ಟಿ.ನರಸೀಪುರ:
ತಾಲೂಕಿನ ವಡ್ಡರಹುಂಡಿ ಗ್ರಾಮದ ನಿಂಗಮಣಿ ಮತ್ತು ಮಹದೇವಪ್ಪ ಅವರುಗಳ ಸೊಸೆ ಶೃತಿ ಮತ್ತು ಮಗ ಚಂದ್ರಪ್ಪ ಅವರುಗಳ ಹೊಸಮನೆ “ಬಸವಸಿರಿ” ನಿಲಯದ ಗುರುಪ್ರವೇಶವು ಬಸವತತ್ವಾಚರಣೆಯ ಇಷ್ಟಲಿಂಗ ಪೂಜಾ ಕಾರ್ಯಕ್ರಮದೊಂದಿಗೆ ಸರಳ ರೀತಿಯಲ್ಲಿ ನಡೆಯಿತು.
ಶರಣತತ್ವ ಪ್ರಚಾರಕರಾದ ಚೌಹಳ್ಳಿ ಲಿಂಗರಾಜಪ್ಪನವರ ನೇತೃತ್ವದಲ್ಲಿ, ಮೊದಲಿಗೆ ಬಸವೇಶ್ವರರ ವಚನ ಸಾಹಿತ್ಯ ಸಂಪುಟಗಳು ಮತ್ತು ಬಸವಾದಿ ಶರಣರ ಭಾವಚಿತ್ರಗಳೊಡನೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಉದ್ದಕ್ಕೂ ಶರಣರ ವಚನಗಳನ್ನು ಹೇಳುತ್ತಾ ಸಾಗಲಾಯಿತು.

ನೂತನ ಮನೆಯಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ನಂತರ ಗುರುಗಳೊಡನೆ ನೂತನ ಮನೆಯ ಪ್ರವೇಶ ಮಾಡಲಾಯಿತು.
ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಇಷ್ಟಲಿಂಗ ಪೂಜಾ ಕಾರ್ಯವನ್ನು ಮನೆಯಲ್ಲಿ ನೆರವೇರಿಸಿದರು. ವಿಶಿಷ್ಟವಾದ ಈ ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ಆಗಮಿಸಿದ್ದ ಎಲ್ಲರಿಗೂ ಅರಿವು ಮೂಡಿಸಲಾಯಿತು.

ಇಷ್ಟಲಿಂಗ ಪೂಜೆಯೇ ಅಧಿಕವೇಕೆಂದು ತಿಳಿಸಲಾಯಿತು. ಶ್ರಮವಹಿಸಿ ಸಂಪಾದಿಸಿದ ಹಣ ವ್ಯರ್ಥ ಮಾಡದೇ ಸಂತೋಷದ ಜೀವನ ನಡೆಸಬೇಕು ಹಾಗೂ ಆಹಾರ ಪದಾರ್ಥಗಳನ್ನು ವ್ಯಕ್ತಗೊಳಿಸಬಾರದು. ಕಂದಾಚಾರ, ಮೌಡ್ಯಾಚಾರಗಳಿಂದ ಮಾನಸಿಕ ಖಿನ್ನತೆ ಬರುವುದೆಂದು ತಿಳಿಸಿ ಬಸವಾದಿ ಶರಣರ ಚಿಂತನೆಗಳು ಬದುಕಿನ ಸಂತೋಷಕ್ಕೆ ಮಾರ್ಗ ತೋರಿಸುತ್ತವೆ ಎಂದು ಹೇಳಲಾಯಿತು.
ವಚನಗಳನ್ನು ಎಲ್ಲರೂ ಓದಬೇಕೆಂದು ತಿಳಿಸಿ ಇಂತಹ ಸರಳ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದರೆ ಬದುಕು ಉತ್ತಮವಾಗಿರುತ್ತದೆ. ಈ ಕಾರ್ಯ ನಡೆಸಿದ ಈ ಮನೆಯ ಚಂದ್ರಪ್ಪ ಮತ್ತು ಶೃತಿ ದಂಪತಿಗಳಿಗೆ ಅವರ ಕುಟುಂಬ ವರ್ಗದವರಿಗೆ ಒಳ್ಳೆಯದಾಗಲಿ ಎಂದು ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ನಂಜದೇವನಪುರ ಮಾದಪ್ಪಣ್ಣ ಮತ್ತು ತಂಡದವರು ಶರಣರ ಕುರಿತು ವಚನ ಭಜನೆ ಮಾಡಿದರು. ಧರ್ಮಯ್ಯನಹುಂಡಿ ಕುಮಾರಣ್ಣನವರು ಸಹಕಾರ ನೀಡಿದರು. ವಿಶ್ವಬಸವ ಸೇನೆಯ ಅಧ್ಯಕ್ಷರಾದ ಬಸವ ಯೋಗೇಶ ಮತ್ತು ಸೇನೆಯ ಪದಾಧಿಕಾರಿಗಳು, ಅಕ್ಕಪಕ್ಕ ಗ್ರಾಮದ ಬಸವ ಭಕ್ತರು, ಮುಖಂಡರುಗಳು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
