ಭಾಲ್ಕಿ
ಕಬ್ಬು ತುಂಬಿದ ಲಾರಿ ತಗುಲಿ ಬಸವಣ್ಣನವರ ಪ್ರತಿಮೆ ವಿರೂಪವಾಗಿರಬಹುದು ಎಂಬ ಪೊಲೀಸ್ ಹೇಳಿಕೆಯ ಹಿನ್ನೆಲೆಯಲ್ಲಿಯೇ ಬಸವ ಭಕ್ತರು ಕಿರಿದಾಗಿರುವ ದಾಡಗಿ ಕ್ರಾಸ್ ರಸ್ತೆಯನ್ನು ವಿಸ್ತರಿಸಲು ಆಗ್ರಹ ಪಡಿಸಿದ್ದಾರೆ.
ತಾಲೂಕಿನ ದಾಡಗಿ ಕ್ರಾಸ್ ಸಮೀಪದ ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ಬುಧವಾರ ಗ್ರಾಮಸ್ಥರು ಹಾಗೂ ಬಸವ ಭಕ್ತರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.
“ಮೂರ್ತಿ ಇರುವ ರಸ್ತೆ ವಿಸ್ತರಣೆ ಮಾಡಬೇಕು, ಬಸವ ಮಹಾದ್ವಾರ ನಿರ್ಮಿಸಬೇಕು. ಕ್ರಾಸ್ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು, ಸರ್ಕಾರದಿಂದ ಬಸವಣ್ಣನವರ ಹೊಸ ಮೂರ್ತಿ ಸ್ಥಾಪಿಸಬೇಕು,” ಎಂದು ಬಸವಭಕ್ತರಾದ ನಾಗಶೆಟ್ಟಿ ಚೋಳಾ ಸೇರಿದಂತೆ ಇತರರು ಆಗ್ರಹಿಸಿದರು.
ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಬಸವ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಸುರಪುರ ತಾಲೂಕು ವೀರಶೈವ-ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಡಾ.ಸುರೇಶ ಸಜ್ಜನ್ ಅವರು ಹೇಳಿದರು.
ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ, ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಒಂದು ವೇಳೆ ಆರೋಪಿಗಳನ್ನು ಬಂದಿಸದಿದ್ದಲ್ಲಿ ತಾಲೂಕು ವೀರಶೈವ-ಲಿಂಗಾಯತ ಸಮಾಜ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ್ದನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಕಾಶಿನಾಥ ಭೂರೆ, ವಿಠಲರಾವ್ ಬಿರಾದಾರ, ಹಿರೇಮಠ ಸಂಸ್ಥಾನ ಚಿಂತನಾ ವೇದಿಕೆಯ ವಿಶ್ವನಾಥಪ್ಪ ಬಿರಾದಾರ, ಶರಣಪ್ಪ ಬಿರಾದಾರ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವ ಭಕ್ತರಾದ ಕಿರಣಕುಮಾರ ಖಂಡ್ರೆ, ನಾಗಶೆಟ್ಟಿ ಚೋಳಾ, ವಿಲಾಸ ಪಾಟೀಲ, ವಕೀಲ ಸಿದ್ದುಪಾಟೀಲ, ಅಶೋಕ ಪಾಂಚಾಳ, ಬಸವರಾಜ ಹುಡಗೆ, ಬಸವರಾಜ ಮಾಕಾ, ಆನಂದ, ಕಲ್ಯಾಣರಾವ್ ಕುಂಬಾರಗೆರೆ, ನಂದಕುಮಾರ, ಜೀತು ಪಾಟೀಲ, ಕಿಶೋರ, ಮಹೇಶ ಧುಳೆ ಸೇರಿದಂತೆ ನೂರಾರು ಸಂಖೆಯಲ್ಲಿ ದಾಡಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಧಾವಿಸಿದ ಖಟಕಚಿಂಚೋಳಿ ಪೊಲೀಸರು, ಭಾಲ್ಕಿ ಉಪವಿಭಾಗದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಪ್ರತಿಭಟನಕಾರರ ಮನವಿ ಸ್ವೀಕರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
‘ಮೇಲ್ನೋಟಕ್ಕೆ ಕಬ್ಬು ತುಂಬಿದ ಲಾರಿ ತಗುಲಿ ಮೂರ್ತಿ ವಿರೂಪವಾದಂತೆ ಕಾಣುತ್ತಿದೆ. ಮೂರ್ತಿಗೆ ಕಬ್ಬು ಸವರಿದ ಗುರುತು ಕಬ್ಬಿನ ರಸದ ಕಲೆ ತಗುಲಿರುವುದು ಕಂಡು ಬಂದಿದೆ. ಆದರೂ ಕೂಲಂಕಷ ತನಿಖೆ ನಡೆಸಿ ಯಾರಾದರೂ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆಯೇ ಎಂಬುದನ್ನು ಸಹ ಪರಿಶೀಲಿಸಲಾಗುವುದು. ದಾಡಗಿ ಕ್ರಾಸ್ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಲಾಗಿದೆ’ ಎಂದು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಬಸವ ಮೂತಿ೯ ವಿರುಪಗೋಳಿಸಿದ ಕಿಡಿಗೇಡಿಗಳಿ ಶಿಕ್ಷಿಸುವಂತೆ ಹೋರಾಟ ನಡೆಸುತ್ತಿರುವ ಎಲ್ಲಾ ಶರಣರಿಗೂ ಅನಂತ ಶರಣುಗಳು🙏🙏