ಬೀದರ
ಹೆಣ್ಣಿನ ಸ್ಥಿತಿ ಗತಿಯನ್ನು ಭಾರತೀಯ ಇತಿಹಾಸದ ಯುಗಯುಗಾಂತರಗಳಲ್ಲಿ ಅವಲೋಕಿಸಿದಾಗ ಅಲ್ಲಿ ಹರಿದ ಕಣ್ಣೀರು, ಬತ್ತಿದ ಭಾವನೆ, ಹೆಣ್ಣಾಗಿ ಹುಟ್ಟುವುದೇ ಶಾಪ – ಪಾಪವೆಂಬ ದೈನ್ಯತೆ- ಹೀನತೆಗಳ ಕಾರ್ಗತ್ತಲೆ ಕಂಡು ಬರುತ್ತದೆ. ಹೆಣ್ಣನ್ನು ಬೇಕು- ಬೇಡ, ಸುಖ-ದುಃಖ, ಹಿಗ್ಗು ಕುಗ್ಗುಗಳನ್ನು ಹೊಂದಿರುವ ಜೀವವಾಗಿ, ಮನವುಳ್ಳ ಮಾನವಳನ್ನಾಗಿ ನೋಡದೆ ಭೋಗದ ವಸ್ತುವಾಗಿ ಬಳಸಿದ್ದೆ ಹೆಚ್ಚು ಎಂದು ಶರಣೆ ರೂಪಾವತಿ ಹೇಳಿದರು.
ಲಿಂಗಾಯತ ಮಹಾಮಠ, ಗೋರಟ (ಬಿ) ಗ್ರಾಮದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ಗೈದರು.
ಈ ವೇದನೆಯ ಬಿಸಿ ಉಸಿರು ದೇವನಿಗೆ ತಲುಪಿತ್ತೇನೋ ಎನ್ನುವಂತೆ ಸರ್ವ ಸಂಕೋಲೆಯನ್ನು ಕಳಚುವ ಕ್ರಾಂತಿಕಾರಿಯಾಗಿ 12ನೇ ಶತಮಾನದಲ್ಲಿ ಅಭೂತಪೂರ್ವ ಸಮಗ್ರ ಕ್ರಾಂತಿಯ ನೇತಾರರಾಗಿ ಮೂಡಿಬಂದ ಬಸವಣ್ಣನವರು ಹೆಣ್ಣಿನ ಗೋಳನ್ನು ಕೇಳಿ ಕಂಡು ಮರುಗಿದರು. ತಾನು ಹುಟ್ಟಿದ ಮನೆಯಿಂದಲೇ ಕ್ರಾಂತಿ ಕಹಳೆಯೂದಿದರು. ಪುರುಷನಂತೆ ಸ್ತ್ರೀಗೆ ಸಮಾನತೆ, ಸ್ವಾತಂತ್ರ್ಯತೆ ನೀಡಬೇಕೆಂದು ಆಗ್ರಹಿಸಿದರು. ಪಂಡಿತ ಪುರೋಹಿತರು ಅದಕೊಪ್ಪದಿದ್ದಾಗ ಧರ್ಮಶಾಸ್ತ್ರಗಳನ್ನು ಧಿಕ್ಕರಿಸಿ ಮನೆ ಬಿಟ್ಟು ನಡೆದು ಸ್ತ್ರೀಯರ ಭಾಗ್ಯದ ಬಾಗಿಲು ತೆರೆದು ಬಾಳ ಬೆಳಕಾದರು ಎಂದು ರೂಪಾವತಿ ನುಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೂಜ್ಯಶ್ರೀ ಪ್ರಭುದೇವ ಮಹಾ ಸ್ವಾಮೀಜಿ, ಅಳಿಮನ ಘನಮನವೆಂಬ ಎರಡು ಪ್ರಕಾರದ ಮನಗಳುಂಟು. ಅಳಿಮನವೆಂದರೆ ಪ್ರಪಂಚ ತುಂಬಿಕೊಂಡದ್ದು. ಘನ-ಮನವೆಂದರೆ ಪರಮಾತ್ಮನನ್ನು ತುಂಬಿಕೊಂಡದ್ದು. ಯಾರ ಮನದಲ್ಲಿ ಘನ ತುಂಬಿಕೊಂಡಿದೆಯೋ ಅದೆಂದೂ ಪ್ರಾಪಂಚಿಕ ಸುಖ ಭೋಗಗಳ ಆಸೆಗೆ ಸೋಲದು. ರಣರಂಗದಲ್ಲಿ ಹೋರಾಡಿ ಗೆಲುವುದಕ್ಕಿಂತ ಅಳಿಮನದ ವಿರುದ್ಧ ಸೆಣಸಿ ಜಯಿಸುವುದು ವೀರತನ. ಶರಣರೆಂದರೆ ಸೋಲದವರು ತಮಗೆ ತಾವೇ ಪ್ರತಿಜ್ಞಾ ಬದ್ಧರಾದ ಅವರು ಆಸೆ ಆಮಿಷಗಳನ್ನೊಡ್ಡಿ ದೂರ ಮಾಡುವ ದೇವನನ್ನು ಸೋಲಿಸುವ ಶೂರರು ಎಂದು ನುಡಿದರು.
ಗೌರವ ಉಪಸ್ಥಿತಿ ಗೋದಾವರಿ ತಾಯಿ, ಉದ್ಘಾಟನೆಯನ್ನು ವಿಜಯಲಕ್ಷ್ಮಿ ರಾಜೋಳೆ, ಷಟಸ್ಥಲ ಧ್ವಜಾರೋಹಣವನ್ನು ಮಂದಾಕಿನಿ ಕಾದೇಪೂರೆ, ರೂಪಾವತಿ ಬಿರಾದಾರ,
ಕರುಣಾದೇವಿ ಕಣಜೆ ಮುಖ್ಯ ಅತಿಥಿಗಳಾಗಿದ್ದರು, ಗುರು ಪೂಜೆಯನ್ನು ಪ್ರಜ್ವಲ್ ರಾಜೋಳೆ ನಡೆಸಿದರು, ನಿರೂಪಣೆ ಶ್ರಾವಣಿ ರಾಜೋಳೆ, ಭಕ್ತಿ ದಾಸೋಹ ಸಂಗಮ್ಮ ಬಾಬುರಾವ ರಾಜೋಳೆ ಅವರಿಂದ ನಡೆಯಿತು.