ಬಸವಕಲ್ಯಾಣ
ನಗರದ ಮುಖ್ಯರಸ್ತೆ ವಿಭಜಕಗಳ ಮಧ್ಯದಲ್ಲಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಹಾಕಿದ, ಬಸವಾದಿ ಶರಣರ ವಚನ ಸಂದೇಶ ಫಲಕಗಳು ಹಾಳಾಗಿ ಹೋಗಿದ್ದು, ಹೊಸ ಫಲಕಗಳನ್ನು ಅಳವಡಿಸಬೇಕೆಂದು ರಾಷ್ಟ್ರೀಯ ಬಸವ ದಳ ಮತ್ತು ಬಸವ ಕೇಂದ್ರಗಳು, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಒತ್ತಾಯಿಸಿವೆ.

ಈ ಬಗ್ಗೆ ಶನಿವಾರ ಅವರಿಗೆ ಸಲ್ಲಿಸಿದ ಮನವಿಪತ್ರದಲ್ಲಿ, ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ, ಜಗತ್ತಿಗೆ ಮೊಟ್ಟಮೊದಲು ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ಕೊಟ್ಟು ಮತ್ತು ಆ ಮಂಟಪದಲ್ಲಿ ಬಸವಾದಿ ಶರಣರು ವಚನ ರಚನೆ ಮಾಡುವುದರ ಮುಖಾಂತರ ಕನ್ನಡ ಹಾಗೂ ಜಗತ್ತಿನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು.

ಮಹತ್ವದ ಅನುಭವ ಮಂಟಪ, ವಚನಗಳು ಜನ್ಮತಾಳಿದ ಈ ಪಾವನ ನೆಲ ನೋಡಲು ನಿತ್ಯ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಆ ಪ್ರವಾಸಿಗರಿಗೆ ಕಾಣಲೆಂದು 2023ರ ‘ಬಸವ ಉತ್ಸವ’ ಸಂದರ್ಭದಲ್ಲಿ ಪ್ರಾಧಿಕಾರದಿಂದ ಈ ವಚನ ಸಂದೇಶದ ಫಲಕಗಳನ್ನು ಅಳವಡಿಸಲಾಗಿತ್ತು. ಇದೀಗ ಅವೆಲ್ಲ ಮಾಸಿವೆ, ಹಾಳಾಗಿ ಹೋಗಿವೆ. ಮತ್ತೆ ಗುಣಮಟ್ಟದ ಫಲಕಗಳನ್ನು ಅಳವಡಿಸಿ ನಗರವನ್ನು ಸುಂದರಗೊಳಿಸಬೇಕು ಮತ್ತು ಶರಣರ ವಚನಗಳು ಮತ್ತು ಸಂದೇಶ ಸಾರಬೇಕೆಂದು ಬಸವದಳದ ಬಸವಕಲ್ಯಾಣ ತಾಲೂಕ ಅಧ್ಯಕ್ಷ ರವೀಂದ್ರ ಕೋಳಕೂರ ಹಾಗೂ ಹುಲಸೂರ ತಾಲೂಕ ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಆಗ್ರಹಿಸಿದ್ದಾರೆ.