ಅಣ್ಣ ಬಸವಣ್ಣನವರ ಬಗ್ಗೆ ಹುಡುಗಾಟದ ಮಾತು ಬೇಡ: ಯತ್ನಾಳಗೆ ರೇಣುಕಾಚಾರ್ಯ ಎಚ್ಚರಿಕೆ

ವೀರಣ್ಣ ಕಲ್ಮನಿ
ವೀರಣ್ಣ ಕಲ್ಮನಿ

“ಮೊನ್ನೆ ಒಂದು ಹೆಜ್ಜೆ ಮುಂದೆ ಹೋಗಿ ಅಣ್ಣ ಬಸವಣ್ಣ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಅಂತ ಹೇಳಿದ್ದೀರ,. ಏನು ಹುಡುಗಾಟ ಆಡ್ತಾ ಇದ್ದೀರಾ…”

ಬೆಂಗಳೂರು

ವಿಶ್ವ ಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಸವ ಗೌಡ ಯತ್ನಾಳರನ್ನು ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಎಂ ಪಿ ರೇಣುಕಾಚಾರ್ಯ ಖಂಡಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಾದ ಪರಿಸ್ಥಿತಿ ಬರಬಹುದೆಂದು ಎಚ್ಚರಿಸಿದ್ದಾರೆ.

ಇದರಿಂದ ಬಸವ ಅನುಯಾಯಿಗಳನ್ನು ತೀವ್ರವಾಗಿ ಕೆರಳಿಸಿದ್ದ ಯತ್ನಾಳರ ವಿವಾದಾಸ್ಪದ ಹೇಳಿಕೆ ಮಹತ್ವದ ರಾಜಕೀಯ ತಿರುವು ಪಡೆದುಕೊಂಡಿದೆ.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡುತ್ತ ರೇಣುಕಾಚಾರ್ಯ ಯತ್ನಾಳರ ವಿರುದ್ಧ ವಾಗ್ದಾಳಿ ನಡೆಸಿದರು. “ನೀವು ಪಕ್ಷದ ನಾಯಕರ ವಿರುದ್ಧ ಮಾತಾಡ್ತೀರ, ಮಠಾದೀಶ್ವರರ ವಿರುದ್ಧ ಮಾತಾಡ್ತೀರ, ಮೊನ್ನೆ ಒಂದು ಹೆಜ್ಜೆ ಮುಂದೆ ಹೋಗಿ ಅಣ್ಣ ಬಸವಣ್ಣ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಅಂತ ಹೇಳಿದ್ದೀರ.”

“ಏನು ಹುಡುಗಾಟ ಆಡ್ತಾ ಇದ್ದೀರಾ… ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳಿ. ಆಗದೆ ಇದ್ದಾರೆ ರಾಷ್ಟ್ರ ನಾಯಕರನ್ನ ಭೇಟಿ ಮಾಡ್ತೀವಿ, ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ, ನಿಮ್ಮನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತ ಒತ್ತಾಯ ಮಾಡ್ತೀವಿ,” ಎಂದು ಎಚ್ಚರಿಕೆ ನೀಡಿದರು.

ಸುದ್ದಿ ಘೋಷ್ಠಿಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿ ಹಲವಾರು ವಿಜಯೇಂದ್ರ ಬಣದ ಜೊತೆ ಗುರುತಿಸಿಕೊಂಡಿರುವ ಪಕ್ಷದ ನಾಯಕರು ಹಾಜರಿದ್ದರು.

ಬಿಜೆಪಿಯಲ್ಲಿ ಯತ್ನಾಳ್ ವಿಜಯೇಂದ್ರ ಬಣಗಳ ತಿಕ್ಕಾಟ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ರೇಣುಕಾಚಾರ್ಯ ಯತ್ನಾಳ್ ಅವರ ಹೆಸರು ಹೇಳದೆ ಅವರನ್ನು ತರಾಟೆಗೆ ತೆಗೆದುಕೊಂಡರು. ಹಿಂದೂ ಹುಲಿ ಎಂದು ಕರೆದುಕೊಂಡು, ಅನಧಿಕೃತವಾಗಿ ಪಕ್ಷದ ಚಿಹ್ನೆ ಬಳಸಿಕೊಂಡು ಸಭೆಗಳನ್ನು ನಡೆಸುತ್ತಿದ್ದೀರಾ, 2023ರ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನೀವೇ ಕಾರಣ ಎಂದು ಹೇಳಿದರು.

ಸುದ್ದಿಘೋಷ್ಠಿಯ ಮುನ್ನ ಬಿಜೆಪಿಯ 20ಕ್ಕೂ ಹೆಚ್ಚು ಮಾಜಿ ಶಾಸಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಎಂ.ಪಿ.ರೇಣುಖಾಚಾರ್ಯ, ಹರತಾಳ್‌ ಹಾಲಪ್ಪ, ಪರಣ್ಣ ಮನವಳ್ಳಿ, ಬಸವರಾಜ್ ದಡೇಸೂರ್, ಗೋಪಾಲ್ ನಾಯಕ್, ಸುನೀಲ್ ಹೆಗಡೆ, ಸುನೀಲ್ ನಾಯಕ್, ಬಸವರಾಜ ನಾಯಕ್, ಪಿಳ್ಳೆ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್, ಎಂ.ಡಿ.ಲಕ್ಷ್ಮಿನಾರಾಯಣ ಇದ್ದರು.

ಸೋಮವಾರ ಬೀದರಿನಲ್ಲಿ ವಕ್ಫ್​ ಹೋರಾಟಕ್ಕೆ ಚಾಲನೆ ನೀಡುವಾಗ ಯತ್ನಾಳ್ ಬಸವಣ್ಣನವರ ಮೇಲೆ ವಿವಾದಾಸ್ಪದ ಹೇಳಿಕೆ ನೀಡಿದರು. ವಕ್ಫ್ ನಿಂದ ನಿಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದರೆ, ನೀವು ಮನೆಯಿಂದ ಹೊರ ಬಂದು ಹೋರಾಟ ಮಾಡಬೇಕಾಗುತ್ತದೆ. “ಜಮೀನು ಹೋದ್ರೂ ನೀವು ಹೊರಗ ಬರಲ್ಲ ಅಂದ್ರ ಬಸವಣ್ಣನವರ ಹಾಗೆ ತುಂಬಿದ ಹೊಳ್ಯಾಗ ಜಿಗಿಯಬೇಕು,” ಎಂದರು.

ಅವರ ಮಾತಿಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Share This Article
5 Comments
  • ಪಕ್ಷದಿಂದ ಉಚ್ಚಾಟಿಸಿ ಎಮ್ಮೆ ಮೇಯಿಸಲು ಕಳಿಸಿ ಅದಕ್ಕೆ ಲಾಯಕ್ ಈ ಮನುಷ್ಯ

  • ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ,ಪಂಚಮಸಾಲಿ ಸಮಾಜದ ಮುಗ್ಧರನ್ನು ಇಂಥವರಿಂದ ಕಾಪಾಡಿ plz.

  • ಗುರು ಬಸವಣ್ಣನವರು ಹೊಳಿಗೆ ಹಾರಲು ಅವರು ಹೇಡಿಗಳಾಗಿರಲಿಲ್ಲ ಇಂಥಹ ದುರಳರನ್ನು ಸಾಕುತ್ತಿರುವ ಪಕ್ಷಕ್ಕಾದರೂ ನೈತಿಕತೆ ಇದ್ದರೆ ತಕ್ಷಣ ಪಕ್ಷದಿಂದ ವಜಾಮಾಡಬೇಕಾಗಿತ್ತು.

    ಬಸವ ಭಕ್ತರು ಇವನ ವಿರುದ್ದ ದೊಡ್ಡ ದ್ವನಿಯಲ್ಲಿ ಪ್ರತಿಭಟಿಸುತ್ತಿದ್ದರು ಪಕ್ಷ ಮೌನವಾಗಿರುವದಕ್ಕೆ ಕಾರಣವಾದರೂ ಹೇಳಲಿ.

    • ಯತ್ನಾಳ ಬಸವಣ್ಣನವರ ಮರಣದ ಬಗ್ಗೆ ಹೇಳಿದ ಹೇಳಿಕೆ ತುಂಬಾ ಖಂಡನೀಯ ಮತ್ತು ಅವಮಾನಕರ.ಈ ಹೇಳಿಕೆಯ ಬಗ್ಗೆ ಹೋರಾಟ ಮಾಡಲಿಕ್ಕೆ ಲಿಂಗಾಯತ ಸಮಾಜ ಇದೆ ಬಸವ ಭಕ್ತರು ಇದ್ದಾರೆ.ಆದರೆ ಇಷ್ಟು ದಿವಸ ಇಲ್ಲದ ರೇಣುಕಾಚಾರ್ಯ ಇವತ್ಯಾಕ ಬಂದ ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ.ರೇಣುಕಾಚಾರ್ಯನಿಗೆ ಬಸವಣ್ಣನವರ ಬಗ್ಗೆ ಮಾತನಿಡಲಿಕ್ಕೆ ಯಾವ ನೈತಿಕ ಹಕ್ಕು ಇಲ್ಲ.ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಆರ್ ಎಸ್ ಎಸ್ ಗುಲಾಮರು ಇವರು.ಇದ್ದಕ್ಕಿದ್ದಂತೆ ಬಸವಣ್ಣನವರ ಮೇಲೆ ಇನ್ನಿಲ್ಲದ ಪ್ರೀತಿ ಯಾಕೆ ಬಂತು?.ಯತ್ನಾಳನಿಗೂ ಇವರಿಗೂ ರಾಜಕೀಯ ಸಂಘರ್ಷ ಇದೆ ಇದರಲ್ಲಿ ಬಸವಣ್ಣನವರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ ಬಂದಿದ್ದಾರೆ ತಮ್ಮ ಕೆಲಸ ಮುಗಿದ ಮೇಲೆ ಹೊರಟು ಹೋಗುತ್ತಾರೆ ಇವರಿಗೆ ಜಾಗ ಕೊಡಬೇಡಿ.ಇವರು ಜಾತಿ ರಾಜಕಾರಣಿಗಳು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟದ ಸಂದರ್ಭದಲ್ಲಿ ಇವರು ಎಲ್ಲಿ ಸತ್ತಿದ್ದರು.ಬಸವಣ್ಣನವರು ಈಗ ನೆನಪು ಆದರಾ?ಇದರಲ್ಲಿ ಅನೇಕ ರಾಜಕೀಯ ಆಯಾಮಗಳಿವೆ ತಮ್ಮ ಸ್ವಾರ್ಥ ರಾಜಕೀಯಕ್ಕೆ ಅಡ್ಡಗಾಲಾಗಿರುವ ಯತ್ನಾಳನನ್ನು ತುಳಿಯಲಿಕ್ಕೆ ಇದೇ ಸಂದರ್ಭ ನೋಡಿ ಸರಿಯಾಗಿ ಬಳಸಿಕೊಳ್ಳುವ ನಾಟಕ.ಇದರಲ್ಲಿ ವಿಶೇಷವೇನು ಇಲ್ಲ. ಇವರಿಗೆ ಬಸವಣ್ಣನವರ ಹೆಸರು ಹೇಳಲಿಕ್ಕೆ ನೈತಿಕತೆ ಇಲ್ಲಾ ಆರ್ ಎಸ್ ಎಸ್ ಗುಲಾಮರಿಗೆ.

  • ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
    ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ,
    ಹೊಕ್ಕು ಭಕ್ತಿಯಲ್ಲಿ, ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು,
    ಮತ್ರ್ಯಕ್ಕೆ ಬಸವೇಶ್ವರನೆಂಬ ಗಣನಾಥನಾಮಮಂ ಪಡೆದು,
    ಭಕ್ತರಿಗೆ ಮುಖ್ಯವಾಗಿ ಭಕ್ತಿಯಂ ತೋರಿ,
    ಸತ್ಯದ ಬಟ್ಟೆಯಂ ಕಾಣದೆ, ಚಿದ್ಘನಲಿಂಗವ ಹೊಗಲರಿಯದೆ,
    ಬದ್ಧಕತನವನು ಸುಬದ್ಧವ ಮಾಡದೆ,
    ಶುದ್ಧಶೈವ ಕಪ್ಪಡಿಯ ಸಂಗಮನಾಥನಲ್ಲಿ,
    ಐಕ್ಯವಾದ ಚಿದ್ರೂಪ ಚಿತ್ಪ್ರಕಾಶಘನಲಿಂಗ,
    ಕೈಯಲ್ಲಿದ್ದಂತೆ ಹೊದ್ದಿದನೇಕರುದ್ರಮೂರ್ತಿಯಲ್ಲಿ.
    ರಜತಾದ್ರಿಯಲಿರ್ದು ಸುಬದ್ಧವಾಗಿ ಪ್ರಳಯವಾಗಿತ್ತು ರುದ್ರಲೋಕವೆಲ್ಲಾ.
    ರುದ್ರಗಣಂಗಳೆಲ್ಲರೂ ಮರ್ದನಂಗೆಯ್ದಲ್ಲಿ,
    ಸುದ್ದಿಯ ಹೇಳುವರನಾರನೂ ಕಾಣೆ.
    ಇನ್ನಿದ್ದವರಿಗೆ ಬುದ್ಧಿ ಇನ್ನಾವುದೊ ?
    ಶುದ್ಧಶೈವವ ಹೊದ್ದದೆ, ಪೂರ್ವಶೈವವನಾಚರಿಸದೆ,
    ಮಾರ್ಗಶೈವವ ಮನ್ನಣೆಯ ಮಾಡದೆ, ವೀರಶೈವವನಾರಾಧಿಸದೆ,
    ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು,
    ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು,
    ಸಕಲೇಂದ್ರಿಯವ ಮರೆದು,
    ಕಾಯಜೀವನ ಹೊಲಿಗೆಯ ಬಿನ್ನಾಣದಿಂ ಬಿಚ್ಚಿ,
    ಬೇರೊಂದರಸಲಿಲ್ಲವಾಗಿ ಬಯಕೆಯರತು,
    ಭವಹಿಂಗಿ, ತಾನೆನ್ನದೆ ಇದಿರೆನ್ನದೆ, ಏನೂ ಎನ್ನದ ಲಿಂಗೈಕ್ಯಂಗೆ
    ಸ್ವಾನುಭಾವದಿಂದ ನಮೋ ನಮೋ [ಎಂಬೆ ]ನಿಃಕಳಂಕ ಮಲ್ಲಿಕಾರ್ಜುನಾ…
    ಈ ವಚನವನ್ನು….‌‌ಓದಿಅರ್ತೈಸಿಕೊಳ್ಳಿ…ಬಾಯಿಗೆ ಬಂದಂತೆ ಮಾತನಾಡುವ ಯತ್ನಾಳ್….

Leave a Reply

Your email address will not be published. Required fields are marked *