ಬಸವಣ್ಣನ ಹೆಸರಿನಲ್ಲಿ ಬುಸ್ ಬುಸ್ ಅನ್ನುವವರು ಹೆಚ್ಚಿದ್ದಾರೆ: ಕುದರಿಮೋತಿ ಸ್ವಾಮೀಜಿ

ಯಲಬುರ್ಗಾ

ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣನ ಹೆಸರಿನಲ್ಲಿ ಇಂದು ಬುಸ್ ಬುಸ್ ಅಂತ ಬುಸುಗುಡುವವರೇ ಹೆಚ್ಚಿದ್ದಾರೆ, ಬಸವಾನುಯಾಯಿಗಳು ಅಂಥವರ ಮಾತಿಗೆ ಗಮನ ಕೊಡದೇ ಜಾತ್ಯತೀತವಾಗಿ ಬದುಕುವ ಬಗ್ಗೆಯೇ ಯೋಚಿಸಬೇಕು ಎಂದು ಕುದರಿಮೋತಿ ಸಂಸ್ಥಾನ ಮೈಸೂರು ಮಠದ ವಿಜಯಮಹಾಂತೇಶ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಸೋಮವಾರ ನಡೆದ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ನಿಮಿತ್ಯ ನೂತನವಾಗಿ ನಿರ್ಮಿಸಿರುವ ಲಘು ರಥೋತ್ಸವ, ಕುಂಭಮೇಳ ಮತ್ತು ಧಾರ್ಮಿಕ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಭಕ್ತಿಯ ಮತ್ತೊಂದು ಹೆಸರಾಗಿರುವ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ ಕೈಗೊಂಡ ಮಹಾನ್ ಕ್ರಾಂತಿಯನ್ನು ಪಾಶ್ಚಾತ್ಯ ದೇಶಗಳೂ ಗುರುತಿಸಿವೆ; ಕಳಬೇಡ-ಕೊಲಬೇಡ ಎಂಬ ಒಂದೇ ಒಂದು ವಚನ ಇಂದಿನ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ; ಅಂತೆಯೇ ಕಳೆದ ೯೦೦ ವರ್ಷಗಳಲ್ಲಿ ಕರ್ನಾಟಕದಲ್ಲಿ ಹಲವು ಧರ್ಮಗುರುಗಳು ಆಗಿ ಹೋಗಿದ್ದರೂ, ಬಸವಣ್ಣನಂಥ ಗುರು ಮತ್ತೆ ಜನಿಸಲೇ ಇಲ್ಲ ಎಂದು ಪ್ರತಿಪಾದಿಸಿದರು.

ಕಾರ್ತಿಕೋತ್ಸವದ ಕುರಿತು ಮಾತನಾಡುತ್ತ, ಕತ್ತಲೆಯಿಂದ ಬೆಳಕಿನತ್ತ ಪಯಣಿಸಬೇಕು ಎಂಬ ಉದ್ದೇಶದಿಂದ ಎಲ್ಲೆಡೆ ಕಾರ್ತಿಕೋತ್ಸವ ನಡೆಯುತ್ತದೆ; ದೇವರು ಸಂಪತ್ತು ಕೊಡೋದೇ ಒಳ್ಳೆಯ ಕೆಲಸ ಮಾಡಲು. ಸತ್ಯಶುದ್ಧ ಕಾಯಕದಿಂದ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಇಂಥ ಉತ್ಸವಗಳಿಗೆ ವ್ಯಯಿಸುವುದರಿಂದ ಅಂಥವರ ಸಂಪತ್ತು ವೃದ್ಧಿಯಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಮಾತನಾಡುತ್ತ, ಇಂದಿನ ಮಕ್ಕಳು-ಯುವಕರನ್ನು ಮೊಬೈಲ್-ಟಿ.ವಿ. ಗೀಳಿನಿಂದ ಪಾರು ಮಾಡಲು ಇಂಥ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ; ಸರ್ವ ಸಮುದಾಯದವರನ್ನು ಒಳಗೊಂಡು ಆಯೋಜಿಸುವ ಇಂಥ ಉತ್ಸವಗಳಿಂದ ಸದೃಢ ಪೀಳಿಗೆಯನ್ನು ರೂಪಿಸಲು ಸಾಧ್ಯ ಎಂದರು.

ಯಲಬುರ್ಗಾ ತಾಲೂಕ ಪಂಚಾಯಿತಿಯ ಸಹಾಯಕ ನಿರ್ದೇಶಕ ಫಕಿರಪ್ಪ ಕಟ್ಟಿಮನಿ, ಸಂಕನೂರ ಗ್ರಾಮ ಪಂಚಾಯತ್ ಸದಸ್ಯ ಎಸ್.ಎಸ್. ಸಂಗಳದ, ಬಸವಲಿಂಗ ಶಿವಾಚಾರ್ಯ, ಮಲ್ಲಯ್ಯ ಮಠದ, ಬಸಯ್ಯ ಹಿರೇಮಠ, ಸುಮಿತ್ರಾ ಪೊಲೀಸಪಾಟೀಲ, ಊರಿನ ಗಣ್ಯರಾದ ಬಸವರಾಜ ಸಂಗಳದ, ಹನಮಂತ ಗಂಜ್ಯಾಳ, ಶೇಖರಪ್ಪ ದೇಸಾಯಿ, ಈರನಗೌಡ ಪೊಲೀಸಪಾಟೀಲ, ಅಂದಪ್ಪ ಸಂಗಳದ, ಹುಸೇನಸಾಬ ನದಾಫ್, ಮಹಾಂತೇಶ ಹರಿಜನ, ಬಾಲಪ್ಪ ಗಂಜ್ಯಾಳ, ಮಂಜುನಾಥ ರೋಣದ, ಶಾಂತವ್ವ ಅಂಗಡಿ ಮುಂತಾದವರು ವೇದಿಕೆಯ ಮೇಲಿದ್ದರು.

ಕಾರ್ಯಕ್ರಮಕ್ಕೆ ಸರ್ವರನ್ನು ಶೇಖಪ್ಪ ಸಂಗಳದ ಸ್ವಾಗತಿಸಿದರೆ, ಎಸ್.ಕೆ. ಸಂಗಳದ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಾರ ದಾನ ನೀಡಿದ ಮಹನಿಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಮಲ್ಲಪ್ಪ ಸಂಗಳದ ನಡೆಸಿಕೊಟ್ಟರು. ಶಿಕ್ಷಕ ಸಂಗಮೇಶ ಸಂಗಳದ ಕಾರ್ಯಕ್ರಮ ನಿರೂಪಿಸಿದರು.

Share This Article
3 Comments
  • ಬುಸ್ ಬುಸ್ ಎನ್ನುವವರ ಹಲ್ಲು ಕೀಳಬೇಕಿದೆ ಗುರುಗಳೇ

  • ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ನಿಮಿತ್ಯ ನೂತನವಾಗಿ ನಿರ್ಮಿಸಿರುವ ಉಚ್ಚಯ್ಯ ಉತ್ಸವ,ಹೊಸ ಗದ್ದುಗೆಯ ಮೇಲೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕುಂಭ ಮೇಳ,ಮ.ನಿ.ಪ್ರ ಶ್ರೀ ವಿಜಯ ಮಹಾಂತ ಸ್ವಾಮಿಗಳ ಆಶೀರ್ವಚನ, ಮಹಾ ದಾಸೋಹ, ಸಕಲ ವಾದ್ಯಗಳ ವೈಭೋಗ ,ಗಜಾನನ ಕೋಲಾಟದ ಗೆಳೆಯರ ಬಳಗ ದ ನೃತ್ಯ ನರ್ತನ ಹಾಗೂ ಇನ್ನಿತರ ರಸಮಂಜರಿ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿತು .ಈ ರೀತಿ ನೆರವೇರಲು ಸಹಕಾರ ಕೊಟ್ಟ ನಮ್ಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರು ,ಗುರು ಹಿರಿಯರು ,ಬಂದು ಮಿತ್ರರು,ಯುವಕ ಮಿತ್ರರು,ಮಹಿಳಾ ಮಾತೆಯರು,ಚಿಣ್ಣರ ಚಿಲಿಪಿಲಿ ಹಾಗೂ ಬಸವೇಶ್ವರ ರ ಸಕಲ ಸದ್ಭಕ್ತರು ಇವರಿಗೆ ತುಂಬು ಹೃದಯದ ಧನ್ಯವಾದಗಳು … ಇದೇ ರೀತಿ ಸಹಕಾರ ಸದಾ ವರ್ಷ ವಿಜೃಂಭಣೆಯಿಂದ ನಡೆಯುವಂತೆ ದೇವರು ನಮಗೆ ಎಲ್ಲರಿಗೂ ಕರುಣಿಸಲಿ ,ಮತ್ತೊಮ್ಮೆ ಸರ್ವರಿಗೂ ದನ್ಯವಾದಗಳು.
    🙏🙏🙏🙏🙏🙏🙏.
    *”ಬಸವೇಶ್ವರ ದೇವಸ್ಥಾನ ಸಮಿತಿ ,ಕಾತ್ರಾಳ”*

Leave a Reply

Your email address will not be published. Required fields are marked *