ಬೆಂಗಳೂರು:
ಬಸವಣ್ಣನ ವಿಚಾರಗಳನ್ನು ಮುಟ್ಟಿಸಲು ನಾವು ಎಲ್ಲಿ ಸೋತಿದ್ದೇವೆ ಎಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿದರು.
‘ಹುಬ್ಬಳ್ಳಿಯಲ್ಲಿ ಒಂದೆರಡು ಲಕ್ಷ ಲಿಂಗಾಯತರಿದ್ದಾರೆ. ಬಸವ ಜಯಂತಿ ಪ್ರಯುಕ್ತ ಮೆರವಣಿಗೆ ಮಾಡಿದರೆ 250 ರಿಂದ 300 ಜನ ಸೇರಿದರೆ ಹೆಚ್ಚು. ಆದರೆ, ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಿದರೆ 2500 ರಿಂದ 3000 ಜನ ಸೇರುತ್ತಾರೆ. ಇವರ ಹೃದಯದೊಳಗೆ ಏನಿದೆ ಎಂದು ತಿಳಿಯುವ ಕೆಲಸವಾಗಬೇಕು,’ ಎಂದು ಪ್ರಜಾವಾಣಿ ವರದಿ ಮಾಡಿದೆ.
ಬಸವ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಬಿ.ಡಿ. ಜತ್ತಿಯವರ 112ನೇ ಜನ್ಮದಿನೋತ್ಸವ ಹಾಗೂ ಬಸವ ಸಮಿತಿ ವಜ್ರಮಹೋತ್ಸವದಲ್ಲಿ ಮಾತನಾಡಿದರು.
ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕೆಂದು ಆದೇಶಿಸಿದ್ದರು. ರಾಜ್ಯದಲ್ಲಿ ವಿಮಾನ ನಿಲ್ದಾಣವೊಂದಕ್ಕೆ ಬಸವೇಶ್ವರರ ಹೆಸರಿಡುವ ಸಂಬಂಧ ಅವರಿಗೆ ಮನವರಿಕೆ ಮಾಡಬೇಕು. ಅದಕ್ಕೆ ಎಲ್ಲರೂ ಶ್ರಮಿಸೋಣ ಎಂದು ಬಸವರಾಜ ಹೊರಟ್ಟಿ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ‘ವಚನಗಳು ಮಾನವೀಯತೆಯ ಭಂಡಾರವಾಗಿದ್ದು, ಅವುಗಳನ್ನು ಸರ್ವರಿಗೂ ತಲುಪಿಸಬೇಕು ರಾಜ್ಯ, ದೇಶ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ ಸಾಧಿಸಲು ಬಸವಣ್ಣನ ತತ್ವಗಳು ಬೇಕಾಗಿದೆ. ’ ಎಂದು ಹೇಳಿದರು.
‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಸರಿಸಮಾನವಾಗಿ ಬದುಕುವುದಾದರೆ, ನಿರ್ಭಯವಾಗಿ ಓಡಾಡುವುದಾರೆ ಅದು ಈ ದೇಶದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲರಿಗೂ ಸಮಾನತೆ, ಸೌಹಾರ್ದತೆ, ಬ್ರಾತೃತ್ವ ಸಂದೇಶವನ್ನು ಸಾರುವ ಸಂವಿಧಾನ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು,’ ಎಂದು ಯು.ಟಿ.ಖಾದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಪ್ರಕಾಶ ಮುರಿಗಪ್ಪ ಚಿಗಟೇರಿ, ಡಾ.ಸಿ.ಎಂ. ಕುಂದಗೋಳ, ಹರೀಶ್ ಆರ್. ಹಿರೇಮಠ, ಶಂಕರ್ ಬಿ. ಗುಡಸ್, ವಚನ ಕುಮಾರಸ್ವಾಮಿ, ಡಾ.ಜಿ.ವಿ. ಜಯರಾಜಶೇಖರ್ ಮತ್ತು ವೀರೇಂದ್ರ ಮಂಗಳ ರವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ, ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಮಭ್ಭಕ್ತರು ನಮ್ಮ ಜನ, ಬದಲಾಯಿಸುವುದು ಬಲು ಕಷ್ಟ ಇವರನ್ನು .🙏🙏