ಬೆಂಗಳೂರು
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬೆಂಗಳೂರಿನ ಲಿಂಗಾಯತ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಯಾಕೆ?
ರಾಜಕೀಯ ಪ್ರಜ್ಞೆ ನಮ್ಮ ಜೀವನದ ಒಂದು ಮುಖ್ಯ ಭಾಗ.
ಬಸವ ಧರ್ಮ ಪ್ರಜಾಸತ್ತಾತ್ಮಕ ಧರ್ಮ. ಅದರ ಜನಪರ ಧೋರಣೆಯನ್ನು ಸಮಾಜದಲ್ಲಿ ಮುನ್ನೆಲೆಗೆ ತರಲು ರಾಜಕೀಯ ಪ್ರಭಾವ, ಶಕ್ತಿ ಅತ್ಯವಶ್ಯಕವಾಗಿದೆ.
ಇಂದು ಲಿಂಗಾಯತ ವಿರೋಧಿ, ಸಂವಿಧಾನ ವಿರೋಧಿ ರಾಜಕಾರಣ ನಡೆಯುತ್ತಿದೆ. , ಲಿಂಗಾಯತ ರಾಜಕಾರಣಿಗಳು ‘ಲಿಂಗಾಯತ’ ಹೆಸರಿನಲ್ಲಿ ಓಟು ನಮ್ಮ ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು ಕಡೆಗಾಣಿಸುತ್ತಿದ್ದಾರೆ. ಇವರನ್ನು ಸರಿ ದಾರಿಗೆ ತರುವ ಕೆಲಸ ಬಸವ ಸಂಘಟನೆಗಳು ಮಾಡಬೇಕು.
2 ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಖಂಡಿತವಾಗಿ ತರಬೇತಿ ಬೇಕೆ ಬೇಕು. ಜೀವಪರ, ಜನಪರ ತತ್ವ ಸಿದ್ದಾಂತದ ವಿರೋಧದ ರಾಜಕೀಯ ಶಕ್ತಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಯೋಜನಾಬದ್ಧ ಶಿಬಿರಗಳ ಮೂಲಕ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ.
3 ಬಸವಶಕ್ತಿ ಸಮಾವೇಶದ ರೂಪುರೇಷೆ ಬಗ್ಗೆ ನಿಮ್ಮ ಸಲಹೆ ಏನು?
ರಾಜ್ಯದ ದೊಡ್ಡ ಮತ್ತು ಸಣ್ಣ ಬಸವಪರ ಸಂಘಟನೆಗಳನ್ನು ಗುರುತಿಸಿ ವಿಭಾಗ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
ಈ ಶಿಬಿರಗಳು ಕರ್ನಾಟಕದ ನಾಲ್ಕು ವಿಭಾಗಗಳಾದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಹಾಗೂ ಕರಾವಳಿಯಲ್ಲಿ ನಡೆಯಬೇಕು.
ನಂತರ ನಾಲ್ಕು ವಿಭಾಗದ ಕಾರ್ಯಕರ್ತರು, ಮುಖಂಡರು ಸೇರಿ ತಮ್ಮ ಜಿಲ್ಲೆ ತಾಲೂಕುಗಳಲ್ಲಿ ಮತ್ತಷ್ಟು ಶಿಬಿರಗಳನ್ನು ನಡೆಸಬೇಕು. ಕೊನೆಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಸಮಾವೇಶದ ಮೂಲಕ ಬಸವ ಶಕ್ತಿಯನ್ನು ಪ್ರಕಟಿಸಬೇಕಿದೆ.
ಇದಕ್ಕೆ ಆತುರ ಬೇಡ, ಕಾರ್ಯತತ್ಪರತೆ ಸರಿಯಾದ ಸಿದ್ಧತೆಯೊಂದಿಗೆ ಮಾಡಬೇಕಾದ ಕೆಲಸವಿದು.
ಇದರೂಂದಿಗೆ ಕೆಲ ರಾಜಕಾರಣಿಗಳು, ಹಿಂದೂಪರ ಸ್ವಾಮೀಜಿಗಳು, ಬಸವಾದಿ ಶರಣರ ಹೆಸರಲ್ಲಿ ಮಾಡುವ ಸಮಾವೇಶದಲ್ಲಿ ಮಾತನಾಡುವ ಸುಳ್ಳುಗಳಿಗೆ ತಾತ್ವಿಕವಾಗಿ ಉತ್ತರ ನೀಡುವ ಒಂದು ಯೂಟ್ಯೂಬ್ ಚಾನಲ್ ಅತ್ಯವಶ್ಯಕವಾಗಿದೆ. ಈ ಎಲ್ಲದರ ಬಗ್ಗೆ ಚಿಂತಿಸಲು ನಾಡಿನ ಬಸವ ಚಿಂತಕರ ಒಂದು ಸಭೆಯ ಅವಶ್ಯಕತೆ ಇದೆ.
4 ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ಸರಿಸುಮಾರು 20 ಜನ ಹಾಗೂ ನನಗೆ ಪರಿಚಯವಿರುವ ಅನೇಕರನ್ನು ಸಮಾವೇಶಕ್ಕೆ ತರುವ ಪ್ರಯತ್ನ ಮಾಡುವೆ.
5 ಸಮಾವೇಶ ಸಂಘಟಿಸಲು ನೆರವಾಗಲು ಆಸಕ್ತಿಯಿದೇಯೇ?
ಖಂಡಿತವಾಗಿ ಆಸಕ್ತಿ ಇದೆ, ಇದು ನನ್ನ ಕರ್ತವ್ಯವೆಂದು ಪರಿಗಣಿಸುತ್ತೇನೆ. ನನ್ನ ಶಕ್ತಿಗನುಸಾರ ತನು ಮನ ಮತ್ತು ಧನ ನೀಡುತ್ತೇನೆ. ತರಬೇತಿ ಹೊಂದಿದ ಕೆಲವೇ ಜನರ ಸಮಾವೇಶ ಸಾವಿರಾರು ಸಂಖ್ಯೆಯಲ್ಲಿ ಸೇರುವ ಸಮಾವೇಶಕ್ಕಿಂತ ಯಶಸ್ವಿಯಾಗಿರುತ್ತದೆ.
