‘ಬದುಕಿನುದ್ದಕ್ಕೂ ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

 ಜಮಖಂಡಿ:

“ನುಡಿದರೇನಯ್ಯಾ ನಡೆ ಇಲ್ಲದನ್ನಕ್ಕ

ನಡೆದರೇನಯ್ಯಾ ನುಡಿಯಿಲ್ಲದನ್ನಕ್ಕ

ಈ ನಡೆನುಡಿಯನರಿದು ಏಕವಾಗಿ

ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ

ಬಸವಪ್ರಿಯ ಕೂಡಲಚೆನ್ನಬಸವಣ್ಣ”

ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  ‘ಸದುವಿನಯಿ’ ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಇದು ಕೇವಲ ಗ್ರಂಥಾವಲೋಕನ ಮತ್ತು ಗ್ರಂಥಲೋಕಾರ್ಪಣೆಯ ಕಾರ್ಯಕ್ರಮವಾಗಿರದೆ ನಡೆ ನುಡಿ ಏಕವಾದ ಶರಣರ ಸಮ್ಮಿಲನವಾಗಿತ್ತು. ವಿಶೇಷ ರೀತಿಯ ಕಾರ್ಯಕ್ರಮವಾಗಿತ್ತು.

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ, ಸಾಯಂಕಾಲ 6 ಗಂಟೆಯವರೆಗೆ ನಡೆಯಿತು. ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮವೆಂದರೆ ಬರಿ ಸನ್ಮಾನಗಳಿಂದ ತುಂಬಿ ಹೋಗಿರುತ್ತೆ, ಆದರೆ ಈ ಕಾರ್ಯಕ್ರಮದ ವಿಶೇಷತೆ ಅಂದ್ರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಅನ್ನದಾಸೋಹ ಮತ್ತು ಜ್ಞಾನದಾಸೋಹ ನಡೆದು ವಿಶೇಷ ಕಾರ್ಯಕ್ರಮ ಎನಿಸಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಳಕಲ್ಲಿನ ವಿಜಯಮಹಾಂತೇಶ್ವರ ಮಠದ ಪೂಜ್ಯರಾದ ಗುರುಮಹಾಂತಪ್ಪಗಳು ವಹಿಸಿಕೊಂಡಿದ್ದರು.

ಗ್ರಂಥಾವಲೋಕನದ ಬಗ್ಗೆ ಮಾತಾಡಿದ ಹಿರಿಯ ಚಿಂತಕರಾದ ಪ್ರೊ: ಟಿ. ಆರ್. ಚಂದ್ರಶೇಖರ ಮತಾಡುತ್ತಾ, ಬಸವರಾಜ ಯಡ್ಡಳ್ಳಿ ಅವರು ಸಾಹಿತ್ಯದಲ್ಲಿ ಮತ್ತೊಬ್ಬರ ಮನನೋಯಿಸದಂತೆ, ಮತ್ತೊಬ್ಬರ ಮನೆಯ ಘಾತವಾಗದಂತೆ ಕಪಿಲಸಿದ್ಧ ಮಲ್ಲಿಕಾರ್ಜುನನು ಒಲಿಯುವಂತೆ ಬರೆದರು.

ಇಂದಿನ  ವಿಜ್ಞಾನಿಗಳಿಗೂ ವೈಜ್ಞಾನಿಕ ಮನೋಭಾವ ಇಲ್ಲದ ಈ ಕಾಲಘಟ್ಟದಲ್ಲಿ ಅವರ ಸಾಹಿತ್ಯದಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ತುಂಬಿತ್ತು. ಹಾಗಾಗಿ ಬಸವರಾಜ ಯಡ್ಡಹಳ್ಳಿಯವ ಬದುಕು ಇಂದು ಸಮಾಜಕ್ಕೆ ಮಾದರಿ, ಎಂದು ಹೇಳಿದರು.

ಮುಂದುವರೆದು ಟಿ ಆರ್ ಚಂದ್ರಶೇಖರ್ ಅವರು ಲಿಂಗಾಯತ ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆಯ ಬಗ್ಗೆ ಮನ ಮುಟ್ಟುವಂತೆ ಮಾತಾಡಿದರು.

ಬಸವಣ್ಣನ ರಾಜಕೀಯ ಪ್ರಜ್ಞೆ ಇಂದು ತುಂಬಾ ಅವಶ್ಯ. ರಾಜಕೀಯ ಅಂದ್ರೆ ಬರಿ ಅಧಿಕಾರವಲ್ಲ, ಅದು ಸಮಾಜವನ್ನು ಸಮುದಾಯವನ್ನು ಸರಿಯಾದ ನಿಟ್ಟಿನಲ್ಲಿ ತೆಗೆದುಕೊಂಡು ಹೋಗುವುದು. ಬಸವ ಪ್ರಜ್ಞೆಯ ಮೂಲಕ ಇಂದು ರಾಜಕಾರಣ ಕಟ್ಟುವುದು ಅತಿ ಜರೂರು, ಎಂದು ಹೇಳಿದರು.

ಶರಣರಾದ ಶ್ರೀ ಬಸವರಾಜ ಯಡಹಳ್ಳಿಯವರು ತಮ್ಮ ಬದುಕಿನ ಉದ್ದಕ್ಕೂ ಬಸವ ತತ್ವವನ್ನು ಸಮಾಜಕ್ಕೆ ಉಣಬಡಿಸುತ್ತಾ , ಬಸವತತ್ವವನ್ನು ಸಮಾಜದಲ್ಲಿ ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಾ  ಬಂದಿದ್ದಾರೆ. ಇಂದು ಅಂತಹ ಹಿರಿಯ ಚೇತನದ ಅಭಿನಂಧನ ಗ್ರಂಥ ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ನಂತರ ಗ್ರಂಥಾವಲೋಕನದ ಮಾಡುತ್ತ, ಸಾಹಿತಿ ರಂಜಾನ್ ದರ್ಗಾ ಅವರು  ಮನುಷ್ಯ ಮನುಷ್ಯನ ನಡುವೆ ಭೇದ ಬಿತ್ತುತ್ತಾ, ತಮ್ಮ ಕಾರ್ಯಸಾಧು ಮಾಡಿಕೊಳ್ಳುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಬಸವ ಪ್ರಜ್ಞೆಯ ಅವಶ್ಯಕತೆಯನ್ನು ಮನ ಮುಟ್ಟುವಂತೆ ತಿಳಿಸಿದರು.

ಲಿಂಗವೆಂದರೆ ಬರಿ ಕುರುಹು ಅಲ್ಲ, ಅದು ಇಡೀ ಮಾನವ ಕುಲಕೋಟಿಯನ್ನು ತನ್ನ ತಕ್ಕೆಗೆ ತೆಗೆದುಕೊಂಡು ‘ಇವನಾರವ ಇವನಾರವ ಎಂದೆನಿಸದೆ, ‘ಇವ ನಮ್ಮವ ಇವ ನಮ್ಮವ ‘ ಎಂದೆನಿಸುತ್ತಾ ಈ ಸೃಷ್ಠಿಯ ಜೀವಗಳೆಲ್ಲಾ ಕೂಡಲ ಸಂಗಮದೇವನ ಮನೆಯ ಮಕ್ಕಳು ಎನ್ನುವ ವಿಶ್ವ ಮಾನವ ಪ್ರಜ್ಞೆಯ ಸಂಕೇತ.

” ಲಿಂಗವ ಪೂಜಿಸಿ ಫಲವೇನೂ ಸಮರತಿ ಸಮಸುಖ ಸಮಕಳೆ ಇಲ್ಲದನ್ನಕ್ಕ , ಲಿಂಗ ಪೂಜಿಸಿ ನದಿಯೊಳು ನದಿ ಬೆರೆತಂತಾಗುವುದೇ ನಿಜ ಲಿಂಗಾಯತ ಲಕ್ಷಣ ಎಂದೂ ಮಾರ್ಮಿಕವಾಗಿ ಮಾತಾಡಿದರು.

ಶ್ರೀಮತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಹಿರಿಯರಾದ ಶ್ರೀ ಬಸವರಾಜ ಯಡಹಳ್ಳಿಯವರು ಗ್ರಂಥಗಳ ಕುರಿತು ಮಾತಾಡುತ್ತಾ, ಯಡ್ಡಹಳ್ಳಿ ಗುರುಗಳ ಸಾಹಿತ್ಯ ಎಲ್ಲವನ್ನೂ ಒಳಗೊಂಡ ಸಾಹಿತ್ಯವಾಗಿದೆ. ಎಲ್ಲಾ ದಾರ್ಶನಿಕರ ತತ್ವ ಆದರ್ಶಗಳನ್ನು ತಿಳಿಸುತ್ತಾ , ತಾವೆ ಪ್ರಶ್ನಿಸುತ್ತಾ , ತಾವೆ ಪರಿಹಾರ ಸೂಚಿಸುವ ವಿಭಿನ್ನ ಸಾಹಿತ್ಯ ಯಡ್ಡಹಳ್ಳಿ ಗುರುಗಳದು ಎಂದೂ ತಿಳಿಸಿದರು.

ಒಬ್ಬ ಮನುಷ್ಯ ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿ ಬಳಗವನ್ನು ವೈಚಾರಿಕವಾಗಿ ವೈಜ್ಞಾನಿಕವಾದ ಅರಿವು ಬೆಳಸುವುದು ಅದು ಸುಲಭದ ಕೆಲಸವಲ್ಲ. ತಾವು ಕಂಡುಕೊಂಡಂತಹ ಆ ಸತ್ಯವನ್ನು ತಮ್ಮ ಬರವಣಿಗೆಯ ಮೂಲಕ 15 ಗ್ರಂಥಗಳ ರೂಪದಲ್ಲಿ ಹೊರ ತಂದಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಅವರ ಬದುಕು ನಮಗೆಲ್ಲಾ ಮಾದರಿ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಗಂಗಾವತಿ ಶರಣತತ್ವ ಚಿಂತಕರು ಮತ್ತು ಸುದ್ದಿ ಚಿಂತನದ ಸಂಪಾದಕರಾದ ಶರಣ ಶ್ರೀ ಸಿ. ಹೆಚ್. ನಾರನಾಳ ಅವರಿಗೆ ವಿಶೇಷ ಸನ್ಮಾನವನ್ನು ಮಾಡಿದರು.

ಸನ್ಮಾನಿತರಾಗಿ ಮಾತಾಡಿದ ಸಿ.ಹೆಚ್. ನಾರನಾಳ, ಇಂದು ನಡೆ ನುಡಿ ಒಂದಾಗಿ ಬದುಕುವುದು ಮುಖ್ಯವಾಗಿದೆ. ನಡೆ ನುಡಿ ಒಂದಾಗಿ ಬದುಕಿದ್ದಕ್ಕೆ ಶ್ರೀ ಬಸವರಾಜ ಯಡ್ಡಹಳ್ಳಿ ಗುರುಗಳಿಗೆ ಇಂತಹ ಅಭಿನಂಧನ ಸಮಾರಾಂಭ ಸಿಕ್ಕಿದ್ದು.” ನೂರನೋದಿ ನೂರಕೇಳಿ ಏನು ಆಸೆ ಬಿಡದು ರೋಷವರಿಯದು ” ಎನ್ನುವಂತೆ ಏನೂ ಓದಿ ಏನೂ ಕೇಳಿದರೇನೂ ನಡೆ ನುಡಿಯ ಒಂದಾಗದ ಆ

ಬದುಕು. ನಡೆ ನುಡಿ ಒಂದಾಗಿ ಬದುಕಿ, ಸಮಾಜದಲ್ಲಿ ತಮ್ಮದೆ ಆದ ಅಪಾರ ಶಿಷ್ಯ ಬಳಗ ಹೊಂದಿದ ಯಡ್ಡಳ್ಳಿ ಗುರುಗಳ ಅಭಿನಂಧನ ಸಮಾರಂಭದಲ್ಲಿ ಸನ್ಮಾನಿಸಿದ್ದು ಮತ್ತು ಭಾಗವಹಿಸಿದ್ದು ನಿಜಕ್ಕೂ ಖುಷಿಯ ಸಂಗತಿ ಎಂದು ಹೇಳಿದರು.

ಹೀಗೆ  ಇದೊಂದು ಅಭಿನಂಧನ ಗ್ರಂಥಲೋಕಾರ್ಪಣೆಯ ಕಾರ್ಯಕ್ರಮವಾಗದೆ ಬಸವ ಸಿದ್ದಾಂತದ ವಿವಿಧ ಮಜಲುಗಳನ್ನು ಚರ್ಚಿಸುವ ಚರ್ಚಾಕೊಟದಂತೆ ಆಗಿತ್ತು.

ಜಮಖಂಡಿಯ ಓಲೇಮಠದ ಆನಂದ ದೇವರು ಮಾತಾಡುತ್ತಾ, ಇಂದು ಯಡ್ಡಳ್ಳಿಯವರಂತಹ ಗುರುಗಳು ಸಮಾಜಕ್ಕೆ ಅವಶ್ಯವಿದೆ. ಅವರ ಬದುಕು ನಮ್ಮೆಲ್ಲರಿಗೆ ಮಾದರಿಯಾಗಿದೆ. ಬಸವತತ್ವದ ಬಗ್ಗೆ ಯಾರಾದರೂ ಚಕಾರು ಎತ್ತಿದರೆ ಅದರ ವಿರುದ್ಧ ಕೇಳುವ ಮೊದಲ ಧ್ವನಿಯೇ ಯಡ್ಡಹಳ್ಳಿ ಕುಟುಂಬದ್ದು.

ಅಪ್ಪಟ ಬಸವ ನಿಷ್ಠರಾದ ಬಸವರಾಜ ಯಡ್ಡಹಳ್ಳಿ ಗುರುಗಳು ಹಾಕಿಕೊಟ್ಟ ಆ ದಾರಿಯಲ್ಲಿಯೇ ಇಡೀ ಅವರ ಕುಟುಂಬ ಸಾಗುತ್ತಿದೆ ಎಂದು ಮಾತಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಇಳಕಲ್ಲಿನ ಪೂಜ್ಯರಾದ ಗುರುಮಹಾಂತಪ್ಪಗಳು ಮಾತಾಡುತ್ತಾ, ಇಂದು ಮನುಷ್ಯ ಸಂಬಂಧಗಳು ಹಾಳಾಗುತ್ತಿರುವ ಕಾಲಘಟ್ಟದಲ್ಲಿ ಬಸವತತ್ವ ಸಂಬಂಧಗಳನ್ನು ಕಟ್ಟುವಂತ ಕೆಲಸ ಮಾಡುತ್ತೆ . ಮನುಷ್ಯನಿಗೆ ಸಮರತಿ, ಸಮಸುಖ, ಸಮಕಳೆ ತುಂಬಾ ಅವಶ್ಯ. ಹೆಣ್ಣು ಗಂಡಿನ ಭೇದ ಸಮಾಜದಲ್ಲಿ ಒಂದು ರೀತಿಯಾದ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಗಂಡು ಹುಟ್ಟಲಿಲ್ಲ ಎಂದು ಹೆಣ್ಣನ್ನು ಶೋಷಿಸುವ ಈ ಕಾಲದಲ್ಲಿ ಬಸವರಾಜ ಯಡ್ಡಳ್ಳಿಯವರ ತಂಗಿಯ ಬದುಕಿನಲ್ಲಿ ಆದ ಘಟನೆಯನ್ನು ಸ್ಮರಿಸಿಕೊಳ್ಳುತ್ತಾ, ಇಂದಿಗೂ ಬಸವರಾಜ ಯಡ್ಡಹಳ್ಳಿಯವರು ಸಮಾಜಕ್ಕೆ ಹೇಗೆ ಮಾದರಿಯಾದರು ಎನ್ನುವುದನ್ನು ತಿಳಿಸಿದರು.

ಲಿಂಗಾಯತ ಇಂದು ಗಟ್ಟಿಯಾಗಬೇಕಿದೆ ಅದಕ್ಕೆ ಬಸವರಾಜ ಯಡ್ಡಹಳ್ಳಿಯವರ ಕೃತಿಗಳು ಮಾರ್ಗದರ್ಶಿಯಾಗುತ್ತವೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ವೇದಿಕೆಯ ಮೇಲೆ ಪೂಜ್ಯರಾದ ಶ್ರೀ ಸ್ವಾಮಿನಾಥ ಮಹಾಸ್ವಾಮಿಗಳು, ಪೂಜ್ಯರಾದ ಚಂದ್ರಶೇಖರ ಮಹಾಸ್ವಾಮಿಗಳು, ಆನಂದ ಸಿ. ನ್ಯಾಮಗೌಡರ್, ಜಿ.ಎಸ್. ನ್ಯಾಮಗೌಡ ಭಾಗವಹಿಸಿದ್ದರು.

ಶರಣ  ಸಿದ್ದರಾಮ ಮನಹಳ್ಳಿಯವರು ಸದುವಿನಯಿ ಅಭಿನಂಧನ ಗ್ರಂಥ ಮತ್ತು ಶರಣ ಶ್ರೀ ಬಸವರಾಜ ಯಡ್ಡಹಳ್ಳಿಯವರ ಬದುಕಿನ ಕುರಿತಾಗಿ ವಿಸ್ತಾರವಾಗಿ ಮಾತಾಡಿದರು. ಶರಣ ಅಶೋಕ ಬರಗುಂಡಿಯವರು ಎರಡು ಹಿರಿಯ ಚೇತನಗಳ ಅಭಿನಂದನ ಪತ್ರವನ್ನು ಓದಿದರು.

ಒಟ್ಟಿನಲ್ಲಿ ಬಸವರಾಜ ಯಡ್ಡಹಳ್ಳಿಯವರ ಕಾರಣದಿಂದಾಗಿ ಇದೊಂದು ಬಸವತತ್ವಗಳ ವಿವಿಧ ಮಜಲುಗಳನ್ನು ಮತ್ತು ಲಿಂಗಾಯತವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆದ ಚರ್ಚಾಕೂಟವಾಗಿತ್ತು. ಕಾರ್ಯಕ್ರಮವನ್ನು ಬಸವತತ್ವದ ಕಟ್ಟಾಳು ಆದ ಶರಣ ರವಿ ಯಡ್ಡಹಳ್ಳಿ ಮತ್ತು ಅವರ ಒಡನಾಡಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ಬಸವರಾಜ ಯಡ್ಡಹಳ್ಳಿಯವರ ಶಿಷ್ಯ ಬಳಗ ಬಂಧು ಭಾಂಧವರು, “ರಕ್ತ ಸಂಭಂಧಕ್ಕಿಂತ ಭಕ್ತಿ ಸಂಭಂಧ ಲೇಸು” ಎನ್ನುವಂತೆ ಬಸವ ಹಕ್ಕಿಗಳು ಒಂದೆಡೆ ಕೂಡಿದ್ದು ವಿಶೇಷವಾಗಿತ್ತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
3 Comments
  • “ಮಾತು ಮಾತನಾಡಬಾರದು – ಕೃತಿ ಮಾತನಾಡಬೇಕು” ಮತ್ತು ನಡೆ – ನುಡಿ ಸಿದ್ಧಾಂತದ ಪ್ರತಿಬಿಂಬದಂತಹ ಇಂತಹ ಕಾರ್ಯಕ್ರಮಗಳು, ಬಸವತತ್ವ ಆಚರಣೆಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿವೆ.
    ಅಭಿನಂದನೆಗಳು. ಶರಣು ಶರಣಾರ್ಥಿಗಳು

  • ಪರಿಶುದ್ಧ ಮನಸ್ಸಿನ,ಬಸವ ತತ್ವವನ್ನು ಮೈಗೂಡಿಸಿಕೊಂಡಿರುವ ಯಡಹಳ್ಳಿ ಗುರುಗಳಿಗೆ ಅನಂತ ಶರಣು ಶರಣಾರ್ಥಿಗಳು.

  • ನಡೆ ನುಡಿ, ಮಾತು ಕೃತಿ, ಸತಿ ಪತಿ, ಜೀವ ಶಿವ, ಅಂಗ ಲಿಂಗ, ಸಮರತಿ ಸಮ ಕಳೆ, ನಾದ ಬಿಂದು ಕಲಾತೀತ ಶರಣಶ್ರೀ ಬಸವರಾಜ ಯಡಹಳ್ಳಿ ಗುರುಗಳೇ ಮನೆ ಗೆದ್ದು ಮಾರು ಗೆದ್ದ ಮಾಲಿಂಗ ಸ್ವರೂಪ ಗುರುವಿಗೆ ಶರಣು ಶರಣು 💐💐👏🏻👏🏻

Leave a Reply

Your email address will not be published. Required fields are marked *