ಬಸವಕಲ್ಯಾಣ:
ನಡೆ – ನುಡಿಗಳಲ್ಲಿ ಒಂದಾದ ಭಕ್ತಿ – ಪ್ರಾಮಾಣಿಕ ನಡೆಯ ಕಾರಣಕ್ಕಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದ ಬಸವಾದಿ ಶರಣರ ತತ್ವಗಳು ಇಂದಿನ ಯುವ ಪೀಳಿಗೆಯ ಬದುಕಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಬಲ್ಲವು ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಹೇಳಿದರು.
ನಗರದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಹಮ್ಮಿಕೊಂಡ ಶರಣೆ ದಾನಮ್ಮದೇವಿ ಉತ್ಸವ ಹಾಗೂ 4ನೇ ಶರಣ ಸಮಾಗಮ, ಎರಡನೇ ದಿನದ ಉತ್ಸವದಲ್ಲಿ ಮಧ್ಯಾಹ್ನ ಜರುಗಿದ ಶರಣ ಗೋಷ್ಠಿ – ಯುವ ಶರಣ ಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ನೇತೃತ್ವ ವಹಿಸಿ ಮಾತನಾಡಿದರು.

ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಒದ್ದಾಡುತ್ತಿರುವ ಯುವಕರಿಗೆ ಶರಣರ ಸರಳ ಮತ್ತು ನಿಸ್ವಾರ್ಥ ಜೀವನ ಮಾದರಿಯಾಗಬೇಕಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ ಜಾತಿ, ವರ್ಗಗಳ ಶರಣರ ಸಮ್ಮುಖದಲ್ಲಿ ಸಮಾನತೆ, ಸ್ತ್ರೀ ಸಬಲೀಕರಣ, ಭಕ್ತಿಮಾರ್ಗ, ದಾಸೋಹ, ಕಾಯಕ ತತ್ವವನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಮಹಾಮಾನವತಾವಾದಿಯಾಗಿದ್ದರು. ಪ್ರಸ್ತುತ ಅವರ ತತ್ವಗಳ ಪರಿಪಾಲನೆ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ನೇತೃತ್ವವನ್ನು ವಹಿಸಿದ್ದ ಸಂಚಾರಿ ಜಂಗಮರಾದ ಬಸವದೇವರು ಮಾತನಾಡಿ, ಯುವಜನತೆ ಬಸವಣ್ಣ, ಸಮಕಾಲಿನ ಶರಣರ, ದಾರ್ಶನಿಕರ ವಚನಗಳ ಅಧ್ಯಯನ ಮಾಡುವ ಮೂಲಕ ಅವರ ತತ್ವ, ಸಿದ್ಧಾಂತಗಳನ್ನು ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಸ್ಮರಿಸಿ, ಪಾಲಿಸಬೇಕು. ಬಸವಪ್ರಭು ಸ್ವಾಮಿಜಿಗಳು ಯುವ ಜನತೆಗೆ ಬಸವ ತತ್ವ ಮುಟ್ಟಿಸಲು ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾಯಕ ತತ್ವದಲ್ಲಿ ಯುವಕರ ಪಾತ್ರ ವಿಷಯದ ಕುರಿತು ಸಿದ್ರಾಮ ಶೆಟಗಾರ, ಹೆಣ್ಣು ದೇಶದ ಕಣ್ಣು ವಿಷಯದ ಕುರಿತು ಸಿದ್ಧಪ್ಪ ಮೂಗನೂರು ಹಾಗೂ ಬಸವತತ್ವದಲ್ಲಿ ಯುವಕರ ಪಾತ್ರ ವಿಷಯದ ಕುರಿತು ಸಿದ್ಧವೀರ ಸಂಗಮ ಅವರು ಅನುಭಾವ ನೀಡಿದರು.
ಪ್ರೊ. ನಾಗಪ್ಪ ಮುಗನೂರ ಅವರು ಆಶಯ ನುಡಿಯನ್ನು ಆಡಿದರು. ಅಧ್ಯಕ್ಷತೆಯನ್ನು ಪ್ರಕಾಶ ಗಂದಿಗುಡಿ ಅವರು ವಹಿಸಿದ್ದರು. ಇದೆ ಸಂದರ್ಭದಲ್ಲಿ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯ, ಸಾಮಾಜಿಕ, ಪರಿಸರ ಸಂರಕ್ಷಣೆ ವಿಭಾಗಗಳಲ್ಲಿ ಸೇವೆ ಗೈಯುತ್ತಿರುವ ಸಂಗಮೇಶ ಎನ್. ಜವಾದಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಪ್ರವೀಣ ಎಕಲಾರೆ ಅವರಿಂದ ವಚನ ಗಾಯನ ಜರುಗಿತು. ತೋಗಲೂರಿನ ಶರಣರಿಂದ ಕೋಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಮಾಹಾಮನೆ ಕಾರ್ಯಾಧ್ಯಕ್ಷರಾದ ದಿಲೀಪ ಶಿಂದೆ, ಗೌರವಾಧ್ಯಕ್ಷರಾದ ಲಕ್ಷ್ಮಣರಾವ ಹಂದಿಕೇರಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಪಾಟೀಲ, ರವಿ ಪಾಪಡೆ, ಮನೋಹರರಾವ ಮೇಧಾ, ಶೌರ್ಯ ಜವಾದಿ, ಪ್ರದೀಪ, ಭೀಮರಾವ ಬಿರಾದಾರ, ಬಸವಕುಮಾರ ಕೆಂಗನಾಳ, ಪ್ರಗತಿಪರ ಚಿಂತಕರು, ಬಸವಾಭಿಮಾನಿಗಳು ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.
