ಬಸವಕಲ್ಯಾಣದ ಮನೆಗಳಲ್ಲಿ ತಿಂಗಳಪೂರ್ತಿ ಇಷ್ಟಲಿಂಗಯೋಗ, ಅನುಭವ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಅಂತ್ರಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಶರಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತರ ಮನೆ ಮನೆಗಳಲ್ಲಿ ಇಷ್ಟಲಿಂಗಯೋಗ ಮತ್ತು ಅನುಭಾವ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಮೊದಲ ದಿನ ಶಿವಾಜಿ ಕಾಲೋನಿಯ ಜಯಶ್ರೀ ರಾಜಶೇಖರ ಬಿರಾದಾರ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಉದ್ಘಾಟಿಸಿ ಮಾತನಾಡಿ, ಇಷ್ಟಲಿಂಗ ಪೂಜೆ ಲಿಂಗಾಯತ ಧರ್ಮದಲ್ಲಿ ಅತ್ಯಂತ ಮಹತ್ವದ ಆಚರಣೆಯಾಗಿದೆ. ನಿರಾಕಾರ ಪರಮಾತ್ಮನ ಸಾಕಾರ ರೂಪದ ಸಂಕೇತವಾಗಿದೆ. ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ದಾರಿದೀಪವಾಗಿದೆ. ಶರಣರ ವಚನಗಳಲ್ಲಿ ಮನುಷ್ಯ ಹೇಗೆ ಬದುಕಬೇಕೆಂಬ ಎಂಬ ನೀತಿ ನಿಯಮಗಳಿವೆ. ಹೆಚ್ಚುತ್ತಿರುವ ಮೌಢ್ಯಚರಣೆಗಳ ಕುರಿತು ಅರಿವು ಮೂಡಿಸಿ ಸರಳ ಶುದ್ಧ ಬದುಕನ್ನು ರೂಢಿಸಿಕೊಳ್ಳಬೇಕೆಂಬ ಬಸವಾದಿ ಶರಣರ ಸಂದೇಶ ಜನಸಾಮಾನ್ಯರಿಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ನಡೆಸುವುದು ಅತಿ ಅವಶ್ಯಕವಾಗಿದೆ ಎಂದರು.

ನೇತೃತ್ವ ವಹಿಸಿದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಅನುಭಾವ ನೀಡಿ, ನಿರಂತರ ಸಾಧನೆಯ ಸೂತ್ರ ಇಷ್ಟಲಿಂಗ, ಇದು ಅರಿವಿನ ಕುರುಹಾಗಿದ್ದು ಇದು ಪರಮಾತ್ಮನ ರೂಪದಲ್ಲಿ ಸದಾ ಎದೆಯ ಮೇಲೆ ಇರಬೇಕು. ಜೀವನ ಬಹುಮೂಲ್ಯವಾದದ್ದು, ಅದನ್ನು ಕೇವಲ ಭೌತಿಕ ಸಂಪತ್ತು ಸಂಪಾದಿಸುವುದರಲ್ಲಿ ವ್ಯರ್ಥ ಮಾಡದೇ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆಯುಷ್ಯ ಇರುವವರೆಗೂ ಸತ್ಯಶರಣರ ವಚನಗಳನ್ನು ಆಲಿಸಬೇಕು, ಶರಣರ ಸಂಗದಲ್ಲಿರಬೇಕು. ಶರಣ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಇಷ್ಟಲಿಂಗ ಸಾಧನೆಯತ್ತ ಎಲ್ಲರನ್ನು ಸೆಳೆಯಬೇಕು ಎಂದರು.

ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಇಷ್ಟಲಿಂಗವು ೧೨ನೇ ಶತಮಾನದಲ್ಲಿ ಬಸವಣ್ಣನವರ ವಿಶಿಷ್ಠ ಕೊಡುಗೆಯಾಗಿದೆ. ಪರಮಾತ್ಮನ ಚುಳುಕಾದ ಚೇತನವಾಗಿದೆ. ಇಷ್ಟಲಿಂಗದಿಂದಲೇ ಸಮಾಜದಲ್ಲಿ ಅದ್ಭುತ ಕ್ರಾಂತಿಯಾಗಿ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗಿದೆ. ಬಸವಾದಿ ಶರಣರು ವ್ಯಕ್ತಿಯ ಆಧ್ಯಾತ್ಮಿಕ ಸಾಧನೆಗೆ ಸಹಾಯವಾಗಬಲ್ಲ ಏಕದೇವೋಪಾಸನೆಗೆ ಒತ್ತು ನೀಡಿದರು ಎಂದರು.

ಸುಜಾತಾ ತೋಗರಖೇಡೆ ಇಷ್ಟಲಿಂಗ ಪೂಜಾಯೋಗದ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುಲೋಚನಾ ಗುದಗೆ, ಸುಲೋಚನಾ ಮಾಮಾ, ಶಂಕರ ಕರಣೆ, ನಿರ್ಮಲಾ ಶಿವಣಕರ್, ರಾಜಶ್ರೀ ಖೂಬಾ, ಕವಿತಾ ರಾಜೊಳೆ, ಗಣಪತಿ ಕಾಸ್ತೆ, ಜಗನ್ನಾಥ ಕುಶನೂರೆ, ಉಷಾ ಕನ್ನಾಡೆ, ಅಂಬಿಕಾ ನಾಗರಾಳೆ, ಲಕ್ಷ್ಮೀಬಾಯಿ ಪಾಟೀಲ ಸೇರಿದಂತೆ ನೂರಾರು ಶರಣ ಬಂಧುಗಳು ಇದ್ದರು. ಜಯಶ್ರೀ ಬಿರಾದಾರ ಸ್ವಾಗತಿಸಿದರೆ, ಸಂಗಮೇಶ ತೋಗರಖೇಡೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *