ಮೃತ್ಯುಂಜಯ ಸ್ವಾಮೀಜಿ ಲಿಂಗಾಯತರೋ ಅಥವಾ ಹಿಂದೂವೋ? ಕಾಶಪ್ಪನವರ ಪ್ರಶ್ನೆ

ಕೂಡಲಸಂಗಮ :

ಒಂದು ವೇದಿಕೆಯಲ್ಲಿ ಲಿಂಗಾಯತ ಎಂದು, ಇನ್ನೊಂದು ವೇದಿಕೆಯಲ್ಲಿ ಹಿಂದೂ ಎಂದು ಹೇಳುವ ಬಸವಜಯಮೃತ್ಯುಂಜಯ ಸ್ವಾಮೀಜಿ ಯಾವ ಸಿದ್ಧಾಂತದಲ್ಲಿ ಇದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಪ್ರಶ್ನೆ ಮಾಡಿದರು.

ಬುಧವಾರ ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ ಹಾಗೂ ಹುನಗುಂದ, ಇಲಕಲ್ಲ ತಾಲೂಕಾ ಆಡಳಿತದ ಸಹಯೋಗದಲ್ಲಿ ನಡೆದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮನವರ ೨೪೭ನೇ ಜಯಂತೋತ್ಸವ, ೨೦೧ನೇ ವಿಜಯೋತ್ಸವ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ಅಡಿಗಲ್ಲು, ದಾಸೋಹ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬಸವತ್ವದ ಅಡಿಯಲ್ಲಿಯೇ ಪಂಚಮಸಾಲಿ ಸಮಾಜ ನಡೆಯಬೇಕು ಎಂಬ ಉದ್ದೇಶದಿಂದ ಈ ಟ್ರಸ್ಟ, ಪೀಠ ಸ್ಥಾಪನೆಯಾಗಿದೆ. ನನಗೆ ಓರ್ವ ಮಾಜಿ ಸಚಿವರು ಬಸವಣ್ಣನ ಹಿಂದೆ ಹೋದರೆ ಒಂಟಿಯಾಗುತ್ತಿಯಾ ಎಂದು ಹೇಳಿದರು. ನನ್ನ ಉಸಿರು ಇರುವವರೆಗೆ, ನಾನು ಒಂಟಿಯಾದರು ಸರಿ ಬಸವಣ್ಣನ ಸಿದ್ದಾಂತ, ತತ್ವದಲ್ಲಿಯೇ ಬದುಕುತ್ತೆನೆ. ಇಲ್ಲಿಯವರೆಗೂ ಎಲ್ಲವನೂ ನೋಡಿ ಈ ನಿರ್ಧಾರ ಮಾಡಿದ್ದೇನೆ. ನನಗೆ ಯಾವ ಗುರುವಿನ ಆಶೀರ್ವಾದ ಬೇಡ, ನನಗೆ ಬಸವಣ್ಣನೇ ಗುರು.

ಜಾತ್ಯಾತೀತ ತಳಹದಿಯ ಮೇಲೆ ಪಂಚಮಸಾಲಿ ಸಮಾಜ ಕಟ್ಟುವ ಕಾರ್ಯ ಮಾಡುತ್ತೇವೆ. ನಿನ್ನೆ, ಇಂದು ಬೆಳಿಗ್ಗೆ ಕಾರ್ಯಕ್ರಮಕ್ಕೆ ಬರದಂತೆ ತಡೆಯುವ ಕಾರ್ಯವನ್ನು ಕೆಲವರು ಮಾಡಿದರು, ಮುಂದಿನ ದಿನದಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ. ಸಮಾಜದ ಹಣವನ್ನು ಯಾರು ಎಷ್ಟು ಕದ್ದಿದ್ದಾರೆ. ಎಲ್ಲಿ ಮನೆ ಮಾಡಿದ್ದಾರೆ, ಎಲ್ಲಿ ಎಲ್ಲಿ ಶಿಕ್ಷಣ ಸಂಸ್ಥೆ ಮಾಡಿದ್ದಾರೆ ಎಂಬುದನ್ನು ಮುಂದಿನ ದಿನದಲ್ಲಿ ಸಾಕ್ಷಿ ಸಮೇತ ಸಮಾಜದ ಮುಂದೆ ಇಡುತ್ತೇನೆ ಎಂದರು.

ಇವತ್ತಿನಿಂದಲೇ ಟ್ರಸ್ಟನಲ್ಲಿ ದಾಸೋಹ ಆರಂಭಗೊಂಡಿದೆ. ಕ್ಷೇತ್ರಕ್ಕೆ ಬರುವ ಎಲ್ಲ ಸಮುದಾಯದ ಭಕ್ತರು ಪ್ರಸಾದ ಸ್ವೀಕರಿಸಿ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಇಂದು ಅಡಿಗಲ್ಲು ಹಾಕಿದ್ದು ಒಂದು ವರ್ಷದಲ್ಲಿ ಕಾಮಗಾರಿ ಮುಗಿಯುವುದು, ಮುಂದಿನ ವರ್ಷದಿಂದ ಎಲ್ಲಾ ಸಮುದಾಯದ ಬಡ ಮಕ್ಕಳಿಗೆ ವಸತಿ ನಿಲಯ ಆರಂಭಗೊಳ್ಳುವುದು. ಇಂದಿನಿಂದ ಅವಳಿ ತಾಲೂಕಿನಲ್ಲಿ ಎಲ್ಲಾ ಜಯಂತಿಗಳನ್ನು ಸರ್ವಜನಾಂಗದವರನ್ನು ಸೇರಿಸಿಕೊಂಡು ಮಾಡುತ್ತೆವೆ ಎಂದರು.

ಕೊಪ್ಪಳ ಮಾಜಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಚನ್ನಮ್ಮನ ಇತಿಹಾಸ ಅರಿಯುವ ಕಾರ್ಯ ಮಾಡಬೇಕು. ವೇದಿಕೆಯ ಮೇಲಿನ ಎಲ್ಲಾ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಎಲ್ಲಾ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿಸುವ ಕಾರ್ಯ ಮಾಡಬೇಕು, ಇದರಿಂದ ಎಲ್ಲಾ ಸಮುದಾಯದ ಮಕ್ಕಳಿಗೆ ಅನುಕೂಲವಾಗುವುದು. ವಿಜಯಾನಂದ ಕಾಶಪ್ಪನವರ ಅಹಂ ಬಿಡಬೇಕು, ಎಲ್ಲ ಹಿರಿಯರಿಗೆ ಗೌರವ ಕೊಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾತನಾಡಿ, ಧಾರ್ಮಿಕ ಮುಖಂಡರನ್ನು ಸಮಾಜ ಬಾಂಧವರು ನಿರೀಕ್ಷಿಸಬೇಡಿ, ಸಮಾಜ ಮುಖಂಡರ ನೇತೃತ್ವದಲ್ಲಿ ಸಮಾಜ ಕಟ್ಟುವ ಕಾರ್ಯ ಮಾಡೋಣ ಎಂದರು.

ಸಮಾರಂಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಗೌರವ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಾಜಿ ವಿಧಾನ ಪರಿಷತ್ತ ಸದಸ್ಯ ಎಂ.ಪಿ.ನಾಡಗೌಡ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹಿರಿಯ ಮುಖಂಡ ಜಿ.ಜಿ. ಪಾಟೀಲ, ರಾಜಶೇಖರ ಮೆಣಸಿನಕಾಯಿ, ಎಂ.ಎಸ್. ಮಲ್ಲಾಪೂರ, ವೆಂಕಟೇಶ ಸಾಕಾ ಮುಂತಾದವರು ಇದ್ದರು. ಎಸ್.ಕೆ. ಕೊನೆಸಾಗರ ಸ್ವಾಗತಿಸಿದರು, ಎನ್.ಪಿ.ನಾಡಗೌಡ ವಂದಿಸಿದರು.

ಸಮಾರಂಭಕ್ಕೂ ಪೂರ್ವದಲ್ಲಿ ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು. ಸಮಾರಂಭದಲ್ಲಿ ಕಿತ್ತೂರ ರಾಣಿ ಚನ್ನಮ್ಮ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.

ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ : ಸಮಾರಂಭಕ್ಕೆ ಪೂರ್ವದಲ್ಲಿ ಕೂಡಲಸಂಗಮ ಪುನರ್ ವಸತಿ ಕೇಂದ್ರದ ಅಗಸಿಯ ಮುಂದೆ ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿ ಉದ್ಘಾಟನೆಯನ್ನು ಮಾಜಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ವಿಧಾನ ಪರಿಷತ್ತು ಸದಸ್ಯ ಎಂ.ಪಿ. ನಾಡಗೌಡ, ವಿಜಯಾನಂದ ಕಾಶಪ್ಪನವರ ಮಾಡಿದರು. ನಂತರ ಕೂಡಲಸಂಗಮ ಪುನರ್ ವಸತಿ ಕೇಂದ್ರದಿಂದ ಲಿಂಗಾಯತ ಪಂಚಮಸಾಲಿ ಪೀಠದವರೆಗೆ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ೨ ಕಿ.ಮೀ. ವರೆಗೆ ವಿವಿಧ ಕಲಾ ತಂಡಗಳ ಮೂಲಕ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಮೆರವಣಿಗೆ ಮಾಡುತ್ತ ಕಾಲ್ನಡಿಗೆಯ ಮೂಲಕ ವೇದಿಕೆಗೆ ಬಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *