ಕಾನೂನು ಭಯ ಹುಟ್ಟಿಸುತ್ತವೆ, ಸಮಾಜದ ಕೊಳಕ ತೆಗೆಯಲಾರದು
ಸಿಂಧನೂರು
ಕಳೆದ ಹತ್ತು ದಿನಗಳಿಂದ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದುಹೋದ ಹೃದಯವಿದ್ರಾವಕ ಘಟನೆ ಕುರಿತು ನಾನು ನನ್ನ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಬೇಕೆಂದು ಅನಿಸುತ್ತಿದೆ. ಈ ಘಟನೆ ಮನುಷ್ಯನ ಕ್ರೌರ್ಯದ ಪರಮಾವಧಿಯನ್ನು ತೋರಿಸುವುದಲ್ಲದೆ, ಜಾತಿಯ ಜಿಡ್ಡು ಮನುಷ್ಯನ ಮನಸ್ಸಿನಲ್ಲಿ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.
ಕೊಲೆ ಮಾಡುವ ಪ್ರತಿವ್ಯಕ್ತಿಗೂ ಗೊತ್ತಿರುತ್ತದೆ ಈ ನೆಲದ ಕಾನೂನಿನ ಬಗ್ಗೆ ಹಾಗೂ ಮುಂದೆ ಎದುರಾಗುವ ಶಿಕ್ಷೆಗಳ ಬಗ್ಗೆ. ಆದರೂ ನಾಗರಿಕ ಸಮಾಜ ತಲೆತಗಿಸುವಂತಹ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇನಾಂ ವೀರಾಪುರದಲ್ಲಿ ನಡೆದಂತಹ ಘಟನೆಗಳು ಈ ದೇಶದಲ್ಲಿ ನೂರಾರು ನಡೆದಿವೆ. ಕೆಲವು ಬೆಳಕಿಗೆ ಬಂದಿವೆ ಇನ್ನು ಹಲವು ಬೇರೆ ಬೇರೆ ರೂಪ ಪಡೆದು ಅಂದರೆ ಆತ್ಮಹತ್ಯೆ ಅಂತಲೊ, ಅಪಘಾತ ಸಂಭವಿಸಿತು ಅಂತಲೋ, ಇನ್ನೇನೋ ಬಣ್ಣ ಕಟ್ಟಿ ಮುಚ್ಚಿ ಹೋಗಿವೆ.
ಅದೇನಿದ್ದರೂ ಈ ಘಟನೆಯನ್ನು ನಾನು ಅಷ್ಟೇ ಅಲ್ಲ ಎಲ್ಲಾ ಬಸವಪರ ಸಂಘಟನೆಗಳು ಉಗ್ರವಾಗಿ ಖಂಡಿಸುತ್ತವೆ. ಜಾತಿ ತೊಲಗದ ಹೊರತು ಕಲ್ಯಾಣ ರಾಜ್ಯ ಸಾಧ್ಯವಿಲ್ಲ! ನಾನು ಕೂಡ ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ನನ್ನ ನಿಲುವು ಮಾನ್ಯ ಹಾಗೂ ವಿವೇಕಾನಂದರ ಪರ.

ಇಂತಹ ಮರ್ಯಾದೆ ಹತ್ಯೆಗಳನ್ನು ಕಾನೂನಾತ್ಮಕವಾಗಿ ತಡೆಯಬಹುದೇ? ಅಂತರ್ಜಾತಿ ವಿವಾಹಗಳಿಂದ ಜಾತಿ ನಿರ್ಮೂಲನೆ ಮಾಡಬಹುದೇ ? ಬಸವಾದಿ ಶರಣರ ವಿಚಾರಗಳು ಈ ನೆಲದಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿಲ್ಲವೇ ? ಎಂದು ನನ್ನಷ್ಟಕ್ಕೆ ನಾನು ಪ್ರಶ್ನೆ ಹಾಕಿಕೊಂಡಾಗ ಆ ಎರಡು ಯುವ ಜೋಡಿಗಳ ಮುಖದಲ್ಲಿನ ಭಾವನೆ ಅದೇನೋ ಭರವಸೆಯ ಭಾವನೆಯ ಹೊಂದಿದ ಕಣ್ಣುಗಳು ನನ್ನ ಮನಸ್ಸು ಮತ್ತು ಹೃದಯವನ್ನು ಅಕ್ಷರಶಃ ಅಲುಗಾಡಿಸಿದ್ದು ಸತ್ಯ.
ಮನುಷ್ಯ ಪ್ರಾಣದ ಹಂಗು ತೊರೆದರೆ, ಮಾನವೀಯತೆಯನ್ನು ಬದಿಗಿಟ್ಟರೆ ಯಾವ ಕಾನೂನು ಕೂಡ ಆ ಕ್ಷಣದಲ್ಲಿ ಸಂಭವಿಸುತ್ತಿರುವ ದುರ್ಘಟನೆಯನ್ನು ತಡೆಯಲು ಸಾಧ್ಯವಿಲ್ಲ. ಆಮೇಲೆ ಆ ಕ್ರೂರಿಗೆ ಜೀವಾವಧಿ ಶಿಕ್ಷೆಯೋ, ಗಲ್ಲು ಶಿಕ್ಷೆಯೋ ಆಗಬಹುದು. ಅಂದ ಮಾತ್ರಕ್ಕೆ ಇಂತಹ ಘಟನೆಗಳು ಮರುಕಳಿಸುವುದಿಲ್ಲವೆಂದು ಅರ್ಥವಲ್ಲ.
ಮುಂದುವರೆದು ಬುದ್ಧಿಜೀವಿಗಳು, ರಾಜಕೀಯ ಧುರೀಣರು ಎನಿಸಿಕೊಂಡವರು ಅಂತರ್ಜಾತಿ ವಿವಾಹದಿಂದ ಜಾತಿ ನಿರ್ಮೂಲನೆ ಯಾಗುತ್ತದೆ, ಸಮಸಮಾಜ ನಿರ್ಮಾಣವಾಗುತ್ತದೆ ಎಂದು ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾರೆ. ಇದು ಸಾಧ್ಯವೇ? ನೂರಕ್ಕೆ ನೂರರಷ್ಟು ಸಾಧ್ಯವಿಲ್ಲ! ಹಾಗಾದರೆ ಏನು ಮಾಡಬೇಕು. ಬಸವಾದಿ ಶರಣರ ವಿಚಾರಗಳನ್ನು ಸರಕಾರ ಮತ್ತು ಸಮಾಜ ಯಥಾವತ್ತಾಗಿ ಜಾರಿಗೆ ತರಬೇಕು. ಅದರಿಂದ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.
ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿದರು ಎಂದು ಎಲ್ಲರೂ ಹೇಳುತ್ತಾರೆ. ಪುಸ್ತಕದಲ್ಲಿ ಬರೆದಿದ್ದಾರೆ. ಮಸ್ತಕದಲ್ಲಿ ತುಂಬಿದ್ದಾರೆ. ಆದರೆ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಲ್ಲ. ಅವರು ತುಂಬಾ ಬುದ್ಧಿವಂತರು. ಅವರು ಮೊದಲು ಮಾಡಿದ್ದು ಮನಸ್ಸಿನಲ್ಲಿದ್ದ ಜಾತಿಯ ಕಸವನ್ನು, ಜಾತಿಯ ಜಿಡ್ಡನ್ನು, ವರ್ಣ ಸಂಕರವನ್ನು ತೊಲಗಿಸಿದ್ದು. ವಿವಾಹಕ್ಕಿಂತ ಮೊದಲು ಬಸವಣ್ಣನವರು ಆ ಎರಡು ಕುಟುಂಬದ ಸದಸ್ಯರ ಮನದ ಮೈಲಿಗೆಯನ್ನು ಸ್ವಚ್ಛವಾಗಿ ತೊಳೆದರು. ಅಂತರ್ಜಾತಿ ವಿವಾಹ ಯಶಸ್ವಿಯಾಗಬೇಕೆಂದರೆ ಮೊದಲು ಜಾತಿಯ ಭಾವನೆ ನಿರ್ಮೂಲನೆಯಾಗಬೇಕು.

ಮದುವೆ ಆಗುವವರು ಮತ್ತು ಆ ಎರಡು ಕುಟುಂಬದ ಸದಸ್ಯರು ಜಾತಿಯಿಂದ ಒಂದಾಗಬೇಕು. ಆಮೇಲೆ ವಿವಾಹ, ಇದು ಬಸವಣ್ಣನವರ ಯೋಚನೆ ಆಗಿತ್ತು ಎನ್ನುವುದನ್ನು ನಾವು ತಿಳಿಯಬೇಕು.
ಬ್ರಾಹ್ಮಣರ ಮಧುವರಸ ಆತನ ಮಗಳು ಲಾವಣ್ಯವತಿ ಮತ್ತು ಸಮಾಗಾರ ಹರಳಯ್ಯ, ಕಲ್ಯಾಣಮ್ಮ ತಾಯಿ ಮತ್ತು ಶೀಲವಂತ ಇವರೆಲ್ಲರೂ ತಮ್ಮ ತಮ್ಮ ಪೂರ್ವಾಶ್ರಮವನ್ನು ತೊರೆದು ತಾತ್ವಿಕವಾಗಿ ಒಂದಾದರು. ಅವರು ಲಿಂಗವಂತರಾದರು ಸಮಾನತೆಯ ಪ್ರತೀಕವಾದ ಲಿಂಗವನ್ನು ಧರಿಸಿದರು. ಆ ಎರಡು ಕುಟುಂಬಗಳು ಆಚಾರ ವಿಚಾರಗಳಲ್ಲಿ ಹಾಗೂ ಸಿದ್ಧಾಂತ ಮತ್ತು ಯೋಚನೆಗಳಲ್ಲಿ ಒಂದಾದವು. ನಾನು ಬ್ರಾಹ್ಮಣ ನಾನು ಶ್ರೇಷ್ಠ ಎನ್ನುವ ಭಾವನೆ ಮಧುವರಸರಿಗೆ ಇರದೇ ಹೋಯಿತು. ನಾನು ಸಮಗಾರ ನಾನು ಕನಿಷ್ಠ ಎನ್ನುವ ಭಾವನೆ ಹರಳಯ್ಯ, ಕಲ್ಯಾಣಮ್ಮರಿಗೆ ಇರದೇ ಹೋಯಿತು. ಎರಡು ಕುಟುಂಬಗಳು ಲಿಂಗವಂತ ಕುಟುಂಬಗಳಾದವು.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರ್ಣಂಗಳ ಚೇಷ್ಟೆಗೆ ಮನವೇ ಬೀಜ ” ಇಲ್ಲಿ ಬಸವಣ್ಣನವರ ವಿಚಾರವನ್ನು ಅರ್ಥಮಾಡಿಕೊಳ್ಳಬೇಕು. ಜಾತಿಯ ಮದ, ಅಧಿಕಾರದ ಮದ, ಶ್ರೀಮಂತಿಕೆಯ ಮದ, ಸೌಂದರ್ಯದ ಮದ ಹುಟ್ಟುವುದೇ ಮೊದಲು ಮನಸ್ಸಿನಲ್ಲಿ. ಅವುಗಳನ್ನ ಹುಟ್ಟಿದ ಜಾಗದಿಂದಲೇ ತೆಗೆಯಬೇಕು. ಅದಕ್ಕಾಗಿ ಬಸವಣ್ಣನವರು ಕೈ ಹಾಕಿದ್ದು ಮನುಷ್ಯನ ಮೆದುಳಿಗೆ ಹೊರತು ಬಿಜ್ಜಳನ ಅಲಿಖಿತ ಕಾನೂನಿಗಲ್ಲ ಎನ್ನುವುದನ್ನು ನಾವು ತಿಳಿಯಬೇಕಿದೆ.
ಕಾನೂನುಗಳು ಭಯವನ್ನು ಹುಟ್ಟಿಸುತ್ತವೆ ಹೊರತು ಬೇರುಸಹಿತ ಸಮಾಜದ ಕೊಳಕನ್ನು ತೆಗೆಯಲಾರವು. ಎಲ್ಲಾ ಭಾವನೆಗಳ ಮತ್ತು ದುರ್ಭಾವನೆಗಳ ಮೂಲ ಮನಸ್ಸು. ಇದನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ಬಸವಣ್ಣನವರು ಕುಲಸೂತಕ, ಛಲಸೂತಕ, ತನುಸೂತಕ, ಮನಸೂತಕ, ನೆನಹುಸೂತಕ, ಭಾವಸೂತಕ ಅರಹುಮರಹಿನ ಸಂದು ಸಂಶಯದ ಸೂತಕಗಳನ್ನು ಮೊದಲು ಬಿಡಿಸಿದರು. ನಾನು ಹಾರವನಲ್ಲ. ಎನ್ನನೇತಕ್ಕೆ ಅರಿಯರಿ ? ಎಂದು ಪ್ರಶ್ನಿಸಿದರು. ಬಸವಣ್ಣನವರು ಶೀಲವಂತ ಹಾಗೂ ಲಾವಣ್ಯವತಿ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು.
ಎರಡು ಕುಟುಂಬಗಳು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ವಿರೋಧ ಪ್ರತಿರೋಧವಿಲ್ಲದೆ ಆ ಮದುವೆಯನ್ನು ಒಪ್ಪಿಕೊಂಡವು. ಆ ನವಜೋಡಿಗಳನ್ನು ಆಶೀರ್ವದಿಸಿದವು. ಆ ಕಲ್ಯಾಣ ಮಹೋತ್ಸವಕ್ಕೆ ಬಸವಾದಿ ಶರಣರು ಸಾಕ್ಷಿಯಾದರು. ಆದರೆ ಮನಸ್ಸಿನಲ್ಲಿ ಜಾತಿಯ ಜಿಡ್ಡು ಹತ್ತಿಸಿಕೊಂಡಿದ್ದ ಪಟ್ಟಭದ್ರ ಶಕ್ತಿಗಳು ರಾಜಪ್ರಭುತ್ವದ ಕಿವಿ ಕಚ್ಚಿದವು. ಈಗಿನಂತೆ ಪ್ರಜಾಪ್ರಭುತ್ವ ಇದ್ದಿದ್ದರೆ ಆಂದಿನ ವಿವಾಹ ಯಶಸ್ವಿಯಾಗಿ ಕಲ್ಯಾಣ ರಾಜ್ಯ ನಿರ್ಮಾಣವಾಗುತ್ತಿತ್ತು. ಬದಲಾಗಿ ” ಎಳೆಯೂಟೆ ” ಸಂಭವಿಸುತ್ತಿರಲಿಲ್ಲ. ಮಧುವರಸ, ಹರಳಯ್ಯ, ಶೀಲವಂತರ ಕಣ್ಣುಗಳನ್ನು ಕಿತ್ತು ಅವರನ್ನು ಆನೆಯ ಕಾಲುಗಳಿಗೆ ಕಟ್ಟಿ ರಾಜ ಬೀದಿಯಲ್ಲಿ ಎಳೆದೊಯ್ಯುವ ಉಗ್ರವಾದ ಎಳೆಯೂಟೆ ಘನ ಘೋರ ಶಿಕ್ಷೆ ಜರುಗುತ್ತಿರಲಿಲ್ಲ.
ಹನ್ನೆರಡನೆಯ ಶತಮಾನದ ಆ ಕಹಿ ಘಟನೆಗೆ ಕಾರಣ ಆ ಎರಡು ಕುಟುಂಬಗಳಲ್ಲ ಅಂದಿನ ಪಟ್ಟಭದ್ರರು. ಇಂದಿನ ಇನಾಂವೀರಾಪುರ ಘಟನೆಗೆ ಮಾನ್ಯಳ ಕುಟುಂಬ ಕಾರಣ. ಹಾಗಾದರೆ ಈ ವರ್ಣಸಂಕರ ವ್ಯವಸ್ಥೆ ಅಳಿಯಬೇಕಾದರೆ, ಜಾತಿ ನಿರ್ಮೂಲನೆಯಾಗಬೇಕಾದರೆ ಏನು ಮಾಡಬೇಕು ಓದುಗರೆ, ನೀವೇ ಯೋಚಿಸಿ.
ಈ ಜಾತಿಯ ಜಿಡ್ಡು ಎಲ್ಲಾ ಜಾತಿಗಳಲ್ಲಿವೆ. ತಳ ಸಮುದಾಯದ ಒಳಪಂಗಡಗಳಲ್ಲಿ, ಎಡಬಲಗಳಲ್ಲಿ ಇದೆ. ಮೇಲ್ಜಾತಿ ಎನಿಸಿಕೊಂಡವರ ಒಳಪಂಗಡಗಳಲ್ಲಿಯೂ ಇದೆ. ಮೊದಲು ಕುಟುಂಬದಲ್ಲಿ ಸಮಾನತೆ ಬರಬೇಕು ಬಸವಾದಿ ಶರಣರ ಆಶಯಗಳು ಎಲ್ಲರಲ್ಲಿಯೂ ಅಳವಡಬೇಕು. ಹಾಗಾದಾಗ ಮಾತ್ರ ಇನಾಂವೀರಾಪುರದಂತಹ ಘಟನೆಗಳಿಗೆ ವಿದಾಯ ಹೇಳಲು ಸಾಧ್ಯವಾಗುತ್ತದೆ.

ಇದು ಪರೋಕ್ಷವಾಗಿ ಜಾತಿಯತೆಯನ್ನು ಬೆಂಬಲಿಸಿದಂತೆ ಅನಿಸುತ್ತೆ. ಮನಪರಿವರ್ತನೆ ಸರಿ.ಆದರೆ ಅದು ಸಾಧ್ಯವಾ?. ಮನಪರಿವರ್ತನೆಯಾಗಿ ಪ್ರೀತಿ ಮಾಡಿದವರನ್ನು ಯಾಕೆ ಕೊಲ್ಲಬೇಕು ? . ಮನಪರಿವರ್ತನೆ ಇಂದ ಆಗಲ್ಲ ಅಂದ್ರೆ ಕಾನೂನಿನ ಮುಖಾಂತರವಾದರೂ ಪ್ರೀತಿಸಿದ ಜೀವಗಳು ಬದುಕಬೇಕಲ್ಲವೆ ? ಇನ್ನೂ ಮದುವೆ ಎನ್ನುವುದು ಎರಡು ಕುಟುಂಬಗಳು ಒಪ್ಪಬೇಕು ಎನ್ನುವುದು ಸಹ ಆ ಮನುವಾದದಂತೆ . ಒಂದು ಸಂದರ್ಶನದಲ್ಲಿ ಮೋಹನ ಭಾಗವತ್ ಹೀಗೆ ಹೇಳಿದ್ದಾರೆ . ಅವರು ಹೇಳತಾರೆ ರೋಟಿ ಸಹಿ ಹೈ ಲೇಕಿನ್ ಬೇಟಿ ಹೇ ನಹಿ ಹೋತಾ . ಅಂದ್ರೆ ಊಂಬುದು ಉಡುವುದು ಸರಿ ಆದರೆ ಸಂಭಂಧ ಬೆಳಸುವುದು ಬೇಡ ಎಂದು. ಮನುಷ್ಮೃತಿಯಲ್ಲಿ ಮನು ಇದನ್ನೆ ಹೇಳಿದ್ದಾನೆ. ಅದಕ್ಕೆ ಇದು ಮತ್ತೊಂದು ತರ ಆ ಮನುವಾದವನ್ನು ಜೀವಂತ ಇಡುವ ಪ್ರಯತ್ನದ ಭಾಗ. ಆದರೆ ಶರಣರು ಹಾಗೆ ಹೇಳಲಿಲ್ಲ ‘ ಉಂಬುದು ಉಡುವುದು ಶಿವಾಚಾರ ಕೊಂಬುದು ಕೊಡುವುದು ಕೊಡುವುದು ಕುಲಾಚಾರ ಎಂಬ ಅನಾಚಾರಿಗಳ ಮುಖವ ನೋಡಲಾಗದು ” ಅಂತ. ಇದೆ ಬಸವ ಧರ್ಮಕ್ಕೆ ಮತ್ತು ಸನಾತನ ಧರ್ಮಕ್ಕೆ ಇರುವು ವ್ಯತ್ಯಾಸ.
ಇನ್ನೂ ಕಲ್ಯಾಣದ ಆ ಮದುವೆಯನ್ನು ಇಂದು ಅಂತರ್ಜಾತಿ ಮದುವೆಯಲ್ಲ ಎಂದು ಬಿಂಬಿಸುವುದು ಸಹ ಜಾತಿಯತೆನೆ ಗಟ್ಟಿ ಮಾಡುವ ಪ್ರಯತ್ನ ಭಾಗ. ಒಂದು ವೇಳೆ ಅಂತರ್ಜಾತಿ ಮದುವೆ ಅಲ್ಲದಿದ್ದರೆ ಅವರಿಗೇಕೆ ಏಳೆಹೂಟೆ ಶಿಕ್ಷೆ. ಅಲ್ಲಿ ಯಾರ್ಯಾರಿಗೆ ಶಿಕ್ಷೆ ಆಯಿತು. ನಿಜಾ ಇಂದು ಮನಪರಿವರ್ತನೆ ಸಾಧ್ಯವಿಲ್ಲ ಅಂತ ಅನ್ನುಕೊಳ್ಳೊಣ , ಆದರೆ ಕಾನೂನಿನ ಭಯದಿಂದಾದರೂ ಪ್ರೀತಿಸಿದ ಆ ಜೀವಗಳು ಬದುಕುವಂತೆ ಆಗಲಿ ಎನ್ನುವುದು ಬಸವ ಧರ್ಮದ ಆಸೆ.
ಇಂದು ಬಸವಣ್ಣ ಮತ್ತು ಬಸವ ತತ್ವ ಕೇಲವೊಬ್ಬರಿಗೆ ವೇದಿಕೆಯ ಪ್ರತಿಷ್ಠೆ ಆಗಿದೆ , ಇನ್ನೂ ಕೆಲವರಿಗೆ ಅದು ಹೊಟ್ಟೆಪಾಡಿನ ಬಂಡವಾಳ ಆಗಿದೆ ಅಷ್ಟೆ. ಲಿಂಗಾಯತನಾಗುವುದೆಂದರೆ ಬರಿ ವಿಭೂತಿ , ರುದ್ರಾಕ್ಷಿ , ಶರಣು ಶರಣಾರ್ಥೀಗಳು ಅಂತ ನಾಟಕೀಯವಾಗಿ ಹೇಳೋದು ಅಲ್ಲ . ಲಿಂಗಾಯತನಾಗುವುದೆಂದರೆ ನಿರ್ಜಾತಿಕರಣನಾಗುವುದು. ” ಶಿವ ಭಕ್ತರಾಗಿ ಕೊಟ್ಟು ಕೊಂಬುದೆ ಸದಾಚಾರ ” ಅಂತ ಅಪ್ಪ ಬಸವಣ್ಣನವರ ಆದೇಶವು ಆಗಿದೆ.
ಬಾದರ್ಲಿ ಯವರೇ ನಿಮ್ಮ ಲೇಖನಕ್ಕೆ ಲಿಂಗಾಯತ ಸಮಾಜದ ಸಕ್ರಿಯ ಬೆಂಬಲ ನಿರೀಕ್ಷಿಸಿದ್ದೆ ಆದರೆ ಪ್ರತಿಕ್ರಿಯೆ ಸೊನ್ನೆಯಾಗಿದೆ! ಇದು 21 ಅಲ್ಲ 12ರಲ್ಲೇ ಕಲ್ಯಾಣದಿಂದ ದೂರವೇ ಉಳಿದವರ ಸಂತತಿಗಳು ನಾವು ಇರಬಹುದೇ ಎಂಬ ಸಂಶಯ ಮೂಡುತ್ತಿದೆ! ಈ ಹಿನ್ನೆಲೆಯಲ್ಲಿ ಬಸವಣ್ಣ ಶರಣತತ್ವ … ಅನುಭವ ಮಂಟಪ…ಸಾಂಸ್ಕೃತಿಕ ನಾಯಕ … ಥೇಮ್ಸ್ ನದಿ …ಬ್ರಿಟಿಶ್ ಪಾರ್ಲಿಮೆಂಟ್ ವಿಶ್ವ ಗುರು ಇತ್ಯಾದಿ ಪದಗಳೆಲ್ಲಾ ನಮ್ಮನ್ನು ಅಣಕಿಸುತ್ತಿರುವಂತೆ ಭಾಸವಾಗುತ್ತಿದೆ! ನಾವು ಇವನಮ್ಮವ ಎನ್ನುವುದನ್ನು ಇನ್ನೂ ಕಲಿತಿಲ್ಲ …ಇವನಾರವ ಎಂದು ಪ್ರಶ್ನಿಸುತ್ತಲೇ ಇದ್ದೇವೆ…! ಇದರಿಂದ ಬಸವ ಧರ್ಮ ಸ್ವತಂತ್ರ … ಮಾನ್ಯತೆ ಬೇಕು ಎಂಬುದಕ್ಕೆ ಅರ್ಥವಾದರೂ ಎಲ್ಲಿದೆ ಹೇಳಿ?
ಕಾನೂನು ಹೆಣ್ಣಿಗೆ ಮದುವೆ ವಯಸ್ಸು 18 ಎಂದಿದೆ… 19 ರಲ್ಲಿ ಆಕೆ ದಲಿತನ ಪ್ರೀತಿಯ ಸೆಳೆತಕ್ಕೆ ಒಳಗಾಗಿ … ತನ್ನ ಕುಟುಂಬದವರ ಎಲ್ಲೆ ಮೀರಿ ಮದುವೆಯೂ ಆಗಿ 6 ತಿಂಗಳ ಗರ್ಭಿಣಿ ಯಾದಮೇಲೂ ಬಾಣಂತನದ ನೆಪದಲ್ಲಿ ಕರೆಸಿ ಕೊಚ್ಚಿ ಹಾಕಿರುವುದನ್ನು ಕಂಡಾಗ… ಹೆತ್ತು ಹೊತ್ತು ಸಲಹಿದ ಮಗಳನ್ನು ಮೋಸದಿಂದ ಕೊಂದದ್ದು ಹಾಗೂ ಇಂತಹ ಕೊಲೆಗಡುಕ ಮನಸ್ಥಿತಿಯನ್ನು ಲಿಂಗಾಯತ ಸಮಾಜ ಒಪ್ಪಬೇಕೆ? ಪರಿಸ್ಥಿತಿ ಪ್ರೀತಿ ಪ್ರೇಮದ ಹಂತಕ್ಕೆ ತಲುಪುವ ಮುನ್ನವೇ ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ತಂದೆ ನಿಜಕ್ಕೂ ಒಬ್ಬ ಜವಾಬ್ದಾರಿಯುತ ತಂದೆಯೇ ? ಜಾಲಿಂ ಮ ಗದಗದ ನಡೆ ಇತರೆ ಜಿಲ್ಲೆಗಳಿಗೆ ಮಾದರಿಯಾಗುವ ಬದಲು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವೊಬ್ಬರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿರುವುದು ಏನನ್ನು ತೋರಿಸುತ್ತದೆ? ಇಂತಹ ದರಿದ್ರ ಮನಸ್ಥಿತಿಯವರು ಜಾಲಿಂ ಮ ದಲ್ಲಿ ಇರಬೇಕಾದರೂ ಏಕೆ? ಇತರೆ ಜಿಲ್ಲೆಗಳು ಕನಿಷ್ಠ ಕೊಲೆಗಡುಕ ನಮ್ಮವನಲ್ಲ… ನಡೆಯಬಾರದ್ದು ನಡೆದಿರುವುದಕ್ಕೆ ನಮ್ಮ ಪ್ರಾಯಶ್ಚಿತ ಎಂದು ಗದಗದ ಮಾದರಿ ಅನುಸರಿಸಲು ಇರುವ ಆಡ್ಡಿಯಾದರೂ ಏನು? 12 ರಂತಹ ವೈದಿಕ ಮನಸ್ಸಿನ ಕೊಳೆ 21 ರಲ್ಲೂ ಮುಂದುವರೆಯಬೇಕಾ? ಮಠಾಧಿಪತಿಗಳೆಲ್ಲಾ ಎಲ್ಲಿ ಹೋಗಿದ್ದಾರೆ? ದಕ್ಷಿಣೆ ಡೊನೇಷನ್ ವಿದ್ಯೆಯನ್ನು ಉದ್ಯಮವಾಗಿಸಿ ಹರಿದು ಬರುವ ಲಾಭ ಎಣಿಸಿಕೊಳ್ಳುತ್ತಿರವ ನಡುವೆ …ಪಾಪ ಇಂತಹ ಬೆಳವಣಿಗೆಗಳು ಮುಂದುವರೆಯದಂತೆ ಬುದ್ಧಿ ಹೇಳಲೂ ಅವರಿಗೆ ವೇಳೆ ಇಲ್ಲದಷ್ಟು ಬ್ಯೂಸಿಯಾಗಿದ್ದಾರಾ? ನನಗಂತೂ ತಡೆಯಲಾಗದೆ ನನ್ನ ಮೆಟ್ಟಿನಿಂದ ನಾನೇ ಹೊಡೆದುಕೊಳ್ಳುವಂತಾಗಿದೆ!
https://basavamedia.com/manya-hatye-poem/#
ಡಾ. ರಾಜಶೇಖರ ನರನಾಳ ಸರಿಯಾಗಿ ಹೇಳಿದ್ದೀರಿ. ಆರ್ಥಿಕ ಸಮಾನತೆ, ಶಿಕ್ಷಣ ಅಂತರ್ಜಾತಿಯ ಮದುವೆಗೆ ಪೂರಕವಾಗಬಹುದು. ಪ್ರತಿ ಅಂತರ್ಜಾತಿಯ ವಿವಾಹಗಳಾದಾಗ ಆಡಳಿತ ವ್ಯವಸ್ತೆ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
Intercast marriages will be successful if both girl and boy are highly educated and have both same quality of food and secondly have same language by which they can Interract/ exchange their views .In their relation no cast/ religion comes between them.This comes only after fully matured girl and boy who are more than 24/26 years old.and finally I conclude that if both are accepted Basavdharm then they lead their life happily.
ಇದಕ್ಕೆ ಶಾಶ್ವತ ಪರಿಹಾರದ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ ಜಾತಿ, ಧರ್ಮ ನಿ೯ಮೂಲನೆಯಾಗಲೂ ಸಾಧ್ಯವೇ ಇದು ಕನಸಿನಲ್ಲೂ ಸಾಧ್ಯವಿಲ್ಲ ಎಲ್ಲರಿಗೂ ಅವರ ಧರ್ಮ, ಜಾತಿ ಮೇಲು ಎಂಬ ಮನಸ್ಥಿತಿ ಇದೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಮತ್ತು ಧರ್ಮ ಖಾಲಂ ತಡೆಯಬೇಕು ಇದು ಸಕಾ೯ರ ಮಾಡಲು ಸಾಧ್ಯವಿಲ್ಲ ಇದಕ್ಕೆ ಜಾತಿಯ ವ್ಯವಸ್ಥೆಯಲ್ಲಿ ಲಾಭ ಪಡೆಯವರು ಮೊದಲೇ ಒಪ್ಪುವುದಿಲ್ಲ ಅಲ್ಲವೇ ? ಇದಕ್ಕೆ ಕಡಿವಾಣ ಹಾಕಲು ಮದುವೆ ವಯಸ್ಸು ಹೆಣ್ಣಿಗೆ 18 ಬದಲು 25 ಮಾಡಿ ಗಂಡಿಗೆ 28 ಮಾಡಿ ಅಲ್ಲಿಗೆ ಅವರ ವಿಧ್ಯಾಭ್ಯಾಸ ಮುಗಿದು , ಯೌವ್ವನದ ರಕ್ತ ಕಡಿಮೆ ಯಾಗಿ ಜವಾಬ್ದಾರಿ ತನ ಬಂದಿರುತ್ತದೆ .
ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ ಒಂದು ನೆಪ ಅಷ್ಟೆ. ಧನಿಕ ಅಥವಾ foreign settled ಬೇಡ ಬಿಡಿ,ವಿದೇಶಿ ಹುಡುಗ ಹುಡುಗಿ ಆದ್ರೂ ಒಪ್ಪಿಕೊಳ್ತಿವಿ, ಆದ್ರೆ ಬಡವರ ಮಕ್ಕಳು ಆಗ್ಬಾರ್ದು ಸಂಕ್ಸಿಪ್ತದಲ್ಲಿ ಎಲ್ಲಾ ದುಡ್ಡಿನ ಮಹಿಮೆ