ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತರ ಐತಿಹಾಸಿಕ ವಿಶ್ವಗುರು ಬಸವಣ್ಣ ಉದ್ಯಾನವನ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನಿವೃತ್ತರ ಸ್ವರ್ಗ, ಉದ್ಯಾನನಗರಿ ಎಂಬ ಹಿರಿಮೆಯ ಬೆಂಗಳೂರಿಗೆ ಮತ್ತೊಂದು ಗರಿ ಮೂಡುತ್ತಿದ್ದು, ಅರಣ್ಯ ಇಲಾಖೆ 153 ಎಕರೆಯಲ್ಲಿ ಅಭಿವೃದ್ಧಿ ಪಡಿಸಲುದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಚಿವ ಈಶ್ವರ್ ಖಂಡ್ರೆ, ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣ ಮತ್ತು ಮನೋಲ್ಲಾಸ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಂಪುಟ 50 ಕೋಟಿ ರೂ. ಮಂಜೂರು ಮಾಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

265 ವರ್ಷಗಳ ಹಿಂದೆ ಅಂದರೆ 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. 155 ವರ್ಷಗಳ ಹಿಂದೆ ಅಂದರೆ 1870ರಲ್ಲಿ ಕಬ್ಬನ್ ಪಾರ್ಕ್ 197 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡು ಜನಾಕರ್ಷಣೆಯ ತಾಣವಾಗಿದೆ. ಇದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರಕಾರ ಜನತೆಗೆ ಸಮರ್ಪಿಸುತ್ತಿದೆ ಎಂದು ಹೇಳಿದರು.

ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಆಗಲಿರುವ ಈ ಉದ್ಯಾನ ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನವನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಬಹುತೇಕ ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣದ ಕಲ್ಪನೆ ಇಂದು ಸಾಕಾರವಾಗುತ್ತಿದ್ದು, ಇದನ್ನು ಶತಮಾನದ ಸಾಧನೆ ಎಂದರೂ ಅತಿಶಯೋಕ್ತಿಯಾಗಲಾರದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಈ ಹಿಂದೆ ಅರಣ್ಯ ಇಲಾಖೆ ಮಾದಪ್ಪನಹಳ್ಳಿಯಲ್ಲಿರುವ 153 ಎಕರೆ ಪ್ರದೇಶವನ್ನು ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿತ್ತು. ಈಗ ಈ ಜಾಗವನ್ನು ಮರಳಿ ಇಲಾಖೆಗೆ ಪಡೆಯಲಾಗಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತಹಂತವಾಗಿ ತೆಗೆದು ಇಲ್ಲಿ ಸ್ಥಳೀಯ ಪ್ರಭೇದದ ಗಿಡ ಮರ ಬೆಳೆಸಿ, ಜಲ ಗುಂಡಿ ನಿರ್ಮಿಸಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಪ್ರದೇಶದಲ್ಲಿ ಬೆಳೆಸಲಾಗಿರುವ ನೀಲಗಿರಿ ಮರಗಳನ್ನು ತೆಗೆದು ಸ್ಥಳೀಯ ಜಾತಿಯ ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವವೇ ಮೊದಲಾದ ನೂರಾರು ಪ್ರಭೇದದ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಹೀಗೆ ಬೆಳೆಸುವ ಎಲ್ಲ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50 ಮರಗಳನ್ನು ಗುರುತಿಸುವಂತೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
7 Comments
  • ಒಳ್ಳೆಯ ಕಾರ್ಯ ಹಸಿರನ್ನು ಉಸಿರಾಗಿಸಿ ಬದುಕನ್ನು ಸರಿಯಾಗಿ ನಡೆಸಲು ಒಳ್ಳೆಯ ವಿಧಾನ.
    ಶರಣು ಶರಣಾರ್ಥಿಗಳು.

    • ಅತ್ಯುತ್ತಮವಾದ ಕಾರ್ಯ ಕರ್ನಾಟಕ ಸರ್ಕಾರಕ್ಕ ಧನ್ಯವಾದಗಳು

  • ಒಳ್ಳೆಯ ನಿರ್ಧಾರ, ಖಂಡಿತ ಇದನ್ನು ಮಾನ್ಯ ಯಲಕಂಕ ಶಾಸಕರ ನೇತೃತ್ವದಲ್ಲಿ ತುಂಬಾ ಚೆನ್ನಾಗಿ ಕಾರ್ಯರೂಪಕ್ಕೆ ಬರಲಿ ಹಾಗೂ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಸರ್ಕಾರಕ್ಕೆ ನನ್ನ ಧನ್ಯವಾದಗಳು

  • ಯಲಹಂಕದಲ್ಲಿ ಇನ್ನೂ ಬಹಳ ದೊಡ್ಡ ಜಾಗವಿದ್ದು ಇದನ್ನು ಎಲ್ಲದಕ್ಕಿಂತ ದೊಡ್ಡ ಉದ್ಯಾನ ನಗರವಾಗಿ ಮಾಡಬಹುದಿತ್ತು ಕೇವಲ ೧೫೫ ಎಕರೆಗಿಂತ ೨೫೦ ಎಕರೆ ತೆಂಗೆದುಕೊಂಡು ಮಾಡಿದ್ದಾರೆ ಚೆನ್ನಾಗಿತ್ತು ಅನ್ನಿಸುತ್ತಿದೆ

Leave a Reply

Your email address will not be published. Required fields are marked *