ಬಸವಕಲ್ಯಾಣ
ಬಸವಾದಿ ಶರಣರು ಸಕಲ ಜೀವರಾಶಿಗಾಗಿ ಅರ್ಥಪೂರ್ಣವಾದ ವೈಜ್ಞಾನಿಕವಾದ ತಾತ್ವಿಕತೆಯನ್ನು ನೀಡಿದ್ದಾರೆ. ಸತ್ಯ ಶರಣರ ವಚನಗಳ ಆಳಕ್ಕಿಳಿದು ಅರ್ಥಪೂರ್ಣವಾಗಿ ಅರಿತುಕೊಂಡಾಗಲೇ ಅವರ ನಿಜತತ್ವದ ಸಂದೇಶ ಅನುಭವಕ್ಕೆ ಬರುತ್ತದೆ ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ನುಡಿದರು.
ಅವರು ನಗರದ ಹರಳಯ್ಯನವರ ಗವಿಯಲ್ಲಿ ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಭಾನುವಾರ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಶರಣು ಶರಣಾರ್ಥಿ ಸಮಾವೇಶ, ಸತ್ಯ ಶರಣರು ಸತ್ಯ ಶೋಧ ಗ್ರಂಥ ವಿಚಾರ ಸಂಕಿರಣದ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ ಮಹಾಗುರು ಬಸವಣ್ಣನವರು ಹಾಗೂ ಅವರ ಸಮಕಾಲಿನ ಶರಣರ ಕುರಿತು ಇತಿಹಾಸದಲ್ಲಿ ಮತ್ತು ತತ್ವದಲ್ಲಿ ಅವರ ನಂತರ ಆಗಿರುವ ತಪ್ಪು ತಿಳುವಳಿಕೆ ಕಲ್ಪನೆ ಹಾಗೂ ಆಚರಣೆಗಳ ಬಗ್ಗೆ ವಾಸ್ತವ ಸತ್ಯ ಬಿಚ್ಚಿಡುವುದಾಗಿದೆ. ಬಸವಾದಿ ಶರಣರು ಸ್ವತಂತ್ರರು ಅವರು ನೀಡಿದ ಮಾನವೀಯ ಮೌಲ್ಯ ಸ್ವತಂತ್ರವು ವಿಶ್ವವಿನೂತರನವಾಗಿವೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಜಾಗತಿಕ ಇತಿಹಾಸದಲ್ಲಿ ೧೨ನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಸತ್ಯ ಶರಣರಿಂದ ನಡೆದ ಕಲ್ಯಾಣ ಕ್ರಾಂತಿ ಜಾಗತಿಕ ಮೌಲ್ಯಗಳನ್ನು ಒಳಗೊಂಡಿದೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಶರಣರ ಅರಿವು ಆಚಾರ ಅನುಭಾವ ಅಮೂಲ್ಯವಾದುದಾಗಿದೆ. ಬಸವಾಭಿಮಾನದ ಜೊತೆಗೆ ಬಸವ ಸಿದ್ಧಾಂತ ತಿಳಿದುಕೊಳ್ಳಬೇಕು. ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ನೀಡಿದ ಸಂಸ್ಕೃತಿಯನ್ನು ಯುವ ಜನತೆ ತಿಳಿದುಕೊಳ್ಳಲು ದಾಖಲೆ ಸಹಿತ ಈ ಗ್ರಂಥದಲ್ಲಿ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾದ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಈ ಗ್ರಂಥದಲ್ಲಿ ಸತ್ಯ ಶರಣರು – ವಾಸ್ತವಿಕ ತತ್ವದರ್ಶನ ವಿಶ್ವಮೌಲ್ಯಗಳು, ಸ್ವತಂತ್ರ ಶರಣರ ಮೇಲೆ ಪ್ರಭುತ್ವ ಸಾಧನೆಯ ಯತ್ನ, ವೇದಾಗಮ ಪುರಾಣಗಳ ಅವಲೋಕನ, ಆಚಾರ್ಯರ ಅವಲೋಕನ ಎಂಬ ಭಾಗಗಳಿವೆ ಎಂದರು.
ನೀಲಾಂಬಿಕಾ ಯೋಗಾಶ್ರಮದ ಪೂಜ್ಯ ಗಾಯತ್ರಿತಾಯಿ ಸಮ್ಮುಖ ವಹಿಸಿ ಮಾತನಾಡಿದರು. ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ವಚನ ಪಠಣ ಮಾಡಿದರು. ಬೀದರ ವಿವಿ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ ಉಪಸ್ಥಿತರಿದ್ದರು.
ಹರಳಯ್ಯ ಸಮಾಜದ ಮುಖಂಡ ವಿದ್ಯಾಸಾಗರ ಜಾಧವ ಧ್ವಜಾರೋಹಣಗೈದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ನಡೆಸಿಕೊಟ್ಟರು. ಪ್ರೊ. ಮೀನಾಕ್ಷಿ ಬಿರಾದರ ಸ್ವಾಗತಿಸಿದರೆ, ದತ್ತಾತ್ರೆಯ ಬಾಂದೆಕರ್ ನಿರೂಪಿಸಿದರು. ಸಂಗೀತಾ ಸಿದ್ರಾಮಪ್ಪಾ ಪಟ್ನೆ ಭಕ್ತಿ ದಾಸೋಹಗೈದರು.