ತಗಡಿನ ಮೂರ್ತಿ ಕೂರಿಸುವ ಬದಲು ಬಸವಣ್ಣನವರಿಗೆ ಭವ್ಯ ವೃತ್ತ ನಿರ್ಮಿಸಿ

ಬಸವನಾಡಿನಲ್ಲೇ ಬಸವಣ್ಣನವರಿಗೆ ಗೌರವ ಇಲ್ಲವಾಯಿತೆ?

ಆಲಮೇಲ:

“ಇವನಾರವ ಇವನಾರವ ಎಂದೆನಿಸದಿರಯ್ಯ” ಎಂದು ಸಾರಿ, ಜಾತಿ-ಧರ್ಮಗಳ ಆಚೆ ನಿಂತು ಜಗತ್ತಿಗೆ ಬೆಳಕಾದ ಮಹಾನ್ ಚೇತನ ಜಗಜ್ಯೋತಿ ಬಸವಣ್ಣನವರು. ಆದರೆ ಆಲಮೇಲ ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಬಸವಣ್ಣನವರ ವೃತ್ತದ ಇಂದಿನ ಪರಿಸ್ಥಿತಿ ನೋಡಿದರೆ ಬಸವಣ್ಣನವರಿಗೆ ಸಲ್ಲಬೇಕಾದ ಗೌರವ ಎಲ್ಲಿಗೋಯ್ತು ಎಂಬ ಪ್ರಶ್ನೆ ಮೂಡುತ್ತದೆ.

ತಗಡಿನ ಬಸವಣ್ಣನವರ ಮೂರ್ತಿ

ರಸ್ತೆ ಅಗಲೀಕರಣದ ನೆಪದಲ್ಲಿ ಬಸವಣ್ಣನವರ ವೃತ್ತ ಇಂದು ಕಿರಿದಾಗುತ್ತಿದೆ. ಕೇವಲ ಒಂದು ಸಣ್ಣ ಕಟ್ಟೆಯ ಮೇಲೆ ತಗಡಿನ ಆವರಣದಲ್ಲಿರುವ ಮೂರ್ತಿಯನ್ನು ನೋಡಿದರೆ ಬಸವ ಅನುಯಾಯಿಗಳ ಮನಸ್ಸು ನೋವಿನಿಂದ ಮರಗುತ್ತದೆ.

ವಿಶ್ವವೇ ಒಪ್ಪುವಂತಹ ತತ್ವಗಳನ್ನು ನೀಡಿದ ಕಾಯಕ ಯೋಗಿಗೆ ಒಂದು ಭವ್ಯವಾದ ವೃತ್ತ ನಿರ್ಮಿಸಲು ಈ ಭಾಗದ ನಾಯಕರಿಗೆ ಮನಸ್ಸಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆ?

 “ನಾನೇ ಲಿಂಗಾಯತ ನಾಯಕ” ಎಂದು ಎದೆ ತಟ್ಟಿಕೊಳ್ಳುವ ರಾಜಕೀಯ ಮುಖಂಡರು ಚುನಾವಣೆ ಸಂದರ್ಭದಲ್ಲಿ ಬಸವಣ್ಣನವರ ಹೆಸರನ್ನು ಬಳಸಿಕೊಳ್ಳುತ್ತಾರೆ. ಆದರೆ, ಕಣ್ಣೆದುರೇ ಇರುವ ಬಸವೇಶ್ವರ ವೃತ್ತವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಗಮನಹರಿಸದಿರುವುದು ದುರಾದೃಷ್ಟಕರ ಸಂಗತಿ.

ರಸ್ತೆ ಕಾಮಗಾರಿಯ ಮಧ್ಯೆ ವೃತ್ತಕ್ಕೆ ಅತ್ಯಂತ ಕಡಿಮೆ ಜಾಗವನ್ನು ಮೀಸಲಿಟ್ಟಿರುವುದು ಭವಿಷ್ಯದಲ್ಲಿ ವೃತ್ತದ ಅಸ್ತಿತ್ವಕ್ಕೇ ಧಕ್ಕೆ ಬರುವ ಭೀತಿ ಮೂಡಿಸಿದೆ.

ನಾಗರಿಕರ ಒತ್ತಾಯ:

  1. ಪಟ್ಪಣದ ನಾಗರಿಕರು ಹಾಗೂ ಬಸವಣ್ಣನವರ ತತ್ವದಲ್ಲಿ ನಂಬಿಕೆಯುಳ್ಳ ಯುವಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಪಟ್ಟಣದ ಸೌಂದರ್ಯಕ್ಕೆ ಮತ್ತು ಬಸವಣ್ಣನವರ ಘನತೆಗೆ ತಕ್ಕಂತೆ ಈ ವೃತ್ತವನ್ನು ಪುನರ್ ನಿರ್ಮಿಸಬೇಕಿದೆ.
  2. ಬಸವಣ್ಣನವರು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಅವರ ತ್ಯಾಗ ಮತ್ತು ಬಲಿದಾನಕ್ಕೆ ಬೆಲೆ ಕೊಡಬೇಕಾದರೆ, ಕೂಡಲೇ ಈ ವೃತ್ತಕ್ಕೆ ಕಾಯಕಲ್ಪ ನೀಡಿ ಭವ್ಯವಾದ ಬಸವೇಶ್ವರ ವೃತ್ತವನ್ನು ನಿರ್ಮಾಣ ಮಾಡಬೇಕು ಎಂದು ಬಸವ ಅನುಯಾಯಿಗಳು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಕೂಡಲೇ ಈ ಕಡೆ ಗಮನಹರಿಸಿ ಬಸವೇಶ್ವರ ವೃತ್ತದ ನಿರ್ಮಾಣಕ್ಕೆ ಸೂಕ್ತ ಜಾಗ ಹಾಗೂ ಅನುದಾನ ಒದಗಿಸುವ ಮೂಲಕ ಬಸವಣ್ಣನವರ ಗೌರವ ಕಾಪಾಡುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *