ಗದಗ :
ವೇದ ಕಾಲದಿಂದ ಇಂದಿನವರೆಗೂ ಹೆಣ್ಣುಮಕ್ಕಳ ಸ್ಥಿತಿಗತಿ ಕುರಿತು ಆಲೋಚನೆ ಮಾಡಬೇಕು. ಈಗೀಗ ಹೆಣ್ಣುಮಕ್ಕಳಲ್ಲಿ ಜಾಗ್ರತಿ ಹೆಚ್ಚಾಗಿದೆ. ಅದು ಬಸವಾದಿ ಶರಣರು ಕರುಣಿಸಿದ ಪ್ರಸಾದ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2788ನೇ ಶಿವಾನುಭವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನರ ಕಾಲದಲ್ಲಿ ಹೆಣ್ಣು ಗಂಡು ಎಂಬ ಭೇದಭಾವ ಇರಲಿಲ್ಲ. ಅಂದು ಪತಿ ತಪ್ಪು ಮಾಡಿದರೆ, ಪತ್ನಿ ಬುದ್ದಿ ಹೇಳಿದ್ದನ್ನು ನೋಡುತ್ತೇವೆ. ಹೆಣ್ಣುಮಕ್ಕಳು ಜ್ಞಾನವಂತರಾಗಿದ್ದರು. ಹೆಣ್ಣುಮಕ್ಕಳೆಂದರೆ ದಯೆ, ಕರುಣೆ, ಸೌಹಾರ್ದತೆ ಮತ್ತು ಸಹನಾಮೂರ್ತಿ. ಅವರಿಂದಲೇ ಮನೆ ಬೆಳಕು, ಜಗ ಬೆಳಕು. ಮಹಿಳೆ ಇಲ್ಲದ ಜಗತ್ತನ್ನು ಕಲ್ಪಿಸಲಾಗದು. ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಕಾರಣ ಬಸವಾದಿ ಶರಣರ ಸಮಾನತೆಯ ಪರಿಕಲ್ಪನೆಯೇ ಕಾರಣವೆಂದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡ, ಗದಗ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯ ಡಾ. ನೀಲಮ್ಮತಾಯಿ ಅಸುಂಡಿ ಅವರು, 1968 ರಲ್ಲಿ ಅಣ್ಣಾಜಿನ್ನಸ್ ಎಂಬ ಮಹಿಳೆ ಶೀತಲ ಸಮರದಿಂದ ಸಮಾಜ ಛಿದ್ರವಾದಾಗ, ಮಹಿಳೆಯರನ್ನು ಸಂಘಟನೆ ಮಾಡಿದಳು. ಅವರೆಲ್ಲರ ಮನಸ್ಸನ್ನು ಗಟ್ಟಿಗೊಳಿಸಿ ಮಾರ್ಚ್ 8 ರಂದು ಸಮ್ಮೇಳನ ಮಾಡಿದಳು. ಅದುವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಯಿತು. ಇಡೀ ವಿಶ್ವವೇ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತದೆ.
ಹೆಣ್ಣುಮಕ್ಕಳಿಗೆ ಸಮಾನವಾಗಿ, ಅವಕಾಶ ಕೊಟ್ಟಿದ್ದಕ್ಕೆ ಇಂದು ಈ ವೇದಿಕೆಯಲ್ಲಿ ನಾವೆಲ್ಲ ಮಹಿಳೆಯರು ಕುಳಿತಿದ್ದೇವೆ. ಇದು ಬಸವಾದಿ ಶರಣರು ಕೊಟ್ಟ ತಾರತಮ್ಯರಹಿತ ಲಿಂಗಭೇದರಹಿತ ಸಮಾಜದ ಕೊಡುಗೆ.
ಹೆಣ್ಣು ಹುಟ್ಟಿದರೆ ಹೊರೆ, ಗಂಡು ಹುಟ್ಟಿದರೆ ದೊರೆ ಎನ್ನುವ ತಾರತಮ್ಯ ತೊಡೆದು ಹಾಕಿ, ಸಮಾನತೆ ತಂದವರು ಶರಣರು.
ನರೇಂದ್ರನಾಥ ಸಣ್ಣವನಿದ್ದು ಶಾಲೆ ಕಲಿಯುವಾಗ, ಎಲ್ಲಾ ಹುಡುಗರಿಗೆ ಶಾಲೆಯಲ್ಲಿ ಗುರುಗಳು ನಾಳೆ ಬರುವಾಗ ಸ್ವರ್ಗದಿಂದ ಮಣ್ಣು ತೆಗೆದುಕೊಂಡು ಬನ್ನಿರಿ ಎಂದಾಗ, ಮರುದಿವಸ ಎಲ್ಲಾ ಹುಡುಗರು ಬರಿಗೈಲೆ ಬರುತ್ತಾರೆ. ಆದರೆ ನರೇಂದ್ರನಾಥ ಕರವಸ್ತ್ರದಲ್ಲಿ ಮಣ್ಣು ತಂದು ಗುರುಗಳಿಗೆ ಕೊಡುತ್ತಾನೆ, ಎಲ್ಲಾ ಹುಡುಗರು ನಗುತ್ತಾರೆ. ಇವನಿಗೆಲ್ಲಿಂದ ಸ್ವರ್ಗ ಸಿಕ್ಕಿತಪಾ, ಎಂದು. ಅವಾಗ ಗುರುಗಳು ಕೇಳಿದಾಗ ನನ್ನ ತಾಯಿ ಪಾದ ಸ್ಪರ್ಶದಿಂದ ಪಾವನವಾದ ಮಣ್ಣೆ, ಸ್ವರ್ಗದ ಮಣ್ಣು, ನನಗೆ ನನ್ನ ತಾಯಿಯೇ ಸ್ವರ್ಗ ಸಮಾನ ಎಂದರಂತೆ. ಇದುವೆ ಮಹಿಳೆಗೆ ಸಿಗುವ ಗೌರವ. ಆಕೆಯ ಎತ್ತರಕ್ಕೆ ಯಾರು ಏರಲಾರರು.

ಜೈನ, ಬೌದ್ಧ, ಸಿಖ್, ಇಸ್ಲಾಂ ಧರ್ಮದಲ್ಲಿ ಇನ್ನು ಸಂಪೂರ್ಣವಾದ ಅವಕಾಶ ಮಹಿಳೆಗೆ ಸಿಕ್ಕಿಲ್ಲ, ಆದರೆ ಬಸವಾದಿ ಶರಣರು ಮಹಿಳೆಗೆ ಸಮಾನ ಗೌರವ ಕೊಟ್ಟರು. ಸಮಾನತೆಯ ಧರ್ಮ ಲಿಂಗಾಯತ ಧರ್ಮ.
ಶಿವಶ್ಯ ಅನುಭವ ಶಿವಾನುಭವ. ಮಾನವನ ಬದುಕನ್ನು ಆದರ್ಶ ರೂಪವಾಗಿ ಮಾಡುವುದೇ ಶಿವಾನುಭವ ಎಂದು ತುಂಬಾ ಅರ್ಥಪೂರ್ಣವಾಗಿ ಆಶೀರ್ವಚನ ನೀಡಿದರು.
ಗದಗಿನ ಸಾಹಿತಿಗಳು ಸಾಂಸ್ಕೃತಿಕ ಚಿಂತಕರಾದ ಕ್ಷಮಾ ವಸ್ತ್ರದ ಅವರು ಸ್ತ್ರೀ ಸಂವೇದನೆ ಹಾಗೂ ಸವಾಲುಗಳು ವಿಷಯ ಕುರಿತು ಮಾತನಾಡುತ್ತಾ, ಸ್ತ್ರೀ ಸಂವೇದನೆಯು ಅನೇಕ ವಚನಗಳಲ್ಲಿ ಮೂಡಿಬಂದಿದೆ. ಅಂತೆಯೇ ವಚನಕಾರರು ಮೊಟ್ಟ ಮೊದಲ ಸ್ತ್ರೀಪರ ಚಿಂತಕರು. ಹೆಣ್ಣೆಂದು ಜರಿಯುವ ಸಮಾಜಕ್ಕೆ ಅವ್ವ ನಾ ಬರೀ ಬ್ರೂಣವಲ್ಲ, ನಿನ್ನ ಒಡಲ ಅರಳು ಎಂದರೂ ಹೆಣ್ಣನ್ನು ತಾರತಮ್ಯ ಭಾವದಿಂದ ನೋಡುವ ಸಮಾಜ ಇನ್ನು ಇದೆ. ಸಂವೇದನಾಶೀಲ ಶೂನ್ಯ ಹೊಡೆದೋಡಿಸಬೇಕು.
ಹೆಣ್ಣು ಅವ್ವಾ ನಾನು ಮದುವೆ ಒಲ್ಲೆ ಎಂದರೆ, ಆಕೆಯ ಸಂವೇದನೆಗೆ ಬೆಲೆಯಿಲ್ಲ. ಸವಾಲುಗಳ ವೈರುಧ್ಯದ ನಡುವೆ ಹೆಣ್ಣು ಬಾಳಬೇಕಾಗಿದೆ. ಗಂಡು ಸತ್ತ ಹೆಣ್ಣನ್ನು ರಂಡೆ ಮುಂಡೆ ಎನ್ನಬೇಡಿ, ಇಂಥದ್ದೊಂದು ಮಗುವನ್ನು ಹೆಗಲಿಗೆ ಹಾಕಿಕೊಂಡು ಗಂಗಾದೇವಿ ಆಗ್ಯಾಳ. ಪರಸ್ತ್ರೀಯನ್ನು ಮಹಾದೇವಿಯ ಹಾಗೆ ಕಾಣಬೇಕು ಎಂದು ಅನೇಕ ಉದಾಹರಣೆಗಳ ಕೊಟ್ಟು ಸುಂದರವಾಗಿ ಮಾತನಾಡಿದರು.

ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ಅವರು ಜಿಲ್ಲಾ ಕದಳಿ ವೇದಿಕೆ ನಡೆದು ಬಂದ ದಾರಿ ಕುರಿತು ವರದಿ ಮಂಡನೆ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ತಿರ್ಲಾಪೂರ ಅವರು ಉಪನ್ಯಾಸಕರನ್ನು ಪರಿಚರಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಪ್ರೇಮಾ ಗೂಳಗೌಡ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ, ಹಾಗೂ ತಾಲೂಕು ಕದಳಿ ವೇದಿಕೆಯ ಗೌರವಾಧ್ಯಕ್ಷರಾದ ರತ್ನಕ್ಕ ಪಾಟೀಲ ಅವರು ಉಪಸ್ಥಿತರಿದ್ದರು.
ದಾಸೋಹ ಸೇವೆಯನ್ನು ಕದಳಿ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಹಿಸಿದ್ದರು.
ಗಜೇಂದ್ರಗಡದ ಕದಳಿ ಮಹಿಳಾ ವೇದಿಕೆಯ ವತಿಯಿಂದ ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು. ಬಸವಣ್ಣ ಮತ್ತು ಅಕ್ಕಮಹಾದೇವಿಯ ಪಾತ್ರಕ್ಕೆ ಛದ್ಮವೇಷ ಹಾಕಿಕೊಂಡು ಜೀವ ತುಂಬಿದರು. ರೇಖಾ ರಾಜೂರ ಮತ್ತು ತಂಡದ ಸದಸ್ಯರು ನೀಡಿದ ನೃತ್ಯ ಮನಸೂರೆಗೊಂಡಿತು. ನಂದಾ ಹಾಗೂ ಶಾಂತಾ ಪಾಟೀಲ ಇವರಿಂದ ವಚನ ಗಾಯನ ನಡೆಯಿತು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನೆಡೆಸಿದರು. ಧರ್ಮಗ್ರಂಥ ಪಠಣವನ್ನು ಸಾಕ್ಷಿ ಜೋಗಿಮನೆ ಹಾಗೂ ವಚನ ಚಿಂತನವನ್ನು ಚೈತ್ರಾ ಲಕ್ಕುಂಡಿ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನರಾದ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಮತ್ತು ವಿವಿಧ ತಾಲೂಕುಗಳ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
