‘ಬಸವ ಉತ್ಸವ’ದ ಎರಡನೇ ದಿನ ನಡೆದ ಮಹಿಳಾ ಸಮಾವೇಶ

ರಾಯಚೂರು

ರಾಷ್ಟ್ರೀಯ ಬಸವದಳ ಯರಮರಸ್ ಹಾಗೂ ಬಸವಪರ ಸಂಘಟನೆಗಳ ಜೊತೆಗೂಡಿ ಎಡದೊರೆನಾಡು ರಾಯಚೂರಿನ ಗಂಜ್ ಕಲ್ಯಾಣ ಮಂಟಪದಲ್ಲಿ, ೧೨-೧೩ರಂದು ಎರಡು ದಿನದ ‘ಬಸವ ಉತ್ಸವ’ವನ್ನು ಯಶಸ್ವಿಯಾಗಿ ನಡೆಸಿದವು.

ಮೊದಲ ದಿನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮುಖವನ್ನು ಪೂಜ್ಯ ಸದ್ಗುರು ಮಾತೆ ಸತ್ಯಾದೇವಿಯವರು ಬಸವ ಮಂಟಪ, ಬೀದರ ಮತ್ತು ಪೂಜ್ಯ ಡಾ. ಐನ್ನಬಸವಾನಂದ ಸ್ವಾಮೀಜಿ ವಹಿಸಿಕೊಂಡಿದ್ದರು. ಸ್ಥಳೀಯ ಶಾಸಕರಾದ ಡಾ. ಶಿವರಾಜ ಪಾಟೀಲ, ಶಹಪುರದ ಬಸವ ಮಾರ್ಗ ಪತ್ರಿಕೆಯ ಶರಣರಾದ ವಿಶ್ವಾರಾಧ್ಯ ಸತ್ಯಂಪೇಟೆ, ಬಸವ ದಳದ ಸ್ವಾಮಿಗಳು ಮತ್ತು ಕವಿತಾಳದ ಉದ್ಯಮಿ ಹಾಗೂ ಬಸವ ಅನುಯಾಯಿ ಅಬ್ದುಲ್ ಕರೀಮಸಾಬರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರಂಭದಲ್ಲಿ ವಚನ ಗಾಯನ ನಂತರ ನಾಡಗೀತೆ ಹಾಡಲಾಯಿತು. ಪೂಜ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಸವಧರ್ಮ ಧ್ವಜಾರೋಹಣ ನಂತರ ಶಾಸಕರಿಂದ ಬಸವ ದಿನಚರಿ ಕ್ಯಾಲೆಂಡರ್ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ರುವಾರಿ ಶರಣ ಸಿದ್ರಾಮಪ್ಪ ಪಾಟೀಲರು ಪ್ರಾಸ್ತಾವಿಕ ನುಡಿಗಳನ್ನಾಡಿ, ಇದೇ ರೀತಿ ಪ್ರತಿವರ್ಷವೂ ಬಸವ ಸಂಘಟನೆಗಳ ಮೂಲಕ ಬಸವ ಉತ್ಸವ ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಅಬ್ದುಲ್ ಕರೀಮಸಾಬರು ಬಸವಣ್ಣನ ಅಂದಿನ ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟ, ಶರಣ ಸಂಘಟನೆ, ಕುರಿತು ಮಾತನಾಡಿ, ಕವಿತಾಳದಲ್ಲಿ ಬಸವ ಕೇಂದ್ರದ ವತಿಯಿಂದ ತಾವು ನಡೆಸಿದ ನೂರಾರು ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಅತಿಥಿಯಾಗಿ ಆಗಮಿಸಿದ್ದ ಶರಣ ವಿಶ್ವಾರಾಧ್ಯ ಸತ್ಯಂಪೇಟೆ, ಬಸವಣ್ಣ ರಾಜಕೀಯದಲ್ಲಿ ಇದ್ದು ಪ್ರಧಾನಿಯಾಗಿ ಸಾಮಾಜಿಕ ತತ್ವ ಅಳವಡಿಸಿಕೊಂಡು ರಾಜ್ಯಭಾರ ಮಾಡಿದ ಕುರಿತು ಮಾತನಾಡಿದರು.

ಸ್ವಾಮಿಗಳು ರವಿ ಬೋಸರಾಜು ಅವರಿಗೆ ರಾಯಚೂರಿನಲ್ಲಿ ಬಸವ ಮಂಟಪ ಕಟ್ಟಲು ಸ್ಥಳದ ಪ್ರಸ್ಥಾವನೆ ಮಾಡಿದಾಗ, ಕಾಂಗ್ರೆಸ್ ಮುಖಂಡರು ತಮಗೆ ಸಾಧ್ಯವಾದ ಎಲ್ಲಾ ರೀತಿಯ ಸಹಾಯ ಸಲ್ಲಿಸುವುದಾಗಿ ಭರವಸೆ ಇತ್ತರು.

ಸಾಯಂಕಾಲದ ಮಹಿಳಾ ಸಮಾವೇಶ ನಡೆಯಿತು. ಪೂಜ್ಯ ಸದ್ಗುರು ಮಾತೆ ಸತ್ಯಾದೇವಿಯವರು ಸಾನಿಧ್ಯ ವಹಿಸಿದ್ದರು, ಗೋಷ್ಠಿಯ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ಸಾಹಿತಿ ಶರಣೆ ಡಾ.ಸರ್ವಮಂಗಳಾ ಸಕ್ರಿ ವಹಿಸಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಸರ್ವಮಂಗಳಾ ಸಕ್ರಿ ಈ ಮಹಿಳಾ ಗೋಷ್ಟಿ 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸುತ್ತದೆ. ಮಹಿಳೆಯರ ಈ ತತ್ವ ಮಂಟಪ ವಿಶಿಷ್ಟವಾದದ್ದು. ಇವರ ಭಾಷೆ ಸರಳವಿರಬಹುದು. ಆದರೆ ಇವರ ತತ್ವ ಯಾವ ಲೇಖಕ, ವಿದ್ವಾಂಸರಿಗೂ ಕಡಿಮೆ ಇಲ್ಲ. ವಚನ ವ್ಯಾಖ್ಯಾನ ಸಮಾಜಮುಖಿ ಚಿಂತನೆಗಳೊಂದಿಗೆ ಕೌಟುಂಬಿಕ ಸಮಸ್ಯೆಗಳೊಂದಿಗೆ, ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡುವ ಉದ್ದೇಶಗಳು ಇಲ್ಲಿವೆ.

ಶರಣರ ಸಂಸ್ಕೃತಿ ಮನೆ ಮನಗಳಲ್ಲಿ ಬೆಳಕಾಗಬೇಕೆಂಬ ಆಶಯವಾಗಿತ್ತು. ಬಸವ ತತ್ವದ ಸರಳತೆಯನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಸ್ತ್ರೀ ಸ್ವಾತಂತ್ರ್ಯ ಸಮಾನತೆಯನ್ನು ನಾವಿಂದು ಅರಿಯಬೇಕಾಗಿದೆ. ಕಲ್ಯಾಣ ನಾಡಿನ ಬಸವಣ್ಣನವರನ್ನು ನಾವು ಕಂಡಿಲ್ಲ, ಆದರೆ ಕಲ್ಯಾಣದ ಬಸವಣ್ಣನವರ ಆದರ್ಶ ಮತ್ತು ಮೌಲ್ಯಗಳ ಕಲ್ಪನೆ ನಮಗಿದೆ, ಎಂದು ಹೇಳಿದರು.

ವೇದಿಕೆಯಲ್ಲಿ ಶರಣೆ ಶಿವಗಂಗಮ್ಮ ಅಂದ್ರಾಳು ರಾ.ಬ.ದಳ ಬಳ್ಳಾರಿ, ಶರಣೆ ದೇವೇಂದ್ರಮ್ಮ ಶರಣು ವಿಶ್ವ ವಚನ ಫೌಂಡೇಶನ್ ಗೌರವಾಧ್ಯಕ್ಷೆ, ರಾಯಚೂರು, ಶರಣೆ ಸುರೇಖಾ.ಪಿ ಅಧ್ಯಕ್ಷರು ಭಗೀರಥ ಸಮಾಜ ಮಹಿಳಾ ಘಟಕ ರಾಯಚೂರು, ಶರಣೆ ಬಸವ ಜ್ಯೋತಿ, ಶರಣೆ ಚನ್ನಬಸಮ್ಮ ಕಂಪ್ಲಿ ರಾ.ಬ.ದಳ ಗಂಗಾವತಿ, ಶರಣೆ ಜಗದೇವಿ ಚಟ್ಟಿ ರಾ.ಬ.ದಳ ಕಲಬುರ್ಗಿ, ಶರಣೆ ಗಿರಿಜಮ್ಮ ಮಂಡ್ಯಾಳ ರಾ.ಬ.ದಳ ಧಾರವಾಡ, ಶರಣೆ ಬಸಮ್ಮ ಹಿರೇಮಠ ಶಿಕ್ಷಕಿ ರಾ.ಬ.ದಳ ಸಿರಗುಪ್ಪ, ಶರಣೆ ಸರಸ್ವತಿ ತಾಯಣ್ಣ ರಾಯಚೂರು, ಬೆಟ್ಟಪ್ಪ ಕಸ್ತೂರಿ ಉಪಸ್ಥಿತರಿದ್ದು, ಬಸವ ಉತ್ಸವ ಕುರಿತ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ರಾ.ಬ.ದಳ ರಾಯಚೂರು ಶರಣೆ ಹೇಮಾವತಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *