊಳ್ಳಬೇಕು . ಚುನಾವಣಾ ಸಂದರ್ಭದಲ್ಲಿ ತಮ್ಮ ಬಂಧು ಬಾಂಧವರು ಬಸವಾಭಿಮಾನಿ ಮಿತ್ರರು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು.

    • ಸಂಘಟನೆಗೆ ಬಹು ಮುಖ್ಯವಾಗಿ ವಯಕ್ತಿಕ ಪ್ರತಿಷ್ಟೇ, ಫಲಾಪೇಕ್ಷೆ ಇವುಗಳನ್ನೆಲ್ಲ ಬದಿಗಿರಿಸಿದಲ್ಲಿ ಮಾತ್ರ ಸಂಘಟನೆಗೆ ಒಂದು ಶಕ್ತಿ ಸಿಗಬಹುದು ಈ ಮೇಲಿನ ಚಿಂತನೆಗಳನ್ನು ಒಪ್ಪುತ್ತೇನೆ ಬೆಂಬಲಿಸುತ್ತೇನೆ

  • ಬಸವಣ್ಣನವರ ಬಗ್ಗೆಯಾಗಲಿ ,ಲಿಂಗಾಯತ ಧರ್ಮದ ಬಗ್ಗೆ ಯಾರೆ ಮಾತನಾಡಿದರೂ ತಕ್ಷಣವೇ ಪ್ರತಿಕ್ರಿಯೆ ಕೊಡುವಂತೆ ಪ್ರತಿನಿಧಿಗಳನ್ನು ತಯಾರುಮಾಡಬೇಕು.ಪ್ರತಿಕ್ರಿಯೆ ಹೇಗಿರಬೇಕೆಂದರೆ ವಿರೋಧಿಗಳು ಮುಟ್ಟಿನೋಡುಕೊಳ್ಳುವಂತಿರಬೇಕು .
    ಅಂತಹ ಒಂದು ಗಣಾಚಾರಪಡೆಯನ್ನು ಹುಟ್ಟುಹಾಕಬೇಕು,ಅದಕ್ಕೆ ಬೇಕಾದ ತರಬೇತಿ ನೀಡುವ ಮೂಲಕ ಲಿಂಗಾಯತ ಧರ್ಮದ ಮಠಾಧೀಶರು,ಬಸವಪರ ಸಂಘಟನೆಗಳು ,ಬಸವಾನುಯಾಯಿ ರಾಜಕಾರಣಿಗಳು ಲಿಂಗಾಯತ ಧರ್ಮದ ಅಭಿಮಾನಿಗಳು ಸೇರಿ ತರಬೇತಿಗೆ ಬೇಕಾದ ತನುಮನ,ಧನಸಹಾಯ ಹಾಗೂ ತಾವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
    ಇಷ್ಟು ನನಗೆ ಅನಿಸಿದ ಚಿಕ್ಕ ವ್ಯಕ್ತಿಯ ಸಣ್ಣ ಸಲಹೆ. ಶರಣುಶರಣಾರ್ಥಿಗಳು

  • ಶರಣರೇ,
    1. ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯ.
    ಲಿಂಗಾಯತ ಧರ್ಮದ ಏಳು ಬೀಳುಗಳನ್ನು ಅವಲೋಕಿಸಿದಾಗ ಮೊದಲಿನ ರಾಜರ ಆಶ್ರಯ ಇದ್ದಾಗ ಅದು ಬೆಳೆದಿದೆ ಇಲ್ಲದೆ ಇದ್ದಾಗ ಸೊರಗಿದೆ. ಈಗಿನ ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಯನ್ನು ಲಿಂಗಾಯತರು ಬಳಸಿಕೊಳ್ಳುವುದಕ್ಕಿಂತ ಬಿಜೆಪಿಯೆ ಲಿಂಗಾಯತರನ್ನು ಬಳಸಿಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲರನ್ನು ಹೇಗೆ ಬಳಸಿಕೊಂಡಿದೆ ಎಂಬುದನ್ನು ಎಲ್ಲರೂ ಬಲ್ಲರು. ತದ ನಂತರ ಅಹಿಂದ ವರ್ಗಗಳದ್ದೇ ದರ್ಬಾರು. ಇವೆರಡು ಪಕ್ಷಗಳಿಂದ ಸಮಾನಾಂತರ ಕಾಯ್ದುಕೊಂಡು ನಾವು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕಾಗಿದೆ. ನಾವು ಆ ಪಾರ್ಟಿ, ಈ ಪಾರ್ಟಿ ಅಂತ ಬ್ರಾಂಡ್ ಆಗದೆಯೇ ಲಿಂಗಾಯತ ಧರ್ಮದ ಆಶೆ ಆಕಾಂಕ್ಷೆಗಳನ್ನು ಸಮರ್ಥವಾಗಿ ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಂಡಿಸುವ ಅಭ್ಯರ್ಥಿಗಳಿಗೆ ಬೆಂಬಲ ಕೊಡಬೇಕಾಗಿದೆ.
    ಇನ್ನು ನಾವು ಮುಸ್ಲಿಮರ ಪರ ಅಥವಾ ವಿರೋಧಿ ನಡೆಗಳಿಂದ ದೂರ ಕಾಯ್ದುಕೊಳ್ಳುವುದು ಅಷ್ಟೇ ಮಹತ್ವದ್ದು.

    2. ತರಬೇತಿ ಅತ್ಯಗತ್ಯ ರಾಜಕೀಯದಲ್ಲಿ, ಜಾತಿ ರಾಜಕಾರಣದಲ್ಲಿ ಸಿಲುಕದಂತೆ ಎಚ್ಚರವಹಿಸುವುದು ಮತ್ತು ನಮ್ಮ ಧುರೀಣರು ಮತ್ತೆ ಬೇರೆ ಆಕಾಂಕ್ಷೆಗಳಿಗೆ ಮಾರು ಹೋಗದಂತೆ ನೋಡಿಕೊಳ್ಳುವುದು.

    3. ನಾವು ಯಾವ ರಾಜಕೀಯ ಧುರೀಣರ ಬೆಂಬಲ ಪಡೆದುಕೊಳ್ಳುತ್ತೇವೆಯೋ ಅವರಿಂದ ಅದರ ದುರುಪಯೋಗ ಆಗದಂತೆ, ನೇತೃತ್ವವನ್ನು ಲಿಂಗಾಯತ ಸ್ವಾಮೀಜಿಗಳಿಂದ ಹಾಗೂ ಇತರ ಬಸವಪರ ಸಂಘಟನೆಗಳಿಂದ ಆಯ್ದ ಕೆಲವು ನಾಯಕರೇ ಸಾಮೂಹಿಕವಾಗಿ ಹಾಗೂ ಸರ್ವಾನುಮತದಿಂದ ನಿರ್ಣಯಗಳನ್ನು ತೆಗೆದುಕೊಂಡು ಇದರ ರೂಪುರೇಷೆ ತಯಾರಿಸಬೇಕು.

    4. ನಾನೊಬ್ಬ ನಿವೃತ್ತ ಉದ್ಯೋಗಿ ಆಗಿರುವುದರಿಂದ ನನ್ನ ಯಾವ ಸಂಘಟನೆ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಸೇವೆ ಮಾಡಲು ಸದಾ ಸಿದ್ಧ.

    5. ಆಸಕ್ತಿ ಇದೆ. ನನ್ನ ಆರೋಗ್ಯದ ಇತಿಮಿತಿಯಲ್ಲಿ.

    ನೀವು ಬಸವ ಮೀಡಿಯಾದವರು ಕೈಗೊಳ್ಳುತ್ತಿರುವ ಎಲ್ಲ ಕಾರ್ಯಗಳು ಪ್ರಶಂಸನೀಯ.

    ಶರಣು ಶರಣಾರ್ಥಿ

  • ಬಸವ ಸಂಘಟನೆಗಳು ಧರ್ಮದ ವಿಚಾರಕ್ಕೆ ಮಾತ್ರ ಸೀಮಿತ ವಾಗಿರ ಬೇಕಾಗುತ್ತದೆ. ಚುನಾವಣೆ ಸಂದರ್ಬದಲ್ಲಿ ಮಾತ್ರ ಸೂಕ್ತ ತೀರ್ಮಾನ ಕೈಗೊಳ್ಳುವಂತಿರ ಬೇಕು. ಇಲ್ಲಿ ಲಿಂಗಾಯತ ಅಭ್ಯರ್ಥಿ ಮುಖ್ಯವಲ್ಲ. ಸಮಾಜಕ್ಕೂ,ಲಿಂಗಾಯತ ಸಮುದಾಯಕ್ಕೆ ಒಳ್ಳೆಯದು ಮಾಡುವುವರು ಮುಖ್ಯ. ಲಿಂಗಾಯತ ಮತಗಳು ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ.

    • All points are good,we have to go ahead with proper planning.
      Other things can be discussed in training sessions

  • ಲಿಂಗಾಯತ ವಿರೊಧಿ ಗಳಿಗೆ ತಕ್ಕ ಪಾಠ ಕಲಿಸಬೇಕು ಇದಕ್ಕೆ ನಾವು ನಿಮ್ಮ ಜೊತೆ ಬರುತ್ತೇವೆ

Leave a Reply

Your email address will not be published. Required fields are marked *