ಬಸವತತ್ವಗಳ ಶ್ರೇಷ್ಠ ಪ್ರತಿಪಾದಕ ಪೂಜ್ಯ ತೋಂಟದ ಸಿದ್ಧಲಿಂಗ ಶ್ರೀಗಳು

ಎಸ್. ಎಂ. ಜಾಮದಾರ್
ಎಸ್. ಎಂ. ಜಾಮದಾರ್

 (ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ೭೭ನೇ ಜಯಂತಿ ನಿಮಿತ್ಯ ಲೇಖನ)

ಲಿಂಗಾಯತ ಸಮಾಜದಲ್ಲಿ ಇರುವಷ್ಟು ಸ್ವಾಮಿಗಳು ಮತ್ತು ಮಠಗಳು ಭಾರತದಲ್ಲಿರುವ ಇನ್ನಾವುದೇ ಧರ್ಮದಲ್ಲಿ ಇರಲಿಕ್ಕಿಲ್ಲ.

ಬಸವತತ್ತ್ವಗಳ ಬೋಧನೆ, ಪ್ರಚಾರ ಮತ್ತು ಪ್ರಸಾರಕ್ಕಾಗಿ ಹುಟ್ಟಿಕೊಂಡಿರುವ ೩೦೦೦ಕ್ಕೂ ಹೆಚ್ಚು ಲಿಂಗಾಯತ ಮಠಗಳ ಬಹುತೇಕ ಮಠಾಧೀಶರು ಇಂದು ಬಸವ ಧರ್ಮದಿಂದ ವಿಮುಖರಾಗಿದ್ದಾರೆಂದರೆ ಅತಿಶಯೋಕ್ತಿಯಲ್ಲ.

ಇಂತಹ ಸನ್ನಿವೇಶದಲ್ಲಿ ಅತ್ಯಂತ ಅಪರೂಪದ ಮಠಾಧೀಶರಾಗಿ ಬಸವ ತತ್ವಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದುಡಿದ ಅಗ್ರಗಣ್ಯರಲ್ಲಿ ಪೂಜ್ಯ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಒಬ್ಬರು.

ಅವರ ಅಕಾಲಿಕ ಅಗಲಿಕೆಯಿಂದ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಕುರಿತು ಬರೆಯಲು ಹೊರಟರೆ ನೂರೊಂದು ನೆನಪುಗಳು ಧುತ್ತನೆ ಎದ್ದು ನಿಲ್ಲುತ್ತವೆ. ಶ್ರೀಗಳೊಂದಿಗೆ ನಿರಂತರ ಮೂರು ದಶಕಗಳ ನಿಕಟ ಸಂಪರ್ಕ ಹೊಂದಿದವರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳುವ ಭಾಗ್ಯ ನನ್ನದಾಗಿದೆ.

ಅವರಾಡುವ ಪ್ರತಿಯೊಂದು ಮಾತುಗಳಲ್ಲಿ ಸ್ಪಷ್ಟವಾದ ವೈಚಾರಿಕತೆ ಇರುತ್ತಿತ್ತು. ಅವರ ಮಾತು ನೇರ, ನಿಲುವು ದಿಟ್ಟ, ಅವರ ಎದೆಗಾರಿಕೆ ಯಾರಿಗೂ ಹೆದರದ್ದು. ಆದ್ದರಿಂದಲೇ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ಮಂತ್ರಮುಗ್ಧರಾಗಿ ಅವರ ಪ್ರವಚನಗಳನ್ನು, ಭಾಷಣಗಳನ್ನು ಕೇಳಲು ಹತ್ತಾರು ಸಾವಿರ ಜನರು ಬರುತ್ತಿದ್ದರು.

ಅಪ್ಪಟ ಬಸವವಾದಿಗಳಾಗಿದ್ದ ಶ್ರೀಗಳು ಕೇವಲ ಬರೀ ಭಾಷಣಕಾರರಾಗಿರಲಿಲ್ಲ. ತಾವು ಹೇಳುವ ಪ್ರತಿಮಾತಿಗೂ ಅವರು ಬದ್ಧರಾಗಿರುತ್ತಿದ್ದರು. ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಅದೇ ನುಡಿದಂತೆ ನಡೆಯುವ ಬಸವ ಪಥ.

ಸಾರ್ವಜನಿಕ ಹಿತಕ್ಕೆ ಧಕ್ಕೆ ತರುವಂತಹ ಯಾವುದೇ ಸಮಸ್ಯೆ ಇದ್ದರೆ ಅದನ್ನು ಎದುರಿಸಲು ಶ್ರೀಗಳು ಎಂತಹದೇ ಉಗ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಧೈರ್ಯವಾಗಿ ಅಂತಹ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದರು.

ಜಪಾನ ಮೂಲದ ಪೋಸ್ಕೊ ಉದ್ಯಮಕ್ಕೆ ನಾಲ್ಕಾರು ಸಾವಿರ ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾದಾಗ ಅದನ್ನು ವಿರೋಧಿಸಿ ನಡೆದ ಚಳುವಳಿಯ ಮುಂದಾಳುತನವನ್ನು ಪೂಜ್ಯರು ವಹಿಸಿದ್ದರು. ಆದ್ದರಿಂದ ಸರ್ಕಾರ ಆ ಯೋಜನೆಯನ್ನು ಕೈ ಬಿಟ್ಟಿತು.

ನಾಡುನುಡಿಯ ಉಳಿವಿಗಾಗಿ ನಡೆದ ಗೋಕಾಕ ಚಳುವಳಿಯಲ್ಲಿ ಶ್ರೀಗಳು ಸಕ್ರಿಯರಾಗಿದ್ದರು. ಆ ಚಳುವಳಿ ಸಫಲವಾಯಿತು. ಮಹಾದಾಯಿ ನದಿನೀರಿನ ಬೇಡಿಕೆ ಮುಂದಿಟ್ಟು ರೈತರು ನಡೆಸಿದ ಚಳುವಳಿಗೆ ಅವರು ಬೆಂಬಲಿಗರಾಗಿದ್ದರು. ಸುದೈವದಿಂದ ಕರ್ನಾಟಕಕ್ಕೆ ಅಲ್ಪಪ್ರಮಾಣದ ನೀರಾದರೂ ದೊರೆಯಿತು.

ಅದೇ ರೀತಿ ಬಸವ ಸ್ಥಾಪಿತ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆದ ಬಹುವ್ಯಾಪಕ ಚಳುವಳಿಗೆ ಪೂಜ್ಯರು ಬೆನ್ನೆಲುವಾಗಿ ನಿಂತಿದ್ದರು. ತಮ್ಮ ಮಠದ ವತಿಯಿಂದ ನಡೆಯುವ ಜಾತ್ರೆಯನ್ನು ಜಾತ್ಯಾತೀತವಾಗಿ ನಡೆಸಲು ಜಾತ್ರೆಯ ಸಂಘಟನಾ ಸಮಿತಿಯಲ್ಲಿ ಎಲ್ಲ ಜಾತಿಯ ಮತ್ತು ಧರ್ಮಗಳ ಉತ್ಸಾಹಿಗಳನ್ನು ಸೇರಿಸಿಕೊಳ್ಳುತ್ತಿದ್ದರು. ಸಮಾನತೆ ಮತ್ತು ಸೌಹಾರ್ದತೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ನಡೆಸುತ್ತಿದ್ದರು.

ಅದನ್ನು ಗುರುತಿಸಿದ ಭಾರತ ಸರ್ಕಾರವು ಶ್ರೀಗಳಿಗೆ ರಾಷ್ಟ್ರೀಯ ಭಾವೈಕ್ಯತೆಗೆ ಮೀಸಲಿಟ್ಟ ಅತ್ತ್ಯುನ್ನತ ಸನ್ಮಾನವನ್ನು ನೀಡಿ ಗೌರವಿಸಿತ್ತು. ಲಿಂಗಾಯತ ಸಮಾಜದಲ್ಲಿ ಈಗ ಅಸ್ತಿತ್ವದಲ್ಲಿರುವ ವಿವಿಧ ಜಾತಿಗಳ ಜನರನ್ನು ಒಂದುಗೂಡಿಸಿ, ಬಸವಣ್ಣನವರ ಕನಸನ್ನು ಸಾಕಾರಗೊಳಿಸುವ ಉದ್ಧೇಶ ಅವರಿಗಿತ್ತು.

ಬಸವ ಧರ್ಮದ ಪ್ರಸಾರದ ಅಂಗವಾಗಿ ಉತ್ತರ ಪ್ರದೇಶದ ದಲಿತ ಜಾಟವ ಸಮಾಜದ ಸಾವಿರಾರು ಜನರಿಗೆ ಲಿಂಗ ಕಟ್ಟುವ ಮೂಲಕ ಲಿಂಗಾಯತ ಧರ್ಮದ ದೀಕ್ಷೆ ನೀಡಿದ್ದರು. ಪ್ರತಿವರ್ಷ ನಡೆಯುವ ತೋಂಟದಾರ್ಯ ಮಠದ ಜಾತ್ರೆಗೆ ನೂರಾರು ಜಾಟವ ಲಿಂಗಾಯತರು ಭಾಗವಹಿಸುತ್ತಿದ್ದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಬಸವಣ್ಣನವರ ನಂತರ ಲಿಂಗಾಯತ ಧರ್ಮವನ್ನು ದೊಡ್ಡ ಪ್ರಮಾಣದಲ್ಲಿ ಉಳಿಸಿ ಬೆಳೆಸಿದ ಶ್ರೇಯಸ್ಸು ೧೫ನೇ ಶತಮಾನದ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳಿಗೆ ಮತ್ತು ನಂತರ ೨೦ ನೇ ಶತಮಾನದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.

ತೋಂಟದಾರ್ಯರನ್ನು ತುಂಬ ಪೂಜ್ಯಭಾವನೆಯಿಂದ ಗೌರವದಿಂದ ಕಾಣುತ್ತಿದ್ದ ಕೆಳದಿಯ ಅರಸರು ಮಠಕ್ಕೆ ನೀಡಿದ್ದ ಬಂಗಾರದ ಕಿರೀಟ, ಬಂಗಾರ ಮತ್ತು ಬೆಳ್ಳಿಯ ಕೈಬಡಿಗೆ, ಬಂಗಾರದಲ್ಲಿ ಮಾಡಿದ ನೂರಾರು ಪೂಜಾ ಸಾಮಗ್ರಿಗಳು, ಆಸನಗಳು ಮಠದಲ್ಲಿವೆ. ಅಡ್ಡಪಲ್ಲಕ್ಕಿಯ ಅಧಿಕಾರವೂ ಈ ಮಠಕ್ಕಿತ್ತು. ಆದರೆ ಅವೆಲ್ಲವನ್ನೂ ಭದ್ರವಾಗಿ ತೆಗೆದಿಟ್ಟು ಅತ್ಯಂತ ಸರಳವಾದ ಕಾವಿಬಟ್ಟೆ, ಕಟ್ಟಿಗೆಯ ಕೈಬಡಿಗೆ, ಸಾದಾ ಆಸನಗಳು, ಅಡ್ಡಪಲ್ಲಕ್ಕಿಯನ್ನು ನಿಲ್ಲಿಸಿದ್ದು ಅವರ ಶರಣ ಜೀವನಕ್ಕೆ ಹಿಡಿದ ಕನ್ನಡಿಯಾಗಿದ್ದವು.

ಅವರು ನಡೆ ಮತ್ತು ನುಡಿಯಲ್ಲೂ ಅಪ್ಪಟ ಶರಣ ಜೀವಿಗಳಾಗಿದ್ದರು. ಶರಣರ ಸ್ಮಾರಕಗಳನ್ನು ಸಂರಕ್ಷಿಸುವುದು ಮತ್ತು ಬೆಳೆಸುವುದು ಅವರ ಇನ್ನೊಂದು ಕನಸಾಗಿತ್ತು. ಸುದೈವದಿಂದ ಕೂಡಲ ಸಂಗಮ ಮತ್ತು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗಳಲ್ಲಿ ಶ್ರೀಗಳು ಸದಸ್ಯರಾಗಿದ್ದು ಅತ್ಯಂತ ಸೂಕ್ತವಾದ ಮತ್ತು ಮಹತ್ವದ ಸಲಹೆ ಸೂಚನೆ ಮತ್ತು ವಿಚಾರಗಳನ್ನು ಮಂಡಿಸಿದ್ದರಿಂದ ಆ ಸ್ಥಳಗಳಲ್ಲಿನ ಸ್ಮಾರಕಗಳನ್ನು ಚೆನ್ನಾಗಿ ಸಂರಕ್ಷಿಸಲು ಸಾಧ್ಯವಾಗಿದೆ.

ಕೃಷಿ ಅವರ ಅಚ್ಚುಮೆಚ್ಚಿನ ಕಾಯಕವಾಗಿತ್ತು. ಅದರ ಗುರುತಾಗಿ ಅವರ ಮಠಕ್ಕೆ ಸೇರಿದ ಡಂಬಳ ಮತ್ತು ಗದುಗಿನಲ್ಲಿ ಬರಡಾಗಿ ಬಿದ್ದಿದ್ದ ಜಮೀನುಗಳು ಇಂದು ಆಧುನಿಕ ಕೃಷಿಯ ಅನುಕರಣೆಯಿಂದ ಹಚ್ಚಹಸಿರಾಗಿ ಕಂಗೊಳಿಸುತ್ತಿವೆ.

ಶ್ರೀಗಳನ್ನು ಕೆಲವರು ಪುಸ್ತಕದ ಸ್ವಾಮಿಗಳು ಎಂದು ಕರೆಯುತ್ತಾರೆ. ಅದು ಅಕ್ಷರಶಃ ಸತ್ಯ! ಕನ್ನಡ ಸಾಹಿತ್ಯದಲ್ಲಿ ಅವರು ಡಾಕ್ಟರೇಟ್ ಪದವಿ ಪಡೆದಿದ್ದರು. ಶರಣ ಸಾಹಿತ್ಯದಲ್ಲಿ ಆಳವಾದ ಪಾಂಡಿತ್ಯವನ್ನು ಹೊಂದಿದ್ದರು. ತುಲನಾತ್ಮಕವಾಗಿ ಜಗತ್ತಿನ ಬಹುತೇಕ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಬಸವಣ್ಣನವರು, ನೂರಾರು ಶರಣರು, ಲಿಂಗಾಯತ ಧರ್ಮ, ಲಿಂಗಾಯತ ನಾಯಕರು, ಬುದ್ಧಿಜೀವಿಗಳು, ಸಮಾಜ ಸುಧಾರಕರ ಬಗ್ಗೆ ಇಂದಿನ ಜನರಿಗೆ ಗೊತ್ತಿಲ್ಲದ ಮತ್ತು ಮುಂದಿನ ಪೀಳಿಗೆಗಳು ಮರೆತುಬಿಡಬಹುದಾದ ಅನೇಕ ಮಹತ್ವದ ಸಂಗತಿಗಳು ಅವರಿಗೆ ಗೊತ್ತಿದ್ದವು. ಅವುಗಳನ್ನು ಪ್ರಕಟಿಸಿ ಪ್ರಚಾರಗೊಳಿಸುವ ಉದ್ಧೇಶದಿಂದ ನಾಲ್ಕಾರು ಪ್ರಕಟನಾ ಮಾಲಿಕೆಗಳನ್ನು ಆರಂಭಿಸಿದ್ದರು. ಲಿಂಗಾಯತ ಪುಣ್ಯಪುರುಷ ರತ್ನಮಾಲಿಕೆ, ಅಪ್ರಕಟಿತ ಗ್ರಂಥಮಾಲಿಕೆ, ಲಿಂಗಾಯತವನ್ನು ಕುರಿತು ಡಾಕ್ಟರೇಟ್ ಪ್ರಬಂಧಗಳ ಪ್ರಕಟಣೆ ಇತ್ಯಾದಿಗಳ ಮೂಲಕ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಮಹತ್ವದ ವ್ಯಕ್ತಿಗಳನ್ನು ಲೇಖಕರನ್ನು ಪ್ರತಿವರ್ಷ ಶ್ರೀಮಠದ ವತಿಯಿಂದ ಜಾತ್ರಾ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿದ್ದರು. ಬಸವ ಪ್ರಶಸ್ತಿಯನ್ನು ನೀಡುತ್ತಿದ್ದರು. ಮೂಢನಂಬಿಕೆಗಳ ಗೂಡಾಗಿದ್ದ ವಾರ್ಷಿಕ ಜಾತ್ರೆಗಳನ್ನು ಸಾಮಾಜಿಕ, ಆರ್ಥಿಕ, ಕೃಷಿ, ಉದ್ಯೋಗ ಇತ್ಯಾದಿ ಕ್ಷೇತ್ರಗಳಿಗೆ ಉಪಯೋಗವಾಗುವಂತೆ ಮಾರ್ಪಡಿಸಿ ನಡೆಸುವ ಯೋಜನೆಯನ್ನು ಶ್ರೀಗಳು ಪ್ರತಿವರ್ಷವೂ ನಡೆಸುತ್ತ ಬಂದರು.

ಇಂದು ತೋಂಟದಾರ‍್ಯ ಜಾತ್ರೆಯೆಂದರೆ ಅದೊಂದು ಶೈಕ್ಷಣಿಕ ಪ್ರವಾಸದಂತೆ ಭಾಸವಾಗುತ್ತದೆ. ಲಕ್ಷೋಪಲಕ್ಷ ಜನರು ಅವುಗಳಲ್ಲಿ ಭಾಗವಹಿಸುತ್ತಾರೆ. ಸನ್ಯಾಸಿ ಜೀವನ ಏಕತಾನತೆ ಒಂದು ಸತ್ವ ಪರೀಕ್ಷೆ! ಸನ್ಯಾಸಿಯಾದವನು ತನ್ನ ವೈಯಕ್ತಿಕ ಜೀವನವನ್ನು ಸಾಮಾಜಿಕೀಕರಣಗೊಳಿಸದಿದ್ದರೆ ಆ ಸಾಮಾಜೀಕರಣದಲ್ಲಿ ಆಧ್ಯಾತ್ಮಿಕತೆ ಇಲ್ಲದಿದ್ದರೆ ಅದು ಮಹಾ ಅನಾಹುತಕ್ಕೆ ಕಾರಣವಾಗುತ್ತದೆ. ಅವೆರಡರ ಸಾಧನೆಯಲ್ಲಿಯೇ ಸನ್ಯಾಸಿ ಜೀವನದ ಸಾರ್ಥಕತೆ ಇದೆ ಎಂಬುದು ಅವರ ಶ್ರೇಷ್ಠ ನಿಲುವು.

ಬಸವತತ್ತ್ವಗಳನ್ನೇ ಉಸಿರಾಡಿಸಿ, ಅವುಗಳಿಗಾಗಿಯೇ ತಮ್ಮ ಸಂಪೂರ್ಣ ಜೀವನವನ್ನು ಸವೆಸಿದ ಶ್ರೀ ಸಿದ್ಧಲಿಂಗ ಶ್ರೀಗಳು ವೈಜ್ಞಾನಿಕತೆಗೆ ಒತ್ತುಕೊಟ್ಟವರು. ಗೊಡ್ಡು ಪುರಾಣಗಳನ್ನು, ಅತಾರ್ಕಿಕ ಅಸಂಬದ್ಧ ಆಚರಣೆಗಳನ್ನು, ಮೂಢನಂಬಿಕೆಗಳನ್ನು ಒಪ್ಪುವವರಲ್ಲ. ಅಸಮಾನತೆ, ಜಾತೀಯತೆಯಂತಹ ಸಂಗತಿಗಳು ತಮ್ಮ ಅರ್ಥ ಕಳೆದುಕೊಂಡಿವೆ. ಬಸವಧರ್ಮ ವೈಜ್ಞಾನಿಕ, ತಾರ್ಕಿಕ ವಿಚಾರಗಳ ಆಚಾರಗಳ ಸಂಹಿತೆಯಾಗಿದೆ. ಇಂದಿಲ್ಲ ನಾಳೆಯಾದರೂ ಶ್ರೀಗಳ ಬಸವಪ್ರಣೀತ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಯಶಸ್ವಿಯಾಗುವುದೇ ಹೊರತು ಗೊಡ್ಡು ಕಂದಾಚಾರಗಳಲ್ಲ.

ಆ ಕಾಲ ಬೇಗ ಬರುತ್ತದೆ. ಆಗ ಪೂಜ್ಯ ಸಿದ್ಧಲಿಂಗ ಶ್ರೀಗಳು ಕಂಡ ಬಸವನ ಕನಸುಗಳು ನನಸಾಗುತ್ತವೆ. ಅವರು ಶಾಶ್ವತವಾಗಿ ನಮಗೆ ಆದರ್ಶ ಪುರುಷರಾಗಿ, ಮಾರ್ಗದರ್ಶಕರಾಗಿ, ಶಕ್ತಿಯಾಗಿ, ಧೈರ್ಯದ ಖಣಿಯಾಗಿ ನಮ್ಮೆಲ್ಲರ ಸ್ಮೃತಿಪಟಲದಲ್ಲಿರುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ