ಬಸವಣ್ಣನವರ ಬಲಭಾಗದಲ್ಲಿ ರೇಣುಕಾ ಫೋಟೋ ಇಡಿಸಲು ಪಂಚಪೀಠಗಳ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ನಗರದ ರೇಣುಕಾ ಮಂದಿರದಲ್ಲಿ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ನಿರೀಕ್ಷಿದಂತೆ ಜಾತಿಗಣತಿ ವೇಳೆ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕು ಎಂದು ಸಮ್ಮೇಳನದ ಉದ್ದಕ್ಕೂ ಮಾತನಾಡಿ ನಂತರ ನಿರ್ಣಯಗಳಲ್ಲಿಯೂ ಸೇರಿಸಲಾಗಿದೆ.

ತನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಬಲಭಾಗದಲ್ಲಿ ರೇಣುಕಾಚಾರ್ಯರ ಫೋಟೋ ಇಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾಗೆ ಮತ್ತೊಂದು ಮುಖ್ಯವಾದ ನಿರ್ಣಯದ ಮೂಲಕ ನಿರ್ದೇಶನ ನೀಡಲಾಗಿದೆ.

“ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿ, ಬಸವಣ್ಣವರ ಬಲಭಾಗದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹಾಕದೇ ಕೆಲವು ಸಂಘಟನೆಗಳು ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಗಮನಕ್ಕೆ ಬಂದಿದೆ. ಹಾಗೆ ಮಾಡಬಾರದು. ಈ ಮೂಲಕ ಮಹಾಸಭಾಗೆ ತಿಳುವಳಿಕೆ ಕೊಡುತ್ತೇವೆ,” ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಎರಡು ತಿಂಗಳ ಹಿಂದೆ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಇದೇ ವಿಷಯದ ಮೇಲೆ ಸುತ್ತೋಲೆ ಕಳಿಸಿ ವೀರಶೈವ ಮಹಾಸಭಾದ ಹಲವಾರು ಘಟಕಗಳಿಂದಲೂ ವಿರೋಧ ಎದುರಿಸಿದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

1) ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು

2) ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟು ಇರಬೇಕು

3) ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು

4) ಜಾತಿಗಣತಿ ವಿಚಾರವಾಗಿ ನಿಯೋಗದ ಮೂಲಕ ಪ್ರಧಾನಿ ಭೇಟಿ.

5) ವೀರಶೈವ ಲಿಂಗಾಯತ ಒಳಪಂಗಡಗಳಿಗೆ ನೀಡಲಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀಸಲಾತಿ ಮುಂದುವರಿಕೆ ಆಗಬೇಕು.

6) ವೀರಶೈವ ಲಿಂಗಾಯತ ಮಹಾಸಭಾ ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಸಂಘಟನೆಗಳು ಯಾವುದೇ ಕಾರ್ಯಕ್ರಮ, ರ್ಯಾಲಿ ಸೇರಿದಂತೆ ಸಮಾರಂಭ ನಡೆಸಿದರೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕಬೇಕು.

ಪಂಚಪೀಠಾಧ್ಯಕ್ಷರ ಐದು ಫೋಟೋ ಹಾಕಲು ಕಷ್ಟವಾಗುತ್ತದೆ. ಐದೂ ಫೋಟೋ ಹಾಕಲು ಸಾಧ್ಯ ಆಗದಿದ್ರೆ ರೇಣುಕಾಚಾರ್ಯರ ಒಂದು ಫೋಟೋವಾದರೂ ಇರಬೇಕು ಎಂಬುದು ಪಂಚಪೀಠಾಧ್ಯಕ್ಷರ ಬಯಕೆ. ಇದಕ್ಕೆ ಎಲ್ಲರ ಸಹಮತ ಇದೆ.

7) ವೀರಶೈವ ಲಿಂಗಾಯತ ಸಮುದಾಯದ ತತ್ವ, ಸಿದ್ಧಾಂತ ಮನವರಿಕೆ ಮಾಡಿಕೊಡಬೇಕು.

8) ಗುರು ಪರಂಪರೆ, ಪ್ರಾಚೀನ ಪರಂಪರೆ ಆಚರಣೆ ಸೇರಿದಂತೆ ಹಿಂದಿನಂತೆ ಎಲ್ಲವೂ ನಡೆಯುವಂತಾಗಬೇಕು ಯುವಜನಾಂಗದವರಿಗೆ ವೀರಶೈವ ಲಿಂಗಾಯತ ಧರ್ಮದ ಆಚರಣೆ, ಇತಿಹಾಸ, ಧಾರ್ಮಿಕ ಪರಂಪರೆ ತಿಳಿಸಿಕೊಡುವ ಕೆಲಸ ಆಗಬೇಕು.

9) ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳ ವಿಕಲಚೇತನರು, ಶೋಷಿತರ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು.

10) ಪಂಚಪೀಠಗಳು ಮತ್ತು ಶಾಖಾ ಮಠಗಳ ನಡುವೆ ಉತ್ತಮ ಬಾಂಧವ್ಯ, ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಪೀಠಾಧ್ಯಕ್ಷರು ಶಾಖಾ ಮಠಗಳ ಸಮಸ್ಯೆ ಪರಿಹರಿಸಲು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.

11) ಪ್ರತಿವರ್ಷವೂ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಸಭೆ ನಡೆಸಿ ವೀರಶೈವ ಲಿಂಗಾಯತ ಪರಂಪರೆ ಆದರ್ಶ ಪಾಲನೆ ಮಾಡಲಾಗುವುದು.

12) ಉತ್ತರ ಭಾರತದ ದೆಹಲಿ, ರಾಜಸ್ತಾನ, ಜಮ್ಮುಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತ ಸಮುದಾಯದವರು ವಾಸವಿದ್ದು, ಅವರಿಗೂ ಸರ್ಕಾರಿ ಸೌಲಭ್ಯಗಳು, ಯೋಜನೆಗಳನ್ನು ರೂಪಿಸಬೇಕು.

ಗುರು, ವಿರಕ್ತ ಪರಂಪರೆಗಳು ಒಂದಾಗಲಿ

ವೀರಶೈವ ಲಿಂಗಾಯತ ಧರ್ಮದ ಗುರು ಮತ್ತು ವಿರಕ್ತ ಪರಂಪರೆಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಪಂಚಪೀಠಾಧೀಶ್ವರರು ನೇತೃತ್ವ ವಹಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗದ ಎರಡನೇ ದಿನವಾದ ಮಂಗಳವಾರದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2,500ಕ್ಕೂ ಅಧಿಕ ವೀರಶೈವ ಲಿಂಗಾಯತರ ಮಠಗಳಿದ್ದು, ಇವುಗಳು ಒಗ್ಗೂಡಬೇಕು. ಇದು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಮಠಾಧೀಶರು ಇದರ ನೇತೃತ್ವ ವಹಿಸಬೇಕು. ಸಮಾಜದಲ್ಲಿರುವ ಅಂಕುಡೊಂಕು ಸರಿಪಡಿಸಿ, ಗುರು–ವಿರಕ್ತರನ್ನು ಒಂದುಗೂಡಿಸಬೇಕು. ರಂಭಾಪುರಿ ಸ್ವಾಮೀಜಿ ಸಾರಥ್ಯದಲ್ಲಿ ಇದು ಸಾಕಾರಗೊಳ್ಳಬೇಕು’ ಎಂದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ಸಿ.ಸಿ.ಪಾಟೀಲ, ಬಿ.ಪಿ.ಹರೀಶ್‌, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್‌ ಮುಖಂಡ ಆಯನೂರು ಮಂಜುನಾಥ್‌, ಮಾಜಿ ಶಾಸಕರಾದ ಮಹಿಮ ಪಟೇಲ್‌, ಎಚ್‌.ಎಸ್‌.ಶಿವಶಂಕರ್‌, ಎಚ್‌.ಎಸ್‌.ಶಿವಯೋಗಿಸ್ವಾಮಿ ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *