‘ದಯವೇ ಧರ್ಮದ ಮೂಲ’ಸಂದೇಶವನ್ನು ಆಚಾರದಲ್ಲಿ ತೋರಿಸಿರುವ ಮಠ
ತುಮಕೂರು
ಸಮಾಜಸೇವೆ, ಶಿಕ್ಷಣ, ಆಶ್ರಯ, ಅನ್ನದಾಸೋಹ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮನ್ವಯದ ಪ್ರತಿರೂಪವಾಗಿರುವ ಸಿದ್ಧಗಂಗಾ ಮಠ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.
ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ, ಗುರುವಂದನೆ ಅಂಗವಾಗಿ ಮಠದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠದ ಸೇವಾ ಕಾರ್ಯಗಳನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದರು. ಇದೇ ವೇಳೆ ಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿ, ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.

“ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವುದು ನನಗೆ ಅಪಾರ ಸಂತಸ ತಂದಿದೆ. ಬಡ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಅನ್ನದಾಸೋಹ ನೀಡುವ ಮೂಲಕ ಮಠವು ಮಾನವೀಯತೆಯ ಮಾದರಿಯಾಗಿದೆ. ‘ದಯವೇ ಧರ್ಮದ ಮೂಲ’ ಎಂಬ ಸಂದೇಶವನ್ನು ಆಚಾರದಲ್ಲಿ ತೋರಿಸಿರುವ ಈ ಮಠ ನಿಜಕ್ಕೂ ಸೇವಾ ಪರಂಪರೆಯ ಹೆಗ್ಗುರುತು,” ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಬಸವಣ್ಣ ಅವರು ಹಾಕಿಕೊಟ್ಟ ಮಾನವೀಯ ಮೌಲ್ಯಗಳ ದಾರಿಯಲ್ಲಿ ಸಿದ್ಧಗಂಗಾ ಮಠ ನಡೆದುಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, “ವೀರಶೈವ-ಲಿಂಗಾಯತ ಮಠಗಳಲ್ಲಿ ಸಿದ್ಧಗಂಗಾ ಮಠ ಮುಂಚೂಣಿಯಲ್ಲಿದ್ದು, ಶಿವಕುಮಾರ ಸ್ವಾಮೀಜಿಗಳ ಜೀವನವೇ ಒಂದು ಪವಾಡ. ಬಡಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದೇ ಅವರ ಜೀವನದ ಮುಖ್ಯ ಗುರಿಯಾಗಿತ್ತು,” ಎಂದು ಹೇಳಿದರು.
ಶಿವಕುಮಾರ ಶ್ರಿಗಳ ಸೇವೆಗೆ ಗೌರವ ನಮನ ಸಲ್ಲಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, “ಮಾನವತಾ ಕಲ್ಯಾಣಕ್ಕಾಗಿ ಶಿವಕುಮಾರ ಶ್ರಿಗಳು ಸಲ್ಲಿಸಿದ ಸೇವೆ ಅನನ್ಯವಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು,” ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿ, “ಶಿವಕುಮಾರ ಸ್ವಾಮೀಜಿಗಳು ಅನಾಥ ಮಕ್ಕಳಿಗೆ ತಂದೆಯಾಗಿ, ಮಾನವೀಯತೆಯ ಜೀವಂತ ಪ್ರತಿರೂಪವಾಗಿದ್ದರು. ಅವರು ಸಾಮಾನ್ಯ ವ್ಯಕ್ತಿಯಿಂದ ಮಹಾನ್ ವ್ಯಕ್ತಿತ್ವವಾಗಿ ಬೆಳೆದವರು,” ಎಂದು ಹೇಳಿದರು.

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, “ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕ್ಷೇತ್ರವಾಗಿಯೇ ಅಲ್ಲ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿಯೂ ರೂಪುಗೊಂಡಿದೆ,” ಎಂದು ಕೊಂಡಾಡಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮಾತನಾಡುತ್ತ, “ನಾಡನ್ನು ಉದ್ಧರಿಸಿದ ಮಹಾಚೇತನರಾದ ಶಿವಕುಮಾರ ಮಹಾಸ್ವಾಮೀಜಿಗಳಿಗೆ ನನ್ನ ಅನಂತ ಪ್ರಣಾಮಗಳು. ಅವರೊಂದಿಗೆ ಕಳೆದ ಕ್ಷಣಗಳು ಹಾಗೂ ನೀಡಿದ ಮಾರ್ಗದರ್ಶನ ಇಂದು ಕೂಡ ನಮ್ಮನ್ನು ಪ್ರೇರೇಪಿಸುತ್ತಿವೆ” ಎಂದು ಭಾವುಕರಾದರು.

ಸಿದ್ಧಗಂಗಾ ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲ; ಅದು ಮಾನವೀಯತೆ, ಸಮಾನತೆ ಮತ್ತು ಸೇವೆಯ ಜೀವಂತ ಪ್ರತೀಕವಾಗಿದೆ. ಮಹಾಸ್ವಾಮೀಜಿಗಳ ತತ್ವಗಳು ಇಂದಿಗೂ ಅನೇಕ ಮಂದಿಗೆ ದಾರಿದೀಪವಾಗಿದ್ದು, ಅವರ ಸ್ಮರಣೆ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ ಎಂದು ನೆನಪಿಸಿದರು.
ರಾಷ್ಟ್ರಪತಿ ಅವರಿಗೆ ಬಸವಣ್ಣ ಮೂರ್ತಿ ಉಡುಗೊರೆ
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಿದ್ದಲಿಂಗ ಸ್ವಾಮೀಜಿ ಅವರು ಬಸವಣ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.

ಭವ್ಯವಾಗಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.

ಈ ಲಿಂಗಾಯತ ಮಠದಲ್ಲಿ ಸಿಕ್ಕಷ್ಟು ಆತ್ಮೀಯ ಗೌರವ, ಪೂಜಾ ಸ್ಥಳಗಳಿಗೆ ಪ್ರವೇಶ ಭಾರತದ ಯಾವುದಾದರೂ ಪೂಜಾ ಸ್ಥಳದಲ್ಲಿ ಇವರಿಗೆ ಸಿಕ್ಕಿತೇ?
ಅಯೋಧ್ಯೆಯಲ್ಲಿ ಗರ್ಭ ಗ್ರಹಕ್ಕೆ ಇವರಿಗೆ ಪ್ರವೇಶ ಕೊಟ್ಟಿಲ್ಲ.