ಬಸವ ನಿಂದನೆ ಮಾಡುವ ಅವಿವೇಕಿಗಳ ಹಿಂದೆ ದೊಡ್ಡ ಕುತಂತ್ರಿಗಳಿದ್ದಾರೆ

ಉಗ್ರ ಸನಾತನಿಗಳಿಗೆ ೧೨ನೇ ಶತಮಾನದ  ಕಾಯಕ ಜೀವಿಗಳ ಚಳುವಳಿಯು ನುಂಗಲಾರದ ತುತ್ತಾಗಿದೆ.

ಕಲಬುರ್ಗಿ

ಇತ್ತೀಚೆಗೆ ಫೇಸ್ ಬುಕ್ ನಲ್ಲಿ  ಅವಿವೇಕಿ  ವ್ಯಕ್ತಿಯೊಬ್ಬ ಬಸವಣ್ಣನವರು ಮತ್ತು ಅಕ್ಕಮಹಾದೇವಿಯ ಕುರಿತು ತೀರ ಅಶ್ಲೀಲ ಭಾಷೆ ಬಳಸಿ ಬೈದು ಪೋಸ್ಟ್ ಹಾಕಿದ್ದಾನೆ. ಬಸವಾಭಿಮಾನಿಗಳು  ದೂರು ದಾಖಲಿಸಿದ್ದಾರೆ. ಪೊಲೀಸ್ರು ಪೋಸ್ಟ್ ಹಾಕಿದವರ ಜಾಡು ಅರಸಿ ಹೋದಾಗ ಸಿಕ್ಕಿದ್ದು ಎರಡೂ ಕಾಲಿಲ್ಲದ ತೀರ ಅಮಾಯಕ ಮೂರ್ಖನಂತೆ ಕಾಣುತ್ತಿರುವ ಒಬ್ಬ ಬಡ ಖೂಳ ಮನುಷ್ಯ.  ಬಡತನವೇ ಮೈವೆತ್ತಂತಿರುವ ಆಕೃತಿ. ಸಾಮಾಜಿಕ ಎಚ್ಚರ ಅಥವಾ ಕನಿಷ್ಟ ಸಾಮಾನ್ಯ ಜ್ಞಾನವೂ ಇರದ ಅಬ್ಬೇಪಾರಿ ಎನಿಸದೆ ಇರದು. ಹೀಗಿರುವಾಗಲೂ ಆತ ಬಸವಣ್ಣ ಮತ್ತು ಅಕ್ಕಮಹಾದೇವಿಯಂಥ ಮಹಾನ್ ಹಸ್ತಿಗಳ ಕುರಿತು ಇಷ್ಟು ಬೇಧಡಕ್ ಮಾತಾಡುವ ಛಾತಿ ತೋರಿದ್ದು ಹೇಗೆ?  ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸಂದರ್ಭದಲ್ಲಿ, ಬಸವಾದಿ ಶರಣ ಸಂದೋಹ ಮತ್ತು ಅವರ ಕ್ರಾಂತಿಕಾರಿ ನಿಲುವುಗಳ ಬಗೆಗೆ  ದೇಶವ್ಯಾಪಿ ಎಚ್ಚರ ಮೂಡುತ್ತಿರುವ ಹೊತ್ತಲ್ಲಿ ಜುಜುಬಿ ವ್ಯಕ್ತಿಯೊಬ್ಬ ಇಷ್ಟು ಹಗುರವಾಗಿ ಮಾತಾಡುವುದು ಸಾಧ್ಯವೆ? ಇನ್ನೊಂದೆಡೆ ರಾಜ್ಯವ್ಯಾಪಿ ಬಸವ ಭಕ್ತರ ಚಟುವಟಿಕೆಗಳು ತೀವ್ರಗೊಂಡಿರುವಾಗ ಯಾರಿಗಾದರೂ  ಬಸವಾದಿಗಳ ಕುರಿತು ಲಘುವಾಗಿ ಮಾತಾಡುವ ಧೈರ್ಯ ಬರಲು ಸಾಧ್ಯವಿಲ್ಲ.

ಸಮಕಾಲೀನ  ಸಂದರ್ಭದಲ್ಲಿ ಜನತೆಯ ಐಕಾನಗಳಾಗಿರುವ ಬಸವ, ಬಾಬಾ ಸಾಹೇಬ, ಕನಕದಾಸ, ಶಿವಾಜಿ, ಮಹಾತ್ಮ ಫುಲೆ, ಸಾವಿತ್ರಿ ಫುಲೆ ಮುಂತಾದವರನ್ನು ಕುರಿತು ತೀರ ಲಘುವಾಗಿ ಮಾತಾಡುವ ವ್ಯಕ್ತಿ ಹುಚ್ಚನಿರಬಹುದು. ಇಲ್ಲವೇ  ಆತನಿಗೆ  ದೊಡ್ಡ ಹಿನ್ನೆಲೆ ಮತ್ತು ರಕ್ಷಣೆ ಇರಬಹುದು. ಇಷ್ಟಿಲ್ಲದೆ ಸಾಮಾನ್ಯ ವ್ಯಕ್ತಿಗಳು ಮಹಾನ್ ವ್ಯಕ್ತಿತ್ವಗಳ ಕುರಿತು ಬೇಕಾಬಿಟ್ಟಿ ಮಾತಾಡಲು ಸಾಧ್ಯವೆ ಇಲ್ಲ.

ಬಸವತತ್ವ ನುಂಗಲಾರದ ತುತ್ತು

ಬಸವಾದಿ ಶರಣರ ತತ್ವ ಸಿದ್ಧಾಂತಗಳು ಯಾರಿಗೆ ನುಂಗಲಾರದ ತುತ್ತುಗಾಳಾಗಿವೆಯೋ ಅವರೇ ಈ ಕೆಲಸ ಮಾಡಲು ಹಚ್ಚಿರುತ್ತಾರೆ. ಸನಾತನಿ ಕುತಂತ್ರಿಗಳು ಯಾವತ್ತೂ ಮುಖ ಕೊಟ್ಟು ದಾಳಿ ಮಾಡಿದವರಲ್ಲ. ಅವರದೇನಿದ್ದರೂ ತೆರೆ ಮರೆಯ ತಂತ್ರ. ಮೋಸ. ಓಬಿಸಿ, ದಲಿತಾದಿ ಬಡ ಮುಗ್ಧರೆ ಅವರ ಕೈಯಲ್ಲಿನ ಲಾಠಿ.  ಬಸವಾದಿಗಳ ಬಗೆಗೆ ಜನಮಾನಸದಲ್ಲಿ ಅಭಿಮಾನ ಹೆಚ್ಚುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ವಿಶೇಷವಾಗಿ ಉಗ್ರ ಸನಾತನಿಗಳಿಗೆ ೧೨ನೇ ಶತಮಾನದ  ಕಾಯಕ ಜೀವಿಗಳ ಚಳವಳಿಯು ನುಂಗಲಾರದ ತುತ್ತಾಗಿದೆ. ಕಾರಣ ಶರಣರು ವರ್ಣಾಶ್ರಮ ವೈದಿಕ ಪಂಥದಲ್ಲಿನ ಹುಳುಕು-ಕೊಳಕುಗಳನ್ನು ಸಾಧಾರವಾಗಿ ಖಂಡಿಸಿದ್ದಾರೆ. ಈವರಗೆ ಸನಾತನಿಗಳು ಜನಸಾಮಾನ್ಯರಲ್ಲಿ ಧರ್ಮ ಮತ್ತು ದೇವರುಗಳ ಬಗೆಗೆ ಇನ್ನಿಲ್ಲದೆ ಭಯ ಮತ್ತು ಪಾಪಪ್ರಜ್ಞೆಯನ್ನು ತುಂಬಿ ಆಳುತ್ತಿದ್ದರಷ್ಟೆ.

ಮನುಷ್ಯರಲ್ಲಿ ಇಲ್ಲದ ಭೇದಗಳನ್ನು ಸೃಷ್ಟಿಸಿ ಇತರರ ದುಡಿಮೆಯ ಮೇಲೆ ಕುಂತು ತಿನ್ನುವ ವರ್ಗವೊಂದು ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದು ಕರ್ಮಸಿದ್ಧಾಂತವೆಂಬ ಅತ್ಯಂತ ಅಮಾನವೀಯ ತತ್ವವೊಂದನ್ನು ಬಿತ್ತಿ ಬೆಳೆದಿತ್ತು. ಇದರನ್ವಯ ಭೂಮಿಯಲ್ಲಿ ಘಟಿಸುವ ಪ್ರತಿಯೊಂದು ವಿದ್ಯಮಾನಕ್ಕೆ ಕಾಣದ ಪಾಪ, ಪುಣ್ಯಗಳೆ ಕಾರಣ ಎಂಬ ಕಥೆ ಕಟ್ಟಿ ಶ್ರಮಿಕ ವರ್ಗ ಉಳ್ಳವರ ವಿರುದ್ಧ ತಲೆ ಎತ್ತದಂತೆ ಮಾಡಿತ್ತು. ವೈದಿಕರ ಈ ಸ್ವಕಪೋಲ ಕಲ್ಪಿತ ಕಥನಗಳನ್ನು ಬುದ್ಧ, ಮಹಾವೀರಾದಿಗಳು ನಿರಾಕರಿಸಿದ್ದರು. ಅವರು ದೇವರೆಂಬ ಕಲ್ಪಿತ ವಾಸ್ತವಗಳ ಹಿಂದಿನ ಪೊಳ್ಳುತನವನ್ನು ಎತ್ತಿ ತೋರಿಸಿ ಮನುಷ್ಯರು ತಮ್ಮ ಪ್ರಜ್ಞೆಯನ್ನು ಮಾತ್ರ ನೆಚ್ಚಬೇಕೆಂದು ಹೇಳಿದ್ದರು.

ಇದು ವೈದಿಕ ಮತದ ಮೇಲಿನ ಧಾಳಿಯಾಗಿತ್ತಾದರೂ ಪರಮ ಸ್ವಾರ್ಥಿಗಳಾದ ವೈದಿಕರು ತಮ್ಮ ದುಷ್ಟ ಕಾರ್ಯಾಚರಣೆ ಬಳಸಿ ಬೌದ್ಧಾದಿ, ಲೋಕಾಯತಗಳನ್ನು ಭಾರತದಿಂದಲೆ ಹೊಡೆದೊಡಿಸುವ  ದುಷ್ಟತನ ಮೆರೆದಿದ್ದರು. ತರುವಾಯದಲ್ಲಿ ತಮನ್ನು ತಾತ್ವಿಕವಾಗಿ ಇದಿರಿಸುವವರೆ ಇಲ್ಲ ಎಂದು ಬೀಗುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಶರಣ ಚಳುವಳಿ ತಲೆ ಎತ್ತಿ ವೈದಿಕ ತತ್ವ ಪ್ರಣಾಲಿಯಲ್ಲಿನ ಅಪಸವ್ಯಗಳನ್ನು ತೆರೆದು ತೋರಿ ಜನತೆ ಅವುಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದರು.

ಇವರ ಕುತಂತ್ರ ಅರಿತಿದ್ದ ಬಸವಾದಿಗಳು

 ವೈದಿಕರು ಕಾಲಕಾಲಕ್ಕೂ ನಡೆಸಿದ ಕುತಂತ್ರಗಳನ್ನು ಅರಿತಿದ್ದ ಬಸವಾದಿಗಳು ಅವರ ಮೂಗು ಹಿಡಿದೆ ನವೀನ ತತ್ವಪ್ರಣಾಲಿಯೊಂದನ್ನು ಆವಿಷ್ಕರಿಸಿದರು. ವೈದಿಕರ ಕರ್ಮ ಸಿದ್ಧಾಂತವು ದೇವರೆಂಬ ಕಲ್ಪಿತ ವಾಸ್ತವದ ಸುತ್ತಲೆ ಗಿರಿಕಿ ಹೊಡೆಯುತ್ತಿರುವುದನ್ನು ಗಮನಿಸಿಯೆ : ಸಾಮಾನ್ಯ ಜನತೆಯಲ್ಲಿ ಮನೆ ಮಾಡಿಕೊಂಡಿದ್ದ ದೈವಭೀತಿ, ಬದುಕಿನ ಅನಿವಾರ್ಯತೆಗಳು, ನಿಸರ್ಗದ ಇದುರಿನ ಅಸಹಾಯಕತೆ ಮುಂತಾಗಿ ಎಲ್ಲವನ್ನು ಆಳವಾಗಿ ನಿರೀಕ್ಷಿಸಿದ ಅವರು ಜನತೆಯ  ನಂಬುಗೆಗಳಿಗೆ ಘಾಸಿಯಾಗದಂತೆ ಆದರೆ  ಅದರಲ್ಲಿನ ಪೊಳ್ಳುತನದ ಬಗೆಗೆ ಎಚ್ಚರ ಮೂಡುವಂತೆ ನೋಡಿಕೊಂಡರು. ದೇವರ ನಂಬಿಕೆಗಳನ್ನು ನಿರಾಕರಿಸದೆ ದೇವರ ಅಸ್ತಿತ್ವವನ್ನೆ ಅಲ್ಲಗಳೆದರು. ದೇಹವೇ ದೇವಾಲಯ, ಒಳಗಿರುವ ಚೈತನ್ಯವೆ ದೇವರು. ಆದ್ದರಿಂದ ದೇವಸ್ಥಾನಗಳ ಅವಶ್ಯಕತೆ ಇಲ್ಲ ಎಂದು ಸಾರಿದರು.

ವೈದಿಕರ ಬಂಡವಾಳರಹಿತ ಅಂಗಡಿಗಳಾಗಿದ್ದ ದೇವಾಲಯಗಳ ನಿರಕಾರಣೆಯು ಅವರಿಗೆ ಮರ್ಮಾಘಾತವನ್ನೆ ಮಾಡಿತ್ತು. ಶರಣರು ದೇವರಿಲ್ಲ ಎಂಬ ನಿತ್ಯಸತ್ಯವನ್ನು ರೂಕ್ಷವಾಗಿ ಹೇಳಿ ಜನರನ್ನು ಸಂಭ್ರಾತಗೊಳಿಸುವ ಬದಲು ದೇವರು ದೇವಸ್ಥಾನಗಳಲ್ಲಿ ಇಲ್ಲ. ನಿಮ್ಮ ಅಂಗೈಯಲ್ಲಿನ ಇಷ್ಟಲಿಂಗವೆಂಬ ಸಂಕೇತದಲ್ಲಿಯೆ ದೇವರನ್ನು ಕಾಣಬಹುದು ಎಂದರು. ಏನೆಲ್ಲ ಜಪ=ತಪ, ಪ್ರಾರ್ಥನೆ, ಪೂಜೆ ಮಾಡಿದರೂ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ ಅಸಂಖ್ಯಾತ ಶೂದ್ರ, ದಲಿತ ಮತ್ತು ಮಹಿಳೆಯರಿಗೆ ನೀಡಿದ ಈ ಧಾರ್ಮಿಕ ಸ್ವಾತಂತ್ರ ಕನ್ನಡ ನಾಡವರ ಬದುಕಿನಲ್ಲಿ  ಉತ್ಕ್ರಾಂತಿಯನ್ನೆ ಉಂಟು ಮಾಡಿತು. ಪ್ರವೇಶ ನಿಷಿದ್ಧವಾಗಿದ್ದ ದೇವಸ್ಥಾನಗಳ ಹಂಗು ಹರಿದುಕೊಂಡ ಜನತೆ ದೇವಾಲಯಗಳತ್ತ ಮುಖ ಮಾಡುವುದನ್ನು ಬಿಟ್ಟರು. ಇದು ಸನಾತನಿಗಳ ಆದಾಯಕ್ಕೆ ಕುತ್ತು ತಂದಿತು. ಇಷ್ಟು ಮಾತ್ರವಲ್ಲದೆ ಬಸವಾದಿಗಳು ವೈದಿಕರ  ಇನ್ನೊಂದು ಆದಾಯ ಮೂಲವಾಗಿದ್ದ ಕರ್ಮ ಸಿದ್ಧಾಂತದ ಬೇರನ್ನೆ ಕಡಿದು ಹಾಕಿದರು.

ಸುಖ ಬಂದಡೆ ಪುಣ್ಯದ ಫಲವೆನ್ನೆನು

ದುಃಖ ಬಂದಡೆ ಪಾಪದ ಫಲವೆನ್ನೆನು

ನೀ ಮಾಡಿದಡಾಯಿತ್ತೆಂದೆನ್ನೆನು

ಕರ್ಮಕ್ಕೆ ಕರ್ತುವೆ ಕಡೆಯೆಂದೆನ್ನೆನು.

ಉದಾಸೀನವಿಡಿದು ಶರಣೆನ್ನೆನು.

ಕೂಡಲಸಂಗಮದೇವಾ ನೀ ಮಾಡಿದುಪದೇಶವು ಎನಗೀ

ಪರಿಯಲ್ಲಿ ಸಂಸಾರವ ಸವೆಯೆ ಬಳಸುವೆನು.

ಸುಖ, ದುಃಖಗಳೆಲ್ಲ ಪೂರ್ವ ನಿಯೋಜಿತ. ಇವೆಲ್ಲವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ. ಮನುಷ್ಯರು ಮಾಡುವುದು ಏನೂ ಇಲ್ಲ. ಅದೆಲ್ಲವೂ ದೈವೇಚ್ಛೇ. “ತೇ ನ ವಿನಾ ತೃಣಮಪಿ ನ ಚಲತಿ” ಅಂದರೆ ಅವನಿಚ್ಛೇ ಇಲ್ಲದೆ ಇಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಉಕ್ತಿಗಳೆ   ಅನುಲಂಘನೀಯ ತತ್ವಗಳಾಗಿ ವೈದಿಕ ಸಾಹಿತ್ಯದಲ್ಲಿ ರಾರಾಜಿಸಿದ್ದವು. ವೇದಾಗಮಗಳಲ್ಲಿ ಉವಾಚಿಸಲಾಗಿದ್ದ ಇವುಗಳು ಪ್ರಶ್ನಾತೀತವೆಂದು, ಇವುಗಳಲ್ಲಿನ ಅತಾರ್ಕಿಕತೆಯನ್ನು ಪ್ರಶ್ನಿಸಿದವರನ್ನು ನಿರ್ದಯವಾಗಿ ದಂಡಿಸಲಾಗುತ್ತಿತ್ತು. ದೇವರ ಬಗೆಗೆ ಭಕ್ತಿಗಿಂತ ಭಯವೇ ಹೆಚ್ಚು ಕಾಡುತ್ತಿದ್ದ ಹೊತ್ತಲ್ಲಿ ಬಸವಣ್ಣನವರು ಜನರಲ್ಲಿ ಮನೆ ಮಾಡಿಸಲಾಗಿದ್ದ ಈ ಅಕಾರಣ ಭಯವನ್ನು ಮೂಲೋತ್ಪಾಟನೆ ಮಾಡಿದರು.

ಕರ್ಮವಿಲ್ಲ, ಜನ್ಮವಿಲ್ಲ

ಸುಖ,ದುಃಖಗಳೆಲ್ಲ ಯಾವುದೋ ಕಾಣದ ಜನ್ಮದಲ್ಲಿನ ಕಾರ್ಯಗಳ ಫಲವಲ್ಲ. ಕಾಣದ ಕೈಗಳ ಭಿಕ್ಷೆಯೂ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು. ವಾಸ್ತವ ಬದುಕಿನಲ್ಲಿರುವ ಸಂಕಟ, ತರತಮಗಳಿಗೆ  ವ್ಯವಸ್ಥೆಯಲ್ಲಿನ ದೋಷಗಳು ಮತ್ತು ಉಳ್ಳವರ ದರ್ಪ, ದಬ್ಬಾಳಿಕೆಗಳ ಕಾರಣ . ಕಾಣದ ದೈವಕ್ಕೆ ಹೆದರಬೇಕಿಲ್ಲ. ಕಾಣುವ ಮನುಷ್ಯರ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳಲು ದಯಾರ್ದ್ರತೆ ಬೇಕು. ಇದನ್ನೆ ತಥಾಗತ ಬುದ್ಧಗುರು ಕರುಣಾ ಮೈತ್ರಿ ಭಾವದಲ್ಲಿ ಬದುಕನ್ನು ಇದಿರುಗೊಳ್ಳಬೇಕು ಎಂದನು. ಹೀಗಾಗಿಯೇ ಬಸವ ಬುದ್ಧಾದಿಗಳು ದೈವ ಭಂಜಕ, ವೇದ ಭಂಜಕರೆಂಬ ಬಿರುದಿಗೆ ಪಾತ್ರರಾದರು.

ಒಂದೆರಡು ಪುಸ್ತಕಗಳಿಂದಲೆ ಇಡೀ ಮಾನವ ಕುಲಕೋಟಿಯನ್ನು ಹೆದರಿಸುತ್ತಿದ್ದ ಸನಾತನಿಗಳ ಒಳಗುಟ್ಟನ್ನು ಬಯಲಿಗೆಳೆದ ಶರಣರು ಅವುಗಳ ಪೊಳ್ಳುತನವನ್ನು ಎಗ್ಗಿಲ್ಲದೆ ಖಂಡಿಸಿದರು.

ವೇದದಂತುಟಲ್ಲ, ಶಾಸ್ತ್ರದಂತುಟಲ್ಲ

ಗೀತ ಮಾತಿನಂತುಟಲ್ಲ ಕೇಳಯ್ಯಾʼ

ಮಾತಿನ ಮಾತಿನ ಕವುಳಗೋಲ ಶ್ರವದಲ್ಲಿ ಸತ್ತವರೊಳರೆ ಅಯ್ಯಾ

ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ.

 ಬದುಕು ವೇದ, ಶಾಸ್ತ್ರದಲ್ಲಿ ಅಥವಾ ಭಗವದ್ಗೀತೆಯಲ್ಲಿ ಹೇಳಿದಂತೆ ಇಲ್ಲ. ವಾಸ್ತವ ಜೀವನವೇ ಬೇರೆ. ವೇದಾದಿಗಳು ಬೋಧಿಸುತ್ತಿರುವ ಪೊಳ್ಳು ಭರವಸೆಗಳು, ಸುಳ್ಳು ಆಚರಣೆಗಳಲ್ಲಿ ಸತ್ಯಾಂಶವಿಲ್ಲ. ಅಲ್ಲಿರುವುದೆಲ್ಲ ತಥಾಕಥಿತ ಪ್ರಸಂಗಗಳೇ ಹೊರತು ನೈಜ ಜೀವನಾನುಭಾವಗಳಲ್ಲ.  ಮಾತಿನಲ್ಲಿಯೆ ದೊಣ್ಣೆ ತಿರುವಿದರೆ ಯುದ್ಧದಲ್ಲಿ ಗೆಲ್ಲಲಾಗದು. ಮಾತಿನ ಮಂಟಪದಿಂದ ಏನನ್ನು ಕಟ್ಟಲಾಗದು. ನಿಜವಾದ  ಖಡ್ಗ ಹಿಡಿದು ರಣರಂಗಕ್ಕೆ ಇಳಿಯುವ ಯೋಧನ ಅನುಭವವೇ ಬೇರೆ. ದಿಟದ ಕಾಳಗ ಮಾಡದ ಉತ್ತರ ಕುಮಾರ ಮಾತಿನಲ್ಲಿ ಶಸ್ತ್ರಾಸ್ತ್ರಗಳನ್ನು ತಿರುವಿ ತಾನು ಗೆದ್ದೆ ಎಂದು ಬೀಗಿದಂತೆ ಅದೊಂದು ಅಭಾಸ ಅಷ್ಟೆ.   ಅನುಭಾವವೆಂಬ ಖಡ್ಗವನ್ನು ಹಿಡಿದು ನಡೆಸುವ  ವಾಸ್ತವ ಬದುಕಿನ ಯುದ್ಧವಿದೆಯಲ್ಲ ಅದನ್ನು  ಶರಣರು ಗೆದ್ದರು ಎನ್ನುತ್ತಾರೆ ಅಣ್ಣ.

ಕೂದಲು ಸೀಳುವ ವಾಗ್ವಾದಗಳಿಂದ ಹೊಟ್ಟೆ ತುಂಬುವುದಿಲ್ಲ. ಹೊಟ್ಟೆ ತುಂಬಿದವರು ಗಳಹುವ ವೇದಾಂತಗಳಿಂದ ನಿಸರ್ಗಕ್ಕೂ ಸಮಾಜಕ್ಕೂ  ಆಗಬೇಕಾದದ್ದು ಏನೂ ಇಲ್ಲ. ವೈದಿಕರು ಅಗ್ನಿಯನ್ನು ದೈವವೆಂದು ಪೂಜಿಸುತ್ತಾರಷ್ಟೆ. ಹೋಮ. ಹವನಗಳ ಮೂಲಕ ಉತ್ತಮಾದಿ ವಸ್ತುಗಳನ್ನೆಲ್ಲ ಬೆಂಕಿಗೆ ಆಹುತಿ ನೀಡಿ ದೇವರು ಸಂಪ್ರಿತನಾಗುತ್ತಾನೆಂದು ಭ್ರಮಿಸುವವರ ಕಂಡು ಬಸವಣ್ಣ

ಕಿಚ್ಚು ದೈವವೆಂದು ಹವಿಯನ್ನಿಕ್ಕುವ

ಹಾರುವರ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ

ಬಚ್ಚಲ ನೀರ, ಬೀದಿಯ ಧೂಳ ಹೊಯ್ದು

ಬೊಬ್ಬಿಟ್ಟೆಲ್ಲರ ಕರೆವರಯ್ಯಾ.

ಕೂಡಲಸಂಗಮದೇವಾ, ವಂದನೆಯ ಮರೆತು ನಿಂದಿಸುತ್ತಿದ್ದರಯ್ಯಾ. 

ವೈದಿಕರಿಗೆ ಹಿನ್ನೆಡೆ

ಪ್ರಾಯಶಃ ವೈದಿಕರ ಯಾಗ ಯಜ್ಞಗಳನ್ನು ಇಷ್ಟು ಉಡಾಫೆಯಾಗಿ ಖಂಡಿಸಿದವರು ಇತಿಹಾಸದಲ್ಲಿ ಇನ್ನೊಬ್ಬರು ಇರಲಿಕ್ಕಿಲ್ಲ. ವೈದಿಕರ ಆಚರಣೆಗಳು ಅವರ ತಾತ್ವಿಕ ಭ್ರಷ್ಠತೆ, ಪೊಳ್ಳು ವಾಗ್ವಾಡಂಬರಗಳನ್ನು ಬಸವಾದಿಗಳಷ್ಟು  ಉಗ್ರವಾಗಿ ಖಂಡಿಸಿದವರು ಕಾಣ ಸಿಗರು.  ಸಹಜವಾಗಿಯೆ ವೈದಿಕರಿಗೆ ಇದು ಆಕ್ರೋಶ ಹುಟ್ಟಿಸುತ್ತದೆಯಷ್ಟೆ. ಈವರೆಗೆ ತಮ್ಮ ಬಾಲಿಶ ಮತ್ತು ಜನವಿರೋಧಿ ಆಚರಣಗಳೆ ಸರ್ವ ಶ್ರೇಷ್ಠ ಎಂದು ನಂಬಿಸಿಕೊಂಡು ಬಂದಿದ್ದ ಸನಾತನಿಗಳಿಗೆ ಶರಣರ ಇಂಥ ವಚನಗಳು   ಹೋಮದಲ್ಲಿನ ಬೆಂಕಿ ಮೈಗೆ ಹತ್ತಿದಂತೆ ನಖಶಿಖಾಂತ ಉರಿಯತೊಡಗಿತು. ಬಸವಣ್ಣನವರ ನೇತೃತ್ವದಲ್ಲಿ ಮೊದಲ ಬಾರಿಗೆ ದಲಿತಾದಿ ಶೂದ್ರರು ವೈದಿಕರ ವಿರುದ್ಧ ಎಗ್ಗಿಲ್ಲದೆ ತಿರುಗಿ ಬಿದ್ದು ಅವರ ಶಾಸ್ತ್ರ,ಪುರಾಣಗಳನ್ನು ಗೇಲಿಗೆಬ್ಬಿಸಿದ್ದು ಅವರನ್ನು ರೊಚ್ಚಿಗೆಬ್ಬಿಸಿತ್ತು.. 

ವಚನ ಚಳವಳಿಯ ತರುವಾಯ ಕರ್ನಾಟಕದಲ್ಲಿ ವೈದಿಕರಿಗೆ ದೊಡ್ಡ ಮಟ್ಟದ ಹಿನ್ನೆಡೆಯುಂಟಾಯಿತು. ಹೀಗೆಂದೆ ಅವರು ಬಸವಾದಿಗಳ ವಿರುದ್ಧ ಆ ಕಾಲಘಟ್ಟದಲ್ಲಿ ದೊಂಬಿಗೈದರು.  ಅವರು ರಚಿಸಿದ ವಚನ ಬಂಢಾರವನ್ನು ನಿರ್ನಾಮಿಸುವ ಎಲ್ಲ ಉಪದ್ವಾಪಗಳನ್ನು ಮಾಡಿದರು. ನೂರಾರು ಶರಣರ ಕಗ್ಗೊಲೆ ಮಾಡಿದ್ದು ಈಗ ಇತಿಹಾಸದ ಸಂಗತಿ.  ಆದರೆ ಇಷ್ಟಕ್ಕೆ ವೈದಿಕರ ಕಾರ್ಯಾಚರಣೆ ನಿಲ್ಲಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಬಸವಾದಿ ವಚನಕಾರರ ಕುರಿತು ಅವಹೇಳನ, ಆಪೋಷಣೆ, ಅನಾಚಾರ ಮಾಡುತ್ತಲೆ ಬಂದಿದ್ದಾರೆ. ಅನೇಕ ಬಸವತತ್ವ ವಿರೋಧಿ ಕಾವ್ಯಗಳನ್ನು ಬರೆದದ್ದು ಇದೆ. ಅದರ ಮುಂದುವರಿಕೆಯಾಗಿ ಈಗ ಬಸವಣ್ಣ ಮತ್ತು ಅವರ ಸಮಕಾಲೀನರನ್ನು ಹೀಗಳೆಯುವ ಕೆಲಸ ಮಾಡುತ್ತಿದ್ದಾರೆ. 

ವೈದಿಕರು ತಮಗಾಗದ ತತ್ವ-ಸಿದ್ಧಾಂತಗಳ ಮೇಲೆ ಎರಗುವುದು ಹೊಸದೇನು ಅಲ್ಲ. ಈಗ ಅವರು ಬಸವಾದಿ ಶರಣರ ಮೇಲೆ ಹಲವು ಮಗ್ಗುಲಗಳಿಂದ ಹಲ್ಲೆಗಿಳಿದಿದ್ದಾರೆ. ಒಂದೆಡೆ ಸಂಶೋಧನೆ ಹೆಸರಲ್ಲಿ ಬಸವಾದಿಗಳು ಸಾಮಾಜಿಕ ಚಳುವಳಿ ಮಾಡಲಿಲ್ಲ. ಅವರೊಬ್ಬ ಉನ್ನತ ದಾರ್ಶನಿಕರು. ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಅವರ ಮೂಲ ಗುರಿಯಾಗಿತ್ತು. ವೇದೋಪನಿಷತ್ತುಗಳಲ್ಲಿನ ತತ್ವಗಳನ್ನೆ ಅವರು ಕನ್ನಡದಲ್ಲಿ ವಚನಗಳಾಗಿ ಕಟ್ಟಿಕೊಟ್ಟಿದ್ದಾರೆ ಎಂದು ವೈಭವೀಕರಿಸುತ್ತ ವಚನ ಸಿದ್ಧಾಂತದ ಮೂಲ ಆಶಯವಾಗಿದ್ದ ಕಾಯಕ-ದಾಸೋಹ-ಇಷ್ಟಲಿಂಗ ಇತ್ಯಾದಿ ವೈದಿಕ ವಿರೋಧಿ ನೆಲೆಗಳನ್ನು ಮರೆಯಾಗಿಸುತ್ತಾರೆ. ಇನ್ನೊಂದೆಡೆ ಸುಳ್ಳು ವಚನಗಳನ್ನು ಸೃಷ್ಟಿಸಿ ಅವರು ಹೇಳದೆ ಇರುವುದನ್ನು ಹೇಳಿರುವಂತೆ ಬಿಂಬಿಸುತ್ತಾರೆ. ಅವರದೆ ಇನ್ನೊಂದು ಗಾಂಪರ ಗುಂಪಿನಿಂದ ಬೈಯ್ಗಳ ಸುರಿಮಳೆಯಾಗುತ್ತದೆ. ಬೈಯ್ದವನಿಗೆ ತಾನು ಯಾಕಾಗಿ ಇಂಥವರನ್ನು ಹೀಗಳೆಯುತ್ತಿದ್ದೇನೆ ಎಂಬ ಅರಿವು ಇರದಂತೆ ನೋಡಿಕೊಳ್ಳುತ್ತಾರೆ.

ಎಂ.ಎಂ. ಕಲಬುರಗಿ, ಗೌರಿ ಲಂಕೇಶರನ್ನು ಹತ್ಯೆಗೈಯ್ದ ಮತಾಂಧರಿಗೆ ತಾವು ಯಾಕಾಗಿ ಇವರನ್ನು ಹೊಡೆಯುತ್ತಿದ್ದೇನೆ ಎಂಬ ಕನಿಷ್ಟ ಪರಿಜ್ಞಾನವೂ ಇರಲಿಲ್ಲ ಎಂಬುದು ಅವರ ಹೇಳಿಕೆಗಳಿಂದ ಕಂಡಿದ್ದೇವೆ. ಸನಾತನ ಧರ್ಮದ ಉಳುವಿಗಾಗಿ ತಾವು ಧರ್ಮದ್ರೋಹಿಗಳನ್ನು ಹೊಡೆಯುತ್ತಿದ್ದೇವೆ ಎಂಬ ನಂಬಿಕೆ ಮಾತ್ರವಿರುತ್ತದೆ. ಅಸಲಿಗೆ ಅವರಿಗೆ ಸನಾತನ ಧರ್ಮ ಎಂದರೇನು? ಅಲ್ಲೇನಿದೆ? ಅದನ್ನು ಪ್ರಮೋಟ್ ಮಾಡುತ್ತಿರುವವರು ಯಾರು ಮತ್ತು ಯಾತಕ್ಕಾಗಿ? ಎಂಬ ಯಾವ ವಿಷಯಗಳು ತಿಳಿದಿರುವುದಿಲ್ಲ. ಇಂಥ ಮೂರ್ಖ ಚಟುವಟಿಕೆಗಳಲ್ಲಿ ಶೂದ್ರಾದಿಗಳನ್ನೆ ತೊಡಗಿಸಲಾಗುತ್ತದೆ. ಬಡತನ ಮತ್ತು ಅಜ್ಞಾನ ಇವೆರಡೂ ಪರಸ್ಪರ ಪೂರಕ. ಇವೆರಡೆ ಶೂದ್ರಾದಿ ದಲಿತರ ವೈರಿಗಳು. ಇವುಗಳನ್ನು ಶತಾಯಗತಾಯ ಖಾಯಂಗೊಳಿಸುವುದೇ ಸನಾತನಿ ಕಾರ್ಪೊರೇಟ್ಗಳ ಗುರಿ.  ಇಂಥ ಗುರಿ ಸಾಧನೆಯ ಒಂದು ಕ್ಷುದ್ರ ನಮೂನೆಯೇ ಅಶ್ಲೀಲ ಪೋಸ್ಟ್ ದುರಂತವೆಂದರೆ ಈಗ ಶಿಕ್ಷೆ ಪೋಸ್ಟ್ ಮಾಡಿದ ಖೂಳನಿಗೆ ಆಗಬಹುದು ಆಥವಾ ಆಗಲಿಕ್ಕಿಲ್ಲ. ಆದರೆ ಅದನ್ನು ಮಾಡಿಸಿದ ವ್ಯಕ್ತಿ-ಶಕ್ತಿಗಳು ಮಾತ್ರ ನಮ್ಮ ಕಾನೂನು ವ್ಯವಸ್ಥೆಯ ಕೈಗೆ ಸಿಗುವುದೆ ಇಲ್ಲ. ಬಸವಾದಿ ಶರಣರು ಕುರಿತು ಕೀಳು ಮಟ್ಟದ ಸಂವಾದವೊಂದು ಎಲ್ಲಿಯೋ ನಡೆಯುತ್ತಿದೆ ಎಂದೆ ಅರ್ಥ. ಬೆಂಕಿ ಇಲ್ಲದೆ ಹೊಗೆ ಏಳದು.

ಕೃಪೆ: ವಾರ್ತಾಭಾರತಿ

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
3 Comments
  • ರಮಾಕಾಂತನು ಮಾನಸಿಕ ಅಸ್ವಸ್ಥ, ಮಂದ ಬುದ್ಧಿಯಂವಾ ಎಂದು ಪ್ರಚಾರ ಮಾಡತಿದ್ದಾರೆ ಆತ ಹಾಗಾಗಿದ್ದರೆ ರಾಮನನ್ನ ಯಾಕೆ ಬೈಯ್ಯೋದಿಲ್ಲ, ಸೀತೆಯನ್ನು ಅಶ್ಲೀಲವಾಗಿ ಯಾಕೆ ಬೈಯ್ಯೋದಿಲ್ಲ ?
    ಅವನಿಗೆ ಬೇಲ್ ಕೊಡಿಸೋಕೆ RSS ನ ಚಡ್ಡಿಗಳೆ ಅಡ್ಡಾಡತಿದಾರೆ ಯಾಕೆ ?

  • ಮೋಸ ಮಾಡಿ ಬದುಕುವ ಜನಕ್ಕೆ ನಾಚಿಕೆ ಬಿಟ್ಟು ಮಾತುಗಳು ಹೇಳುವ ಚಾ ಳಿ ಬಿಡುವದಿಲ್ಲ ಅವರ ಸುಳಿವು ನೋಡಿ ಅವರಿಗೆ ಗೊತ್ತಾಗದ ಹಾಗೇ ಅವರನ್ನು ಮಣ್ಣ ಮಾಡಿ ಇನ್ನೊಮ್ಮೆ ಮಾತಾಡದ ಹಾಗೇ ಮಾಡ್ಬೇಕು. ಅವರ ಬಾಲ ಬಡಿಯುವ ನಮ್ಮವರನ್ನು ಅವರಂತೆ (ರಾಜಕೀಯ ಜನರನ್ನು )ಮೊದಲು ಮಣ್ಣು ಮುಕ್ಕಿಸಿ 👏🏻ಶರಣು 👏🏻

Leave a Reply

Your email address will not be published. Required fields are marked *